Bangalore Metro: ನಮ್ಮ ಮೆಟ್ರೋ ಕಾಮಗಾರಿಗೆ ಈ ರಸ್ತೆ ಒಂದು ವರ್ಷ ಬಂದ್; ಚಿಂತೆ ಬೇಡ, ಬಿ ಎಂ ಆರ್ ಸಿ ಎಲ್ ಸೂಚಿಸಿದೆ ಪರ್ಯಾಯ ಮಾರ್ಗ
ಬೆಂಗಳೂರಿನ ಬನ್ನೇರಘಟ್ಟ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ಕಾರಣಕ್ಕೆ ಏಪ್ರಿಲ್ 1ರಿಂದ ಒಂದು ವರ್ಷ ರಸ್ತೆ ಸಂಚಾರ ಬಂದ್ ಆಗಲಿದ್ದು, ಪರ್ಯಾಯ ಮಾರ್ಗಗಳನ್ನು ತಿಳಿಸಲಾಗಿದೆ.ವರದಿ: ಎಚ್. ಮಾರುತಿ, ಬೆಂಗಳೂರು
ಬೆಂಗಳೂರು: ನಮ್ಮ ಮೆಟ್ರೋ ಲಕ್ಕಸಂದ್ರ ಸುರಂಗ ನಿಲ್ದಾಣದ ದಕ್ಷಿಣ ಭಾಗದಲ್ಲಿನ ಪ್ರವೇಶ ಕಾಮಗಾರಿ ಆರಂಭವಾಗಿದ್ದು, ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಮೈಕೊ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗಿನ ರಸ್ತೆಯನ್ನು ಒಂದು ವರ್ಷ ಮುಚ್ಚಲು ನಿರ್ಧರಿಸಲಾಗಿದೆ. ಏಪ್ರಿಲ್ 1 ರಿಂದ ಒಂದು ವರ್ಷದವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಬಿ ಎಂ ಆರ್ ಸಿ ಎಲ್ ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ. ಬನ್ನೇರುಘಟ್ಟ ಮುಖ್ಯರಸ್ತೆಯ ಡೈರಿ ಸರ್ಕಲ್ ಕಡೆಯಿಂದ ಮತ್ತು ಆನೆಪಾಳ್ಯ ಜಂಕ್ಷನ್ ಕಡೆಗೆ ಚಲಿಸುವ ವಾಹನಗಳು ಮೈಕೋ ಸಿಗ್ನಲ್‌ನಲ್ಲಿ ಬಲಕ್ಕೆ ತಿರುಗಿ ಬಾಷ್ ಲಿಂಕ್ ರಸ್ತೆಯ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ ಎಡಕ್ಕೆ ತಿರುಗಿ ಚಲಿಸಬೇಕಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಪರ್ಯಾಯ ಮಾರ್ಗ ಹೇಗೆ
ಆನೆಪಾಳ್ಯ ಜಂಕ್ಷನ್‌ನಿಂದ ಡೈರಿ ಸರ್ಕಲ್ ಕಡೆಗೆ ಸಾಗುವ ವಾಹನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಡೈರಿ ಸರ್ಕಲ್‌ನಿಂದ ಶಾಂತಿನಗರ ಕಡೆಗೆ ಸಾಗಬೇಕಾದ ವಾಹನಗಳು ವಿಲ್ಸನ್ ಗಾರ್ಡನ್ ನ 7ನೇ ಮುಖ್ಯ ರಸ್ತೆಯಲ್ಲಿ ಎಡಕ್ಕೆ ತಿರುವು ತೆಗೆದುಕೊಳ್ಳಬೇಕಾಗುತ್ತದೆ.
ಏನಿದು ಯೋಜನೆ
ಬೆಂಗಳೂರಿನ ಅತಿ ಉದ್ದದ ಸುರಂಗ ಮಾರ್ಗ ಎಂದರೆ ಗೊಟ್ಟಿಗೆರೆ - ನಾಗವಾರ ಮಾರ್ಗ. 21.26 ಕಿ.ಮೀ. ಉದ್ದದ ಈ ಗುಲಾಬಿ ಮಾರ್ಗದಲ್ಲಿ ಗೊಟ್ಟಿಗೆರೆ ಯಿಂದ ಡೈರಿ ವೃತ್ತದವರೆಗೆ ಮಾತ್ರ ಎತ್ತರಿಸಿದ ಮಾರ್ಗವಾಗಿದೆ.
ಡೈರಿ ವೃತ್ತದಿಂದ ನಾಗವರವರೆಗಿನ 13.76 ಕಿ.ಮೀಯಷ್ಟು ಸುರಂಗ ಮಾರ್ಗವಾಗಿದ್ದು, ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ನಾಲ್ಕು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ.
ಬನ್ನೇರುಘಟ್ಟ ರಸ್ತೆಯಿಂದ ನಾಗವಾರವರೆಗಿನ ಮೆಟ್ರೊ ರೈಲು ಸಂಚಾರ 2025ರ ವರ್ಷಾಂತ್ಯದೊಳಗೆ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದರು. ಈ ಮಾರ್ಗದಲ್ಲಿ 6 ಎತ್ತರಿಸಿದ ಮತ್ತು 12 ಸುರಂಗ ನಿಲ್ದಾಣ ಗಳಿರಲಿವೆ. 12 ನಿಲ್ದಾಣಗಳಲ್ಲಿ ಶೇ. 75ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಸುರಂಗ ಮಾರ್ಗ
13.76 ಕಿ.ಮೀಯಷ್ಟು ಸುರಂಗ ಮಾರ್ಗವನ್ನು ನಿರ್ಮಿಸಲು 9 ಕೊರೆಯುವ ಯಂತ್ರಗಳು ಕೆಲಸ ನಿರ್ವಹಿಸುತ್ತಿವೆ.
ಜಯದೇವ ಆಸ್ಪತ್ರೆ, ಎಂಜಿ ರಸ್ತೆ, ಕಂಟೋನ್ ಮೆಂಟ್ ಮತ್ತು ನಾಗವಾರದಲ್ಲಿ ಇಂಟರ್ ಚೇಂಜ್ ನಿಲ್ದಾಣಗಳು ಸ್ಥಾಪನೆಯಾಗಲಿವೆ.
ಈ ಮಾರ್ಗವು ದೆಹಲಿ ಮೆಟ್ರೋಗಿಂತ ಅತ್ತ್ಯುತ್ತಮ ಗುಣಮಟ್ಟ ಹೊಂದಿರುತ್ತದೆ ಎಂದು ಅವರು ಭರವಸೆ ನೀಡಿದ್ದರು.
ಈ ಮಾರ್ಗವು ಬೆಂಗಳೂರಿನ ದಕ್ಷಿಣ ಭಾಗದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗಲಿದೆ ಮತ್ತು ಪ್ರಮುಖ ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸಲಿದೆ ಎನ್ನುವುದು ಅಧಿಕಾರಿಗಳು ನೀಡುವ ವಿವರಣೆ.
(ವರದಿ: ಎಚ್. ಮಾರುತಿ, ಬೆಂಗಳೂರು)