ಕನ್ನಡ ಸುದ್ದಿ  /  Karnataka  /  Bangalore News Rajya Sabha Elections 2024 Voting Pattern For Mlas How Vote Becomes Invalid Explainer Mrt

Rajya Sabha Elections 2024: ರಾಜ್ಯಸಭಾ ಚುನಾವಣೆಗೆ ಮತದಾನ ಹೇಗೆ, ಶಾಸಕರ ಮತ ಅಸಿಂಧುವಾಗುವುದು ಯಾವಾಗ?

ರಾಜ್ಯಸಭಾ ಚುನಾವಣೆಗೆ ವಿಧಾನಸಭಾ ಸದಸ್ಯರು ಚಲಾಯಿಸುತ್ತಾರೆ. ಮತದಾನಕ್ಕೂ ಹಲವಾರು ನಿಯಮಾವಳಿಗಳಿವೆ. ಇದನ್ನು ತಪ್ಪಿದರೆ ಮತ ಅಸಿಂಧುವೂ ಆಗಲಿದೆ.(ವಿಶೇಷ ವರದಿ: ಎಚ್. ಮಾರುತಿ, ಬೆಂಗಳೂರು)

ರಾಜ್ಯಸಭಾ ಚುನಾವಣೆಗೆ ಮಂಗಳವಾರ ಮತದಾನ ನಡೆಯಲಿದೆ.
ರಾಜ್ಯಸಭಾ ಚುನಾವಣೆಗೆ ಮಂಗಳವಾರ ಮತದಾನ ನಡೆಯಲಿದೆ.

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ದಿ. 27.02.2024 ರಂದು ಮಂಗಳವಾರ ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ವಿಧಾನಸೌಧದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ದೈವಾರ್ಷಿಕ ಚುನಾವಣೆ ನಡೆಯಲಿದೆ. ಅದೇ ದಿನ ಸಂಜೆ 5.00 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಚುನಾವಣೆಯಲ್ಲಿ ವಿಧಾನಸಭೆಯ ಸದಸ್ಯರುಗಳು ಮಾತ್ರ ಮತದಾರರಾಗಿರುತ್ತಾರೆ. ಈಗಾಗಲೇ ಮತಕೇಂದ್ರವನ್ನು ಸ್ಥಾಪಿಸಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಮತಗಳನ್ನು ಚಲಾಯಿಸುವ ಬಗ್ಗೆ ಸೂಚನೆಗಳು

ಮತ ಚಲಾಯಿಸಲು ಚುನಾವಣಾ ಅಧಿಕಾರಿ ನೀಡಿರುವ ನೇರಳೆ ಸ್ಕೆಚ್ ಪೆನ್ನನ್ನು ಮಾತ್ರ ಬಳಸಬೇಕು. ಆ ಪೆನ್ನನ್ನು ಮತಪತ್ರದ ಜೊತೆಗೆ ನೀಡಲಾಗುತ್ತದೆ. ಇತರೆ ಯಾವುದೇ ಪೆನ್, ಪೆನ್ಸಿಲ್, ಬಾಲ್‌ಪಾಯಿಂಟ್ ಪೆನ್ ಅಥವಾ ಇತರೆ ಯಾವುದೇ ಗುರುತು ಮಾಡುವ ಸಾಧನವನ್ನು ಬಳಸುವಂತಿಲ್ಲ. ಒಂದು ವೇಳೆ ಬಳಸಿದರೆ ಮತಪತ್ರ ಅಸಿಂಧುವಾಗುತ್ತದೆ.

ಪ್ರಥಮ ಪ್ರಾಶಸ್ತ್ಯವಾಗಿ ಆಯ್ಕೆ ಮಾಡುವ ಅಭ್ಯರ್ಥಿಯ ಹೆಸರಿನ ಎದುರು ಒದಗಿಸಿರುವ ಪ್ರಾಶಸ್ತ್ಯ ಕ್ರಮದ ಕಾಲಂನಲ್ಲಿ '1' ಎಂಬ ಅಂಕಿಯನ್ನು ಬರೆಯುವ ಮೂಲಕ ಮತ ನೀಡಬೇಕು. ಈ '1' ಎಂಬ ಅಂಕಿಯನ್ನು ಕೇವಲ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಬರೆಯಬೇಕಾಗುತ್ತದೆ.

