ಬೆಂಗಳೂರಿನಲ್ಲಿ ರೌಡಿಗಳ ಮನೆಗಳ ಮೇಲೆ ಪೊಲೀಸರ ದಾಳಿ; ಶಸ್ತ್ರಾಸ್ತ್ರ ಹೊಂದಲು ಪರವಾನಗಿ ನೀಡಿರುವ ಬಗ್ಗೆ ತನಿಖೆಗೆ ಆದೇಶ
ಲೋಕಸಭೆ ಚುನಾವಣೆ ಹಿನ್ನೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿರುವ ಪೊಲೀಸರು ಬೆಂಗಳೂರಿನಲ್ಲಿ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಶಸ್ತ್ರಾಸ್ತ್ರ ಹೊಂದಲು ಪರವಾನಗಿ ಪಡೆದಿರುವುದನ್ನ ಪತ್ತೆ ಹಚ್ಚಿದ್ದಾರೆ.

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಬೆಂಗಳೂರಿನ ರೌಡಿಗಳ ಮನೆಗಳ ಮೇಲೆ ದಾಳಿ ನಡೆಯುತ್ತಿದೆ. ಈಗಾಗಲೇ ದಕ್ಷಿಣ, ಕೇಂದ್ರ ಮತ್ತು ಪಶ್ಚಿಮ ವಿಭಾಗದಲ್ಲಿ ಈ ದಾಳಿ ನಡೆದಿದೆ. ಪ್ರತಿ ಚುನಾವಣೆಯ ಸಂದರ್ಭದಲ್ಲೂ ಪೊಲೀಸರು ದಾಳಿ ನಡೆಸಿ ಯಾವುದೇ ದುಷ್ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡುತ್ತಾರೆ. ಕೇಂದ್ರ ವಿಭಾಗ ವ್ಯಾಪ್ತಿಯ 113 ಮತ್ತು ಪಶ್ಚಿಮ ವಿಭಾಗದ 326 ಮತ್ತು ದಕ್ಷಿಣ ವಿಭಾಗದ 234 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ರೌಡಿಗಳ ಮನೆಗಳಲ್ಲಿ ಅಕ್ರಮ ಶಸ್ತ್ರಾಸ್ತ್ರ ಅಥವಾ ಮದ್ದುಗುಂಡುಗಳ ಇರುವ ಬಗ್ಗೆ ತಪಾಸಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇಂದ್ರ ಮತ್ತು ಪಶ್ಚಿಮ ವಿಭಾಗದಲ್ಲಿ ಶನಿವಾರ ಮುಂಜಾನೆ 4ರಿಂದ 8 ಗಂಟೆಯವರೆಗೆ ಈ ತಪಾಸಣೆ ನಡೆದಿದೆ. ರೌಡಿಗಳ ಮೊಬೈಲ್ ನಂಬರ್ ಗಳನ್ನು ಸಂಗ್ರಹಿಸಲಾಗಿದೆ.
ಈಗಾಗಲೇ ದಕ್ಷಿಣ ವಿಭಾಗದ 234 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ 90 ರೌಡಿಗಳು ಮನೆಯಲ್ಲೇ ಇದ್ದರೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 8 ರೌಡಿಗಳನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ದಕ್ಷಿಣ ವಿಭಾಗದ ಜಯನಗರ, ಸುಬ್ರಹ್ಮಣ್ಯಪುರ, ಬಸವನಗುಡಿ, ಬನಶಂಕರಿ, ಜೆಪಿ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ನಡೆದಿದೆ.
ಶಸ್ತ್ರಾಸ್ತ್ರ ಹೊಂದಲು ರೌಡಿಗಳಿಗೆ ಪರವಾನಗಿ?
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ತಮ್ಮ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸಬೇಕು. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದ್ದು, ಬೆಂಗಳೂರಿನ 8 ರೌಡಿಗಳು ತಮ್ಮ ಬಂದೂಕುಗಳನ್ನು ಠೇವಣಿ ಇರಿಸಿದ್ದಾರೆ.
ರೌಡಿಗಳಿಗೆ ಬಂದೂಕು ಹೊಂದಲು ಪರವಾನಗಿ ಕೊಟ್ಟಿರುವುದು ಪೊಲೀಸ್ ವಲಯ ಮತ್ತು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಲು ರೌಡಿಗಳಿಗೆ ಅವಕಾಶವಿರುವುದಿಲ್ಲ ಮತ್ತು ಪೊಲೀಸರು ಪರವಾನಗಿ ನೀಡುವುದಿಲ್ಲ. ಆದರೂ ಇವರಿಗೆ ಪರವಾನಗಿ ಸಿಕ್ಕಿರುವುದು ಕುತೂಹಲ ಮೂಡಿಸಿದೆ.
ಶಸ್ತ್ರಾಸ್ತ್ರಗಳನ್ನು ಹೊಂದಲು ರೌಡಿಗಳಿಗೆ ಪರವಾನಗಿ ನೀಡಿರುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಅನುಮತಿ ನೀಡಿದ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಂದೂಕು ಹೊಂದಲು ರೌಡಿಗಳು ಅರ್ಜಿ ಸಲ್ಲಿಸಿರುವುದು, ಅವರಿಗೆ ಪರವಾನಗಿ ನೀಡಿರುವುದು, ಅನುಮತಿ ನೀಡಿದ ಅಧಿಕಾರಿಗಳು ಯಾರು ಎಂಬ ಅಂಶಗಳನ್ನು ಸೇರಿಸಿಯೇ ತನಿಖೆ ನಡೆಸಲು ಸೂಚಿಸಿದ್ದಾರೆ. ಇವರಿಗೆ ನೀಡಿರುವ ಪರವಾನಗಿಯನ್ನು ರದ್ದುಪಡಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭೆ ಚುನಾವಣೆ
ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಒಟ್ಟು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೂರ್ನಾಲ್ಕು ಕ್ಷೇತ್ರಗಳನ್ನು ಹೊರತುಪಡಿಸಿದಂತೆ ಉಳಿದ ಎಲ್ಲಾ ಕ್ಷೇತ್ರಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು, ಪ್ರಚಾರಕ್ಕಿಳಿಯಲು ಕಸರತ್ತು ನಡೆಸುತ್ತಿವೆ. ಬಿಜೆಪಿ ಈಗಾಗಲೇ ಕಲಬುರಗಿ ಹಾಗೂ ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ಕ್ಯಾಂಪೇನ್ ಆರಭಿಸಿದೆ.
