Bangalore Crime: ವಿಮಾನದ ಮೂಲಕ 6,626 ಸಮುದ್ರ ಕುದುರೆಗಳ ಸಾಗಣೆ, ಬೆಂಗಳೂರಲ್ಲಿ ಭಾರೀ ಜಾಲ ಪತ್ತೆ, ಏನಿದರ ವಿಶೇಷ-bangalore news sea horse transportation from bangalore 3 smuggler arrested in kempegowda airport case under wildlife act ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ವಿಮಾನದ ಮೂಲಕ 6,626 ಸಮುದ್ರ ಕುದುರೆಗಳ ಸಾಗಣೆ, ಬೆಂಗಳೂರಲ್ಲಿ ಭಾರೀ ಜಾಲ ಪತ್ತೆ, ಏನಿದರ ವಿಶೇಷ

Bangalore Crime: ವಿಮಾನದ ಮೂಲಕ 6,626 ಸಮುದ್ರ ಕುದುರೆಗಳ ಸಾಗಣೆ, ಬೆಂಗಳೂರಲ್ಲಿ ಭಾರೀ ಜಾಲ ಪತ್ತೆ, ಏನಿದರ ವಿಶೇಷ

Sea Horse Seized ಬೆಂಗಳೂರಿನಿಂದ ಸಿಂಗಾಪೂರಕ್ಕೆ ಸಾಗಿಸಲು ಯತ್ನಿಸುತಿದ್ದ ಸಮುದ್ರ ಕುದುರೆಗಳನ್ನು ಜಪ್ತಿ ಮಾಡಿ ಮೂವರನ್ನು ಬಂಧಿಸಲಾಗಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಸಮುದ್ರ ಕುದುರೆಗಳನ್ನು ಬೆಂಗಳೂರು ವಿಮಾನ ನಿಲ್ದಾನದಲ್ಲಿ ಜಪ್ತಿ ಮಾಡಲಾಗಿದೆ.
ಸಮುದ್ರ ಕುದುರೆಗಳನ್ನು ಬೆಂಗಳೂರು ವಿಮಾನ ನಿಲ್ದಾನದಲ್ಲಿ ಜಪ್ತಿ ಮಾಡಲಾಗಿದೆ.

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಣಗಿದ ಸಮುದ್ರ ಕುದುರೆಗಳ ಅಂತಾರಾಷ್ಟ್ರೀಯ ಕಳ್ಳ ಸಾಗಣೆಯ ಜಾಲವನ್ನು ವಿಮಾನ ನಿಲ್ದಾಣದ ಕಂದಾಯ ಗುಪ್ತಚರ ನಿರ್ದೇಶನಾಲಯ ಭೇದಿಸಿದೆ. ನಿರ್ದಿಷ್ಟ ಮಾಹಿತಿಯನ್ನು ಆಧರಿಸಿ ಡಿ ಆರ್ ಐ ಅಧಿಕಾರಿಗಳು ಈ ಜಾಲಕ್ಕೆ ಸಂಬಂಧಿಸಿದ ಮೂವರನ್ನು ಟರ್ಮಿನಲ್ 1 ರಲ್ಲಿ ಬಂಧಿಸಲಾಗಿದೆ.ಇವರು ಇಂಡಿಗೋ ವಿಮಾನದಲ್ಲಿ ಮುಂಬಯಿ ಮೂಲಕ ಸಿಂಗಾಪುರಕ್ಕೆ ತೆರಳುತ್ತಿದ್ದರು. ಇವರ ಲಗೇಜ್ ಬ್ಯಾಗ್ ಗಳನ್ನು ತಪಾಸಣೆ ಮಾಡಿದಾಗ 6,626 ಒಣಗಿದ ಸಮುದ್ರ ಕುದುರೆಗಳು ಪತ್ತೆಯಾಗಿವೆ.

ವನ್ಯಜೀವಿ ಕಾಯಿದೆ -1972 ರ ಪ್ರಕಾರ ಸಮುದ್ರ ಕುದುರೆಗಳ ಮಾರಾಟ, ಖರೀದಿ ಮತ್ತು ಯಾವುದೇ ರೀತಿಯ ಬಳಕೆ ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಮೇಲಾಗಿ ವನ್ಯಜೀವಿ ಮತ್ತು ಸಮುದ್ರಜೀವಿಗಳು ಮತ್ತು ಅವುಗಳ ಬಿಡಿ ಭಾಗಗಳನ್ನು ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಬಹುದೊಡ್ಡ ಬೇಟೆ ಎನ್ನಲಾಗುತ್ತಿದೆ. ಬಂಧಿತರು ತಮಿಳುನಾಡು ಮೂಲದವರಾಗಿದ್ದು, ಇವರೆಲ್ಲರೂ 30 ವರ್ಷದ ಆಸುಪಾಸಿನವರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಮುದ್ರ ಕುದುರೆಗಳನ್ನು ಸಾಂಪ್ರದಾಯಿಕ ಚಿಕಿತ್ಸೆ, ಔಷಧ, ಆಹಾರ ಖಾದ್ಯ ಮತ್ತು ಅಕ್ವೇರಿಯಂಗಳಲ್ಲಿ ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಆದ್ದರಿಂದ ಇವುಗಳಿಗೆ ಬೇಡಿಕೆ ಹೆಚ್ಚು ಎಂದು ಅಧಿಕಾರಿಗಳು ಹೇಳುತ್ತಾರೆ. ಸಾಂಪ್ರದಾಯಿಕ ಚೀನೀ ಚಿಕಿತ್ಸೆಯಲ್ಲಿ ಇವುಗಳಿಗೆ ಬೇಡಿಕೆ ಇದೆ. ಉತ್ತಮ ಔಷಧೀಯ ಗುಣಗಳನ್ನು ಹೊಂದಿರುವ ಸಮುದ್ರ ಕುದುರೆಗಳಿಗೆ ಬೇಡಿಕೆ ಹೆಚ್ಚು.