ಚುನಾಯಿಸಬೇಕಾದ ಅಭ್ಯರ್ಥಿಗಳ ಸಂಖ್ಯೆ ಒಂದಕ್ಕಿಂತ ಹೆಚ್ಚಾಗಿದ್ದರೂ ಕೂಡ '1' ಎಂಬ ಅಂಕಿಯನ್ನು ಕೇವಲ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಬರೆಯಬೇಕು.

ಚುನಾಯಿಸಬೇಕಾದ ಅಭ್ಯರ್ಥಿಗಳ ಸಂಖ್ಯೆ ಎಷ್ಟೇ ಇದ್ದರೂ ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆಯಷ್ಟು ಪ್ರಾಶಸ್ತ್ಯಗಳು ಇರುತ್ತವೆ. ಉದಾಹರಣಿಗೆ ಆರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರೆ ಆ ಪೈಕಿ ನಾಲ್ವರನ್ನು ಮಾತ್ರವೇ ಚುನಾಯಿಸಬೇಕಿದ್ದರೂ, ಶಾಸಕರು ಪ್ರಾಶಸ್ತ್ಯಕ್ಕನುಸಾರವಾಗಿ ಇಚ್ಛೆಯ ಅಭ್ಯರ್ಥಿಗಳ ಹೆಸರಿನ ಮುಂದೆ 1 ರಿಂದ 6 ರವರೆಗೆ ಪ್ರಾಶಸ್ತ್ಯಗಳನ್ನು ನಮೂದಿಸಬಹುದಾಗಿದೆ.

ಉಳಿದ ಅಭ್ಯರ್ಥಿಗಳಿಗೆ ಒದಗಿಸಿರುವ ಪ್ರಾಶಸ್ತ್ಯದ ಕ್ರಮ

ಕಾಲಂನಲ್ಲಿ ನಿಮ್ಮ ಪ್ರಾಶಸ್ತ್ರಕ್ಕನುಸಾರವಾಗಿ 2, 3, 4 ಮುಂತಾದ ಅಂಕಿಗಳನ್ನು ನಮೂದಿಸುವ ಮೂಲಕ ಶಾಸಕರು ಮುಂದಿನ ಪ್ರಾಶಸ್ತ್ಯಗಳನ್ನು ಸೂಚಿಸಬೇಕಾಗಿರುತ್ತದೆ.

ಯಾವುದೇ ಅಭ್ಯರ್ಥಿಯ ಹೆಸರಿನ ಮುಂದೆ ಕೇವಲ ಒಂದು ಅಂಕಿಯನ್ನು ಮಾತ್ರ ಬರೆದಿರುವುದನ್ನು ಖಾತರಿ ಮಾಡಿಕೊಳ್ಳಬೇಕು ಹಾಗೂ ಒಂದೇ ಅಂಕಿಯನ್ನು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರುಗಳ ಮುಂದೆ ಬರೆದಿಲ್ಲ ಎಂಬುದನ್ನೂ ಖಾತರಿಡಿಸಿಕೊಳ್ಳಬೇಕು.

ಪ್ರಾಶಸ್ತ್ಯಗಳನ್ನು ಅಂಕಿಗಳಲ್ಲಿ ಎಂದರೆ, 1,2,3 ಮುಂತಾಗಿ ಮಾತ್ರ ನಮೂದಿಸತಕ್ಕದ್ದು ಮತ್ತು ಒಂದು, ಎರಡು, ಮೂರು ಇತ್ಯಾದಿಯಾಗಿ ಪದಗಳಲ್ಲಿ ನಮೂದಿಸುವಂತಿಲ್ಲ.

