ಕನ್ನಡ ಸುದ್ದಿ  /  Karnataka  /  Bangalore News Senior Journalist Of Karnataka Mk Bhaskar Rao Passes Away In Bangalore After Illness Kub

Bangalore News: ಸಮಾಜಮುಖಿ ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ್‌ ರಾವ್‌ ಇನ್ನಿಲ್ಲ, ಬೆಂಗಳೂರಿನಲ್ಲಿ ನಿಧನ

Senior Journalist ಪ್ರಜಾವಾಣಿ ಪತ್ರಿಕೆಯಲ್ಲಿ ಹಲವು ವರ್ಷ ಕೆಲಸ ಮಾಡಿದ್ದ ಭಾಸ್ಕರರಾವ್‌ ಅವರು ರಾಜಕೀಯ ವಿಶ್ಲೇಷಣೆಗಳನ್ನೂ ಮಾಡುತ್ತಿದ್ದರು. ಹರಿತ ಮಾತಿಗೆ ಹೆಸರಾಗಿದ್ದರು

ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರರಾವ್‌ ನಿಧನ
ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರರಾವ್‌ ನಿಧನ

ಬೆಂಗಳೂರು: ಕರ್ನಾಟಕದ ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರರಾವ್‌ ಅವರು ಬೆಂಗಳೂರಿನಲ್ಲಿ ಬುಧವಾರ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಎರಡು ವರ್ಷದಿಂದ ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಅದರಲ್ಲೂ 15 ದಿನದ ಹಿಂದೆ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದರು ಎಂದು ಅವರು ಕುಟುಂಬದ ಮೂಲಗಳು ತಿಳಿಸಿವೆ. ಮೃತರಿಗೆ ಪತ್ನಿ ಜಯಾ, ಪುತ್ರ ಅಭಿಜಿತ್‌ ಇದ್ದಾರೆ. ಬೆಂಗಳೂರಿನ ಬನ್ನೇರಘಟ್ಟ ರಸ್ತೆಯಲ್ಲಿರುವ ಸೌತ್‌ ಸಿಟಿ ಅಪಾರ್ಟ್‌ ಮೆಂಟ್‌ ಗೆ ಪಾರ್ಥಿವ ಶರೀರವನ್ನು ತರಲಾಗಿದ್ದು, ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಗ ಅಭಿಜಿತ್‌ ವಿದೇಶದಲ್ಲಿದ್ದು ಬಂದ ನಂತರ ಅಂತ್ಯಕ್ರಿಯೆ ಕುರಿತು ನಿರ್ಧರಿಸಲಾಗುತ್ತದೆ.

ಮೂಲತಃ ಶಿರಸಿ ತಾಲ್ಲೂಕಿನವರಾದ ಎಂ.ಕೆ.ಭಾಸ್ಕರರಾವ್‌ ಅವರು ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ. ಅಲ್ಲಿಯೇ ಶಿಕ್ಷಣ ಮುಗಿಸಿ ನಂತರ ಪತ್ರಿಕೋದ್ಯಮ ಸೇರಿದವರು. ಪ್ರಜಾವಾಣಿ ಪತ್ರಿಕೆಯಲ್ಲಿಯೇ ಮೂರು ದಶಕಕ್ಕೂ ಅಧಿಕ ಕಾಲ ಕೆಲಸ ಮಾಡಿದ್ದರು.

ರಾಯಚೂರು ಜಿಲ್ಲಾ ವರದಿಗಾರರಾಗಿದ್ದರು. ಆ ಭಾಗದ ಸಮಸ್ಯೆಗಳ ಕುರಿತು ಪ್ರಜಾವಾಣಿಯಲ್ಲಿ ಬರೆದ ಅವರ ವರದಿಗಳು ಗಮನ ಸೆಳೆದಿದ್ದವು. ಆನಂತರ ಬೆಂಗಳೂರಿನಲ್ಲಿ ಸಿನೆಮಾ ಪತ್ರಕರ್ತರಾಗಿಯೂ ಕೆಲವು ಕಾಲ ಭಾಸ್ಕರರಾವ್‌ ಕಾರ್ಯನಿರ್ವಹಿಸಿದ್ದರು.

ಸಮಾಜಮುಖಿ ಪತ್ರಕರ್ತರಾಗಿದ್ದ ಭಾಸ್ಕರರಾವ್‌ ತಮ್ಮ ಹರಿತ ಬರವಣಿಗೆ ಮಾತ್ರವಲ್ಲದೇ ಮಾತಿನಿಂದಲೂ ಗುರುತಿಸಿಕೊಂಡಿದ್ದರು. ಚುನಾವಣೆ ವೇಳೆ ಹಲವಾರು ಚಾನೆಲ್‌ಗಳಲ್ಲಿ ವಿಶ್ಲೇಷಣೆ ಮಾಡುತಿದ್ದರು. ಪ್ರಚಲಿತ ವಿದ್ಯಾಮಾನಗಳ ಕುರಿತು ನಿಖರವಾಗಿ ಮಾತನಾಡುವ ಜ್ಞಾನ ಅವರಲ್ಲಿತ್ತು.

ನಿವೃತ್ತಿ ನಂತರ ಅವರು ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಪ್ರವಾಸ ಕೈಗೊಳ್ಳುತ್ತಲೇ ಬರವಣಿಗೆಯಲ್ಲಿ ನಿರತರಾಗಿದ್ದರು. ಕೆಲವು ವರ್ಷದ ಹಿಂದೆಯಷ್ಟೇ ಕ್ಯಾನ್ಸರ್‌ಗೆ ಸಿಲುಕಿ ಚಟುವಟಿಕೆಗಳಿಂದ ದೂರವಾಗಿದ್ದರು.

ಆರು ತಿಂಗಳ ಹಿಂದೆಯಷ್ಟೇ ಅವರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಮನೆಗೆ ತೆರಳಿ ಸನ್ಮಾನ ಮಾಡಲಾಗಿತ್ತು.

IPL_Entry_Point

ವಿಭಾಗ