KPSC News: ಕೆಪಿಎಸ್‌ಸಿ ಕಚೇರಿಯಲ್ಲಿ ನೇಮಕಾತಿ ಆಯ್ಕೆ ಪಟ್ಟಿಯೇ ನಾಪತ್ತೆ; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
KPSC News: ಕೆಪಿಎಸ್‌ಸಿ ಕಚೇರಿಯಲ್ಲಿ ಆಯ್ಕೆ ಪಟ್ಟಿಯೇ ನಾಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ವರದಿ: ಎಚ್. ಮಾರುತಿ)

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ದಲ್ಲಿ ನೇಮಕಾತಿ ಆಯ್ಕೆ ಪಟ್ಟಿಯೇ ನಾಪತ್ತೆಯಾಗಿದೆ. ಕಡತ ನಾಪತ್ತೆ ಕುರಿತು ಕೆಪಿಎಸ್‌ಸಿ ಅಧಿಕಾರಿಗಳು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 2016 ರಲ್ಲಿ ಕೊಳೆಗೇರಿ ಮಂಡಳಿ ಜೂನಿಯರ್ ಇಂಜಿನಿಯರ್‌ಗಳ ನೇಮಕಾತಿ ಪ್ರಕ್ರಿಯೆ ನಡೆದಿತ್ತು. 2018 ರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಾರ್ವಜನಿಕರೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು. ನಂತರ ಹೈಕೋರ್ಟ್ ಆದೇಶದಂತೆ ಕೆಪಿಎಸ್‌ಸಿ ಗೌಪ್ಯ ಶಾಖೆ-3 ರಲ್ಲಿ ಆಯ್ಕೆ ಪಟ್ಟಿಯನ್ನು ತಯಾರಿಸಲಾಗಿತ್ತು. ಮುಂದಿನ ಕ್ರಮಕ್ಕೆ ಇದೇ ವರ್ಷದ ಜ. 22 ರಂದು ಕಾರ್ಯದರ್ಶಿಗಳ ಆಪ್ತ ಶಾಖೆಯಲ್ಲಿ ಕಡತ ಸ್ವೀಕಾರವಾಗಿತ್ತು. ಆ ನಂತರ ಕಡತ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೆಪಿಎಸ್‌ಸಿಯ ಎಲ್ಲಾ ಶಾಖೆಗಳಲ್ಲೂ ಕಡತಕ್ಕಾಗಿ ಹುಡುಕಾಟ ನಡೆಸಲಾಗಿತ್ತು. ಕಡತ ಪತ್ತೆಯಾದಲ್ಲಿ ಶಾಖೆ-2 ಕ್ಕೆ ಹಿಂದಿರುಗಿಸುವಂತೆಯೂ ಕೆಪಿಎಸ್‌ಸಿ ಜ್ಞಾಪನ ಪತ್ರ ಹೊರಡಿಸಿತ್ತು. ಸತತ ಒಂದು ತಿಂಗಳು ಶೋಧ ನಡೆಸಿದರೂ ಕಡತ ಪತ್ತೆಯಾಗಿರಲಿಲ್ಲ. ನಂತರ ಕಡತ ನಾಪತ್ತೆ ಕುರಿತು ದೂರು ದಾಖಲಿಸಲು ಆಯೋಗದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆಯೋಗದ ಸಹಾಯಕ ಕಾರ್ಯದರ್ಶಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರು ನೀಡಿರುವುದನ್ನು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಖಚಿತಪಡಿಸಿದ್ದಾರೆ. ಯಾರ ಮೇಲೂ ಕೆಪಿಎಸ್‌ಸಿ ಅನುಮಾನ ವ್ಯಕ್ತಪಡಿಸಿಲ್ಲ. ಆದರೂ ಎಲ್ಲ ಮಾಹಿತಿ ಒದಗಿಸುವಂತೆ ಕೇಳಿದ್ದೇವೆ ಎಂದು ಅವರು ಹೇಳಿದ್ದಾರೆ.
ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಕಾಯಂ ಕುರಿತು ನಕಲಿ ಟಿಪ್ಪಣಿ, ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಒಳಗುತ್ತಿಗೆ ನೌಕರರನ್ನು ಕಾಯಂ ಮಾಡುವಂತೆ ನಕಲಿ ಟಿಪ್ಪಣಿಯೊಂದನ್ನು ತಯಾರಿಸಿ ರವಾನೆ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಆಪ್ತ ಕಾರ್ಯದರ್ಶಿ ಸಿದ್ದೇಶ್ ಪೊತಲಕಟ್ಟಿ ಅವರು ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎನ್‌ಎಚ್‌ಎಂ ಒಳಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಎಂಬ ನಕಲಿ ಟಿಪ್ಪಣಿ ಕಳಿಸಿದವರು ಯಾರು?
ನಕಲಿ ಟಿಪ್ಪಣಿ ಸೃಷ್ಟಿಸಿ ರವಾನೆ ಮಾಡಿರುವುದು ಮಾರ್ಚ್ 16 ರಂದು ಅಪ್ತ ಶಾಖೆಯ ಗಮನಕ್ಕೆ ಬಂದಿದೆ. ಅಂತಹ ಯಾವುದೇ ಪತ್ರಕ್ಕೆ ನಾನು ಸಹಿ ಮಾಡಿಲ್ಲ. ನಕಲಿ ಪತ್ರಕ್ಕೆ ಬಳಸಿರುವ ಲೆಟರ್‌ಹೆಡ್ ನಮ್ಮ ಶಾಖೆಗೆ ಸಂಬಂಧಪಟ್ಟಿಲ್ಲ ಎಂದು ಸಿದ್ದೇಶ್ ದೂರಿನಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು. ಎನ್‌ಎಚ್ಎಂ ನೌಕರರ ಸೇವೆ ಅಗತ್ಯವಾಗಿದ್ದು, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಎನ್‌ಎಚ್‌ಎಂ ನೌಕರರ ಸಂಘದ ಮನವಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ನಕಲಿ ಟಿಪ್ಪಣಿಯಲ್ಲಿ ತಿಳಿಸಲಾಗಿದೆ. ಎನ್‌ಎಚ್‌ಎಂ ನೌಕರರ ಸೇವೆಯನ್ನು ಕಾಯಂ ಮಾಡಲು ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ಸೂಕ್ತ ಪ್ರಸ್ತಾವನೆ ಹಾಗೂ ಅನುಮೋದನೆ ಪಡೆಯಬೇಕು. ನಂತರ ಕಡತ ಮಂಡಿಸಬೇಕು ಎಂದು ಟಿಪ್ಪಣಿಯಲ್ಲಿ ನಮೂದಿಸಲಾಗಿದೆ. ಈ ಪತ್ರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್ಥಿಕ ಇಲಾಖೆ ಹಾಗೂ ಕಾನೂನು ಇಲಾಖೆಗಳಿಗೆ ರವಾನೆ ಮಾಡಲಾಗಿದೆ.
ಎನ್‌ಎಚ್‌ಎಂ ನೌಕರರನ್ನು ಕಾಯಂ ಮಾಡುವ ಯಾವುದೇ ಮನವಿ ಪತ್ರವನ್ನು ನಮ್ಮ ಶಾಖೆಯಲ್ಲಿ ಸ್ವೀಕರಿಸಿಲ್ಲ. ಸಂಘದ ಪದಾಧಿಕಾರಿಗಳು ನಮ್ಮ ಕಚೇರಿಗೆ ಬಂದಿರುವುದಿಲ್ಲ. ಪತ್ರ ವ್ಯವಹಾರ, ಟಿಪ್ಪಣಿ ಮತ್ತು ಮನವಿಗಳನ್ನು ಇ–ಆಫೀಸ್ ತಂತ್ರಾಂಶದ ಮೂಲಕವೇ ರವಾನೆ ಮಾಡಲಾಗುತ್ತದೆ ಎಂದೂ ತಿಳಿಸಲಾಗಿದೆ. ಎರಡೂ ದೂರುಗಳನ್ನು ಕುರಿತು ತನಿಖೆ ನಡೆಯುತ್ತಿದೆ. (ವರದಿ: ಎಚ್. ಮಾರುತಿ)