Bangalore crime: ಪತ್ನಿಯನ್ನು ವಿವಸ್ತ್ರಗೊಳಿಸಿ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಪತ್ನಿಯನ್ನು ವಿವಸ್ತ್ರಗೊಳಿಸಿ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ

Bangalore crime: ಪತ್ನಿಯನ್ನು ವಿವಸ್ತ್ರಗೊಳಿಸಿ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ

Bangalore murder case ಪತ್ನಿಯನ್ನು ಕೊಲೆ ಮಾಡಿದ್ದ ಒಡಿಶಾ ( Odisha) ಮೂಲದ ವ್ಯಕ್ತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಪತ್ನಿಯನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ
ಪತ್ನಿಯನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ

ಬೆಂಗಳೂರು: ಪತ್ನಿಯನ್ನು ವಿವಸ್ತ್ರಗೊಳಿಸಿ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದ ಆಕೆಯ ಪತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಒಡಿಶಾದ ಮಯೂರ್‌ಬಂಜ್ ಜಿಲ್ಲೆಯ ಚುನ್ನು ಹನ್ಸದ್ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ.

ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚುನ್ನು ಹನ್ಸದ್ ತನ್ನ ಪತ್ನಿಯ ಶೀಲವನ್ನು ಶಂಕಿಸಿ ಹತ್ಯೆ ಮಾಡಿದ್ದ. ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಎಸ್. ಶ್ರೀಧರ್ ಅವರು ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ರಾಜ ಹಾಗೂ ಮಹಾದೇವ ಗಡದ ಪ್ರಕರಣದಲ್ಲಿ ವಾದ ಮಂಡಿಸಿದ್ದರು.

ಚುನ್ನು ಹನ್ಸದ್ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ, ಸಾಕ್ಷಿದಾರರ ವಿಚಾರಣೆ ನಡೆಸಿತ್ತು. ಚುನ್ನು ಅಪರಾಧಿ ಎಂಬುದು ಸಾಬೀತಾಗಿದ್ದರಿಂದ, ಜೀವಾವಧಿ ಶಿಕ್ಷೆ ಹಾಗೂ ರೂ25 ಸಾವಿರ ದಂಡ ವಿಧಿಸಿದೆ.

ಚುನ್ನು ಹನ್ಸದ್, ತಮ್ಮ ಊರಿನಲ್ಲೇ 25 ವರ್ಷದ ಮಹಿಳೆಯನ್ನು ಎರಡನೇ ಮದುವೆಯಾಗಿದ್ದ. ಮಹಿಳೆಗೂ ಅದು ಎರಡನೇ ಮದುವೆಯಾಗಿತ್ತು. ಕೆಲಸ ಹುಡುಕಿಕೊಂಡು ಇಬ್ಬರೂ ಬೆಂಗಳೂರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದರು. ಇವರು ಹೊಸಕೋಟೆ ಸಮೀಪ ದೊಡ್ಡ ಹುಲ್ಲೂರು ಗ್ರಾಮದಲ್ಲಿ ಕಾರ್ಮಿಕರ ಶೆಡ್‌ನಲ್ಲಿ ವಾಸವಿದ್ದರು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿ ಯುವಕರ ಜೊತೆ ಪತ್ನಿ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ್ದ ಚುನ್ನು ಹನ್ಸದ್, ಪತ್ನಿಯೊಂದಿಗೆ ಜಗಳ ವಾಡುತ್ತಿದ್ದ ಎನ್ನುವುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿತ್ತು.

2020ರ ಜುಲೈ 22ರಂದು ರಾತ್ರಿ ದಂಪತಿ ನಡುವೆ ಜೋರು ಜಗಳ ನಡೆದಿದ್ದು, ಪತ್ನಿಯನ್ನು ವಿವಸ್ತ್ರಗೊಳಿಸಿ ಎದೆ ಹಾಗೂ ದೇಹದ ಹಲವು ಭಾಗಗಳಿಗೆ ಹಲ್ಲಿನಿಂದ ಕಚ್ಚಿ ರಕ್ತ ಸೋರುವಂತೆ ಗಾಯಗೊಳಿಸಿದ್ದ. ಬಳಿಕ, ಪತ್ನಿಯ ಕತ್ತು ಹಿಸುಕಿ ಸಾಯಿಸಿದ್ದ. ನಂತರ ಆತ ಸ್ಥಳದಿಂದ ಪರಾರಿಯಾಗಿದ್ದ. ಕೊಲೆ ಸಂಬಂಧ ಹೊಸಕೋಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅಂದಿನ ಇನ್‌ಸ್ಪೆಕ್ಟರ್ ಚನ್ನು ಹನ್ಸದ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯವು ವಿಚಾರಣೆ ನಡೆಸಿ ಇದೀಗ ಆರೋಪಿಗೆ ಜೀವಾವಧಿ ಶಿಕ್ಷೆಯಾಗಿದೆ.

