ಬೆಂಗಳೂರು ಕೆರೆಗಳ ಅಭಿವೃದ್ದಿಗೆ ಬಿಬಿಎಂಪಿಯಿಂದ ಹೊಸ ನೀತಿ; ಖಾಸಗಿ ಸಂಸ್ಥೆಗಳಿಗೆ ಅವಕಾಶ; ಹೈಕೋರ್ಟ್ ಅನುಮತಿ ನಿರೀಕ್ಷೆಯಲ್ಲಿ ಪಾಲಿಕೆ
ಕೆರೆಗಳಲ್ಲಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಸಾರ್ವಜನಿಕ ಶೌಚಾಲಯಗಳು, ಜಲ ಶುದ್ದೀಕರಣ ಘಟಕಗಳು, ಏರಿಯೇಟರ್‌ಗಳ ಅಳವಡಿಕೆ, ತೇಲುವ ದ್ವೀಪಗಳ ನಿರ್ಮಾಣ, ಉದ್ಯಾನವನ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲು ಪಾಲಿಕೆ ಮುಂದಾಗಿದೆ.
ಬೆಂಗಳೂರು: ತನ್ನ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ದಿಪಡಿಸಲು (Bangalore Lake Development) ಮತ್ತು ನಿರ್ವಹಿಸಲು ದೇಣಿಗೆ ಮತ್ತು ಸಂಪನ್ಮೂಲಗಳನ್ನು ಒದಗಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಖಾಸಗಿ ಸಂಸ್ಥೆಗಳಿಗೆ ಮನವಿ ಸಲ್ಲಿಸಿದೆ. ಈ ಸಂಬಂಧ ಬಿಬಿಎಂಪಿ ನೂತನ ನೀತಿಯೊಂದನ್ನು ಸಿದ್ದಪಡಿಸಿದೆ ಎಂದು ತಿಳಿದು ಬಂದಿದ್ದು, ಖಾಸಗಿ ಸಂಸ್ಥೆಗಳು, ಸರ್ಕಾರೇತರ ಸಂಘ ಸಂಸ್ಥೆಗಳು ಹಾಗೂ ನಾಗರಿಕರ ಸಂಘಗಳಿಗೆ ಆಹ್ವಾನ ನೀಡಿದೆ. ಖಾಸಗಿ ಸಂಸ್ಥೆಗಳು ನೇರವಾಗಿ ಇಲ್ಲವೇ ಬಿಬಿಎಂಪಿ ಮೂಲಕ ಕೆರೆಗಳ ನಿರ್ವಹಣೆ ಮತ್ತು ಅಭಿವೃದ್ದಿಯನ್ನು ಕೈಗೊಳ್ಳಬಹುದಾಗಿದೆ. ಈ ಹಿಂದೆಯೂ ಇಂತಹ ನೀತಿಯೊಂದು ಜಾರಿಯಲ್ಲಿತ್ತು. ಆದರೆ ನ್ಯಾಯಾಲಯದ ಆದೇಶದ ಮೇರೆಗೆ ಹಿಂಪಡೆದಿತ್ತು.
