Bangalore News: ನಿವೃತ್ತ ಐಎಎಸ್‌ ಅಧಿಕಾರಿ ಶಿವರಾಂಗೆ ಹೃದಯಾಘಾತ, ಆರೋಗ್ಯಸ್ಥಿತಿ ಗಂಭೀರ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ನಿವೃತ್ತ ಐಎಎಸ್‌ ಅಧಿಕಾರಿ ಶಿವರಾಂಗೆ ಹೃದಯಾಘಾತ, ಆರೋಗ್ಯಸ್ಥಿತಿ ಗಂಭೀರ

Bangalore News: ನಿವೃತ್ತ ಐಎಎಸ್‌ ಅಧಿಕಾರಿ ಶಿವರಾಂಗೆ ಹೃದಯಾಘಾತ, ಆರೋಗ್ಯಸ್ಥಿತಿ ಗಂಭೀರ

ಕರ್ನಾಟಕದ ನಿವೃತ್ತ ಅಧಿಕಾರಿ, ನಟ, ಬಿಜೆಪಿ ಮುಖಂಡ ಕೆ.ಶಿವರಾಮ್‌ ಅವರಿಗೆ ಹೃದಯಾಘಾತವಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಕೆ.ಶಿವರಾಂ ಅವರನ್ನು ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆ.ಶಿವರಾಂ ಅವರನ್ನು ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು; ಐಎಎಸ್‌ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಕೆ.ಶಿವರಾಂ ಅವರಿಗೆ ಹೃದಯಾಘಾತವಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನಲ್ಲಿ ಬುಧವಾರ ಮಧ್ಯಾಹ್ನ ಹೃದಯ ನೋವು ಕಾಣಿಸಿಕೊಂಡ ಅವರನ್ನು ಕೂಡಲೇ ಎಚ್‌ ಎಸ್‌ ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಅಭಿಮಾನಿಗಳು ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಕೆ.ಶಿವರಾಂ ಅವರು ಅಧಿಕಾರಿಯಾಗಿ, ಚಲನಚಿತ್ರ ನಟರಾಗಿ ಜನಪ್ರಿಯರು. ಅಲ್ಲದೇ ಒಂದು ದಶಕದಿಂದ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ರಾಮನಗರ ಜಿಲ್ಲೆಯ ಉರುಗಹಳ್ಳಿ ಗ್ರಾಮದವರು.

ಕನ್ನಡದಲ್ಲಿಯೇ ಐಎಎಸ್‌ ಪರೀಕ್ಷೆ ಬರೆದು ಉತ್ತೀರ್ಣವಾಗಿ ಕರ್ನಾಟಕದಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದವರು ಶಿವರಾಂ, ಮೈಸೂರು ನಗರ ಪಾಲಿಕೆ ಆಯುಕ್ತರು, ದಾವಣಗೆರೆ, ವಿಜಯಪುರ ಡಿಸಿಯಾಗಿದ್ದವರು, ಬೆಂಗಳೂರು ಪ್ರಾದೇಶಿಕ ಆಯುಕ್ತ, ವಿವಿಧ ಇಲಾಖೆಗಳ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಯಾಗಿಯೂ ಶಿವರಾಂ ಅವರು ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಐಎಎಸ್‌ ಅಧಿಕಾರಿಯಾಗಿದ್ಧಾಗಲೇ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಾನಲ್ಲೆ ಮಧುಚಂದ್ರಕೆ ಅವರಿಗೆ ಹೆಸರು ತಂದುಕೊಟ್ಟ ಚಿತ್ರ. ಅಧಿಕಾರಿಗಳು ಸಿನೆಮಾದಲ್ಲಿ ಅಭಿನಯಿಸುವಂತಿಲ್ಲ ಎನ್ನುವ ಆದೇಶವನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿ ನಂತರ ವಾಪಾಸ್‌ ಪಡೆದಿತ್ತು. ಆದರೂ ಶಿವರಾಂ ಅವರ ಸಿನೆಮಾ ಕ್ರೇಜ್‌ ನಿಂತಿರಲಿಲ್ಲ.

2013 ರಲ್ಲಿ ಆಡಳಿತ ಸೇವೆಯಿಂದ ನಿವೃತ್ತರಾದ ಬಳಿಕ ಸಂಪೂರ್ಣ ರಾಜಕೀಯ ಹಾಗೂ ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಛಲವಾದಿ ಮಹಾಸಭಾ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಮೊದಲು ಕಾಂಗ್ರೆಸ್‌ ಸೇರಿದ್ದ ಅವರು ಅಲ್ಲಿಂದ ವಿಧಾನಸಭೆ ಚುನಾವಣೆ, ಲೋಕಸಭೆ ಟಿಕೆಟ್‌ ಬಯಸಿದ್ದರು. ಅವಕಾಶ ಸಿಗದೇ ಇದ್ದುದಕ್ಕೆ ಜೆಡಿಎಸ್‌ ಸೇರಿ ವಿಜಯಪುರ ಲೋಕಸಭೆ ಕ್ಷೇತ್ರದಿಂದ ಕಣಕ್ಕೆ ಇಳಿದು ಸೋತಿದ್ದರು. ಇದಾದ ನಂತರ ಕಾಂಗ್ರೆಸ್‌ ಸೇರಿ ಡಾ.ಜಿ.ಪರಮೇಶ್ವರ್‌ ಅವರೊಂದಿಗೆ ಗುರುತಿಸಿಕೊಂಡಿದ್ದರು. ಮತ್ತೊಮ್ಮೆ ಟಿಕೆಟ್‌ ಸಿಗದೇ ಇದ್ದುದಕ್ಕೆ ಬಿಜೆಪಿ ಸೇರಿದ್ದರು. ಈಗ ಚಾಮರಾಜನಗರ ಲೋಕಸಭ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆಯಲು ಪ್ರಯತ್ನ ನಡೆಸಿದ್ದರು. ಅವರ ಬೆಂಬಲಿಗರು ಶಿವರಾಂ ಅವರಿಗೆ ಟಿಕೆಟ್‌ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಕೆಲ ದಿನಗಳಿಂದ ಅನಾರೋಗ್ಯ ಕಾರಣಕ್ಕೆ ಶಿವರಾಂ ಅವರು ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಅವರಿಗೀಗ 71 ವರ್ಷ. ಅಧಿಕ ರಕ್ತದೊತ್ತಡದಿಂದ ಹೃದಯಾಘಾತವಾಗಿರುವ ಕುರಿತು ಕುಟುಂಬದವರು ಮಾಹಿತಿ ನೀಡಿದ್ದಾರೆ.

Whats_app_banner