Bangalore News: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ವಜ್ರದ ಉಂಗುರ ಕಾಣೆ, ಹುಡುಕಿಕೊಟ್ಟ ಭದ್ರತಾ ಸಿಬ್ಬಂದಿ ಸೇವೆಗೆ ಭಾರೀ ಮೆಚ್ಚುಗೆ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ವಜ್ರದ ಉಂಗುರ ಕಾಣೆ, ಹುಡುಕಿಕೊಟ್ಟ ಭದ್ರತಾ ಸಿಬ್ಬಂದಿ ಸೇವೆಗೆ ಭಾರೀ ಮೆಚ್ಚುಗೆ

Bangalore News: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ವಜ್ರದ ಉಂಗುರ ಕಾಣೆ, ಹುಡುಕಿಕೊಟ್ಟ ಭದ್ರತಾ ಸಿಬ್ಬಂದಿ ಸೇವೆಗೆ ಭಾರೀ ಮೆಚ್ಚುಗೆ

Diamond Ring ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ವಜ್ರದ ಉಂಗುರ ಕಳೆದುಕೊಂಡು ಪರದಾಡುತ್ತಿದ್ದಾಗ ಸಿಐಎಸ್‌ಎಫ್‌( CISF) ಸಿಬ್ಬಂದಿ ಹುಡುಕಿಕೊಟ್ಟಿದ್ದಾರೆ.

 ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಸಿಕ್ಕಿತು ವಜ್ರದ ಉಂಗುರ.
ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಸಿಕ್ಕಿತು ವಜ್ರದ ಉಂಗುರ.

ಬೆಂಗಳೂರು: ಯಾವುದಾದರೂ ವಸ್ತು ಕಳೆದುಕೊಂಡರೆ ಸಿಗುವುದು ಬಹಳ ಕಷ್ಟ. ಆ ವಸ್ತುವಿನ ಮೇಲೆ ನಿಮ್ಮ ಹೆಸರು ಬರೆದಿದ್ದರೆ ವಾಪಾಸ್‌ ಸಿಗಬಹುದು ಎನ್ನುವ ಮಾತಿದೆ. ಅದರಲ್ಲೂ ಬೆಲೆಬಾಳುವ ವಸ್ತುಗಳು ಕಳೆದುಹೋದರಂತೂ ಮುಗಿದೇ ಹೋಯಿತು. ಅದು ಯಾರ ಕೈಗಾದರೂ ಸಿಕ್ಕರೆ ಇನ್ನೂ ಕಷ್ಟವೇ. ಇನ್ನು ಬೆಂಗಳೂರಿನಂತಹ ಜನಸಂದಣಿ ನಗರಿ, ಬೆಂಗಳೂರಿನ ವಿಮಾನ ನಿಲ್ದಾಣದಂತಹ ಸ್ಥಳದಲ್ಲಿ ಕಳೆದು ಹೋದರೆ ಇನ್ನೂ ಕಷ್ಟವೇ. ವಾಪಾಸ್‌ ಸಿಗುವುದು ಅಪರೂಪದಲ್ಲಿ ಅಪರೂಪವೇ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ವಜ್ರದ ಉಂಗುರವನ್ನು ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದು ಅದನ್ನು ಭದ್ರತಾ ಸಿಬ್ಬಂದಿ ಹುಡುಕಿಕೊಟ್ಟಿದ್ದಾರೆ. ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಬ್ಯುಸಿನೆಸ್‌ ನಿರತ ಆಕಾಂಕ್ಷಾ ಸಿಂಗ್‌ ಎಂಬುವವರು ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರಿಯ ನಿಲ್ದಾಣದ ಮೂಲಕ ಬೇರೆ ನಗರಕ್ಕೆ ಹೊರಟಿದ್ದರು.ಮನೆಯಿಂದ ಹೊರಟಾಗ ಅವರ ಕೈಯಲ್ಲಿಯೇ ವಜ್ರದ ಉಂಗುರ ಇತ್ತು. ವಾಹನ ಇಳಿದು ನಿಲ್ದಾಣದ ಒಳಗೆ ಪ್ರವೇಶಿಸಿ ಚೆಕ್‌ ಇನ್‌ ಮಾಡಿಕೊಂಡು ವಿಮಾನದತ್ತ ಹೋಗಲು ಅಣಿಯಾಗಿದ್ದರು. ಈ ವೇಳೆ ಕೈಯಲ್ಲಿ ವಜ್ರದ ಉಂಗುರ ಇಲ್ಲ. ನಿಲ್ದಾಣದ ಒಳಗೆ ಬಂದಾಗ ಇದ್ದ ವಜ್ರದ ಉಂಗುರ ಬೆರಳಿನಲ್ಲಿ ಇಲ್ಲದೇ ಇದ್ದುದನ್ನು ಗಮನಿಸಿದ ಆಕಾಂಕ್ಷಸಿಂಗ್‌ ಆತಂಕಗೊಂಡರು. ಎಲ್ಲಿ ಉಂಗುರ ಬಿದ್ದು ಹೋಯಿತು ಎಂದು ಹುಡುಕಿದರು. ಅತ್ತ ಕಡೆ ವಿಮಾನಕ್ಕೆ ಹೋಗುವ ಆತಂಕ, ಇತ್ತ ಉಂಗುರ ಕಳೆದುಕೊಂಡ ಬೇಸರ. ಹುಡುಕಿದರೂ ಸಿಗುತ್ತಿಲ್ಲ ಎನ್ನುವ ಆಕ್ರೋಶ ಬೇರೆ, ಏನು ಮಾಡಬೇಕು ಎಂದು ಆಕಾಂಕ್ಷ ಅವರಿಗೆ ತೋಚದಾಯಿತು.

