ಮೋದಿ ಬೆಂಗಳೂರು ಭೇಟಿ, ಇಂದು ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚಾರ ಬದಲಾವಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಮೋದಿ ಬೆಂಗಳೂರು ಭೇಟಿ, ಇಂದು ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚಾರ ಬದಲಾವಣೆ

ಮೋದಿ ಬೆಂಗಳೂರು ಭೇಟಿ, ಇಂದು ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚಾರ ಬದಲಾವಣೆ

Bangalore traffic diverted ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವರು. ಈ ಕಾರಣದಿಂದ ದೇವನಹಳ್ಳಿ ವಿಮಾನ ನಿಲ್ದಾಣ ಮಾರ್ಗದ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಪ್ರಧಾನಿ ಮೋದಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಇರುವುದರಿಂದ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಪ್ರಧಾನಿ ಮೋದಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಇರುವುದರಿಂದ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 19ರಂದು ಬೆಂಗಳೂರಿನಲ್ಲಿ ಇರಲಿದ್ದಾರೆ. ಎರಡು ಗಂಟೆ ಕಾಲ ಬೆಂಗಳೂರಿನಲ್ಲಿದ್ದು, ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಮೋದಿ ಅವರು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸಮೀಪದಲ್ಲಿಯೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಿಂದ ದೇವನಹಳ್ಳಿ ಕಂಪೇಗೌಡ ವಿಮಾನ ನಿಲ್ದಾಣ ಕಡೆಗೆ ಸಂಚರಿಸುವ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಿಗ್ಗೆ 8ರಿಂದಲೇ ಆರಂಭಗೊಂಡು ಸಂಜೆ 6ರ ವರೆಗೆ ಕೆಲ ಮಾರ್ಗದಲ್ಲಿ ಸಂಚಾರ ನಿರ್ಬಂಧ ಹಾಗೂ ಬದಲಾವಣೆ ಮಾಡಿ ಬೆಂಗಳೂರು ನಗರ ಸಂಚಾರ ಪೊಲೀಸರು ಆದೇಶಿಸಿದ್ಧಾರೆ.

ಈ ಮೊದಲು ದೇವನಹಳ್ಳಿ ವಿಮಾನ ನಿಲ್ದಾಣದಿಂದ ಮೂರು ಕಿ.ಮಿವರೆಗೆ ಮೋದಿ ಅವರ ರೋಡ್‌ ಶೋ ನಡೆಸಲು ಬಿಜೆಪಿ ಸಿದ್ದತೆ ಮಾಡಿಕೊಂಡಿತ್ತು. ಪ್ರಧಾನಿ ಕಚೇರಿಗೆ ಅನುಮತಿಗೆ ಪತ್ರವನ್ನೂ ನೀಡಲಾಗಿತ್ತು. ಆದರೆ ಮೋದಿ ಅವರು ಚೆನ್ನೈನಲ್ಲಿ ಖೇಲೋ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದರಿಂದ ರೋಡ್‌ ಶೋ ರದ್ದುಪಡಿಸಲಾಯಿತು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮಧ್ಯಾಹ್ನ 2:10 ಕ್ಕೆ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ದೇವನಹಳ್ಳಿ ತಾಲ್ಲೂಕಿನ ಮಾರನಹಳ್ಳಿಗೆ 2:45 ಕ್ಕೆ ತಲುಪಲಿದ್ದಾರೆ. ಅಲ್ಲಿ ಬಿಐಇಟಿಸಿ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಲೋಕಾರ್ಪಣೆ ಮಾಡಲಿದ್ದಾರೆ. ಸಂಜೆ 4ರ ನಂತರ ಬೆಂಗಳೂರಿನಿಂದ ನಿರ್ಗಮಿಸುವರು. ಈ ಕಾರ್ಯಕ್ರಮವಂತೂ ನಿಗದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಧ್ಯಾಹ್ನ ಹಾಗೂ ಸಂಜೆ ಸಂಚರಿಸುವ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬದಲಾವಣೆ ಹೀಗಿದೆ.

  • ಗೊಲ್ಲರಹಳ್ಳಿ ಗೇಟ್‌–ಹುಣಚೂರು ಗ್ರಾಮ (ಕೆಐಎಡಿಬಿ ಕೈಗಾರಿಕಾ ಪ್ರದೇಶ), ಡಾಬಾ ಗೇಟ್‌ (ಎನ್‌.ಎಚ್‌. 648)ನಿಂದ ವಿಮಾನ ನಿಲ್ದಾಣದ ಕಡೆಗೆ, ಹೆಣ್ಣೂರು ಬಾಗಲೂರು ಮುಖ್ಯರಸ್ತೆಯಿಂದ ವಿಮಾನ ನಿಲ್ದಾಣದ ಕಡೆಗೆ, ಚಿಕ್ಕಜಾಲ ಕೋಟೆ ಕಡೆಯಿಂದ ಕೆಂಪೇಗೌಡ ವಿಮಾನನಿಲ್ದಾಣ ವರೆಗೆ ಅಂದು ಬೆಳಿಗ್ಗೆ 8ರಿಂದ ಸಂಜೆ 6ರ ವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
  • ಕೆಂಪೇಗೌಡ ವಿಮಾನ ನಿಲ್ದಾಣ ಹಾಗೂ ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ತೆರಳುವ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
  • ಬೆಂಗಳೂರು ಏರ್‌ಪೋರ್ಟ್‌ಗೆ ವೈಟ್‌ಫೀಲ್ಡ್‌, ಕೆಆರ್‌ ಪುರಂನಿಂದ ಆಗಮಿಸುವ ವಾಹನಗಳು ಗೊಲ್ಲಹಳ್ಳಿ ಗೇಟ್‌ ಮಾರ್ಗವಾಗಿ ಬಲ ಬದಿಗೆ ತಿರುವು ಪಡೆದುಕೊಂಡು ಬೆಟ್ಟಕೋಟೆ, ಏರ್‌ಲೈನ್ಸ್‌ ಡಾಬಾ ಇಲ್ಲಿಂದ ಎಡ ಬದಿಗೆ ತಿರುವು ಪಡೆದುಕೊಂಡು ದೇವನಹಳ್ಳಿ ನಗರದಿಂದ ಬಿಬಿ ರಸ್ತೆಯಾಗಿ ಏರ್‌ಪೋರ್ಟ್‌ ಪ್ರವೇಶವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿರಿ: ಮಕ್ಕಳ ಮೂಗಿನಲ್ಲಿ ರಕ್ತಸ್ರಾವವಾಗಲು ಕಾರಣವೇನು? ಈ ಸಂದರ್ಭದಲ್ಲಿ ಪೋಷಕರು ಏನು ಮಾಡಬೇಕು; ಇಲ್ಲಿದೆ ಉತ್ತರ

  • ಏರ್‌ಲೈನ್ಸ್‌ ಡಾಬಾದಿಂದ ವಿಮಾನ ನಿಲ್ದಾಣ ಕಡೆಗೆ ತೆರಳುವ ಸಾರ್ವಜನಿಕ ವಾಹನಗಳು ಕೆಐಎಡಿಬಿ ಇಂಡಸ್ಟ್ರಿಯಲ್‌ ಏರಿಯಾ ಮಾರ್ಗವಾಗಿ ಏರ್‌ಲೈನ್ಸ್‌ ಡಾಬಾದಿಂದ ಎಡಕ್ಕೆ ಸಂಚರಿಸಿ ದೇವನಹಳ್ಳಿ ಪಟ್ಟಣಕ್ಕೆ ಬಂದು ನಂತರ ಬಿಬಿ ರಸ್ತೆ ಮೂಲಕ ವಿಮಾನ ನಿಲ್ದಾಣ ತಲುಪಬೇಕು.
  • ಹೆಣ್ಣೂರಿನಿಂದ ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳು ಮೈಲನಹಳ್ಳಿ ಮಾರ್ಗವಾಗಿ ಬಗಲೂರು ಗುಂಡಪ್ಪ ಸರ್ಕಲ್‌ನಿಂದ ಎಡಕ್ಕೆ ಸಂಚರಿಸಿ ರೇವಾ ಕಾಲೇಜು ಜಂಕ್ಷನ್-ಬೆಂಗಳೂರು ಕ್ರಾಸ್ ಸಾಗಿ ಇಲ್ಲಿಂದ ಬಲಕ್ಕೆ ಸಂಚರಿಸಿ ಬಿಬಿ ರಸ್ತೆ, ಚಿಕ್ಕಜಾಲ, ಸದಹಳ್ಳಿ, ಏರ್‌ಪೋರ್ಟ್‌ ಫ್ಲೈ ಓವರ್‌ ಮೂಲಕ ವಿಮಾನ ನಿಲ್ದಾಣ ತಲುಪಬೇಕು
  • ಚಿಕ್ಕಜಾಲ ಕೋಟೆ ಮುಖ್ಯ ರಸ್ತೆಯಿಂದ ಬೆಂಗಳೂರು ವಿಮಾನ ನಿಲ್ದಾಣ ತಲುಪಲು ಗಾಳಮ್ಮ ಸರ್ಕಲ್‌ ಮೂಲಕ ಸಾಗಬೇಕಾಗುತ್ತದೆ. ಚಿಕ್ಕಜಾಲ, ಬಿಬಿ ರಸ್ತೆ, ಸದಹಳ್ಳಿ- ಟೋಲ್‌, ಏರ್‌ಪೋರ್ಟ್‌ ಫ್ಲೈ ಓವರ್‌ ಮೂಲಕ ಸಂಚರಿಸಬಹುದು.
  • ಬೆಂಗಳೂರು ರಸ್ತೆಯಿಂದ ಹೋಗುವ ವಾಹನಗಳು ಗಾಳಮ್ಮ ಸರ್ಕಲ್‌ ಮೂಲಕ ಸಂಚರಿಸಬಹುದಾಗಿದೆ. ಬೆಂಗಳೂರು ಕಾಲೊನಿಯಲ್ಲಿ ಎಡಕ್ಕೆ ತಿರುವು ಪಡೆದು ರಝಾಕ್‌ ಪಾಳ್ಯ, ಎಂವಿಐಟಿ ಕಾಲೇಜು, ಚಿಕ್ಕಜಾಲ ಇಲ್ಲಿಂದ ಬಲಕ್ಕೆ ಸಂಚರಿಸಿ ಬೆಂಗಳೂರು-ಬಳ್ಳಾರಿ ರಸ್ತೆ, ಸದಹಳ್ಳಿ ಟೋಲ್‌, ಏರ್‌ಪೋರ್ಟ್‌ ಫ್ಲೈ ಓವರ್‌ ಮೂಲಕ ಸಾಗಿ ವಿಮಾನ ನಿಲ್ದಾಣ ತಲುಪಬಹುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

Whats_app_banner