ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಲ್ಲಿ ಹೆಚ್ಚಿದ ಆನ್‌ಲೈನ್‌ ವಂಚನೆ, 4 ವರ್ಷದಲ್ಲಿ ದಾಖಲಾದವರು 7 ಸಾವಿರ ಪ್ರಕರಣ

Bangalore News: ಬೆಂಗಳೂರಲ್ಲಿ ಹೆಚ್ಚಿದ ಆನ್‌ಲೈನ್‌ ವಂಚನೆ, 4 ವರ್ಷದಲ್ಲಿ ದಾಖಲಾದವರು 7 ಸಾವಿರ ಪ್ರಕರಣ

Online fraud ಬೆಂಗಳೂರು ಮಾತ್ರವಲ್ಲದೇ ಕರ್ನಾಟಕದಲ್ಲೂ ಆನ್‌ಲೈನ್‌ ವಂಚಕರ ಜಾಲ ಹೆಚ್ಚಾಗಿದ್ದು. ಜನ ಹಣ ಕಳೆದುಕೊಳ್ಳುತ್ತಲೇ ಇದ್ದಾರೆ.(ವರದಿ: ಎಚ್.ಮಾರುತಿ, ಬೆಂಗಳೂರು)

ಬೆಂಗಳೂರಿನಲ್ಲಿ ಆನ್‌ ಲೈನ್‌ ವಂಚನೆ ಪ್ರಕರಣಗಳು ಹೆಚ್ಚಿವೆ.
ಬೆಂಗಳೂರಿನಲ್ಲಿ ಆನ್‌ ಲೈನ್‌ ವಂಚನೆ ಪ್ರಕರಣಗಳು ಹೆಚ್ಚಿವೆ.

ಬೆಂಗಳೂರು: ಅವರು ಈಗಷ್ಟೇ ನಿವೃತ್ತಿಯಾಗಿದ್ದರು. ನಿವೃತ್ತರಾದ ನಂತರ ಬಂದ ಜೀವಮಾನದ ಉಳಿತಾಯದ ಹಣವನ್ನೇ ಮುಂದಿನ ಬದುಕಿಗಾಗಿ ಇಟ್ಟುಕೊಳ್ಲುವ ಯೋಚನೆಯಲ್ಲಿದ್ದರು. ಪರಿಚಯಸ್ಥರೊಬ್ಬರ ಮೂಲಕ ಹೂಡಿಕೆ ಆಹ್ವಾನ ಬಂದಿತು. ಪರಿಚಯದ ಕಾರಣಕ್ಕೆ ಒಪ್ಪಿಕೊಂಡರು. ಆನ್‌ಲೈನ್‌ನಲ್ಲಿ ಆರಂಭದಲ್ಲಿ ಹೂಡಿಕೆ ಮಾಡಿದರು. ಹಣವೂ ಬಂದಿತು. ಇದಾದ ನಂತರ ಹೆಚ್ಚು ಹಣ ಹೂಡುವಂತೆ ಪ್ರೇರೇಪಿಸಿದರು. ನಿಧಾನವಾಗಿ ಹೂಡಿಕೆಗೆ ಹಣವೂ ಬರಲಿಲ್ಲ. ಇಟ್ಟ ಹಣವೂ ಇಲ್ಲ. ಆನ್‌ಲೈನ್‌ ನಲ್ಲಿ ಹಣ ಲಪಾಟಿಸಿದವರು ಪರಾರಿ. ಪರಿಚಯಸ್ಥರಿಗೂ ಆಗಿತ್ತು ಮೋಸ. ಇದು ಒಂದೇ ಪ್ರಕರಣವಲ್ಲ. ಇಂತಹ ಸಾವಿರಾರು ಪ್ರಕರಣಗಳು ಬಯಲಾಗುತ್ತವೆ ಇವೆ. ಕೆಲವು ಬೆಳಕಿಗೆ ಬಂದರೆ ಇನ್ನು ಕೆಲವರು ದೂರು ನೀಡುವ ಗೋಜಿಗೆ ಹೋಗದೇ ಸುಮ್ಮನಾಗಿಬಿಡುತ್ತಾರೆ.

ಕಳೆದ 4 ವರ್ಷಗಳಿಂದ ಕರ್ನಾಟಕದಲ್ಲಿ ಆನ್‌ ಲೈನ್‌ ವಂಚನೆಯ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದ್ದು ರಾಜ್ಯ ರಾಜಧಾನಿ ಬೆಂಗಳೂರು ಆನ್‌ ಲೈನ್‌ ವಂಚನೆಯ ಪ್ರಕರಣಗಳ ರಾಜಧಾನಿಯಾಗಿಯೂ ಹೊರಹೊಮ್ಮಿದೆ. ಕಳೆದ 4ವರ್ಷಗಳಲ್ಲಿ ಅಂದರೆ 1, ಜನವರಿ 2020ರಿಂದ 25 ಮೇ, 2024ರವರೆಗೆ ರಾಜ್ಯದಲ್ಲಿ 9,479 ಪ್ರಕಣಗಳು ದಾಖಲಾಗಿದ್ದು ಬೆಂಗಳೂರುವೊಂದರಲ್ಲೇ 6,905 ಪ್ರಕರಣಗಳು ದಾಖಲಾಗಿವೆ. ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ ಶೇ.73ರಷ್ಟು ಪ್ರಕರಣಗಳು ರಾಜ್ಯ ರಾಜಧಾನಿಯಲ್ಲಿ ದಾಖಲಾಗಿವೆ.

ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ನೌಕರರು ಮತ್ತು ಶೇ.20-30ರಷ್ಟು ವಿದ್ಯಾರ್ಥಿಗಳು ಈ ವಂಚನೆಯ ಬಲಿಪಶುಗಳಾಗಿದ್ದಾರೆ. ನಿರುದ್ಯೋಗಿಗಳು, ಆಗಷ್ಟೇ ಪದವಿ ಪಡೆದ ಪದವೀಧರರು ಮತ್ತು ಸಾರ್ವಜನಿಕರು ಈ ವಂಚನೆಗೆ ಸುಲಭವಾಗಿ ಬೀಳುತ್ತಾರೆ ಎಂದು ಬ್ಯೂರೋ ಮೂಲಗಳು ಹೇಳುತ್ತವೆ.

ಟ್ರೆಂಡಿಂಗ್​ ಸುದ್ದಿ

2023ರಲ್ಲಿ 4,098 ಆನ್‌ ಲೈನ್‌ ವಂಚನೆಯ ಪ್ರಕರಣಗಳು ದಾಖಲಾಗಿದ್ದರೆ ಈ ವರ್ಷದಲ್ಲಿ ಆಗಲೇ ಮೇ 25ರವರೆಗೆ 2,185 ಪ್ರಕರಣಗಳು ದಾಖಲಾಗಿವೆ. ಈ ವರ್ಷದಲ್ಲಿ ಇಂತಹ ಪ್ರಕರಣಗಳ ಸಂಖ್ಯೆ 5000 ದಾಟುವ ನಿರೀಕ್ಷ ಇದೆ ಎಂದು ಊಹಿಸಲಾಗಿದೆ. ಆದರೂ ಸಾರ್ವಜನಿಕರಲ್ಲಿ ಅರಿವು ಮೂಡುತ್ತಿದ್ದು, ಇಂತಹ ಕ್ರಮೇಣ ಇಳಿಮುಖವಾಗುತ್ತಿವೆ ಎಂದೂ ಹೇಳಲಾಗುತ್ತಿದೆ.

ಸಾಂಪ್ರದಾಯಿಕ ಉದ್ಯೋಗ ನೀಡುವ ಹಗರಣಗಳ ವಿಸ್ತೃತ ರೂಪವೇ ಆನ್‌ ಲೈನ್‌ ಉದ್ಯೋಗ ವಂಚನೆಯ ಪ್ರಕರಣಗಳು. ಸಾಂಪ್ರದಾಯಿಕ ಪ್ರಕರಣಗಳಲ್ಲಿ ವಂಚಕರು ಸಾರ್ವಜನಿಕ ಸ್ಥಳಗಳಲ್ಲಿ ಉದ್ಯೋಗ ನೀಡುವ ಮಾಹಿತಿಗಳ ಕರಪತ್ರಗಳನ್ನು ಅಂಟಿಸುತ್ತಾರೆ. ಈ ಮೂಲಕ ಸುಳ್ಳು ಹರಡುತ್ತಾ ಹಣ ಸಂಪಾದನೆ ಮಾಡುತ್ತಾರೆ. ಈಗ ಈ ವಂಚನೆ ಆನ್‌ ರೂಪ ಪಡೆದುಕೊಂಡಿದೆ. ನಿರುದ್ಯೋಗಿಗಳು ಮತ್ತು ನವೀನ ಪದವೀಧರರಿಗೆ ಉದ್ಯೋಗ ಅನಿವಾರ್ಯವಾಗಿದ್ದು ಸುಲಭವಾಗಿ ಈ ವಂಚನೆಯ ಜಾಲದಲ್ಲಿ ಸಿಲುಕುತ್ತಾರೆ.

ಉದಾಹರಣೆಗೆ ವೈಟ್‌ ಪೀಲ್ಡ್‌ ವಿಭಾಗದಲ್ಲಿ ಪ್ರತಿದಿನ 10-20 ಆನ್‌ ಲೈನ್‌ ವಂಚನೆಯ ಪ್ರಕರಣಗಳು ದಾಖಲಾಗುತ್ತಿದ್ದು, ಇದರಲ್ಲಿ 5-7 ಉದ್ಯೋಗ ಸಂಬಂಧಿ ಪ್ರಕರಣಗಳಾಗಿವೆ.

ಟೆಕ್ಕಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳ ಪಾಲು ಶೇ.2-30ರಷ್ಟಿದೆ. ಇವರೆಲ್ಲರೂ ಬಿಡುವಿನ ಸಮಯದಲ್ಲಿ ಹಣ ಗಳಿಸಲು ಮುಂದಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ.

