ಕನ್ನಡ ಸುದ್ದಿ  /  Karnataka  /  Bangalore News Rajya Sabha Elections 2024 Congress Bjp Jds Issues Whip Jds Members Hotel After Congress Resort Stay Kub

Rajya Sabha Elections 2024: ರಾಜ್ಯಸಭೆ ಚುನಾವಣೆ, ಒಗ್ಗಟ್ಟಿಗೆ 3 ಪಕ್ಷಗಳಲ್ಲೂ ತಂತ್ರಗಾರಿಕೆ, ಜೆಡಿಎಸ್‌ನಿಂದಲೂ ಹೊಟೇಲ್‌ ರಾಜಕೀಯ

ರಾಜ್ಯಸಭೆಯ ಚುನಾವಣೆಗೆ ಕರ್ನಾಟಕದಲ್ಲಿ ವೇದಿಕೆ ಸಿದ್ದವಾಗಿದೆ. ಕಾಂಗ್ರೆಸ್‌ನಿಂದ ಮೂವರು, ಬಿಜೆಪಿಯಿಂದ ಒಬ್ಬರು ಅಭ್ಯರ್ಥಿ ಇದ್ದು, ಜೆಡಿಎಸ್‌ -ಬಿಜೆಪಿ ಅಭ್ಯರ್ಥಿಯಾಗಿ ಒಬ್ಬರಿದ್ದು, ನಾಲ್ಕು ಸ್ಥಾನಗಳಿಗೆ ಮತದಾನ ಮಂಗಳವಾರ ನಡೆಯಲಿದೆ.

ರಾಜ್ಯ ಸಭಾ ಚುನಾವಣೆಗೆ ಕರ್ನಾಟಕದ ಅಭ್ಯರ್ಥಿಗಳು
ರಾಜ್ಯ ಸಭಾ ಚುನಾವಣೆಗೆ ಕರ್ನಾಟಕದ ಅಭ್ಯರ್ಥಿಗಳು

ಬೆಂಗಳೂರು: ಕರ್ನಾಟಕದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಂಗಳವಾರ ಮತದಾನ ನಡೆಯಲಿದೆ. ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್‌ನಿಂದ ಮೂರು, ಬಿಜೆಪಿಯಿಂದ ಏಕೈಕ ಅಭ್ಯರ್ಥಿ ಕಣಕ್ಕೆ ಇಳಿಸಲಾಗಿದೆ. ಆದರೆ ಐದನೇ ಅಭ್ಯರ್ಥಿಯಾಗಿ ಉದ್ಯಮಿ ಕುಪೇಂದ್ರ ರೆಡ್ಡಿ ಕೂಡ ಕಣದಲ್ಲಿರುವುದು ಚುನಾವಣೆಗೆ ದಾರಿಯಾಗಿದೆ. ಜೆಡಿಎಸ್‌- ಬಿಜೆಪಿ ಸಮ್ಮಿಶ್ರ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕಿಳಿದಿರುವುದರಿಂದ ಅಡ್ಡ ಮತದಾನದ ಆತಂಕವಿದೆ. ಬಿಜೆಪಿ ಮೂವರು ಹಾಗೂ ಜೆಡಿಎಸ್‌ನ ನಾಲ್ವರು ಶಾಸಕರ ಮೇಲೆ ಕಾಂಗ್ರೆಸ್‌ ಕಣ್ಣಿಟ್ಟಿರುವುದರಿಂದ ಸಮ್ಮಿಶ್ರ ಅಭ್ಯರ್ಥಿ ಗೆಲ್ಲಿಸಲು ಹರಸಾಹಸ ಪಡುವ ಸ್ಥಿತಿಯಿದೆ. ಪಕ್ಷೇತರರಲ್ಲೂ ಐವರು ಕಾಂಗ್ರೆಸ್‌ಗೆ ಬೆಂಬಲಿಸಿರುವುದರಿಂದ ಆ ಪಕ್ಷದ ಅಭ್ಯರ್ಥಿಗಳ ಗೆಲುವಿನ ಸಾಧ್ಯತೆ ಹೆಚ್ಚಿದೆ.

