ಕನ್ನಡ ಸುದ್ದಿ  /  Karnataka  /  Bangalore News Rajya Sabha Elections 2024 Bjp Mla Cross Votes For Congress Another Mla Absent Kub

Rajya Sabha Elections 2024: ಬಿಜೆಪಿಗೆ ಕೈಕೊಟ್ಟ ಇಬ್ಬರು ಶಾಸಕರು, ಒಬ್ಬರದ್ದು ಅಡ್ಡಮತದಾನ, ಮತ್ತೊಬ್ಬರು ಗೈರು, ಯಾರವರು?

Karnataka Politics ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಇಬ್ಬರು ಶಾಸಕರು ನಿರೀಕ್ಷೆಯಂತೆ ಕೈ ಕೊಟ್ಟಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಒಬ್ಬರು ಶಾಸಕರು ಅಡ್ಡಮತದಾನ ಮಾಡಿದ್ದರೆ ಇನ್ನೊಬ್ಬರು ಗೈರು ಹಾಜರಾಗಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಒಬ್ಬರು ಶಾಸಕರು ಅಡ್ಡಮತದಾನ ಮಾಡಿದ್ದರೆ ಇನ್ನೊಬ್ಬರು ಗೈರು ಹಾಜರಾಗಿದ್ದಾರೆ.

ಬೆಂಗಳೂರು: ಕರ್ನಾಟಕದ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಮತದಾನ ಮುಕ್ತಯವಾಗಿದ್ದು, ಬಿಜೆಪಿಯ ಇಬ್ಬರು ಶಾಸಕರು ಕೈ ಕೊಟ್ಟಿರುವುದು ಖಚಿತವಾಗಿದೆ. ನಾಲ್ಕೈದು ತಿಂಗಳಿನಿಂದ ಬಿಜೆಪಿಯಿಂದ ಮಾನಸಿಕವಾಗಿ ದೂರವೇ ಉಳಿದಿರುವ ಈ ಇಬ್ಬರು ಶಾಸಕರ ಮೇಲೆ ಅನುಮಾನವೂ ಇತ್ತು. ಅದರಂತೆ ಒಬ್ಬರು ಶಾಸಕರು ಅಡ್ಡಮತದಾನ ಮಾಡಿ ಕಾಂಗ್ರೆಸ್‌ಗೆ ಮತ ನೀಡಿದ್ದರೆ, ಇನ್ನೊಬ್ಬರು ಶಾಸಕರು ಗೈರು ಹಾಜರಾಗಿದ್ದಾರೆ.

ಬೆಳಿಗ್ಗೆಯಿಂದಲೇ ವಿಧಾನಸಭೆಯಲ್ಲಿ ಮತದಾನ ಶುರುವಾಗಿ ಸಂಜೆ 4ರವರೆಗೂ ನಡೆಯಿತು. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹಾಗೂ ಪಕ್ಷೇತರರ ಶಾಸಕರು ಬಂದು ಮತದಾನ ಮಾಡಿದರು. ಸುರಪುರ ಶಾಸಕರ ನಿಧನದ ನಂತರ ಒಟ್ಟು 223 ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ 134, ಬಿಜೆಪಿ 66, ಜೆಡಿಎಸ್‌ 19, ಪಕ್ಷೇತರರಾದ ಜನಾರ್ದನರೆಡ್ಡಿ, ಲತಾ ಮಲ್ಲಿಕಾರ್ಜುನ, ದರ್ಶನ್‌ ಪುಟ್ಟಣ್ಣಯ್ಯ, ಪುಟ್ಟಸ್ವಾಮಿಗೌಡ ಮತದಾನದ ಹಕ್ಕು ಹೊಂದಿದ್ದರು.

ಇದರಲ್ಲಿ ಕಾಂಗ್ರೆಸ್‌ನ 134 ಶಾಸಕರು ಮತದಾನ ಮಾಡಿದ್ದರೆ, ಜೆಡಿಎಸ್‌ನ ಎಲ್ಲ ಶಾಸಕರೂ ಮತ ಚಲಾಯಿಸಿದ್ದಾರೆ, ಬಿಜೆಪಿಯಿಂದ 65 ಮಂದಿ ಮಾತ್ರ ಮತ ಚಲಾಯಿಸಿದಾರೆ. ನಾಲ್ವರು ಪಕ್ಷೇತರರು ಬಂದು ಮತ ಹಾಕಿದ್ದಾರೆ.

ಬಿಜೆಪಿಯ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್‌ ಅವರು ಕಾಂಗ್ರೆಸ್‌ಗೆ ಮತ ನೀಡಿದ್ದು ಏಜೆಂಟರಿಗೆ ತೋರಿಸಿದಾಗ ಅದು ದೃಢಪಟ್ಟಿದೆ. ಅಲ್ಲದೇ ಅಭಿವೃದ್ದಿಗೆ ಬೆಂಬಲಿಸುವವರು ಹಾಗೂ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ನೀಡಿದ್ದೇನೆ ಎಂದು ಎಸ್‌ಟಿಸೋಮಶೇಖರ್‌ ಹೇಳಿದ್ದಾರೆ.

ಇನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಅರೇಬೈಲ್‌ ಶಿವರಾಂ ಹೆಬ್ಬಾರ್‌ ಮತ ಹಾಕಲು ಬಂದಿಲ್ಲ. ಬಿಜೆಪಿ ನಾಯಕರು ಅವರನ್ನು ನಿರಂತರವಾಗಿ ಸಂಪರ್ಕಿಸಲು ಯತ್ನಿಸಿದರೂ ಅವರು ಕೊನೆಗೂ ವಿಧಾನಸಭೆ ಕಡೆ ಸುಳಿಯಲೇ ಇಲ್ಲ. ಪ್ರಯತ್ನದ ನಂತರವೂ ಅವರು ಬಾರದೇ ಇದ್ದಾಗ ಬಿಜೆಪಿ ನಾಯಕರು ಶಿವರಾಂ ಹೆಬ್ಭಾರ್‌ ಬರುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಂದರು.

ಎಸ್‌.ಟಿ.ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಸೇರಿದಂತೆ 17 ಮಂದಿ ಶಾಸಕರು ಕಳೆದ ಬಾರಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ರಾಜೀನಾಮೆ ನೀಡಿ ನಂತರ ಬಿಜೆಪಿ ಸೇರಿ ಸಚಿವರಾಗಿದ್ದರು. ಕಳೆದ ವರ್ಷದ ಚುನಾವಣೆಯಲ್ಲಿ ಎಸ್.ಟಿ.ಸೋಮಶೇಖರ್‌, ಶಿವರಾಂ ಹೆಬ್ಬಾರ್‌, ಗೋಪಾಲಯ್ಯ, ಭೈರತಿ ಬಸವರಾಜು, ರಮೇಶ ಜಾರಕಿಹೊಳಿ, ಮುನಿರತ್ನ ಅವರು ಮರು ಆಯ್ಕೆಯಾಗಿದ್ದಾರೆ. ಉಳಿದವರು ಸೋತಿದ್ದರು. ಇದರಲ್ಲಿ ಸೋಮಶೇಖರ್‌ ಹಾಗೂ ಶಿವರಾಂ ಹೆಬ್ಬಾರ್‌ ಅವರಿಬ್ಬರೂ ಪಕ್ಷದಿಂದ ಹೊರ ಹೋಗುವ ಮುನ್ಸೂಚನೆ ನೀಡಿದ್ದರು. ರಾಜ್ಯಸಭೆ ಚುನಾವಣೆಯಲ್ಲಿ ಇದು ನಿಜವೂ ಆಗಿದೆ.

ಸೋಮಶೇಖರ್‌ ಹಾಗೂ ಹೆಬ್ಬಾರ್‌ ಅವರಿಗೆ ವಿಪ್‌ ಜಾರಿಗೊಳಿಸಲಾಗಿತ್ತು. ಆದರೂ ಒಬ್ಬರು ಬಂದಿಲ್ಲ. ಮತ್ತೊಬ್ಬರು ಅಡ್ಡ ಮತದಾನ ಮಾಡಿದ ಮಾಹಿತಿ ಯಿದೆ. ಈ ಕುರಿತು ಅಧಿಕೃತ ವಿವರ ಪಡೆದು ಇಬ್ಬರ ಶಾಸಕ ಸ್ಥಾನ ರದ್ದಿಗೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದರು.

ಸೋಮಶೇಖರ್‌ ಹಾಗೂ ಶಿವರಾಂ ಹೆಬ್ಬಾರ್‌ ಕಾಂಗ್ರೆಸ್‌ ಸಂಪರ್ಕದಲ್ಲಿದ್ದು, ಮುಂಬರುವ ಲೋಕಸಭೆ ಚುನಾವಣೆಗೆ ಬೆಂಗಳೂರು ಉತ್ತರ ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಎರಡು ಕಡೆ ಗೆದ್ದರೆ ಮುಂದೆ ಖಾಲಿಯಾಗುವ ವಿಧಾನಸಭಾ ಕ್ಷೇತ್ರಗಳಿಗೆ ಮಕ್ಕಳನ್ನು ಶಾಸಕರನ್ನಾಗಿಸುವುದು ಇಬ್ಬರ ಉದ್ದೇಶ. ಚುನಾವಣೆ ಘೋಷಣೆಯಾದ ಬಳಿಕ ಇಬ್ಬರ ನಡೆ ಇನ್ನಷ್ಟು ನಿಖರವಾಗಲಿದೆ.

ಇನ್ನು ಜೆಡಿಎಸ್‌ನಲ್ಲೂ ಇಬ್ಬರು ಶಾಸಕರಾದ ಶರಣಗೌಡ ಕಂದಕೂರ ಹಾಗೂ ಕರೆಮ್ಮ ನಾಯಕ ಮೇಲೆ ಅಡ್ಡಮತದಾನ ಮಾಡುವ ಆತಂಕವಿದ್ದರೂ ಇಬ್ಬರು ಪಕ್ಷದ ಅಭ್ಯರ್ಥಿ ಕುಪೇಂದ್ರರೆಡ್ಡಿಗೆ ಮತದಾನ ಮಾಡಿರಬಹುದು ಎನ್ನಲಾಗುತ್ತಿದೆ. ಪಕ್ಷೇತರರರಲ್ಲಿ ಜನಾರ್ದನರೆಡ್ಡಿ ಯಾರಿಗೆ ಮತ ಹಾಕಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.