ಕನ್ನಡ ಸುದ್ದಿ  /  ಕರ್ನಾಟಕ  /  Namma Yatri: ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ: ದರ ಹೆಚ್ಚಳ ಮಾಡುವುದಿಲ್ಲ ಎಂದು ಭರವಸೆ ನೀಡಿದ ಸಂಸ್ಥೆ

Namma Yatri: ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ: ದರ ಹೆಚ್ಚಳ ಮಾಡುವುದಿಲ್ಲ ಎಂದು ಭರವಸೆ ನೀಡಿದ ಸಂಸ್ಥೆ

ನಮ್ಮ ಯಾತ್ರಿ( Namma Yatri) ಕ್ಯಾಬ್‌ ಸೇವೆ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಮಿನಿ, ಎಸಿ ಮಿನಿ, ಸೆಡಾನ್ ಮತ್ತು ಎಕ್ಸ್‌ಎಲ್ ಕ್ಯಾಬ್ ಗಳಲ್ಲಿ ಸೇವೆ ನೀಡಲಿದೆ.ವರದಿ: ಪ್ರಿಯಾಂಕಗೌಡ, ಬೆಂಗಳೂರು

ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್‌ ಸೇವೆ ಶುರುವಾಗಿದೆ.
ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್‌ ಸೇವೆ ಶುರುವಾಗಿದೆ.

ಬೆಂಗಳೂರು: ನಮ್ಮ ಯಾತ್ರಿ ತನ್ನ ಕ್ಯಾಬ್ ಸೇವೆಗಳನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಧಿಕೃತವಾಗಿ ಪ್ರಾರಂಭಿಸಿದೆ. ಜೊತೆಗೆ, ರಾಜ್ಯ ಸರ್ಕಾರ ನಿಗದಿಪಡಿಸಿರುವ ಹೊಸ ದರಗಳನ್ನು ಅನುಸರಿಸಿದ ಮೊದಲ ಅಗ್ರಿಗೇಟರ್ ಎಂಬ ಹೆಗ್ಗಳಿಕೆಗೆ ನಮ್ಮ ಯಾತ್ರಿ ಪಾತ್ರವಾಗಿದೆ. ಬೆಂಗಳೂರು ಮೂಲದ ನಮ್ಮ ಯಾತ್ರಿ ಸಂಸ್ಥೆಯು ತನ್ನ ಜನಪ್ರಿಯ ಆಟೋ-ರಿಕ್ಷಾ ಸವಾರಿ ಸೇವೆಯಂತೆಯೇ ಕ್ಯಾಬ್ ಸೇವೆಯನ್ನು ಸಹ ಒದಗಿಸಿದೆ. ಈ ಸೇವೆಯು ನಾಲ್ಕು ವಿಭಾಗಗಳಲ್ಲಿ ಮಿನಿ, ಎಸಿ ಮಿನಿ, ಸೆಡಾನ್ ಮತ್ತು ಎಕ್ಸ್‌ಎಲ್ ಕ್ಯಾಬ್ ಗಳಲ್ಲಿ ಲಭ್ಯವಿರುತ್ತದೆ. ಅಲ್ಲದೆ, ನಮ್ಮ ಯಾತ್ರಿಯು ನ್ಯಾಯಯುತ ಬೆಲೆ ಪದ್ಧತಿಗಳನ್ನು ಖಾತ್ರಿಗೊಳಿಸುತ್ತದೆ. ಪೀಕ್ ಸಮಯದಲ್ಲಿ ಯಾವುದೇ ಉಲ್ಬಣ ಬೆಲೆಗಳನ್ನು ವಿಧಿಸುವುದಿಲ್ಲ ಎಂದು ಭರವಸೆ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ವಿಶೇಷ ವಿನಾಯಿತಿ

