Bus Fare: ಸಂಕ್ರಾಂತಿ ಹಬ್ಬಕ್ಕೆ ಹೊರಟವರಿಗೆ ಖಾಸಗಿ ಬಸ್‌ಗಳಿಂದ ದುಪ್ಪಟ್ಟು ಪ್ರಯಾಣ ದರ: ಕಣ್ಮುಚ್ಚಿ ಕುಳಿತ ಸಾರಿಗೆ ಇಲಾಖೆ
ಕನ್ನಡ ಸುದ್ದಿ  /  ಕರ್ನಾಟಕ  /  Bus Fare: ಸಂಕ್ರಾಂತಿ ಹಬ್ಬಕ್ಕೆ ಹೊರಟವರಿಗೆ ಖಾಸಗಿ ಬಸ್‌ಗಳಿಂದ ದುಪ್ಪಟ್ಟು ಪ್ರಯಾಣ ದರ: ಕಣ್ಮುಚ್ಚಿ ಕುಳಿತ ಸಾರಿಗೆ ಇಲಾಖೆ

Bus Fare: ಸಂಕ್ರಾಂತಿ ಹಬ್ಬಕ್ಕೆ ಹೊರಟವರಿಗೆ ಖಾಸಗಿ ಬಸ್‌ಗಳಿಂದ ದುಪ್ಪಟ್ಟು ಪ್ರಯಾಣ ದರ: ಕಣ್ಮುಚ್ಚಿ ಕುಳಿತ ಸಾರಿಗೆ ಇಲಾಖೆ

ಇನ್ನೇನು ಸಂಕ್ರಾಂತಿಗೆ ಬಹುತೇಕರು ಊರಿಗೆ ಹೊರಡುವ ಸಮಯ. ಅವರ ಪ್ರಯಾಣಕ್ಕೆ ಲಭ್ಯ ಇರುವ ಖಾಸಗಿ ಬಸ್‌ಗಳ ಪ್ರಯಾಣ ದರ ಮಾತ್ರ ಯಥಾ ರೀತಿ ದುಪ್ಪಟ್ಟುಗೊಂಡಿದೆ. ಪ್ರಯಾಣಿಕರು ದರ ದುಬಾರಿ ನಡುವೆ ಪ್ರಯಾಣಕ್ಕೂ ದುಬಾರಿ ಹಣ ತೆರುವ ಸ್ಥಿತಿ ನಿರ್ಮಾಣವಾಗಿದೆ.ವರದಿ: ಎಚ್‌.ಮಾರುತಿ, ಬೆಂಗಳೂರು

ಸಂಕ್ರಾಂತಿ ರಜೆ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ ಪ್ರಯಾಣ ದರ ಕರ್ನಾಟಕದಲ್ಲಿ ದುಬಾರಿಯಾಗಿದೆ
ಸಂಕ್ರಾಂತಿ ರಜೆ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ ಪ್ರಯಾಣ ದರ ಕರ್ನಾಟಕದಲ್ಲಿ ದುಬಾರಿಯಾಗಿದೆ

ಬೆಂಗಳೂರು: ಸಾಲು ಸಾಲು ರಜಾದಿನಗಳು ಬಂದರೆ ಎಲ್ಲರಿಗಿಂತ ಹೆಚ್ಚು ಖುಷಿಯಾಗುವುದು ಖಾಸಗಿ ಬಸ್ ಗಳ ಮಾಲೀಕರಿಗೆ. ಹಬ್ಬ ಅಥವಾ ರಾಷ್ಟ್ರೀಯ ಹಬ್ಬಗಳ ಆಚರಣೆ ಸಂದರ್ಭದಲ್ಲಿ ನಿರಂತರವಾಗಿ ಮೂರ‍್ನಾಲ್ಕು ದಿನಗಳ ರಜೆ ಬಂದರೆ ಬೆಂಗಳೂರುವೊಂದರಿಂದಲೇ ಲಕ್ಷಾಂತರ ಸಾರ್ವಜನಿಕರು ತಮ್ಮ ತಮ್ಮ ಊರುಗಳಿಗೆ ಅಥವಾ ಪ್ರವಾಸಕ್ಕೆ ತೆರಳುತ್ತಾರೆ. ಇಂತಹ ಅವಕಾಶವನ್ನು ಬಳಸಿಕೊಳ್ಳುವ ಖಾಸಗಿ ಬಸ್ ಮಾಲೀಕರು ಬಸ್ ಪ್ರಯಾಣ ದರವನ್ನು ಎರಡು-ಮೂರು ಪಟ್ಟು ಹೆಚ್ಚಿಸಿ ಸುಲಿಗೆಗೆ ಇಳಿದುಬಿಡುತ್ತಾರೆ. ಈ ಬಾರಿ ಸಂಕ್ರಾಂತಿಗೂ ಇದೇ ಸನ್ನಿವೇಶ. ಈಗಾಗಲೇ ಖಾಸಗಿ ಬಸ್‌ ಪ್ರಯಾಣ ದರ ಮೂರು ಪಟ್ಟು ಏರಿಕೆಯಾಗಿದೆ. ಸಾರಿಗೆ ಇಲಾಖೆ ಮಾತ್ರ ಕೇಳುವ ಗೋಜಿಗೂ ಹೋಗಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಈ ತಿಂಗಳಲ್ಲಿ ಎರಡು ಬಾರಿ ಬಸ್ ದರ ಹೆಚ್ಚಳ ಮಾಡುವ ಅವಕಾಶ ಒದಗಿ ಬಂದಿದೆ. ಜ.26, ಶುಕ್ರವಾರ ಗಣರಾಜ್ಯೋತ್ಸವ. ಶನಿವಾರ ಮತ್ತು ಭಾನುವಾರ ಮತ್ತೆ ಸಾಲು ಸಾಲು ರಜೆ. ಆಗಲೂ ಪ್ರಯಾಣ ದರವನ್ನು ಹೆಚ್ಚಿಸುವ ಚಾಳಿಯನ್ನು ಖಾಸಗಿ ಬಸ್ ಮಾಲೀಕರು ಬಿಡುವುದಿಲ್ಲ ಎಂದು ಪ್ರಯಾಣಿಕರು ಗೊಣಗುತ್ತಲೇ ಇದ್ಧಾರೆ.