1, 2, 3 ಮುಂತಾದ ಅಂತರರಾಷ್ಟ್ರೀಯ ರೂಪದ ಭಾರತೀಯ ಅಂಕಿಗಳು ಅಥವಾ I, II,III ಮುಂತಾಗಿ ರೋಮನ್ ಅಂಕಿಗಳು, 1,2,3 ಎಂಬ ದೇವನಾಗರಿ ಅಂಕಿಗಳು ಅಥವಾ ಸಂವಿಧಾನದ ಅನುಸೂಚಿ VIII ರಲ್ಲಿ ಮನ್ನಣೆ ಪಡೆದಿರುವ ಯಾವುದೇ ಭಾರತೀಯ ಭಾಷೆಯಲ್ಲಿ ಬಳಕೆಯಲ್ಲಿರುವ ಅಂಕಿಗಳನ್ನು ನಮೂದಿಸಬಹುದಾಗಿದೆ.

ಹೆಸರು ನಮೂದಿಸುವ ಹಾಗಿಲ್ಲ

ಮತಪತ್ರದಲ್ಲಿ ಶಾಸಕರು ತಮ್ಮ ಹೆಸರನ್ನು ಬರೆಯುವಂತಿಲ್ಲ ಮತ್ತು ಯಾವುದೇ ಪದಗಳನ್ನೂ ಬರೆಯುವಂತಿಲ್ಲ. ಸಹಿ ಅಥವಾ ಕಿರು ಸಹಿಯನ್ನು ಹಾಕುವಂತಿಲ್ಲ. ಹಾಗೆಯೇ ಶಾಸಕರು ಹೆಚ್ಚಿನ ಗುರುತನ್ನು ಮಾಡುವಂತಿಲ್ಲ. ಹಾಗೆ ಮಾಡಿದರೆ ಮತಪತ್ರ ಅಸಿಂಧುವಾಗುತ್ತದೆ.

ಪ್ರಾಶಸ್ತ್ಯವನ್ನು ಸೂಚಿಸುವಾಗ ಶಾಸಕರು ತಮ್ಮ ಇಚ್ಛೆಯ ಅಭ್ಯರ್ಥಿಗಳ ಹೆಸರುಗಳ ಮುಂದೆ 'ಎ' ಅಥವಾ 'X' ಗುರುತನ್ನು ಹಾಕುವಂತಿಲ್ಲ. ಒಂದು ವೇಳೆ ಹಾಕಿದರೂ ಅಂತಹ ಮತಪತ್ರಗಳು ತಿರಸ್ಕೃತವಾಗುತ್ತವೆ.

ಮತಪತ್ರವು ಕ್ರಮಬದ್ಧವಾದ ಮತಪತ್ರವಾಗಬೇಕಾದರೆ, ಅಭ್ಯರ್ಥಿಗಳಲ್ಲಿ ಒಬ್ಬರ ಹೆಸರಿನ ಮುಂದೆ '1' ಎಂಬ ಅಂಕಿಯನ್ನು ನಮೂದಿಸುವ ಮೂಲಕ ಶಾಸಕರು ಪ್ರಥಮ ಪ್ರಾಶಸ್ತ್ಯವನ್ನು ಸೂಚಿಸುವುದು ಅಗತ್ಯ. ಉಳಿದ ಪ್ರಾಶಸ್ತ್ಯಗಳನ್ನು ನಮೂದಿಸುವುದು ಶಾಸಕರಿಗೆ ಬಿಟ್ಟ ವಿಷಯ. ಅಂದರೆ ಶಾಸಕರು ಎರಡನೆಯ ಮತ್ತು ಆನಂತರದ ಪ್ರಾಶಸ್ತ್ಯಗಳನ್ನು ನಮೂದಿಸಬಹುದು ಅಥವಾ ನಮೂದಿಸದೆ ಇರಬಹುದು.

