Vande Bharat Express: ಈಗ ಮೈಸೂರು- ಬೆಂಗಳೂರು- ಚೆನ್ನೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ಮಂಡ್ಯದಲ್ಲೂ ಉಂಟು ನಿಲುಗಡೆ
ಕನ್ನಡ ಸುದ್ದಿ  /  ಕರ್ನಾಟಕ  /  Vande Bharat Express: ಈಗ ಮೈಸೂರು- ಬೆಂಗಳೂರು- ಚೆನ್ನೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ಮಂಡ್ಯದಲ್ಲೂ ಉಂಟು ನಿಲುಗಡೆ

Vande Bharat Express: ಈಗ ಮೈಸೂರು- ಬೆಂಗಳೂರು- ಚೆನ್ನೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ಮಂಡ್ಯದಲ್ಲೂ ಉಂಟು ನಿಲುಗಡೆ

Mysuru Chennai train ಮೈಸೂರು ಹಾಗೂ ಚೆನ್ನೈ ನಡುವೆ ಹಗಲು ಸಮಯದಲ್ಲಿ ರೈಲು ಸಂಚಾರ ಶುರುವಾಗಲಿದೆ. ಅದೂ ಈ ಎರಡು ನಗರಗಳ ನಡುವೆ ಎರಡನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲಿದೆ.

ಮೈಸೂರಿನಿಂದ ಚೆನ್ನೈ, ಚೆನ್ನೈನಿಂದ ಮೈಸೂರು ಮಾರ್ಗದ ವಂದೇ ಭಾರತ್‌ ರೈಲು ಸೇವೆ ಶುರುವಾಗಲಿದೆ.
ಮೈಸೂರಿನಿಂದ ಚೆನ್ನೈ, ಚೆನ್ನೈನಿಂದ ಮೈಸೂರು ಮಾರ್ಗದ ವಂದೇ ಭಾರತ್‌ ರೈಲು ಸೇವೆ ಶುರುವಾಗಲಿದೆ.

ಬೆಂಗಳೂರು: ಚೆನ್ನೈ- ಬೆಂಗಳೂರು-ಮೈಸೂರು ನಡುವೆ ಈಗ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಸಂಚಾರ ಒಂದೂವರೆ ವರ್ಷದಿಂದ ಮುಂದುವರಿದಿದೆ. ಚೆನ್ನೈನಿಂದ ಬೆಂಗಳೂರು., ಬೆಂಗಳೂರಿನಿಂದ ಮೈಸೂರುವರೆಗೆ ವಂದೇ ಭಾರತ್‌ ರೈಲಿಗೆ ಉತ್ತಮ ಬೇಡಿಕೆಯಿದೆ. ಜನರೂ ಈ ಮಾರ್ಗದ ರೈಲನ್ನು ಸಮರ್ಪವಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಇದರ ಮುಂದುವರೆದ ಭಾಗವಾಗಿಯೇ ಈಗ ಮೈಸೂರು- ಬೆಂಗಳೂರು- ಚೆನ್ನೈ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ರೈಲಿನ ಸೇವೆ ಆರಂಭವಾಗಲಿದೆ. ಇದರೊಟ್ಟಿಗೆ ಎರಡೂ ವಂದೇ ಭಾರತ್‌ ರೈಲುಗಳು ಮಂಡ್ಯದಲ್ಲಿ ನಿಲುಗಡೆಯಾಗಲಿವೆ.

2022ರ ನವೆಂಬರ್‌ನಲ್ಲ ದಕ್ಷಿಣ ಭಾರತದಲ್ಲಿಯೇ ಮೊದಲ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ರೈಲು ಚೆನ್ನೈ- ಮೈಸೂರು ನಡುವೆ ಆರಂಭಿಸಲಾಗಿತ್ತು. ಈಗಾಗಲೇ ಇದೇ ಸಮಯಕ್ಕೆ ಚೆನ್ನೈ ಹಾಗೂ ಮೈಸೂರು ನಡುವೆ ಜನಶತಾಬ್ದಿ ರೈಲಿದೆ. ಮೈಸೂರು- ಚೆನ್ನೈ ನಡುವೆ ರಾತ್ರಿ ರೈಲುಗಳಿವೆ. ಆದರೆ ಹಗಲು ರೈಲಿನ ವ್ಯವಸ್ಥೆಯಾಗಬೇಕು ಎನ್ನುವ ಬೇಡಿಕೆಯಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು- ಚೆನ್ನೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಆರಂಭಿಸಲಾಗುತ್ತಿದೆ.