ಕ್ಯಾಬ್ ಸೇವೆಯನ್ನು ನಮ್ಮ ಯಾತ್ರಿಯು ರಾಜ್ಯದ ಇತರ ನಗರಗಳಿಗೆ ವಿಸ್ತರಿಸುವುದರ ಜೊತೆಗೆ ಶೀಘ್ರದಲ್ಲೇ ಅಂತರ್ ನಗರ, ಬಾಡಿಗೆ ಮತ್ತು ನಿಗದಿತ ಸವಾರಿಗಳನ್ನು ಸಹ ಪರಿಚಯಿಸುತ್ತದೆ. ಇದು ವಿಶೇಷ ವಿನಾಯಿತಿಗಳನ್ನು ಸಹ ಪರಿಚಯಿಸಿದೆ. ಅಂಗವೈಕಲ್ಯ ಸ್ನೇಹಿ ಸವಾರಿ, ಹೆಚ್ಚುವರಿ ಲಗೇಜ್, ಸಾಕುಪ್ರಾಣಿಗಳೊಂದಿಗೆ ಪ್ರಯಾಣ ಮುಂತಾದ ವಿಶೇಷ ವಿನಾಯಿತಿಗಳಿವೆ.

ನಮ್ಮ ಯಾತ್ರಿ ಅಪ್ಲಿಕೇಶನ್ ಬಳಸುವ ಕ್ಯಾಬ್ ಚಾಲಕರಿಗೆ ಮುಂದಿನ ಆರು ತಿಂಗಳವರೆಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರೆ, ಅಕ್ಟೋಬರ್ 1 ರಿಂದ, ಅವರು ದಿನಕ್ಕೆ 90 ರೂ.ಗಳ ಫ್ಲಾಟ್ ಚಂದಾದಾರಿಕೆ ಶುಲ್ಕವನ್ನು ಪಾವತಿಸಬೇಕು.

ಒಂದು ಲಕ್ಷ ಚಾಲಕರನ್ನು ಹೊಂದುವ ಗುರಿ

ಈಗಾಗಲೇ 25,000ಕ್ಕೂ ಹೆಚ್ಚು ಕ್ಯಾಬ್ ಚಾಲಕರು ತಮ್ಮ ಅಪ್ಲಿಕೇಶನ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ನಮ್ಮ ಯಾತ್ರಿ ಹೇಳಿದೆ. ಆದರೆ, ನಮ್ಮ ಯಾತ್ರಿ ಸೇವೆಯನ್ನು ಬಳಸುವ ಪ್ರಯಾಣಿಕರ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಮುಂದಿನ ಆರು ತಿಂಗಳಲ್ಲಿ ಒಂದು ಲಕ್ಷ ಕ್ಯಾಬ್ ಚಾಲಕರನ್ನು ಹೊಂದುವ ಗುರಿಯಿದೆ ಎಂದು ಸಂಸ್ಥೆ ತಿಳಿಸಿದೆ. ನಮ್ಮ ಯಾತ್ರಿ ಸಂಸ್ಥೆಯು ಕರ್ನಾಟಕ ಆನ್-ಡಿಮಾಂಡ್ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್ ನಿಯಮಗಳು, 2016ರ ಅಡಿಯಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದು, ಸಾರಿಗೆ ಇಲಾಖೆಯ ಪ್ರತಿಕ್ರಿಯೆಗಾಗಿ ಕಾಯುತ್ತಿರುವುದಾಗಿ ತಿಳಿಸಿದೆ.

ದರ ಹೆಚ್ಚಳ ಮಾಡಲ್ಲ ಎಂದು ಭರವಸೆ

ನಮ್ಮ ಯಾತ್ರಿಯ ಕ್ಯಾಬ್ ಸೇವೆಯ ಪ್ರಾರಂಭವು ಪ್ರಯಾಣಿಕರಿಗೆ ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ. ವಾಹನ ಪ್ರಕಾರವನ್ನು ಅವಲಂಬಿಸಿ ಮೊದಲ ನಾಲ್ಕು ಕಿಲೋಮೀಟರ್‌ಗೆ ದರಗಳು 100 ರೂಪಾಯಿಗಳಿಂದ 130 ರೂಪಾಯಿ ನಿಗದಿಪಡಿಸಲಾಗಿದೆ. ಪ್ರತಿ ಕಿಲೋಮೀಟರ್ ಶುಲ್ಕವು 24 ರೂ.ಗಳಿಂದ 32 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಹಾಗಂತ ಬೇಡಿಕೆ ಹೆಚ್ಚಾದಂತೆ ದರ ಹೆಚ್ಚಳ ಮಾಡುವುದಿಲ್ಲ ಎಂದು ಸಂಸ್ಥೆ ಭರವಸೆ ನೀಡಿದೆ.