ಮೂರು ಪಕ್ಷಗಳಿಂದಲೂ ವಿಪ್‌

ಇದಕ್ಕಾಗಿ ಈಗಾಗಲೇ ಕಾಂಗ್ರೆಸ್‌ ತನ್ನೆಲ್ಲಾ ಶಾಸಕರನ್ನು ಬೆಂಗಳೂರಿನ ಹೊರ ವಲಯದ ರೆಸಾರ್ಟ್‌ಗೆ ಕಳುಹಿಸಿದೆ. ಎಲ್ಲ ಶಾಸಕರು ಮಂಗಳವಾರ ವಿಧಾನಸೌಧಕ್ಕೆ ಆಗಮಿಸುವರು. ಜೆಡಿಎಸ್‌ನ ಶಾಸಕರನ್ನು ಬೆಂಗಳೂರಿನ ಹೊಟೇಲ್‌ ಒಂದರಲ್ಲಿ ಸೋಮವಾರ ಉಳಿಸಿ ಮಂಗಳವಾರ ನೇರವಾಗಿ ವಿಧಾನಸೌಧಕ್ಕೆ ಕರೆತರುವ ಪ್ರಯತ್ನಗಳೂ ನಡೆದಿವೆ. ಬಿಜೆಪಿ ಮಾತ್ರ ಇಂತಹ ಯಾವುದೇ ಪ್ರಯತ್ನಕ್ಕೆ ಕೈ ಹಾಕಿಲ್ಲ.

ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಈಗಾಗಲೇ ಮೂರೂ ಪಕ್ಷಗಳು ವಿಪ್‌ ಅನ್ನು ಜಾರಿಗೊಳಿಸಿವೆ. ಕಾಂಗ್ರೆಸ್‌ನ ಎಲ್ಲಾ 134 , ಬಿಜೆಪಿಯ 66 ಹಾಗೂ ಜೆಡಿಎಸ್‌ನ 19 ಶಾಸಕರಿಗೆ ವಿಪ್‌ ಜಾರಿಯಾಗಿದೆ. ಅದರಲ್ಲಿ ಕಾಂಗ್ರೆಸ್‌ನ ಶಾಸಕ ರಾಜಾವೆಂಕಟಪ್ಪ ನಾಯಕ ತೀರಿಕೊಂಡಿರುವುದರಿಂದ ಒಂದು ಮತ ಕಾಂಗ್ರೆಸ್‌ಗೆ ಕಡಿಮೆಯಾಗಲಿದ್ದು, ಅದನ್ನು ಪಕ್ಷೇತರ ಶಾಸಕರಿಂದ ಸರಿಪಡಿಸಿಕೊಳ್ಳುವುದು ಕಾಂಗ್ರೆಸ್‌ ಲೆಕ್ಕಾಚಾರ. ಈಗಾಗಲೇ ಲತಾ ಮಲ್ಲಿಕಾರ್ಜುನ, ಪುಟ್ಟಸ್ವಾಮಿ ಗೌಡ, ದರ್ಶನ್‌ ಪುಟ್ಟಣ್ಣಯ್ಯ ಕಾಂಗ್ರೆಸ್‌ಗೆ ಬೆಂಬಲಿಸಿದ್ದು, ಗಂಗಾವತಿ ಶಾಸಕ ಜನಾರ್ದನರೆಡ್ಡಿ ಕೂಡ ಸೋಮವಾರ ಕಾಂಗ್ರೆಸ್‌ ಜತೆ ಕಾಣಿಸಿಕೊಂಡಿದ್ದಾರೆ.

ಜೆಡಿಎಸ್‌ನಲ್ಲಿ ಯಾರು?

ಜೆಡಿಎಸ್‌ನಲ್ಲಿ ಹಲವು ಶಾಸಕರಿಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಇಷ್ಟವಿಲ್ಲ. ಕೆಲವರು ಬಹಿರಂಗವಾಗಿ ಹೇಳಿಕೆ ನೀಡಿದ್ದರೆ ಮತ್ತೆ ಕೆಲವರು ಮೌನವಾಗಿಯೇ ಅಸಮಾಧಾನವನ್ನು ತೋರ್ಪಿಡಿಸಿಕೊಂಡಿದ್ದಾರೆ. ಅದರಲ್ಲೂ ಯಾದಗಿರಿ ಜಿಲ್ಲೆ ಗುರುಮಠ್ಕಲ್‌ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ಧಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ಶಾಸಕ ವೆಂಕಟಶಿವಾರೆಡ್ಡಿ, ಹನೂರು ಶಾಸಕ ಮಂಜುನಾಥ್‌, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾಪೂರ್ಯಾನಾಯ್ಕ್‌ ಅವರಿಗೆ ಅಸಮಾಧಾನವಿದೆ. ಆದರೆ ಎಲ್ಲಿಯೂ ಮಾತನಾಡಿಲ್ಲ. ವಿಪ್‌ ಪಡೆದು ಅಡ್ಡಮತದಾನ ಮಾಡಬಹುದಾ ಎನ್ನುವ ಆತಂಕ ವರಿಷ್ಠರಲ್ಲಿದೆ.

