ಕನ್ನಡ ಸುದ್ದಿ  /  Karnataka  /  Bangalore News Shantinagar Mla Harris Protocal Car Sticker Misuse Found In Ed Raid Prk

ಬೆಂಗಳೂರು ಶಾಸಕ ಹ್ಯಾರೀಸ್ ಶಿಷ್ಟಾಚಾರ ಸ್ಟಿಕ್ಕರ್‌ ಕಾರು ಬಳಸಿದ ಶಂಕಿತ ವಂಚಕ ಪತ್ತೆ: ಇಡಿ ದಾಳಿಯಲ್ಲಿ ಬಯಲಾಯ್ತು ಸತ್ಯ

ಶಾಸಕ ಹ್ಯಾರಿಸ್‌ ಹೆಸರಲ್ಲಿ ನೀಡಿದ ಶಿಷ್ಟಾಚಾರ ಸ್ಟಿಕ್ಕರ್‌ ಅನ್ನು ಮತ್ತೊಬ್ಬರು ಬಳಸಿರುವುದು ತನಿಖೆ ವೇಳೆ ಬಯಲಾಗಿದೆ.ವರದಿ: ಪ್ರಿಯಾಂಕ ಗೌಡ, ಬೆಂಗಳೂರು

ಬೆಂಗಳೂರು ಶಾಸಕ ಹ್ಯಾರಿಸ್‌
ಬೆಂಗಳೂರು ಶಾಸಕ ಹ್ಯಾರಿಸ್‌

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್‌.ಎ. ಹ್ಯಾರೀಸ್‌ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಶಾಸಕ ಹ್ಯಾರೀಸ್ ಅವರ ಅಧಿಕೃತ ಪ್ರೋಟೋಕಾಲ್‌ ಸ್ಟಿಕ್ಕರ್‌ ಇರುವ ಕಾರನ್ನು ಬಳಸಿ ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಯು ಕೊಚ್ಚಿ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿರುವುದಾಗಿ ಜಾರಿ ನಿರ್ದೇಶನಾಲಯ ಬುಧವಾರ ತಿಳಿಸಿದೆ.

ಕಾಂಗ್ರೆಸ್ ಶಾಸಕ ಹ್ಯಾರೀಸ್ ಅವರಿಗೆ ಕರ್ನಾಟಕ ವಿಧಾನಸಭೆಯ ಪ್ರೋಟೋಕಾಲ್ ವಿಭಾಗವು ಸ್ಟಿಕ್ಕರ್ ಅನ್ನು ನೀಡಿತ್ತು. ಇಡಿ ಪ್ರಕಾರ, ಈ ಕಾರನ್ನು ಹ್ಯಾರೀಸ್ ಅವರ ಪುತ್ರ ಮತ್ತು ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಮೊಹಮ್ಮದ್ ನಲಪಾಡ್ ಖರೀದಿಸಿದ್ದಾರೆ. ಆದರೆ, ಶಾಸಕರ ನಿಕಟ ಸಂಬಂಧಿ ಮತ್ತು ಅವರ ರಾಜಕೀಯ ಸಹಾಯಕ ನಫೀಹ್ ಮುಹಮ್ಮದ್ ನಾಸರ್ ಹೆಸರಿನಲ್ಲಿ ಕಾರನ್ನು ನೋಂದಾಯಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.

ಒಂಬತ್ತು ಕಡೆಗಳಲ್ಲಿ ಇಡಿ ದಾಳಿ

ಇಡಿ ಕೊಚ್ಚಿ ವಲಯದ ಅಧಿಕಾರಿಗಳು, ಕೊಚ್ಚಿ ನಿವಾಸಿ ಮುಹಮ್ಮದ್ ಹಫೀಜ್ ಮತ್ತು ಇತರರಿಗೆ ಸೇರಿದ ಕರ್ನಾಟಕ, ಕೇರಳ ಮತ್ತು ಗೋವಾದ ಒಂಬತ್ತು ಸ್ಥಳಗಳಲ್ಲಿ ಮಾರ್ಚ್ 14, 15 ಮತ್ತು 16 ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002 ರ ಅಡಿಯಲ್ಲಿ ಶೋಧ ನಡೆಸಿದ್ದರು.