ನವೆಂಬರ್ 2022ರಲ್ಲಿ ಪ್ರಾರಂಭವಾದ ನಮ್ಮ ಯಾತ್ರಿಯ ಆಟೋ ಸೇವೆ ಬಹಳ ಜನಪ್ರಿಯತೆಯನ್ನು ಗಳಿಸಿದೆ. ಏಕೆಂದರೆ ಇದು ಚಾಲಕರಿಗೆ ಯಾವುದೇ ಕಮಿಷನ್ ವಿಧಿಸುವುದಿಲ್ಲ. ಬೆಂಗಳೂರಿನಲ್ಲಿ ದಿನಕ್ಕೆ ಸರಾಸರಿ 1.2 ಲಕ್ಷ ಆಟೋ ಸವಾರಿ ಮಾಡುತ್ತದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಉಲ್ಲೇಖಿಸಿದೆ.

ನಮ್ಮ ಯಾತ್ರಿ ಕೇವಲ ಒಂದು ಅಪ್ಲಿಕೇಶನ್ ಅಲ್ಲ. ಇದು ಚಾಲಕ ಹಾಗೂ ಪ್ರಯಾಣಿಕರಲ್ಲಿ ಸ್ನೇಹಭಾವನೆಯನ್ನು ಉತ್ತೇಜಿಸುತ್ತದೆ. ಕ್ಯಾಬ್ ಸೇವೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಚಾಲಕರನ್ನು ಸಬಲೀಕರಣಗೊಳಿಸಲು ನಾವು ಸಜ್ಜಾಗಿದ್ದೇವೆ. ನಾವು ಕ್ಯಾಬ್ ಚಾಲಕ ಸಮುದಾಯದಿಂದ ಬಲವಾದ ಬೆಂಬಲವನ್ನು ಪಡೆದಿದ್ದೇವೆ. ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುವುದು ನಮ್ಮ ಗುರಿ ಎಂದು ನಮ್ಮ ಯಾತ್ರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಗಿಜನ್ ಸೆಲ್ವನ್ ತಿಳಿಸಿದ್ದಾರೆ.

ಮಂಗಳವಾರದಂದು ಅಧಿಕೃತವಾಗಿ ಬೆಂಗಳೂರಿನಲ್ಲಿ ಕ್ಯಾಬ್ ಸೇವೆ ಆರಂಭಿಸಿದ ನಮ್ಮ ಯಾತ್ರಿ ಪ್ರಸ್ತುತ 25,000 ಕ್ಯಾಬ್ ಚಾಲಕರನ್ನು ಹೊಂದಿದೆ. ಅಪ್ಲಿಕೇಶನ್ ಈಗಾಗಲೇ ಕೋಲ್ಕತ್ತಾ ಮತ್ತು ಕೊಚ್ಚಿಯಲ್ಲಿ ಕ್ಯಾಬ್ ಸೇವೆಗಳನ್ನು ಒದಗಿಸುತ್ತಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇವೆಗೆ ಚಾಲನೆ ನೀಡಿದರು. ನಮ್ಮ ಯಾತ್ರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಗಿಜನ್ ಸೆಲ್ವನ್ , ದಿ ಇಂಡಿಯನ್ ಫೆಡರೇಶನ್ ಆಫ್ ಆಪ್ ಬೇಸ್ಡ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ (IFAT)ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶೇಕ್ ಸಲಾವುದ್ದೀನ್ ಹಾಜರಿದ್ದರು.

(ವರದಿ: ಪ್ರಿಯಾಂಕಗೌಡ. ಬೆಂಗಳೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

( To read more like this please logon to kannada.hindustantimes.com)

IPL_Entry_Point

ವಿಭಾಗ