ಬಿಜೆಪಿಯಲ್ಲಿ ಮೂವರು

ಬಿಜೆಪಿಯಲ್ಲೂ ಮೂವರು ಶಾಸಕರ ಮೇಲೆ ಕಾಂಗ್ರೆಸ್‌ ಕಣ್ಣಿದೆ. ಅದರಲ್ಲೂ ಯಶವಂತಪುರ ಶಾಸಕ ಎಸ್‌. ಟಿ. ಸೋಮಶೇಖರ್‌, ಯಲ್ಲಾಪುರ ಶಾಸಕ ಅರಬೈಲ್‌ ಶಿವರಾಮ ಹೆಬ್ಬಾರ ಅವರಿಬ್ಬರೂ ಈಗಾಗಲೇ ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇವರೊಟ್ಟಿಗೆ ಮಹಾಲಕ್ಷ್ಮಿನಗರ ಕ್ಷೇತ್ರ ಶಾಸಕ ಗೋಪಾಲಯ್ಯ ಮೇಲೂ ಅನುಮಾನವಿದೆ. ಮೂವರನ್ನು ಗೈರು ಮಾಡಿಸುವ ತಂತ್ರಗಾರಿಕೆ ಕಾಂಗ್ರೆಸ್‌ನದ್ದು ಎನ್ನಲಾಗುತ್ತಿದೆ. ಬಿಜೆಪಿ ಮೂವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಮತದಾನದಲ್ಲಿ ಪಾಲ್ಗೊಂಡು ಬಿಜೆಪಿಗೆ ಹಾಕುವಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿದೆ.

ಮತ ಎಷ್ಟು

ಒಟ್ಟು 224 ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ 134 ಹಾಗೂ ನಾಲ್ವರು ಪಕ್ಷೇತರರು ಸೇರಿ 138, ಬಿಜೆಪಿಯಲ್ಲಿ 66 ಸದಸ್ಯರಿದ್ದಾರೆ. ಈ ಪ್ರಕಾರ ತಲಾ 45 ರಂತೆ ಮತ ಪಡೆದರೂ ಕಾಂಗ್ರೆಸ್‌ನ ಅಜಯ್‌ ಮಕೇನ್‌, ಚಂದ್ರಶೇಖರ್‌, ನಾಸಿರ್‌ ಹುಸೇನ್‌ ಗೆಲ್ಲಲಿದ್ದಾರೆ. ಬಿಜೆಪಿಯಿಂದ ನಾರಾಯಣ ಭಾಂಡಗೆ ಗೆಲುವಿಗೆ ಯಾವುದೇ ಗೊಂದಲವಿಲ್ಲ.ಬಿಜೆಪಿಗೆ ಮೂವರ ಮೇಲೆ ಅನುಮಾನ ಇರುವದರಿಂದ ಹೆಚ್ಚಿನ ಮತ ಹಾಕಿಸುವ ಸಾಧ್ಯತೆಯಿದೆ. ಐದನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಜೆಡಿಎಸ್‌ನ 19, ಬಿಜೆಪಿಯ 21 ಮತ ಸಿಕ್ಕರೂ ಕೊರತೆ ಬೀಳಲಿದೆ. ಇನ್ನು ಜೆಡಿಎಸ್‌ ಹಾಗೂ ಬಿಜೆಪಿ ಶಾಸಕರೇ ಅಡ್ಡ ಮತದಾನ ಮಾಡಿದರೆ ಅಂತರ ಹೆಚ್ಚಿದರೂ ಆಶ್ಚರ್ಯ ಪಡಬೇಕಿಲ್ಲ.

ಈ ಸಂಬಂಧ ಸುದ್ದಿಗಾರರ ಜತೆಗೆ ಮಾತನಾಡಿದ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ, ಸೋಮವಾರ ನಡೆದ ಸಭೆಯಲ್ಲಿ ಜೆಡಿಎಸ್‌ ಎಲ್ಲಾ ಶಾಸಕರು ಭಾಗಿಯಾಗಿದ್ದರು. ಮತ ಕೂಡ ಹಾಕುತ್ತಾರೆ. ಇದರಲ್ಲಿ ಅನುಮಾನ ಬೇಡ. ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ ಎಂದಷ್ಟೇ ಹೇಳಿದ್ದಾರೆ.

ಮತದಾನ

ರಾಜ್ಯ ಸಭೆ ಚುನಾವಣೆ ವಿಧಾನಸೌಧದಲ್ಲಿ ಮತದಾನ ಮಂಗಳವಾರ ಬೆಳಗ್ಗೆ 9 ರಿಂದ 4 ವರೆಗೆ ನಡೆಯಲಿದೆ. ಮತದಾನ ಮುಗಿದ ನಂತರ ವಿಧಾನಸೌಧದ 1 ನೇ ಮಹಡಿಯ 106 ನೇ ಕೊಠಡಿಯಲ್ಲಿ ಮತದಾನ ನಡೆಯಲಿದ್ದು. ರಾತ್ರಿ ಏಳರ ಹೊತ್ತಿಗೆ ಫಲಿತಾಂಶ ಬರಬಹುದು.

IPL_Entry_Point