ರೈಲು ಸಂಚಾರ ಸಮಯ

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 12ರಂದು ಮೈಸೂರು- ಚೆನ್ನೈ ವಂದೇ ಭಾರತ್‌ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ರೈಲು ಆರಂಭಿಕ ಹಂತದಲ್ಲಿ ಗಾಡಿ ಸಂಖ್ಯೆ 20663 ಮೈಸೂರು- ಎಂಜಿಆರ್‌ ಚೆನ್ನೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಮೈಸೂರನ್ನು ಬೆಳಗ್ಗೆ 6ಕ್ಕೆ ಬಿಡಲಿದೆ. ಈ ರೈಲು ಬೆಳಗ್ಗೆ 6.28ಕ್ಕೆ ಮಂಡ್ಯಕ್ಕೆ ಆಗಮಿಸಲಿದೆ. ಬೆಳಿಗ್ಗೆ 6.30ಕ್ಕೆ ಮಂಡ್ಯದಿಂದ ಹೊರಡಲಿದೆ. ಬೆಂಗಳೂರಿಗೆ ಬೆಳಿಗ್ಗೆ 7.45 ಕ್ಕೆ ಆಗಮಿಸಿ 7.50 ಕ್ಕೆ ಹೊರಡಲಿದೆ. ಅಲ್ಲಿಂದ ಕೃಷ್ಣರಾಜಪುರಂ ಅನ್ನು ಬೆಳಿಗ್ಗೆ 8.04ಕ್ಕೆ ತಲುಪಿ 8.06 ಕ್ಕೆ ಹೊರಡಲಿದೆ. ಕಟ್ಪಾಡಿಯನ್ನು ಬೆಳಗ್ಗೆ 10.33 ಕ್ಕೆ ತಲುಪಿ, ಬೆಳಿಗ್ಗೆ 10.35 ಕ್ಕೆ ಅಲ್ಲಿಂದ ಚೆನ್ನೈ ಕಡೆಗೆ ನಿರ್ಗಮಿಸಲಿದೆ.ಮಧ್ಯಾಹ್ನ 12.20ಕ್ಕೆ ಚೆನ್ನೈ ತಲುಪಲಿದೆ.

ಚೆನ್ನೈನಿಂದ ಸಂಜೆ 5ಕ್ಕೆ ಹೊರಡಲಿದೆ. ಸಂಜೆ 6.23 ಕ್ಕೆ ಕಟ್ಪಾಡಿಗೆ ಆಗಮಿಸಲಿದೆ. ಅಲ್ಲಿಂದ ಸಂಜೆ 6.25 ಕ್ಕೆ ಹೊರಡಲಿದೆ. ಬೆಂಗಳೂರಿನ ಕೃಷ್ಣರಾಜಪುರಂ ಅನ್ನುರಾತ್ರಿ 8.48 ಕ್ಕೆ ತಲುಪಿ ರಾತ್ರಿ 8.50ಕ್ಕೆ ಹೊರಡಲಿದೆ. ರಾತ್ರಿ 9.25ಕ್ಕೆ ತಲುಪಿ ರಾತ್ರಿ 9.30ಕ್ಕೆ ಮೈಸೂರು ಕಡೆಗೆ ಹೊರಡಲಿದೆ. ಮಂಡ್ಯಕ್ಕೆ ರಾತ್ರಿ 10.38 ಕ್ಕೆ ಆಗಮಿಸಿ 10.40ಕ್ಕೆ ಹೊರಡಲಿದೆ. ರಾತ್ರಿ 11.20ಕ್ಕೆ ಈ ರೈಲು ಮೈಸೂರು ತಲುಪಲಿದೆ.

ಬುಧವಾರ ಇಲ್ಲ

ಪ್ರತಿ ಬುಧವಾರ ಈ ರೈಲಿನ ಸಂಚಾರ ಇರುವುದಿಲ್ಲ. ಉಳಿದ ಆರು ದಿನಗಳು ಮೈಸೂರು ಚೆನ್ನೈ ವಂದೇ ಭಾರತ್‌ ರೈಲು ಸಂಚಾರ ಇರಲಿದೆ. ಚೆನ್ನೈ ಹಾಗೂ ಬೆಂಗಳೂರು ನಡುವೆ ವಂದೇ ಭಾರತ್‌ ರೈಲಿನ ಸೇವೆ ಈಗಲೇ ಆರಂಭವಾಗಲಿದೆ. ಆದರೆ ಮೈಸೂರು- ಬೆಂಗಳೂರು ನಡುವಿನ ರೈಲು ಮಾರ್ಗದ ಸಿದ್ದತೆ ಪೂರ್ಣಗೊಂಡ ನಂತರ ಏಪ್ರಿಲ್‌ 5ರಿಂದ ಮೈಸೂರಿನಿಂದಲೇ ವಂದೇ ಭಾರತ್‌ ರೈಲು ಸೇವೆ ಆರಂಭಗೊಳ್ಳಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಹಗಲು ಚೆನ್ನೈ ರೈಲು

ಈಗಾಗಲೇ ಮೈಸೂರು ಬೆಂಗಳೂರು ನಡುವೆ ಸಾಕಷ್ಟು ರೈಲುಗಳಿವೆ. ಆದರೆ ಅತಿ ವೇಗದ ರೈಲು ಬೆಳಿಗ್ಗೆ ಹೊತ್ತಿನಲ್ಲಿ ಇರಲಿಲ್ಲ. ಅದರಲ್ಲೂ ಚೆನ್ನೈಗೆ ಮೈಸೂರಿನಿಂದ ಬೆಳಗಿನ ವೇಳೆ ರೈಲು ಸೇವೆ ಇರಲಿಲ್ಲ. ಈಗ ವಂದೇ ಭಾರತ್‌ ಆರಂಭದಿಂದ ಬೆಂಗಳೂರು ಹಾಗೂ ಚೆನ್ನೈ ನಡುವೆ ಸಂಚಾರ ಇನ್ನಷ್ಟು ಸುಲಭವಾಗಲಿದೆ. ವ್ಯಾಪಾರ ವಹಿವಾಟಿಗೂ ಇದು ಸಹಕಾರಿಯಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Whats_app_banner