ಹಣ ದುರುಪಯೋಗ, ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡುವುದು, ಮುಂತಾದ ವಂಚನೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕರ್ನಾಟಕ, ಕೇರಳ ಮತ್ತು ಗೋವಾದಲ್ಲಿ ಪೊಲೀಸರು ದಾಖಲಿಸಿದ ಎಫ್‌ಐಆರ್‌ಗಳಲ್ಲಿ ಹಫೀಜ್ ಮತ್ತು ಅವನ ಸಹಚರರನ್ನು ಹೆಸರಿಸಲಾಗಿದೆ.

ಬರೋಬ್ಬರಿ 108.73 ಕೋಟಿ ವರದಕ್ಷಿಣೆ ಪಡೆದಿದ್ದ ಹಫೀಜ್!:

ಅಂದಹಾಗೆ, ಮುಹಮ್ಮದ್ ಹಫೀಜ್ ತನ್ನ ಅತ್ತೆಯಂದಿರಿಂದ ಬರೋಬ್ಬರಿ 108.73 ಕೋಟಿ ರೂಪಾಯಿ ಮೌಲ್ಯದ ವರದಕ್ಷಿಣೆ ಪಡೆದಿದ್ದಾನೆ ಎಂದು ಇಡಿ ಹೇಳಿದೆ. ತಪಾಸಣೆಯ ನಂತರ ಇಡಿ ಅಧಿಕಾರಿಗಳು, 1,672.8 ಗ್ರಾಂ ಚಿನ್ನಾಭರಣಗಳು, ಭಾರತೀಯ ಕರೆನ್ಸಿಯಲ್ಲಿ 12.5 ಲಕ್ಷ ರೂ., ಏಳು ಮೊಬೈಲ್ ಫೋನ್‌ಗಳು ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಡು ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.

ಅಲ್ಲದೆ, ಆರೋಪಿಗಳಿಗೆ ಸೇರಿದ 4.4 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್ ಅಥವಾ ನಿಶ್ಚಿತ ಠೇವಣಿಗಳನ್ನು ಸ್ಥಗಿತಗೊಳಿಸುವಂತೆ ಇಡಿ ಆದೇಶಿಸಿದೆ.

ಇನ್ನು ಇತ್ತೀಚೆಗಷ್ಟೇ ಹ್ಯಾರೀಸ್ ಅವರು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ನಿಗಮ ಮಂಡಳಿ ಅಧ್ಯಕ್ಷರ ಮೊದಲ ಪಟ್ಟಿಯಲ್ಲಿ ಹ್ಯಾರೀಸ್ ಆಯ್ಕೆಯಾಗಿದ್ದರು. ಇವರ ಪುತ್ರ ಮೊಹಮ್ಮದ್ ನಲಪಾಡ್ ಗೆ ಇತ್ತೀಚೆಗಷ್ಟೇ ಹೈಕೋರ್ಟ್ ನಿಂದ ರಿಲೀಫ್ ಸಿಕ್ಕಿದೆ.

ಕಾಂಗ್ರೆಸ್ ಪಕ್ಷದ ಯುವ ಮುಖಂಡ ನಲಪಾಡ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹಲ್ ಗಾಂಧಿ ಅವರನ್ನು ಇಡಿ ವಿಚಾರಣೆ ನಡೆಸಿತ್ತು. ಇದನ್ನು ಖಂಡಿಸಿ ನಗರದ ಕ್ವೀನ್ಸ್ ರಸ್ತೆಯಿಂದ ರಾಜಭವನದ ವರೆಗೂ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಮೊಹಮ್ಮದ್ ಹ್ಯಾರಿಸ್ ನಲಪಾಡ್ ವಿರುದ್ಧ ದೂರು ದಾಖಲಾಗಿತ್ತು. ಇತ್ತೀಚೆಗಷ್ಟೇ ಈ ಪ್ರಕರಣವನ್ನು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿತ್ತು.

(ವರದಿ: ಪ್ರಿಯಾಂಕಗೌಡ, ಬೆಂಗಳೂರು)

ವಿಭಾಗ