ಕಡಿಮೆ ಸಂಬಳ ಗಳಿಸುತ್ತಿರುವವರು, ಕಂಪನಿಗಳಲ್ಲಿ ಪಿಂಕ್‌ ಸ್ಲಿಪ್‌ ಪಡೆದವರು, ವರ್ಕ್‌ ಫ್ರಂ ಹೋಮ್‌ ಉದ್ಯೋಗಿಗಳು, ಹೆಚ್ಚಿನ ಹಣ ಗಳಿಸಲು ಆಸೆ ಪಟ್ಟವರು ಮತ್ತೊಂದು ರೀತಿಯ ಬಲಿಪಶುಗಳಾಗಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.

ಈ ವರ್ಷದ ಜನವರಿಯಲ್ಲಿ ಉದ್ಯೋಗ ವಂಚನೆಯ ಪ್ರಕರಣದಲ್ಲಿ ಬೆಂಗಳೂರಿನ ಸಿಸಿಬಿ 158 ಕೋಟಿ ರೂ.ಗಳ ರಾಷ್ಟ್ರ ಮಟ್ಟದ ಹಗರಣವನ್ನು ಬಯಲಿಗೆಳೆದಿದೆ. ಇಂತಹ ಪ್ರಕರಣಗಳಲ್ಲಿ ದೇಶದ ಮೊಬೈಲ್ ನಂಬರ್‌ ಗಳನ್ನು ಬಳಸುವುದಿಲ್ಲ. ಬದಲಾಗಿ ವಿದೇಶಿ ನಂಬರ್‌ ಗಳ ಕರೆಯನ್ನು ನಂಬಿ ಮಾಯಕರು ಬ್ಯಾಂಕ್‌ ಅಕೌಂಟ್‌ ಗಳಿಗೆ ಹಣ ವರ್ಗಾಯಿಸುತ್ತಾರೆ.

ವಿಶೇಷವಾಗಿ ಇಂತಹ ಕರೆಗಳು ಕಾಂಬೋಡಿಯಾ ದೇಶದಲ್ಲಿ ನೋಂದಣಿಯಾಗಿರುವ ಮೊಬೈಲ್‌ ನಂಬರ್‌ ಗಳಿಂದ ಕರೆಗಳು ಬರುತ್ತವೆ. ಸುಳ್ಳು ಉದ್ಯೋಗದ ಮಾಹಿತಿ ನೀಡಿ ನಿರುದ್ಯೋಗಿಗಳನ್ನು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಕರೆದೊಯ್ಯಲಾಗುತ್ತದೆ.

ಅಲ್ಲಿ ಕೂಡಿ ಹಾಕಿ ಇವರಿಂದ ಆನ್‌ ಲೈನ್‌ ವಂಚನೆಯ ಕೃತ್ಯಗಳನ್ನು ಮಾಡಿಸುತ್ತಾರೆ. ಈ ರೀತಿ ವಂಚನೆಗೊಳಗಾದ 300 ಮಂದಿಯನ್ನು ರಕ್ಷಿಸಲಾಗಿದ್ದು ತನಿಖೆ ಮುಂದುವರದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಆನ್‌ ಲೈನ್‌ ವಂಚಕರು ಕೆಲವು ನಿರುದೋಗಿಗಳನ್ನು ಬ್ಯಾಂಕ್‌ ಮತ್ತು ಅಂಚೆ ಕಚೇರಿ ಖಾತೆಗಳಲ್ಲಿ ಸಾಕಷ್ಟು ಹಣ ಹೊಂದಿರುವವರನ್ನು ಗುರುತಿಸುತ್ತಾರೆ. ನಂತರ ಇವರಿಗೆ ಕರೆ ಮಾಡಿ ಬಲೆಗೆ ಬೀಳಿಸಿಕೊಳ್ಳುತ್ತಾರೆ. ಇವರಲ್ಲಿ ಕೆಲವರು ಕ್ಯಾಬ್‌ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಾ ತಮ್ಮ ಗ್ರಾಹಕರ ಮೊಬೈಲ್‌ ನಂಬರ್‌ ಗಳನ್ನು ಸಂಗ್ರಹಿಸಿ ಅವರಿಗೆ ಹೆಚ್ಚಿನ ಸಂಬಳದ ಆಮಿಷವೊಡ್ಡಿ ನಂತರ ಅವರನ್ನೂ ಬಲಿಪಶುಗಳನ್ನಾಗಿ ಮಾಡುತ್ತಾರೆ. ವಂಚನೆಯು ಇಂತಹುದೇ ರೂಪದಲ್ಲಿರುತ್ತದೆ ಎಂದು ಹೇಳಲಾಗುವುದಿಲ್ಲ. ಬದಲಾಗಿ ಸಾರ್ವಜನಿಕರು ಎಚ್ಚರಿಕೆಯಿದ ವ್ಯವಹರಿಸಿದರೆ ಹಣ ಕಳೆದುಕೊಳ್ಳುವ ಅಪಾಯ ಕಡಿಮೆ ಇರುತ್ತದೆ.

(ವರದಿ: ಎಚ್.ಮಾರುತಿ, ಬೆಂಗಳೂರು)