ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಬೆಂಗಳೂರಲ್ಲಿ ಸಿನಿಮಾ ಅವಕಾಶ ಕೊಡಿಸುವುದಾಗಿ ನಂಬಿಸಿ ರಾಯಚೂರು ಯುವತಿ ಮೇಲೆ ಅತ್ಯಾಚಾರ, ದೂರು ದಾಖಲು

Bangalore Crime: ಬೆಂಗಳೂರಲ್ಲಿ ಸಿನಿಮಾ ಅವಕಾಶ ಕೊಡಿಸುವುದಾಗಿ ನಂಬಿಸಿ ರಾಯಚೂರು ಯುವತಿ ಮೇಲೆ ಅತ್ಯಾಚಾರ, ದೂರು ದಾಖಲು

sandalwood ಯುವತಿಯೊಬ್ಬಳಿಗೆ ಸಿನೆಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಕುರಿತು ಬೆಂಗಳೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ವರದಿ: ಎಚ್‌. ಮಾರುತಿ, ಬೆಂಗಳೂರು

ಬೆಂಗಳೂರಿನಲ್ಲಿ ಸಿನೆಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.
ಬೆಂಗಳೂರಿನಲ್ಲಿ ಸಿನೆಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.

ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಯುವತಿಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬೆಂಗಳೂರಿನ ಅತ್ತಿಬೆಲೆಯ ಶಾನಭೋಗನಹಳ್ಳಿ ನಿವಾಸಿ ಸಂತೋಷ್‌ ವಿರುದ್ಧ ಪ್ರಕರಣ ದಾಖಲಾಗಿದೆ.27 ವರ್ಷದ ಸಂತ್ರಸ್ತ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈತ ಮದುವೆಯಾಗುವುದಾಗಿಯೂ ನಂಬಿಸಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದೂರು ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಏನು

ರಾಯಚೂರು ಮೂಲದ ಈ ಯುವತಿ ಪೋಷಕರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 2019ರಲ್ಲಿ ಸಂತೋಷ್‌ ಈ ಯುವತಿಯನ್ನು ಪರಿಚಯಿಸಿಕೊಂಡಿದ್ದ. ತಾನೊಬ್ಬ ಸಿನಿಮಾ ನಟ ಎಂದು ಬಿಂಬಿಸಿಕೊಂಡಿದ್ದ ಆರೋಪಿ ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿ ನಟಿಯಾಗಿ ಅಭಿನಯಿಸಲು ಅವಕಾಶ ಕೊಡಿಸುವುದಾಗಿ ಯುವತಿಯನ್ನು ನಂಬಿಸಿದ್ದ. ಈತನ ಬಣ್ಣದ ಮಾತಿಗೆ ಮರುಳಾದ ಯುವತಿ ಆರೋಪಿಯನ್ನು ನಂಬಿ ತನ್ನ ಮೊಬೈಲ್ ನಂಬರ್ ನೀಡಿದ್ದರು.

ಯುವತಿಗೆ ನಿರಂತರವಾಗಿ ಕರೆ ಮಾಡುತ್ತಿದ್ದ ಸಂತೋಷ್, ವಿವಾಹವಾಗುವುದಾಗಿ ಹೇಳಿ ಹತ್ತಿರವಾಗಿದ್ದ. ಯುವತಿ ಹಾಗೂ ಆರೋಪಿ ಜೊತೆಯಾಗಿ ಸುತ್ತಾಟ ನಡೆಸಿದ್ದರು. ಈ ಅವಕಾಶವನ್ನು ಬಳಸಿಕೊಂಡ ಆರೋಪಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬೇರೊಬ್ಬ ಯುವತಿ ಜೊತೆ ಮದುವೆ

ಆರೋಪಿ ಸಂತೋಷ್ ಗೆ ಈಗಾಗಲೇ ಮದುವೆಯಾಗಿತ್ತು. ಈ ವಿಷಯ ಗೊತ್ತಾದ ನಂತರ ಯುವತಿ, ಆರೋಪಿ ಮನೆಗೆ ಹೋಗಿ ಗಲಾಟೆ ನಡೆಸಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿ, ಯುವತಿಯ ಮನೆಗೆ ಬಂದು ಆತನೂ ಗಲಾಟೆ ಮಾಡಿದ್ದಾನೆ. ಯುವತಿಯ ಜೊತೆಗಿರುವ ಖಾಸಗಿ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈತನ ವಂಚನೆ ಕುರಿತು ಈ ಹಿಂದೆಯೂ ಯುವತಿ ದೂರು ನೀಡಿದ್ದರು. ಈ ಪ್ರಕರಣವನ್ನು ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಅತ್ತಿಬೆಲೆ ಠಾಣೆಗೆ ವರ್ಗಾಯಿಸಲಾಗಿತ್ತು. ಇದೀಗ ಮತ್ತೊಂದು ದೂರು ನೀಡಿದ್ದು, ಎರಡನ್ನೂ ಸೇರಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂಬರ್ ಪ್ಲೇಟ್ ಮುಚ್ಚಿದ, ಪೊಲೀಸರ ಕೈಗೆ ಸಿಕ್ಕಿಬಿದ್ದ

