Police Officer service: ಮಗಳ ನೆನಪಿಗೆ ಶಾಲಾ ಮಕ್ಕಳಿಗೆ ವೇತನ ಮೀಸಲಿಡುವ ಬೆಂಗಳೂರು ಪೊಲೀಸ್‌ ಅಧಿಕಾರಿ, ಪತ್ನಿಯಿಂದಲೂ ಎನ್‌ಜಿಒ
ಕನ್ನಡ ಸುದ್ದಿ  /  ಕರ್ನಾಟಕ  /  Police Officer Service: ಮಗಳ ನೆನಪಿಗೆ ಶಾಲಾ ಮಕ್ಕಳಿಗೆ ವೇತನ ಮೀಸಲಿಡುವ ಬೆಂಗಳೂರು ಪೊಲೀಸ್‌ ಅಧಿಕಾರಿ, ಪತ್ನಿಯಿಂದಲೂ ಎನ್‌ಜಿಒ

Police Officer service: ಮಗಳ ನೆನಪಿಗೆ ಶಾಲಾ ಮಕ್ಕಳಿಗೆ ವೇತನ ಮೀಸಲಿಡುವ ಬೆಂಗಳೂರು ಪೊಲೀಸ್‌ ಅಧಿಕಾರಿ, ಪತ್ನಿಯಿಂದಲೂ ಎನ್‌ಜಿಒ

ಮಗಳ ನೆನಪಿನಲ್ಲಿ ಬೆಂಗಳೂರಿನ ಸಹಾಯಕ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ.ಈ ಕುರಿತ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಬೆಂಗಳೂರು ಎಎಸ್‌ಐ ಲೋಕೇಶಪ್ಪ
ಬೆಂಗಳೂರು ಎಎಸ್‌ಐ ಲೋಕೇಶಪ್ಪ

ಬೆಂಗಳೂರು: ಮಕ್ಕಳೆಂದರೆ ಎಲ್ಲರಿಗೂ ಪಂಚಪ್ರಾಣ. ಮಕ್ಕಳು ಚೆನ್ನಾಗಿ ಓದಿ ಸಮಾಜದಲ್ಲಿ ಮುಂದೆ ಬರಬೇಕು. ಎಲ್ಲರಿಗಿಂತ ಭಿನ್ನವಾಗಿ ನಿಲ್ಲಬೇಕು ಎಂದು ಮೊದಲು ಬಯಸುವವರು ಪೋಷಕರು. ಇದಕ್ಕಾಗಿ ತಮ್ಮ ದುಡಿಮೆಯ ಹಣವನ್ನೂ ಮೀಸಲಿಡುತ್ತಾರೆ. ಇಂತಹ ಸನ್ನಿವೇಶದಲ್ಲಿ ಮಕ್ಕಳು ಅಕಾಲಿಕ ಸಾವಿಗೆ ಈಡಾಗಿ ಬಿಟ್ಟರೆ ಪೋಷಕರ ಆಕ್ರಂದನ ಅಷ್ಟಿಷ್ಟು ಅಲ್ಲ.ಎಷ್ಟೋ ಪೋಷಕರು ಈ ಕೊರಗಿನಿಂದ ಹೊರ ಬರಲು ಪಡುವ ಕಷ್ಟ ಅಷ್ಟಿಷ್ಟಲ್ಲ. ಬೆಂಗಳೂರಿನಲ್ಲಿ ಪೊಲೀಸ್‌ ಅಧಿಕಾರಿಯಾಗಿರುವವರೊಬ್ಬರು ತಮ್ಮ ಮಗಳ ಸಾವಿನ ನೆನಪಿನಲ್ಲಿಯೇ ಪ್ರತಿ ವರ್ಷ ಆರು ನೂರಕ್ಕೂ ಹೆಚ್ಚು ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಅವರ ಪತ್ನಿಯೂ ಮಗಳ ಹೆಸರಿನಲ್ಲಿಯೇ ಸ್ವಯಂ ಸೇವಾ ಸಂಘಟನೆ ಆರಂಭಿಸಿದ್ದಾರೆ.