ಕರೆನ್ಸಿ ಹೆಸರಲ್ಲಿ ಮೋಸ: ವ್ಯಕ್ತಿ ಬಂಧನ

ಅರ್ಧ ಬೆಲೆಗೆ ಯುಎಇ ಕರೆನ್ಸಿ ಕೊಡುವುದಾಗಿ ನಂಬಿಸಿ ಬಣ್ಣದ ಜೆರಾಕ್ಸ್ ಪ್ರತಿ ನೀಡಿ ವಂಚನೆ ಮಾಡುತ್ತಿದ್ದ ಆರೋಪದಡಿಯಲ್ಲಿ ಇಮ್ರಾನ್ ಶೇಖ್‌ ಎಂಬಾತನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಮೂಲದ ಇಮ್ರಾನ್ ಹಲವು ತಿಂಗಳಿನಿಂದ ಈ ಕೃತ್ಯ ಎಸಗುತ್ತಿದ್ದ. ಈತನ ಕೆಲಸಕ್ಕೆ ಸಹಕರಿಸುತ್ತಿದ್ದ ರುಕ್ಸಾನಾ ಎಂಬ ಮಹಿಳೆ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ನಗದು ವಿನಿಮಯ ಏಜೆನ್ಸಿ ನಡೆಸುತ್ತಿರುವುದಾಗಿ ಹೇಳುತ್ತಾ ಆರೋಪಿಗಳು, ವಿದೇಶಕ್ಕೆ ಹೋಗುವ ಉದ್ಯಮಿಗಳು ಹಾಗೂ ಉದ್ಯೋಗಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ನಮ್ಮ ಬಳಿ ಯುಎಇ ದಿರ್ಹಮ್ ಕರೆನ್ಸಿ ಇದೆ. ಅರ್ಧ ಮೊತ್ತಕ್ಕೆ ಕೊಡುತ್ತೇವೆ ಎಂದು ನಂಬಿಸುತ್ತಿದ್ದರು. ಉದ್ಯಮಿಗಳು ಹಾಗೂ ಉದ್ಯೋಗಿಗಳು ಇವರನ್ನು ನಂಬುತ್ತಿದ್ದರು. ನಂತರ ವ್ಯವಹಾರ ಕುರಿತು ಮಾತನಾಡುತ್ತಿದ್ದರು.

ಆರೋಪಿಗಳು ಹಣ ಪಡೆದು ಆ ಮೊತ್ತಕ್ಕೆ ಸಮನಾದ ದಿರ್ಹಮ್‌ ಕರೆನ್ಸಿಯ ಬಣ್ಣದ ಜೆರಾಕ್ಸ್ ಪ್ರತಿಗಳನ್ನು ನೀಡಿ ಪರಾರಿಯಾಗುತ್ತಿದ್ದರು. ನಗದು ವಿನಿಮಯ ಕೇಂದ್ರಗಳಲ್ಲಿ ಕರೆನ್ಸಿ ಪರಿಶೀಲನೆ ನಡೆಸಿದಾಗ, ಇವು ಜೆರಾಕ್ಸ್ ಪ್ರತಿಗಳು ಎಂಬುದು ಗೊತ್ತಾಗುತ್ತಿತ್ತು. ಇದೇ ರೀತಿಯಲ್ಲಿ ಆರೋಪಿಗಳು 500ಕ್ಕೂ ಹೆಚ್ಚು ಮಂದಿಯನ್ನು ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ: ಎಚ್. ಮಾರುತಿ. ಬೆಂಗಳೂರು)

Whats_app_banner