IPS Postings: ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ ಡಿಜಿಪಿ ಹುದ್ದೆಗೆ ಬಡ್ತಿ,ಎರಡು ಹುದ್ದೆಗೆ ನಿಯೋಜನೆ
Police News ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ( DGP) ಪ್ರಣಬ್ ಮೊಹಂತಿ ( Pranab Mohanty) ಅವರನ್ನು ನೇಮಕ ಮಾಡಲಾಗಿದೆ.
ಬೆಂಗಳೂರು: ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ, ದಶಕದ ಹಿಂದೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವಿವಾದದ ಪ್ರಕರಣದಲ್ಲಿ ಸಿಲುಕಿದ್ದ ಪ್ರಣಬ್ ಮೊಹಂತಿ ಅವರಿಗೆ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಬಡ್ತಿ ನೀಡಲಾಗಿದೆ. ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿದ್ದ ಕಮಲ್ ಪಂತ್ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಪ್ರಣಬ್ ಮೊಹಂತಿ ಅವರಿಗೆ ಅಪರ ಪೊಲೀಸ್ ಮಹಾನಿರ್ದೇಶಕರ ಹುದ್ದೆಯಿಂದ ಮಹಾನಿರ್ದೇಶಕರ ಹುದ್ದೆಗೆ ಬಡ್ತಿ ನೀಡಲಾಗಿದೆ. ಅವರನ್ನು ಪೊಲೀಸ್ ಕಂಪ್ಯೂಟರ್ ವಿಭಾಗದ ಜತೆಗೆ ಸಿಐಡಿಯ ಸೈಬರ್ ಅಪರಾಧ ಮತ್ತು ಮಾದಕ ವಸ್ತುಗಳ ನಿಯಂತ್ರಣ ವಿಭಾಗದ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೂ ಹೆಚ್ಚುವರಿ ಪ್ರಭಾರವನ್ನು ನೀಡಿ ಕರ್ನಾಟಕ ಸರ್ಕಾರದ ಗೃಹ ಇಲಾಖೆಯು ಶನಿವಾರದಂದು ಆದೇಶ ಹೊರಡಿಸಿದೆ.
ಡಿಜಿಪಿಯಾಗಿದ್ದ ಕಮಲ್ ಪಂತ್ ಅವರ ನಿವೃತ್ತಿಯಿಂದ ತೆರವಾದ ಸ್ಥಾನದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಆಗಿರುವ ಮಾಲಿನಿ ಕೃಷ್ಣಮೂರ್ತಿ ಅವರು ಬಂದೀಖಾನೆ ಜತೆಗೆ ಗೃಹ ರಕ್ಷಕ ದಳದ ಹೆಚ್ಚುವರಿ ಪ್ರಭಾರ ಪೊಲೀಸ್ ಮಹಾನಿರ್ದೇಶಕರು ಆಗಿರಲಿದ್ಧಾರೆ.
ಕರ್ನಾಟಕದಲ್ಲಿ ಸದ್ಯ ಆರು ಪೊಲೀಸ್ ಮಹಾನಿರ್ದೇಶಕರ ಹುದ್ದೆಗಳಿವೆ. ಅದರಲ್ಲಿ ಮುಖ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಯ ಜತೆಗೆ ಇನ್ನೂ ಐದು ಹುದ್ದೆಗಳಿವೆ. ಸದ್ಯ ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕ್ ಮೋಹನ್ ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸ್ ಮಹಾನಿರ್ದೇಶಕರಾಗಿದ್ದ ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾಗಿ ಕಳೆದ ವರ್ಷ ನಿಯೋಜನೆಗೊಂಡ ನಂತರ ಅಲೋಕ್ ಮೋಹನ್ ಈ ಹುದ್ದೆಗೆ ಬಂದಿದ್ದರು. ಅವರು ಮುಂದಿನ ವರ್ಷದ ಏಪ್ರಿಲ್ ವರೆಗೂ ಸೇವೆಯಲ್ಲಿರಲಿದ್ದು, ನಿವೃತ್ತರಾಗಲಿದ್ದಾರೆ.
ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಬಂದಿಖಾನೆ ಮತ್ತು ಸುಧಾರಣಾ ಸೇವೆಗಳ ಇಲಾಖೆ ಪೊಲೀಸ್ ಮಹಾನಿರ್ದೇಶಕರಾಗಿ ಮಾಲಿನಿ ಕೃಷ್ಣಮೂರ್ತಿ, ಸಿಐಡಿ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ರಾಜ್ಯ ಪೊಲೀಸ್ ವಸತಿ ನಿಗಮದ ಅಧ್ಯಕ್ಷರಾಗಿರುವ ಕೆ.ರಾಮಚಂದ್ರರಾವ್ ಕೂಡ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ.
ಮುಂದಿನ ವರ್ಷದ ಜುಲೈನಲ್ಲಿ ಮಾಲಿನಿ ಕೃಷ್ಣಮೂರ್ತಿ ನಿವೃತ್ತರಾದರೆ, ಸಲೀಂ ಹಾಗೂ ರಾಮಚಂದ್ರರಾವ್ ಎರಡು ವರ್ಷದ ನಂತರ ನಿವೃತ್ತರಾಗುವರು. ಅಲೋಕ್ ಮೋಹನ್ ಹಾಗೂ ಮಾಲಿನಿ ಕೃಷ್ಣಮೂರ್ತಿ ಅವರು ಮುಂದಿನ ವರ್ಷ ನಿವೃತ್ತರಾಗುವುದರಿಂದ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಹಾಲಿ ಸಂಚಾರ ವಿಭಾಗ ಅಪರ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಬಿ.ದಯಾನಂದ ನೇಮಕಗೊಳ್ಳಲಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಪ್ರಶಾಂತ್ ಕುಮಾರ್ ಠಾಕೂರ್ ಅವರು ಮುಖ್ಯ ಪೊಲೀಸ್ ನಿರ್ದೇಶಕರಾಗಬಹುದು.
ಪ್ರಣಬ್ ಮೊಹಂತಿ ಅವರು ಮೂಲತಃ ಒಡಿಶಾದವರು. ಮೂರು ದಶಕದ ಹಿಂದೆ ಐಪಿಎಸ್‌ಗೆ ಸೇರಿ ಕರ್ನಾಟಕ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ಇಲಾಖೆಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಸುಮಾರು ಒಂದೂವರೆ ವರ್ಷ ಕಾಲ ಮುಖ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಪಡೆಗಳ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸುವ ಅವಕಾಶವಿದೆ.
ವಿಭಾಗ