ಸಮುದಾಯದ ಒಳಗೊಳ್ಳುವಿಕೆಯನ್ನು ಖಾತರಿಪಡಿಸಲು ಪಾಲಿಕೆ ಕೆರೆಗಳ ಸಂರಕ್ಷಣೆ-2024 ನೀತಿಯನ್ನು ಸಿದ್ದಪಡಿಸಿದ್ದು, ಹೈಕೋರ್ಟ್ ಅನುಮತಿಗಾಗಿ ಕಾಯುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ 202 ಕೆರೆಗಳಿದ್ದು, 183 ಕೆರೆಗಳು ಜೀವಂತವಾಗಿವೆ. ಉಳಿದ ಕೆರೆಗಳು ಬಹುತೇಕ ನಿರ್ಜೀವಗೊಂಡಿವೆ. ಬಿಬಿಎಂಪಿ ಈಗಾಗಲೇ 104 ಕೆರೆಗಳನ್ನು ಪುನರುಜ್ಜೀವನಗೊಳಿಸಿದೆ. 42 ಕೆರೆಗಳ ಪುನರುಜ್ಜೀವನ ನಡೆಯುತ್ತಿದೆ ಮತ್ತು 27 ಕೆರೆಗಳಕಾರ್ಯವನ್ನು ಕೈಗೆತ್ತಿಕೊಳ್ಳಬೇಕಿದೆ. ಕೆರೆಗಳ ಪುನರುಜ್ಜೀವನದ ಜೊತೆಗೆ ಕೆರೆಗಳ ದಿನನಿತ್ಯದ ನಿರ್ವಹಣೆಗೆ 50 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಒಂದು ವೇಳೆ ಹೈಕೋರ್ಟ್ ಅನುಮತಿ ನೀಡಿದರೆ ಬಿಬಿಎಂಪಿ ಮೇಲಿನ ಹೊರೆ ತಗ್ಗಲಿದೆ.
ಕೆರೆಗಳಲ್ಲಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಸಾರ್ವಜನಿಕ ಶೌಚಾಲಯಗಳು, ಜಲ ಶುದ್ದೀಕರಣ ಘಟಕಗಳು, ಏರಿಯೇಟರ್‌ಗಳ ಅಳವಡಿಕೆ, ತೇಲುವ ದ್ವೀಪಗಳ ನಿರ್ಮಾಣ, ಉದ್ಯಾನವನ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲು ಪಾಲಿಕೆ ಮುಂದಾಗಿದೆ. ಕಂಪನಿಗಳ ಕಾಯಿದೆ- 2013ರ 7 ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡಿದರೆ ಕಾರ್ಪೋರೇಟ್ ಸಂಸ್ಥೆಗಳು ಪರಿಸರ ರಕ್ಷಣೆ ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ನೀತಿಯನ್ವಯ ಖಾಸಗಿ ಸಂಸ್ಥೆಗಳು ತಾವು ಕೈಗೊಳ್ಳಲು ಉದ್ದೇಶಿಸಿರುವ ಪ್ರಸ್ತಾವನೆಗಳನ್ನು ವಿಸ್ತೃತವಾಗಿ ಪಾಲಿಕೆ ಆಯುಕ್ತರಿಗೆ ಸಲ್ಲಿಸಬೇಕಾಗುತ್ತದೆ.
ಅನುಮತಿ ಪಡೆದ ನಂತರ ಆ ಸಂಸ್ಥೆಯು ತಾನೇ ನೇರವಾಗಿ ಕೆರೆಗಳನ್ನು ಅಭಿವೃದ್ಧಿಪಡಿಸಬುದು ಇಲ್ಲವೇ ಪಾಲಿಕೆಗೆ ನಿಧಿಯನ್ನು ವರ್ಗಾಯಿಸಬಹುದಾಗಿದೆ. ಕರ್ನಾಟಕ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಇದರಿಂದ ಖಾಸಗಿ ಸಂಸ್ಥೆಗಳು ಏನೆಲ್ಲಾ ಕೆಲಸಗಳನ್ನು ಕೈಗೊಳ್ಳಬಹುದು ಎಂದು ಅಂದಾಜು