ರಾಜ್ಯಸಭಾ ಚುನಾವಣೆಯಲ್ಲಿ OPEN BALLOT SYSTEM ಅಳವಡಿಸಿರುವುದರಿಂದ ರಾಜಕೀಯ ಪಕ್ಷಗಳಿಗೆ ಸೇರಿದ ಮತದಾರರು ತಮ್ಮ ಪ್ರಾಶಸ್ತ್ಯ ಮತವನ್ನು ಚಲಾಯಿಸಿದ ನಂತರ ಅಂತಹ ಮತಪತ್ರವನ್ನು ಆಯಾ ರಾಜಕೀಯ ಪಕ್ಷಗಳ ಅಧಿಕೃತ ಏಜೆಂಟ್‌ರಿಗೆ ಮಾತ್ರ ತೋರಿಸಬಹುದಾಗಿದೆ. ನಂತರ ಮತಪತ್ರ ಮತಪೆಟ್ಟಿಗೆಯಲ್ಲಿ ಹಾಕಬೇಕಿದೆ.

ಪಕ್ಷೇತರ ಮತದಾರರು ಯಾವುದೇ ರಾಜಕೀಯ ಪಕ್ಷಗಳಿಗೆ ಸೇರದೇ ಇರುವುದರಿಂದ, ಅವರುಗಳು ತಮ್ಮ ಪ್ರಾಶಸ್ತ್ಯ ಮತವನ್ನು ಚಲಾಯಿಸಿದ ನಂತರ ತಮ್ಮ ಮತಪತ್ರವನ್ನು ಯಾರಿಗೂ ತೋರಿಸದೆ ನೇರವಾಗಿ ಮತಪೆಟ್ಟಿಗೆಯಲ್ಲಿ ಹಾಕಬೇಕಾಗಿರುತ್ತದೆ.

ಕೆಳಕಂಡ ರೀತಿಯಲ್ಲಿ ಮತ ಚಲಾಯಿಸಿದರೆ ಮತ ಪತ್ರಗಳು ಅಸಿಂಧುವಾಗುತ್ತವೆ.

'1' ಎಂಬ ಅಂಕಿಯನ್ನು ನಮೂದಿಸದಿರುವ; '1' ಎಂಬ ಅಂಕಿಯನ್ನು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಮುಂದೆ ಹಾಕಿರುವ; '1' ಎಂಬ ಅಂಕಿಯನ್ನು ಯಾವ ಅಭ್ಯರ್ಥಿಗೆ ಹಾಕಲಾಗಿದೆ ಎಂಬುದು ಸಂದೇಹಕ್ಕೆ ಆಸ್ಪದವಾಗುವಂತೆ ಹಾಕಿರುವ; '1' ಎಂಬ ಅಂಕಿಯನ್ನು ಮತ್ತು 2, 3 ಮುಂತಾಗಿ ಇತರ ಕೆಲವು ಅಂಕಿಗಳನ್ನು ಕೂಡ ಒಬ್ಬನೇ ಅಭ್ಯರ್ಥಿಯ ಹೆಸರಿನ ಮುಂದೆ ನಮೂದಿಸಿರುವ; ಪ್ರಾಶಸ್ತ್ಯಗಳನ್ನು ಅಂಕಿಗಳಿಗೆ ಬದಲಾಗಿ ಪದಗಳಲ್ಲಿ ನಮೂದಿಸಿರುವ; ಮತದಾರನನ್ನು ಗುರುತು ಹಿಡಿಯಬಹುದಾದ ರೀತಿಯಲ್ಲಿ ಯಾವುದೇ ಗುರುತು ಅಥವಾ ಬರವಣಿಗೆ ಇರುವ ಅಂಕಿಗಳನ್ನು ಗುರುತು ಮಾಡುವ ಉದ್ದೇಶಕ್ಕಾಗಿ ಚುನಾವಣಾ ಅಧಿಕಾರಿಯು ನೀಡಿರುವ ನೇರಳೆ ಸ್ಕೆಚ್ ಪೆನ್ನಿನ ಬದಲು ಬೇರೆ ಯಾವುದೇ ಸಾಧನದಲ್ಲಿ ಗುರುತು ಮಾಡಲಾದ ಯಾವುದೇ ಅಂಕಿ ಇರುವ ಮತಪತ್ರವು ಅಸಿಂಧುವಾಗುತ್ತದೆ.

(ವಿಶೇಷ ವರದಿ: ಎಚ್. ಮಾರುತಿ, ಬೆಂಗಳೂರು)

IPL_Entry_Point