ಇದನ್ನೂ ಓದಿರಿ: ಮದ್ಯಪ್ರಿಯರಿಗೆ ನಿರಾಸೆ, ಮದ್ಯ ಉತ್ಪಾದಕ ಕಂಪನಿಗಳ ಅಸಹಕಾರ; ಪ್ರೀಮಿಯಂ ಮದ್ಯದ ದರ ಇಳಿಕೆ ಮುಂದೂಡಿಕೆ, ಇಂದಿನಿಂದ ಅಗ್ಗವಾಗಬೇಕಿದ್ದ ಮದ್ಯ

ಕೊನೆಗೆ ಅಲ್ಲಿಯೇ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ( CISF) ಸಿಬ್ಬಂದಿ ರಾಜೇಶ್‌ ಸಿಂಗ್‌ ಹಾಗೂ ವಿನಯಕುಮಾರ್‌ ರೈ ಎನ್ನುವವರ ಗಮನಕ್ಕೆ ತಂದರು. ಆಕಾಂಕ್ಷ ಅವರ ಆತಂಕವನ್ನು ಗಮನಿಸಿ ಯಾವ ಮಾರ್ಗದಲ್ಲಿ ಬಂದರು.ಎಲ್ಲೆಲ್ಲಿ ನಿಂತಿದ್ದರು ಎನ್ನುವ ವಿವರಗಳನ್ನು ಇಬ್ಬರೂ ಪಡೆದುಕೊಂಡರು. ಅವರು ವಿಮಾನ ನಿಲ್ದಾಣಕ್ಕೆ ಇಳಿದ ಜಾಗದಿಂದ ಆರಂಭಗೊಂಡು ತಲುಪಿ ದೂರು ನೀಡಿದ ಜಾಗದವರೆಗೂ ಒಬ್ಬೊಬ್ಬರು ಒಂದೊಂದು ದಿಕ್ಕಿನಿಂದ ಹುಡುಕಿಕೊಂಡು ಬಂದರು. ಆಕಾಂಕ್ಷ ಅವರ ಪರಿಸ್ಥಿತಿ ನೋಡಿಕೊಂಡು ಇತರರೂ ಸಹಕರಿಸಿದರು.