ಮಾಡಲು ಸಹಾಯಕವಾಗುತ್ತದೆ. ಈ ಹಿಂದೆ ಖಾಸಗಿ ಸಂಸ್ಥೆಗಳಿಗೆ ನಿರ್ವಹಣೆಗೆ ವಹಿಸಿದಾಗ ಬಿಬಿಎಂಪಿ ಅದರಲ್ಲಿ ಮೂಗು ತೂರಿಸುತ್ತಿರಲಿಲ್ಲ. ಆದರೆ ಈ ಬಾರಿ ಹಾಗೆ ಮಾಡಲು ಅವಕಾಶವಿರುವುದಿಲ್ಲ. ಬಿಬಿಎಂಪಿ ಇಂಜಿನಿಯರ್ ಗಳ ಮೇಲುಸ್ತುವಾರಿಯಲ್ಲೇ ಖಾಸಗಿ ಸಂಸ್ಥೆಗಳು ಅಭಿವೃದ್ದಿ ಕಾಮಗಾರಿಗಳನ್ನು ನಡೆಸಬೇಕಾಗಿರುತ್ತದೆ. ಈ ಕಾಯಿದೆಯನ್ನು ಈಗಾಗಲೇ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದು ಜೂನ್ ಮಧ್ಯಂತರದಲ್ಲಿ ವಿಚಾರಣೆಗೆ ಬರಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಇಂತಹುದೇ ನೀತಿಯನ್ನು ಈ ಹಿಂದೆಯೂ ಪಾಲಿಕೆ ಜಾರಿಗೊಳಿಸಿತ್ತು. 11 ಕೆರೆಗಳ ಅಭಿವೃದ್ದಿಗೆ ಬಿಬಿಎಂಪಿ ಖಾಸಗಿ ಸಂಸ್ಥೆ ಗಳೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿತ್ತು. ಆದರೆ ನಂತರ ಹಿಂಪಡೆದಿತ್ತು. ಇಂತಹುದೊಂದು ಹೊಸ ನೀತಿಯನ್ನು ಜಾರಿಗೊಳಿಸುತ್ತಿರುವುದಕ್ಕೆ ಕೆರೆ ಉಳಿಸಿ ಹೋರಾಟಗಾರರು ಹರ್ಷ ವ್ಯಕ್ತಪಡಿಸಿದ್ದಾರೆ. ಅನೇಕ ಸ್ವಯಂ ಸೇವಾ ಸಂಸ್ಥೆಗಳು ನಿಧಿ ಸಂಗ್ರಹಿಸಿ ತಮ್ಮ ವ್ಯಾಪ್ತಿಯ ಕೆರೆಗಳನ್ನು ಉಳಿಸಲು ಪ್ರಯತ್ನ ನಡೆಸುತ್ತಿದ್ದರು. ಈ ಮೂಲಕ ಅನೇಕ ಕೆರೆಗಳ ಸಂರಕ್ಷಣೆ ಸಾಧ್ಯವಾಗಿತ್ತು. ಆದರೆ ಮಾರ್ಚ್ 2020ರ ನಂತರ ನ್ಯಾಯಾಲಯದ ಮಧ್ಯ ಪ್ರವೇಶದಿಂದ ನಿಂತು ಹೋಗಿತ್ತು.
ಇನ್ನು ಕೆಲವು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಬಿಬಿಎಂಪಿ ಮತ್ತು ಖಾಸಗಿ ಸಂಸ್ಥೆಗಳ ನಡುವೆ ಮಾತ್ರ ಒಪ್ಪಂದ ಇರಬಾರದು. ಕೆರೆಯ ಹತ್ತಿರದಲ್ಲಿರುವ ನಾಗರೀಕ ಸಂಸ್ಥೆಗಳನ್ನೂ ಸೇರ್ಪಡೆಗೊಳಿಸಿ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡರೆ ಕ್ಷೇಮ. ಇದರಿಂದ ಕೆರೆಗಳ ಒತ್ತುವರಿಯನ್ನು ತಡೆಯಲು ಸಾಧ್ಯವಾಗುತ್ತದೆ. ಅಭಿವೃದ್ದಿ ಹೆಸರಿನಲ್ಲಿ ಖಾಸಗಿ ಸಂಸ್ಥೆಗಳು ಇತರೆ ಚಟುವಟಿಕೆಗಳಿಗೆ ಕೆರೆಗಳನ್ನು ಬಳಸಿಕೊಳ್ಳುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ.