ಕಲಬುರಗಿ, ಬೆಂಗಳೂರಿಗೆ ಮೋದಿ ಭೇಟಿ ಇಂದು: ಒಂದೇ ದಿನ 3 ರಾಜ್ಯ ಪ್ರವಾಸ
PM Narendra Modi in Bengaluru: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರದಂದು ಕರ್ನಾಟಕ, ಮಹಾರಾಷ್ಟ್ರ ಹಾಗೂ ತಮಿಳುನಾಡು ಪ್ರವಾಸ ಕೈಗೊಂಡಿದ್ದಾರೆ. ಕರ್ನಾಟಕದಲ್ಲಿ ಕಲಬುರಗಿ ಹಾಗೂ ಬೆಂಗಳೂರು ಪ್ರವಾಸ ಕೈಗೊಳ್ಳುವರು.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 19ರ ಶುಕ್ರವಾರ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ಧಾರೆ. ಕಲಬುರಗಿ ಹಾಗೂ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಕಾರ್ಯಕ್ರಮ ನಿಗದಿಯಾಗಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಅಧಿಕೃತ ಕಾರ್ಯಕ್ರಮ ನಿಗದಿಯಾಗಿದೆ. ಕೆಲ ದಿನಗಳಿಂದ ನಿರಂತರವಾಗಿ ಪ್ರವಾಸ ಮಾಡುತ್ತಿರುವ ಪ್ರಧಾನಿ ಮೋದಿ ಶುಕ್ರವಾರ ಒಂದೇ ದಿನ ಮೂರು ರಾಜ್ಯಗಳಲ್ಲಿ ಪ್ರವಾಸ ಹಾಕಿಕೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ7 ದೆಹಲಿಯಿಂದ ಹೊರಟು ಬೆಳಿಗ್ಗೆ 9:35ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದಾರೆ. ಅಲ್ಲಿ ವಿಮಾನದಿಂದ ಇಳಿದು ಬೆಳಿಗ್ಗೆ 9:40 ಕ್ಕೆ ಕಲಬುರಗಿಯಿಂದ ಹೆಲಿಕಾಪ್ಟರ್ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರ ನಗರಕ್ಕೆ ತೆರಳಲಿದ್ಧಾರೆ. ಅಲ್ಲಿ ಎರಡು ಗಂಟೆ ಕಾಲ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಬಳಿಕ ಮಧ್ಯಾಹ್ನ 12:10ಕ್ಕೆ ಹೆಲಿಕಾಪ್ಟರ್ ಮೂಲಕ ಸೊಲ್ಲಾಪುರದಿಂದ ನಿರ್ಗಮಿಸಿ, ಮಧ್ಯಾಹ್ನ 1 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 1:05 ಕ್ಕೆ ವಿಶೇಷ ವಿಮಾನದ ಮೂಲಕ ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಮಧ್ಯಾಹ್ನ 2:10 ಕ್ಕೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವರು. 2:15 ಕ್ಕೆ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ದೇವನಹಳ್ಳಿ ತಾಲೂಕಿನ ಮಾರನಹಳ್ಳಿಗೆ 2:45 ಕ್ಕೆ ತಲುಪಲಿದ್ದಾರೆ. ಅಲ್ಲಿ ಬಿಐಇಟಿಸಿ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮ ಮುಗಿಸಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಸಂಜೆ 4ಕ್ಕೆ ತಮಿಳುನಾಡು ಕಡೆಗೆ ನಿರ್ಗಮಿಸುವರು.
ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆಯುವ ಖೇಲೋ ಇಂಡಿಯಾ ಯೂತ್ ಗೇಮ್ಸ್ ಗೆ ಸಂಜೆ ಸಂಜೆ 6 ಗಂಟೆಗೆ ತಮಿಳುನಾಡಿನ ಚೆನ್ನೈನಲ್ಲಿ ಚಾಲನೆ ನೀಡುವರು.