ಹೇಗಿದೆ ದರ

ಜ. 15 ಸೋಮವಾರದಂದು ಸಂಕ್ರಾಂತಿ. ಎರಡನೇ ಶನಿವಾರ ಮತ್ತು ಭಾನುವಾರ ಮಾಮೂಲಿ ರಜೆ.ಆದ್ದರಿಂದ ಶುಕ್ರವಾರ ಸಂಜೆಯಿಂದಲೇ ಸಾರ್ವಜನಿಕರು ಬೆಂಗಳೂರಿನಿಂದ ಹೊರಟುಬಿಡುತ್ತಾರೆ. ಮಈಗಾಗಲೇ ಲಕ್ಷಾಂತರ ಪ್ರಯಾಣಿಕರು ಬಸ್ ಗಳಲ್ಲಿ ಟಿಕೆಟ್ ಕಾಯ್ದಿರಿಸಿದ್ದಾರೆ. ಆನ್ ಲೈನ್ ನಲ್ಲಿ ಪರಿಶೀಲನೆ ಮಾಡಿದರೆ ಬಸ್ ಪ್ರಯಾಣದರವನ್ನು ಹೇಗೆ ಹೆಚ್ಚಿಸಲಾಗಿದೆ ಎನ್ನುವುದು ಅರಿವಾಗುತ್ತದೆ. ಉದಾಹರಣೆಗೆ ಬೆಂಗಳೂರಿನಿಂದ ಮಂಗಳೂರು ಅಥವಾ ಹುಬ್ಬಳ್ಳಿಗೆ 2000 ರೂಗಿಂತ ಹೆಚ್ಚಿನ ದರವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ದಿನಗಳಲ್ಲಿ ಇದರ ಅರ್ಧದಷ್ಟು ಪ್ರಯಾಣ ದರವಿರುತ್ತದೆ.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ 1,500 ರೂ ನಿಗಧಿಪಡಿಸಿದ್ದರೆ ಉಡುಪಿ ಮತ್ತು ಬೆಳಗಾವಿಗೆ ರೂ. 2000 ಫಿಕ್ಸ್ ಆಗಿದೆ. ಬೆಂಗಳೂರಿನಿಂದ ಮಡಿಕೇರಿಗೆ 1,600 ರೂ. ಬೆಂಗಳೂರಿನಿಂದ ಕಲಬುರಗಿಗೆ 2000ರೂ ನಿಗಧಿಪಡಿಸಿದ್ದಾರೆ. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಪ್ರಯಾಣ ದರ 450-550, ಬೆಂಗಳೂರಿನಿಂದ ಉಡುಪಿ ಅಥವಾ ಬೆಳಗಾವಿಗೆ ರೂ. 750-1000 ವರೆಗೆ ಇರುತ್ತದೆ.

