Bangalore News: ಮಗು ಮಾಡಿಕೊಳ್ಳುವ ವಿಚಾರಕ್ಕೆ ನವ ವಿವಾಹಿತ ಪತಿ ಪತ್ನಿ ಜಗಳ, ಉತ್ತರ ಕನ್ನಡದ ಮಹಿಳೆ ಕತ್ತು ಹಿಸುಕಿ ಕೊಲೆ
Crime News ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಪರಿಚಿತವಾಗಿದ್ದ ಜೋಡಿ ಮದುವೆಯಾಗಿ ಮಗು ಮಾಡಿಕೊಳ್ಳುವ ವಿಚಾರವಾಗಿ ಜಗಳ ಮಾಡಿಕೊಂಡಿದ್ದಾರೆ. ಇದೇ ವಿಚಾರ ತೀವ್ರಗೊಂಡು ಮಹಿಳೆ ಕೊಲೆಯಲ್ಲಿ ಅಂತ್ಯವಾಗಿದೆ.ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ದುರಂತ ಪ್ರಕರಣ ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 30 ವರ್ಷದ ಗಿರಿಜಾ ಮೃತ ದುರ್ದೈವಿ. ಗಿರಿಜಾ ಅವರನ್ನು 32 ವರ್ಷದ ಅವರ ಪತಿ ನವೀನ್‌ಕುಮಾರ್ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಪೊಲೀಸರು ಈತನನ್ನು ಬಂಧಿಸಿದ್ದಾರೆ.ಅನ್ನಸಂದ್ರಪಾಳ್ಯದಲ್ಲಿ ಗಿರಿಜಾ ಹಾಗೂ ನವೀನ್‌ಕುಮಾರ್ ದಂಪತಿ ವಾಸವಾಗಿದ್ದರು. ಮಗು ಬೇಕು ಬೇಡ ಎಂಬ ವಿಚಾರಕ್ಕೆ ದಂಪತಿ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಶುಕ್ರವಾರ ತಡರಾತ್ರಿಯೂ ಜಗಳವಾಡಿದ್ದಾರೆ. ನಂತರ ಗಿರಿಜಾರನ್ನು ಕೊಲೆ ಮಾಡಿ ನವೀನ್‌ಕುಮಾರ್ ಪರಾರಿಯಾಗಿದ್ದ. ಕೆಲವೇ ಗಂಟೆಗಳಲ್ಲಿ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಗಿರಿಜಾ ಹಾಗೂ ಆಕೆಯ ಪೋಷಕರು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಆಗಮಿಸಿ ಯಶವಂತಪುರದಲ್ಲಿ ನೆಲೆಸಿದ್ದರು. ಇಲ್ಲಿಯೇ ಕೆಲಸವನ್ನು ಗಿರಿಜಾ ಮಾಡಿಕೊಂಡು ಇದ್ದರು. ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿಯ ನವೀನ್ ಕುಮಾರ್, ನಗರದ ವಿವಿಧ ಬೇಕರಿಗಳಿಗೆ ಬ್ರೆಡ್ ವಿತರಣೆ ಮಾಡುವ ಕೆಲಸ ಮಾಡುತ್ತಿದ್ದ. ಈ ನಡುವೆ ಗಿರಿಜಾ ಹಾಗೂ ನವೀನ್‌ಕುಮಾರ್ ಗೆ ಪರಿಚಯವಾಗಿತ್ತು. ಪರಿಚಯ ಪ್ರೀತಿಯಾಗಿ ಬೆಳೆದು ಮದುವೆಯಾಗಲು ನಿರ್ಧಾರ ಮಾಡಿದ್ದರು. ಎರಡೂ ಕುಟುಂಬದವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು.
ಕೇವಲ ಎಂಟು ತಿಂಗಳ ಹಿಂದೆಯಷ್ಟೇ ಇವರಿಗೆ ಮದುವೆಯಾಗಿ ಅನ್ನಸಂದ್ರಪಾಳ್ಯದಲ್ಲಿ ನೆಲೆಸಿದ್ದರು. ಗಿರಿಜಾ ಅವರ ಆರೋಗ್ಯ ಆಗಾಗ್ಗೆ ಹದಗೆಡುತ್ತಿತ್ತು. ಮಗು ಮಾಡಿಕೊಳ್ಳುವ ವಿಷಯಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಅಂತಿಮವಾಗಿ ಇವರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮದುವೆಯಾದ ಆರಂಭದಲ್ಲಿ ಇಬ್ಬರೂ ಅನ್ಯೋನ್ಯವಾಗಿದ್ದರು. ಆದರೆ ಮಗು ಮಾಡಿಕೊಳ್ಳುವ ವಿಚಾರದಲ್ಲಿ ಜಗಳ ನಡೆಯುತ್ತಿತ್ತು. ಮಗು ಈಗ ಬೇಡ, ನನ್ನ ಆರೋಗ್ಯ ಸರಿಯಾಗಲಿ ಎಂದು ಗಿರಿಜಾ ಹೇಳಿದರೆ ಈಗಲೇ ಮಗು ಆದರೆ ಮುಂದೆ ನಮಗೆ ಒಳ್ಳೆಯದಾಗುತ್ತದೆ ಎಂದು ನವೀನ್ ಹೇಳುತ್ತಿದ್ದ. ಇದೇ ವಿಚಾರವಾಗಿ ಕೊಲೆ ಮಾಡಿರಬಹುದು ಎನ್ನುವ ವಿಚಾರವನ್ನು ಕುಟುಂಬಗಳ ಮಾಹಿತಿ ಆಧರಿಸಿ ಪೊಲೀಸರು ಕಲೆ ಹಾಕಿದ್ದಾರೆ. ಈ ನಿಟ್ಟಿನಲ್ಲಿ ತನಿಖೆಯನ್ನೂ ಕೈಗೊಂಡಿದ್ದಾರೆ.
ಪೀಣ್ಯ ಮೇಲ್ಸುತುವೆಯಿಂದ ಬಿದ್ದು ಸಾವು
ಬೆಂಗಳೂರು ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾರೆ.
ಜಾಲಹಳ್ಳಿ ಸಮೀಪದ ರಾಕ್‌ಲೈನ್ ಮಾಲ್ ಸಮೀಪ ಮೇಲ್ಸೇತುವೆಯಲ್ಲಿ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ 33 ವರ್ಷದ ಬೈಕ್ ಸವಾರ ಪ್ರಸಾದ್ ಬೈಕ್ ನಿಂದ ಹಾರಿ ಮೇಲ್ಸೇತುವೆಯಿಂದ ರಸ್ತೆಗೆ ಬಿದ್ದಿದ್ದರು. ತೀವ್ರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸಾದ್ ಮಹಾಲಕ್ಷ್ಮಿ ಲೇಔಟ್ ನ ಕೃಷ್ಣಾನಂದ ನಗರದ ನಿವಾಸಿ.ಇವರು ದಾಸನಪುರ ಎಪಿಎಂಪಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ಬೈಕ್‌ನಲ್ಲಿ ಹಿಂತಿರುಗುತಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದ ಬಳಿಕ ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಕಾರು ಚಾಲಕನ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಡಿಕ್ಕಿ ಹೊಡೆದು ಪರಾರಿ ಆಗಿರುವ ಕಾರು ಚಾಲಕನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೀಣ್ಯ ವಿಭಾಗದ ಸಂಚಾರ ಪೊಲೀಸರು ಹೇಳಿದ್ದಾರೆ.
(ವರದಿ: ಎಚ್. ಮಾರುತಿ, ಬೆಂಗಳೂರು)