ಮೂಲತಃ ಹಾಸನದವರಾದ ಲೋಕೇಶಪ್ಪ ಅವರು ಬೆಂಗಳೂರು ನಗರ ಪೊಲೀಸ್‌ ವಿಭಾಗದಲ್ಲಿ ಸಹಾಯಕ ಸಬ್‌ ಇನ್ಸ್‌ಪೆಕ್ಟರ್.‌ ಅವರ ಪತ್ನಿ ಸುಧಾಮಣಿ ಇಂಗ್ಲೀಷ್‌ ಅಧ್ಯಾಪಕಿ. ಇಬ್ಬರ ಪುತ್ರಿ ಹರ್ಷಾಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದಳು. ಆದರೆ ಐದು ವರ್ಷದ ಹಿಂದೆ ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಪೊಲೀಸ್‌ ಕ್ವಾರ್ಟಸ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವ ಕಳೆದುಕೊಂಡಳು. ಸುಮಾರು ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲೇ ನರಳಿದ ಹರ್ಷಾಲಿ ಬದುಕುಳಿಯಲಿಲ್ಲ. ಆಗ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಲೋಕೇಶಪ್ಪ ಕೆಲಸ ಮಾಡುತ್ತಿದ್ದರು. ಮಗಳನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಶ್ರಮ ಹಾಕಿದರು. ಆದರೆ ಮಗಳು ಬದುಕುಳಿಯಲಿಲ್ಲ.

ಮುದ್ದಾದ ಮಗಳು ಕಣ್ಣ ಮುಂದೆಯೇ ನೋವು ಅನುಭವಿಸಿ ಮೃತಪಟ್ಟಿದ್ದು ಲೋಕೇಶಪ್ಪ ಹಾಗೂ ಸುಧಾಮಣಿ ದಂಪತಿಗೆ ಇನ್ನಿಲ್ಲದ ನೋವು ತಂದಿತ್ತು.ಕೆಲ ದಿನ ಮಗಳ ನೆನಪಿನಲ್ಲಿಯೇ ಕೊರಗಿದರು. ಸ್ನೇಹಿತರು, ಹಿತೈಷಿಗಳು ಹಾಗೂ ಕುಟುಂಬದ ಆಪ್ತರ ಸಲಹೆಯಂತೆ ಮಗಳ ನೆನಪಿನಲ್ಲಿ ಏನಾದರೂ ಸಾಮಾಜಿಕ ಚಟುವಟಿಕೆ ಹಮ್ಮಿಕೊಳ್ಳಲು ತೀರ್ಮಾನಿಸಿದರು. ಮಗಳ ಹೆಸರಲ್ಲಿ ಕಾರ್ಯಕ್ರಮ ರೂಪಿಸಲು ಹಲವಾರು ಸಲಹೆ ಬಂದವು. ಅದರಲ್ಲಿ ಶಾಲಾ ಮಕ್ಕಳಿಗೆ. ಅದರಲ್ಲೂ ಅಗತ್ಯ ಇರುವ ಮಕ್ಕಳ ಶಿಕ್ಷಣ ನೀಡುವ ಕಾರ್ಯಕ್ರಮ ಸರಿ ಎನ್ನಿಸಿತು. ಮಗಳ ಶಿಕ್ಷಣಕ್ಕೆ ಮಾಡುತ್ತಿದ್ದ ಖರ್ಚಿನ ಜತೆಗೆ ಎರಡು ತಿಂಗಳ ವೇತನವನ್ನು ಇದಕ್ಕಾಗಿಯೇ ಲೋಕೇಶಪ್ಪ ಮೀಸಲಿಡಲು ಶುರು ಮಾಡಿದರು.