ತೂಕಡಿಸುತ್ತಿರುವ ಸಾರಿಗೆ ಇಲಾಖೆ

ಇನ್ನು ಸಾರಿಗೆ ಇಲಾಖೆ ಗೊತ್ತಿದ್ದೂ ಗೊತ್ತಿಲ್ಲದಂತೆ ಸುಮ್ಮನಿದ್ದು ಬಿಡುತ್ತದೆ. ಖಾಸಗಿ ಬಸ್ ಗಳ ಮೇಲೆ ಹಿಡಿತವೇ ಇಲ್ಲದಂತೆ ವರ್ತಿಸುತ್ತದೆ. ವಿಶೇಷ ತಪಾಸಣೆ

ನಡೆಸುತ್ತಿರುವುದಾಗಿ ಇಲಾಖೆ ಹೇಳುತ್ತದೆಯಾದರೂ ಇದರಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೆಚ್ಚಿನ ದರ ವಿಧಿಸುವ ಬಸ್ ಗಳಿಗೆ ದಂಡ ವಿಧಿಸಲಾಗಿದೆ. ಕಾನೂನು ಕ್ರಮ ಕೈಗೊಳ್ಳುತ್ತಿದ್ದೆವೆ. ಅನೇಕ ಬಸ್ ಗಳ ಪರ್ಮಿಟ್ ರದ್ದುಪಡಿಸಲಾಗಿದೆ ಎಂದು ಹೇಳುತ್ತಾರೆ. ಆದರೆ ಸಾರ್ವಜನಿಕರು ಸರ್ಕಾರದ ವಾದವನ್ನು ಒಪ್ಪುತ್ತಿಲ್ಲ. ಪ್ರತಿ ಬಾರಿ ಹಬ್ಬದ ಸಂದರ್ಭದಲ್ಲಿ ಊರಿಗೆ ಹೋಗುತ್ತೇವೆ. ಪ್ರಯಾಣ ದರವನ್ನು ಎರಡು ಮೂರು ಪಟ್ಟು ವಸೂಲಿ ಮಾಡುತ್ತಿದ್ದಾರೆ. ಸಾರಿಗೆ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ದೇವರೇ ಬಲ್ಲ ಎಂದು ಹೇಳುತ್ತಾರೆ.

ಸಮರ್ಥಿಸಿಕೊಂಡ ಖಾಸಗಿ ಬಸ್ ಮಾಲೀಕರು

ಸಂಕ್ರಾಂತಿ ಹಬ್ಬವನ್ನು ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಆಂಧ್ರಪ್ರದೇಶ, ತಮಿಳುನಾಡು ತೆಲಂಗಾಣ ರಾಜ್ಯಗಳಲ್ಲೂ ಇದೇ ರೀತಿ ಪ್ರಯಾಣ ದರವನ್ನು ಹೆಚ್ಚಿಗೆ ವಸೂಲಿ ಮಾಡುತ್ತಿದ್ದಾರೆ. ವಿವಿಧ ರಾಜ್ಯಗಳಿಂದ ಬೆಂಗಳೂರು ಸೇರಿದಂತೆ ಕರ್ನಾಟಕಕ್ಕೆ ಆಗಮಿಸುವ ಪ್ರಯಣಿಕರು ಇದೇ ಆರೋಪವನ್ನು ಮಾಡುತ್ತಿದ್ದಾರೆ.

ಈ ಆರೋಪವನ್ನು ಖಾಸಗಿ ಬಸ್ ಮಾಲೀಕರು ನಿರಾಕರಿಸುತ್ತಾರೆ. ಬೇಡಿಕೆ ಹೆಚ್ಚಾದಾಗ ದರ ಹೆಚ್ಚಾಗುವುದು ಸಹಜ. ಖಾಸಗಿ ಬಸ್ ಗಳಲ್ಲಿ ನೀಡುವ ಸವಲತ್ತುಗಳನ್ನು ಮರೆಯಬಾರದು. ಮೇಲಾಗಿ ರಸ್ತೆ ತೆರಿಗೆಯನ್ನು ಭಾರಿ ಪ್ರಮಾಣದಲ್ಲಿ ವಸೂಲಿ ಮಾಡಲಾಗುತ್ತಿದ್ದು ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ವಾದಿಸುತ್ತಾರೆ.

ಹಬ್ಬಹರಿದಿನಗಳಲ್ಲಿ ಮಾತ್ರ ಖಾಸಗಿ ಬಸ್ ಗಳಿಗೆ ಬೇಡಿಕೆ ಇರುತ್ತದೆ. ಉಳಿದಂತೆ 8-10 ಪ್ರಯಾಣಿಕರಿದ್ದರೂ ನಾವು ಬಸ್ ಸೇವೆ ಒದಗಿಸುತ್ತೇವೆ. ಆಗ ಉಂಟಾಗುವ ನಷ್ಟವನ್ನು ಈಗ ತುಂಬಿಕೊಳ್ಳುತ್ತೇವೆ ಎಂದು ಸಮರ್ಥಿಸಿಕೊಳ್ಳುತ್ತಾರೆ.

(ವರದಿ: ಎಚ್.ಮಾರುತಿ, ಬೆಂಗಳೂರು)

Whats_app_banner