ಹತ್ತು ನಿಮಿಷ ಹುಡುಕಿದರೂ ಉಂಗುರ ಕಂಡು ಬರಲಿಲ್ಲ. ಇನ್ನೇನು ಉಂಗುರ ಸಿಗುವುದಿಲ್ಲ ಎನ್ನುವುದು ಆಕಾಂಕ್ಷ ಅವರಿಗೂ ತಿಳಿಯಿತು. ಲಕ್ಷಾಂತರ ಬೆಲೆ ಬಾಳುವ ವಜ್ರದ ಉಂಗುರ ಹೀಗೆ ಕಾಣೆಯಾಯಿತಲ್ಲ ಎನ್ನುವ ಬೇಸರದ ನಡುವೆ ಅವರು ಹೊರಡಲು ಅಣಿಯಾಗುತ್ತಿದ್ದರು. ಈ ವೇಳೆ ರಾಜೇಶ್‌ ಸಿಂಗ್‌ ಹಾಗೂ ವಿನಯಕುಮಾರ್‌ ರೈ ಅವರು ವಜ್ರದ ಉಂಗುರವನ್ನು ಹಿಡಿದುಕೊಂಡು ಬಂದೇ ಬಿಟ್ಟರು. ಅಲ್ಲಿಯೇ ಮೂಲೆಯಲ್ಲಿ ಉಂಗುರ ಬಿದ್ದಿತ್ತು.

ಇದನ್ನೂ ಕಂಡ ಆಕಾಂಕ್ಷ ಸಿಂಗ್‌ ಅವರಿಗೆ ಇನ್ನಿಲ್ಲದ ಸಂತೋಷ. ಸಿಐಎಸ್‌ಎಫ್‌ ಸಿಬ್ಬಂದಿ ಶ್ರಮಕ್ಕೆ ಧನ್ಯವಾದವನ್ನು ಹೇಳಿದರು. ಅವರು ಖುಷಿಯೊಂದಿಗೆ ಹೊರಟರು. ವಾಪಾಸ್‌ ದೊರೆತ ಖುಷಿಗೆ ಪಾರವೇ ಇರಲಿಲ್ಲ.

ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಆಕಾಂಕ್ಷ ಸಿಂಗ್‌, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (@kempintairprtps) ನಾನು ನನ್ನ ವಜ್ರದ ಉಂಗುರವನ್ನು ಕಳೆದುಕೊಂಡಿದ್ದೆ. ಆದರೆ ನಿಜಕ್ಕೂ ಭದ್ರತಾ ಸಿಬ್ಬಂದಿಯ ಸಮನ್ವಯ ಮತ್ತು ಸಹಾಯ ಮಾಡುವ ಸ್ವಭಾವಕ್ಕೆ ಧನ್ಯವಾದಗಳು. ನಿಮ್ಮ ಸಹಾಯವನ್ನು ಬಹಳವಾಗಿ ಶ್ಲಾಘಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ರಾಜೇಶ್ ಸಿಂಗ್ ಮತ್ತು ಶ್ರೀ ವಿನಯ್ ಕುಮಾರ್ ರೈ ಅವರ ಸಹಾಯದಿಂದ, ನಾನು ನನ್ನ ಉಂಗುರವನ್ನು ಕಂಡುಹಿಡಿಯಲು ಸಾಧ್ಯವಾಯಿತು ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಸಿಐಎಸ್‌ಎಫ್‌ ಪ್ರಯಾಣಿಕರ ಸೇವೆಗೆ ಸದಾ ಸಿದ್ದವಿದೆ. ದೂರು ನೀಡಿದರೆ ಸಿಬ್ಬಂದಿ ಹುಡುಕಿ ಕೊಟ್ಟು ಸಹಾಯ ಮಾಡಲಿದ್ದಾರೆ ಎಂದು ಭದ್ರತಾ ಪಡೆಯು ಆಕಾಂಕ್ಷ ಅವರ ಮೆಚ್ಚುಗೆಗೆ ಪೋಸ್ಟ್‌ಗೆ ಉತ್ತರಿಸಿದೆ.

Whats_app_banner