ಬೆಂಗಳೂರಿನ ಸರ್ಜಾಪುರ ಖಾಸಗಿ ಶಾಲೆ ಬಳಿ ಜಿಲೆಟಿನ್ ಕಡ್ಡಿಗಳು ಸೇರಿ ಭಾರಿ ಸ್ಫೋಟಕ ವಶ; ಪೊಲೀಸರಿಂದ ತನಿಖೆ ಶುರು
ಖಾಸಗಿ ಶಾಲೆಯ ಆವರಣದಲ್ಲಿ ಜಿಲೆಟಿನ್ ಕಡ್ಡಿಗಳು ಮತ್ತು ಡಿಟೋನೇಟರ್‌ಗಳು ಸೇರಿದಂತೆ ಸ್ಫೋಟಕಗಳು ಪತ್ತೆಯಾಗಿರುವ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ. ಪೊಲೀಸ್ ಸ್ಫೋಟಕಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆ ಸ್ಫೋಟಕ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಸ್ಫೋಟದ ಸಂಚು ನಡೆಯಿತೇ ಎಂಬ ಮಾತುಗಳು ಶುರುವಾಗಿವೆ. ಇದಕ್ಕೆ ನಗರದ ಖಾಸಗಿ ಶಾಲೆಯ ಬಳಿ ಪತ್ತೆಯಾಗಿರುವ ಅಪಾರ ಪ್ರಮಾಣದ ಸ್ಫೋಟಕಗಳು. ಸರ್ಜಾಪುರ ಮುಖ್ಯ ರಸ್ತೆಯ ಬಳಿಯ ಖಾಸಗಿ ಶಾಲೆಯ ಆವರಣದಲ್ಲಿ ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೋನೇಟರ್‌ಗಳು ಸೇರಿದಂತೆ ಅಫಾರ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ. ಸುದ್ಧಿ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ಎನ್‌ಐಎ ಪೊಲೀಸರು ಜಿಲೆಟಿನ್ ಕಡ್ಡಿಗಳು ಮತ್ತು ಡಿಟೋನೇಟರ್‌ಗಳು ಸೇರಿದಂತೆ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಖಾಸಗಿ ಶಾಲೆಯ ಆವರಣದ ಬಳಿಯ ಖಾಲಿ ಜಾಗದಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡುಬಂದಿವೆ.
ಜಿಲೆಟಿನ್ ನಂತಹ ಪದಾರ್ಥಗಳನ್ನು ಸಾಮಾನ್ಯವಾಗಿ ಬಂಡೆಗಳು ಮತ್ತು ಇತರ ಭಾರವಾದ ವಸ್ತುಗಳನ್ನು ಸ್ಫೋಟಿಸಲು ಇಂತಹ ಸ್ಫೋಟಕಗಳನ್ನು ಬಳಸಲಾಗುತ್ತದೆ. ಶಾಲೆಯ ಬಳಿಯ ಖಾಲಿ ಜಾಗದಲ್ಲಿ ಬಿಟ್ಟುಹೋದ ಟ್ರ್ಯಾಕ್ಟರ್ ಅನ್ನು ಪೊಲೀಸರು ಪತ್ತೆಹಚ್ಚಿದ್ದು, ಅಕ್ರಮ ವಸ್ತುಗಳನ್ನು ಸಾಗಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನಿರ್ಮಾಣ ಸ್ಥಳದಲ್ಲಿ ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ ಎಂಬ ಗುಪ್ತಚರ ಮಾಹಿತಿಯೂ ಪೊಲೀಸರಿಗೆ ಸಿಕ್ಕಿದ್ದು, ಇದು ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ.
ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಫೋಟಕಗಳನ್ನು ಒಳಗೊಂಡ ಕಾನೂನುಬಾಹಿರ ಚಟುವಟಿಕೆಗಳನ್ನು ನಿಗ್ರಹಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ; ಎನ್‌ಐಎ ತನಿಖೆ ಮುಂದುವರಿಕೆ
ನಗರದ ಐಟಿಪಿಎಲ್ ರಸ್ತೆಯಲ್ಲಿರುವ ಅತ್ಯಂತ ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು ಸ್ಫೋಟಕ ಸಂಭವಿಸಿತ್ತು. ಪ್ರಕರಣದ ತನಿಖೆ ವಹಿಸಿಕೊಂಡಿರುವ ರಾಷ್ಟ್ರೀಯ ತನಿಖಾ ದಳ-ಎನ್‌ಐಎ ಆರೋಪಿಯ ಪತ್ತೆಗಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಐಇಡಿ ಸ್ಫೋಟ ಪ್ರಕರಣದ ಶಂಕಿತನನ್ನು ತನಿಖಾ ಸಂಸ್ಥೆ ವಶಕ್ಕೆ ತೆಗೆದುಕೊಂಡಿದೆ ಎಂಬ ಮಾಧ್ಯಮ ವರದಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇತ್ತೀಚೆಗೆ ನಿರಾಕರಿಸಿದೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಕರ್ನಾಟಕದ ಬಳ್ಳಾರಿ ಜಿಲ್ಲೆಯ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲವು ಟಿವಿ ವರದಿಗಳು ಮತ್ತು ಸುದ್ದಿ ಸಂಸ್ಥೆಗಳು ಈ ಹಿಂದೆ ಹೇಳಿಕೊಂಡಿದ್ದವು. ಈ ವ್ಯಕ್ತಿಯು ಪ್ರಮುಖ ಶಂಕಿತನೊಂದಿಗೆ ಸ್ವಲ್ಪ ಹೋಲಿಕೆಯನ್ನು ಹೊಂದಿದ್ದಾನೆ ಎಂದು ಹೆಸರು ಹೇಳಲಿಚ್ಛಿಸದ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಶಂಕಿತನನ್ನು ಶಬ್ಬೀರ್ ಎಂದು ಗುರುತಿಸಲಾಗಿದ್ದು, ಬಳ್ಳಾರಿ ಜಿಲ್ಲೆಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎನ್ಐಎ ಮೂಲಗಳನ್ನು ಉಲ್ಲೇಖಿಸಿ ಮತ್ತೊಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. "ಈ ಪ್ರಕರಣದಲ್ಲಿ ಅವರನ್ನು ಇನ್ನೂ ಪ್ರಶ್ನಿಸಲಾಗುತ್ತಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಅದೇ ವ್ಯಕ್ತಿಯೇ ಎಂದು ಇನ್ನೂ ಕಂಡುಹಿಡಿಯಲಾಗಿಲ್ಲ" ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 1 ರಂದು ಜನಪ್ರಿಯ ರಾಮೇಶ್ವರಂ ಕೆಫೆ ಸ್ಫೋಟದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಶಂಕಿತನನ್ನು "ಒಂದು ರೀತಿಯಲ್ಲಿ" ಗುರುತಿಸಿದ್ದಾರೆ ಮತ್ತು ಆತನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿತ್ತು. ತನಿಖಾಧಿಕಾರಿಗಳು ಶಂಕಿತನ ಗುರುತನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದ್ದರು. ಎನ್‌ಐಎ ತನಿಖೆಗೆ ಕರ್ನಾಟಕ ಪೊಲೀಸರು ಕೂಡ ಕೈಜೋಡಿಸಿದ್ದಾರೆ.