ಮಾನವ ಹಕ್ಕು ಆಯೋಗ ಹೆಸರಿನಲ್ಲಿ ಪೊಲೀಸರಿಗೆ ಬೆದರಿಕೆ ಒಡ್ಡುತ್ತಿದ್ದ ಆರೋಪಿ ಬಂಧನ:

ಪೊಲೀಸ್‌ ಠಾಣೆಗಳಲ್ಲಿರುವ ಆರೋಪಿಗಳ ಪರವಾಗಿ ಮಾನವ ಹಕ್ಕುಗಳ ಆಯೋಗಕ್ಕೆ ನೀಡಿರುವ ದೂರು ಹಿಂಪಡೆಯಲು ಹಣಕ್ಕಾಗಿ ಪೊಲೀಸರಿಗೆ ಬ್ಲಾಕ್‌ ಮೇಲ್‌ ಮಾಡುತ್ತಿದ್ದ ಆರೋಪಿ ಸೈಯದ್‌ ಸರ್ಫ ರಾಜ್‌ ಅಹಮದ್‌ ಎಂಬಾತನನ್ನು ಶಿವಾಜಿ ನಗರ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಕಂಪನಿಯೊಂದರಲ್ಲಿ ವಾಹನ ಜಪ್ತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗೆ ಭಾರತಿನಗರ ಠಾಣೆಯ ಕೆಲವು ಪೊಲೀಸರ ಪರಿಚಯವಿತ್ತು. ಇದೇ ನೆಪದಲ್ಲಿ ಠಾಣೆಗೆ ಬೇಟಿ ನೀಡಿ ಲಾಕ್‌ ಅಪ್‌ ನಲ್ಲಿದ್ದ ಆರೋಪಿಗಳನ್ನು ಪರಿಚಯ ಮಾಡಿಕೊಂಡು ಅವರ ಪ್ರಕರಣ ಕುರಿತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸುತ್ತಿದ್ದ. ನಂತರ ದೂರು ಹಿಂಪಡೆಯಲು ಪೊಲೀಸರಿಂದ ಹಣ ವಸೂಲು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಠಾಣೆಯ ವ್ಯಾಪ್ತಿಯ ಹೋಟೆಲ್‌ ವೊಂದರಲ್ಲಿ ಹಣ ಪಾವತಿಸದೆ ಗಲಾಟೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸ್‌ ಠಾಣೆಗೆ ಮಧ್ಯರಾತ್ರಿಯಲ್ಲಿ ಕರೆ ತರಲಾಗಿತ್ತು. ಈ ವಿಷಯ ತಿಳಿದು ಸೈಯದ್‌ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾನೆ. ಅದೇ ದಿನ ಆಯೋಗದ ಸದಸ್ಯರು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಏಕೆ ಹಾಜರುಪಡಿಸಿಲ್ಲ ಎಂದು ಪೊಲೀಸ್‌ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಆರೋಪಿಯನ್ನು ಕರೆ ತಂದ ದಾಖಲಾತಿಗಳನ್ನು ಆಯೋಗಕ್ಕೆ ಒದಗಿಸಿದ್ದಾರೆ.

ಈ ದೂರನ್ನು ಹಿಂಪಡೆಯಲು ಆರೋಪಿ ಬ್ಲಾಕ್‌ ಮೇಲ್‌ ಮಾಡಿ ರೂ. 50 ಸಾವಿರಕ್ಕೆ ಬೇಡಿಕೆ ಇರಿಸಿದ್ದಾನೆ. ನಂತರ 25 ಸಾವಿರ ಕೊಡುವುದಾಗಿ ಹೇಳಿದ ಪೊಲೀಸರು ಆತನನ್ನು ಕರೆಸಿದ್ದಾರೆ. ಆಗ ಆತನನ್ನು ಬಂಧಿಸಲು ಮುಂದಾದಾಗ ಪರಾರಿಯಾಗಿದ್ದಾನೆ. ನಂತರ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಆಗಿದ್ದಾರೆ.

ಆರೋಪಿ ಸೈಯದ್‌ ಇದೇ ರೀತಿ ಅರ್.ಟಿ. ನಗರ ಮತ್ತು ಭಾರತಿನಗರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲೂ ಬ್ಲಾಕ್‌ ಮೇಲ್‌ ಮಾಡಿರುವ ಸಂಗತಿ ಬಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

(ವರದಿ: ಎಚ್‌. ಮಾರುತಿ, ಬೆಂಗಳೂರು)