ಬೆಂಗಳೂರಿನ 200 ಮಕ್ಕಳಿಗೆ ಶಿಕ್ಷಣಕ್ಕೆ ನೆರವು ನೀಡಲು ಆರಂಭಿಸಿದರು ಕೂಡ. ಮೈಸೂರಿನಲ್ಲಿ 100 ಹಾಗೂ ಹಾಸನ ಜಿಲ್ಲೆಯ 400 ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಮುಂದಾದರು. ಸತತ ನಾಲ್ಕು ವರ್ಷದಿಂದ ಇದು ನಡೆದುಕೊಂಡು ಬಂದಿದೆ. ಎರಡು ವರ್ಷದಿಂದಲಂತೂ ಮಕ್ಕಳ ಆಗು ಹೋಗುಗಳನ್ನು ಗಮನಿಸಲು ಆಗಾಗ ಶಾಲೆಗೂ ಹೋಗುತ್ತಾರೆ. ಮಕ್ಕಳಿಗೆ ತಾವು ನೀಡುವ ನೆರವಿನಿಂದ ಒಳ್ಳೆಯದಾಗುತ್ತಿದೆ ಎನ್ನುವುದು ತಿಳಿದಾಗ ಆ ಮಕ್ಕಳಲ್ಲಿಯೇ ತಮ್ಮ ಮಗಳನ್ನೂ ಕಂಡಿದ್ದಾರೆ. ಈಗ ಅಧ್ಯಾಪಕ ವೃತ್ತಿಯನ್ನು ತೊರೆದು ಸುಧಾಮಣಿ ಅವರೂ ಮಗಳ ಹೆಸರಿನಲ್ಲಿಯೇ ಫೌಂಡೇಷನ್‌ ಆರಂಭಿಸಿ ಇನ್ನಷ್ಟು ಚಟುವಟಿಕೆಗಳನ್ನು ರೂಪಿಸಿರುವುದು.ನಿರಂತರವಾಗಿ ಮಕ್ಕಳ ಶಿಕ್ಷಣಕ್ಕೆ ಹಲವು ಆಯಾಮಗಳಲ್ಲಿ ನೆರವಾಗಲು ಮುಂದಾಗಿದ್ದಾರೆ. ಈಗಾಗಲೇ ಅವರು ಶಾಲೆಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡುವುದು, ಆರ್ಥಿಕ ನೆರವು ಒದಗಿಸುತ್ತಿದ್ದಾರೆ.

ಮಗಳು ಓದುವ ಹಂತದಲ್ಲಿಯೇ ಅವಘಡವೊಂದರಲ್ಲಿ ಜೀವ ಕಳೆದುಕೊಂಡಳು. ನಮಗೂ ಏನು ಮಾಡದೆಂದು ತೋಚದಾಗಿತ್ತು. ಇದಕ್ಕಾಗಿಯೇ ಏನಾದರೂ ಮಾಡಬೇಕು ಎಂದು ಯೋಚಿಸಿ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದೇವೆ. ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ನೆರವಾಗುತ್ತಿದ್ದೇವೆ. ಪಠ್ಯ ಪುಸ್ತಕ. ಬ್ಯಾಗ್‌, ಶೈಕ್ಷಣಿಕ ಉಪಕರಣಗಳನ್ನು ನೀಡುತ್ತಿದ್ದೇವೆ. ಆ ಮಕ್ಕಳ ಓದಿನಲ್ಲೇ ನಮ್ಮ ಮಗಳನ್ನ ಕಾಣುತ್ತಿದ್ದೇವೆ ಎಂದು ಸದ್ಯ ಶಿವಾಜಿನಗರ ಮಹಿಳಾ ಠಾಣೆಯಲ್ಲಿ ಎಎಸ್‌ಐ ಆಗಿರುವ ಲೋಕೇಶಪ್ಪ ಹೇಳುತ್ತಾರೆ.

Whats_app_banner