Bangalore News: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಎನ್‌ಐಎ ನ್ಯಾಯಾಲಯ
ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕಾಫಿ ಸ್ಪೋಟ ಪ್ರಕರಣದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೆಂಗಳೂರು: ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಪ್ರಮುಖ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಿಶೇಷ ನ್ಯಾಯಾಲಯ ಏಪ್ರಿಲ್ 30, ಸೋಮವಾರ ಆದೇಶ ಹೊರಡಿಸಿದೆ.ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ 29 ವರ್ಷದ ಅಬ್ದುಲ್ ಮತೀನ್ ಅಹ್ಮದ್ ತಾಹಾ ಮತ್ತು 30 ವರ್ಷದ ಮುಸ್ಸಾವಿರ್ ಹುಸೇನ್ ಶಝೀಬ್ ಈ ಸ್ಫೋಟ ಪ್ರಕರಣದ ಪ್ರಮುಖ ರೂವಾರಿಗಳು. ಇಬ್ಬರೂ ಆರೋಪಿಗಳ ಕಸ್ಟಡಿ ಅವಧಿ ಏಪ್ರಿಲ್ 29ರಂದು ಮುಕ್ತಾಯವಾಗಿತ್ತು. ಹಾಗಾಗಿ ಎನ್‌ಐಎ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಎನ್ಐಎ ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.
ಇಬ್ಬರು ಆರೋಪಿಗಳನ್ನು ಎನ್‌ಐಎ ಅಧಿಕಾರಿಗಳು ಏ.12ರಂದು ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ನಂತರ ಏಪ್ರಿಲ್ 13ರಂದು ವಿಶೇಷ ನ್ಯಾಯಾಲಯಕ್ಕೆ ಶಂಕಿತರನ್ನು ಹಾಜರುಪಡಿಸಿ 10 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು. ಏ.23ರಂದು ಆರೋಪಿಗಳ ಕಸ್ಟಡಿ ಅವಧಿ ಅಂತ್ಯವಾದ ಬಳಿಕ ಪುನಃ 7 ದಿನ ಕಸ್ಟಡಿಗೆ ಪಡೆಯಲಾಗಿತ್ತು.
ಮಾರ್ಚ್ 1ರಂದು ವೈಟ್ ಫೀಲ್ಡ್ ನಲ್ಲಿರುವ ದಿ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟಕ್ಕೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಗಳಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮದ್ ತಾಹಾ ತಲೆಮರೆಸಿಕೊಂಡು ವಿವಿಧ ರಾಜ್ಯಗಳಲ್ಲಿ ಸಂಚರಿಸುತ್ತಿದ್ದರು.
ತಮಿಳುನಾಡು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ವಿವಿಧ ನಗರಗಳಲ್ಲಿ ಹುಡುಕಾಟ ನಡೆಸಿದ ನಂತರ ಇವರನ್ನು ಏ. 12 ರಂದು ಕೊಲ್ಕತ್ತಾದಲ್ಲಿ ಬಂಧಿಸಲಾಗಿತ್ತು.
ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಹಜರು ನಡೆಸಲು ಮತ್ತು ಹೆಚ್ಚಿನ ವಿಚಾರಣೆಗಾಗಿ ಎನ್ ಐ ಎ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.
ಸ್ಫೋಟ ನಡೆಸಲು ಸಂಚು ರೂಪಿಸಲೆಂದೇ ಮುಸಾವೀರ್ ಹಾಗೂ ಅಬ್ದುಲ್ ತಾಹಾ ಜನವರಿಯಲ್ಲಿ ಕೆಲವು ದಿನಗಳ ಕಾಲ ಚೆನ್ನೈನ ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದರು. ಇಲ್ಲಿ ಕೆಲವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಈ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದ್ದವು ಎಂದು ಎನ್ ಐ ಎ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಚೆನ್ನೈನ ಹೋಟೆಲ್‌ಗೆ ಕರೆದೊಯ್ದು ಮಹಜರು ನಡೆಸಲಾಗಿತ್ತು.
ಚೆನ್ನೈನಲ್ಲಿ ಹಿಂದೂ ವ್ಯಕ್ತಿಗಳ ಗುರುತಿನ ಚೀಟಿಗಳನ್ನು ನೀಡಿ ಆರೋಪಿಗಳು ಹೋಟೆಲ್‌ನಲ್ಲಿ ರೂಂ ಪಡೆದಿದ್ದರು. ಈ ಹೋಟೆಲ್ ಸಿ.ಸಿ.ಟಿ.ವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಮುಸಾವೀರ್ ಹಾಗೂ ಅಬ್ದುಲ್ ತಾಹಾ ಇಬ್ಬರೂ ಪತ್ತೆಯಾಗಿದ್ದರು. ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಿಸಲಾಗಿದ್ದ ಕಚ್ಚಾ ಬಾಂಬ್ ತಯಾರಿಸಿದ್ದ ಜಾಗವನ್ನೂ ಎನ್ ಐ ಎ ಪತ್ತೆ ಮಾಡಿದೆ. ಆರೋಪಿಗಳನ್ನು ಅಲ್ಲಿಗೂ ಕರೆದೊಯ್ದು ಮಹಜರು ನಡೆಸಿದೆ. ಇವುಗಳ ಆಧಾರದ ಮೇಲೆ ತನಿಖೆ ಮುಂದುವರಿಸಲಾಗಿದೆ. ಆರೋಪಿಗಳಿಗೂ ವಿದೇಶಿ ಭಯೋತ್ಪಾದನಾ ಸಂಘಟನೆಗಳಿಗೂ ಸಂಬಂಧ ಇದೆಯೇ ಎಂಬ ಬಗ್ಗೆ ಎನ್ ಐ ಎ ತನಿಖೆ ನಡೆಸುತ್ತಿದೆ.
(ವರದಿ:ಎಚ್. ಮಾರುತಿ,ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy appeared in Hindustan Times Kannada website. To read more like this please logon to kannada.hindustantimes.com)