ಸಂಚಾರ ನಿಯಮ ಉಲ್ಲಂಘನೆ ದಂಡದಿಂದ ತಪ್ಪಿಸಿಕೊಳ್ಳಲು ನೋಂದಣಿ ಸಂಖ್ಯೆಯ ನಂಬರ್ ಪ್ಲೇಟ್ ಮುಚ್ಚಿದ್ದ ಆರೋಪದ ಮೇಲೆ ದ್ವಿಚಕ್ರ ವಾಹನ ಸವಾರ ರಾಹುಲ್‌ಕುಮಾರ್ ಎಂಬ ಯುವಕನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬೆಂಗಳೂರಿನ ಎಚ್‌ಎಎಲ್ ಸಂಚಾರ ಠಾಣೆ ವ್ಯಾಪ್ತಿಯ ದೊಡ್ಡನೆಕ್ಕುಂದಿ ಜಂಕ್ಷನ್ ಬಳಿ ಇತ್ತೀಚೆಗೆ ತನ್ನ ವಾಹನದಲ್ಲಿ ರಾಹುಲ್‌ಕುಮಾರ್‌ ಹೊರಟಿದ್ದ. ದ್ವಿಚಕ್ರ ವಾಹನದ ನಂಬರನ್ನು ಮುಚ್ಚಲಾಗಿತ್ತು. ಸಾರ್ವಜನಿಕರೊಬ್ಬರು ಇದರ ಫೋಟೊ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದರು. ಈ ಭಾವಚಿತ್ರ ಆಧರಿಸಿ ತನಿಖೆ ಕೈಗೊಂಡು ರಾಹುಲ್‌ನನ್ನು ವಶಕ್ಕೆ ಪಡೆಯಲಾಗಿದೆ ಜೊತೆಗೆ ದ್ವಿಚಕ್ರ ವಾಹನವನ್ನೂ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಾಹುಲ್ ವಿರುದ್ಧ ಎಚ್‌ಎಎಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿ ಪದೇ ಪದೇ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ. ತನ್ನ ಈ ವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಬಾರದೆಂದು ನೋಂದಣಿ ಸಂಖ್ಯೆ ಫಲಕವನ್ನೂ ಮರೆಮಾಚಿ ಕೆಲವು ಸಂಖ್ಯೆಗಳಿಗೆ ಕಪ್ಪು ಪಟ್ಟಿ ಅಂಟಿಸಿದ್ದ ಎಂದು ಪೊಲೀಸ್‌ ವಿಚಾರಣೆ ವೇಳೆ ತಿಳಿದು ಬಂದಿದೆ.

ಹೋಟೆಲ್‌ ನಲ್ಲಿ ಕಳ್ಳತನ, ಕ್ಯಾಷಿಯರ್ ಬಂಧನ

ಹೋಟೆಲ್‌ವೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ, ಅದೇ ಹೋಟೆಲ್‌ನ ಕ್ಯಾಷಿಯರ್ ರವಿಕುಮಾರ್ ಎಂಬಾತನನ್ನು ಬೆಂಗಳೂರಿನ ಕೆ.ಆರ್. ಪುರ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್. ಪುರದ ಭಟ್ಟರಹಳ್ಳಿಯ ಹೋಟೆಲ್ ನಲ್ಲಿ ಕಳ್ಳತನ ನಡೆದಿದೆ ಎಂದು ಹೋಟೆಲ್‌ ಮಾಲೀಕರು ದೂರು ನೀಡಿದ್ದರು. ಹೋಟೆಲ್‌ ನ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿ ರವಿಕುಮಾರ್‌ನನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬನಶಂಕರಿ ನಿವಾಸಿ ರವಿಕುಮಾರ್, ಇದೇ ಹೋಟೆಲ್‌ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಆದರೆ ಈ ಸಂಬಳ ಜೀವನ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಹೋಟೆಲ್‌ನಲ್ಲಿ ಯಾರೂ ಇಲ್ಲದನ್ನು ಗಮನಿಸಿದ್ದ ಈತ, ಒಂದು ಲಕ್ಷ ಹಣ ರೂ. ಕದ್ದುಕೊಂಡು ಪರಾರಿಯಾಗಿದ್ದ.

ನಗದು ಪೆಟ್ಟಿಗೆಯಲ್ಲಿದ್ದ ಹಣವನ್ನು ಕದಿಯುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೇ ಪುರಾವೆಯನ್ನು ಆಧರಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಈ ಹಿಂದೆಯೂ ಆರೋಪಿ ಬೇರೆ ಬೇರೆ ಕಡೆ ಹಲವು ಬಾರಿ ಕಳ್ಳತನ ಮಾಡಿರುವ ಮಾಹಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ: ಎಚ್‌. ಮಾರುತಿ, ಬೆಂಗಳೂರು)

IPL_Entry_Point