ಬಿಜೆಪಿಗೆ ಶೆಟ್ಟರ್ , ಗರಿಗೆದರಿದ ಬೆಳಗಾವಿ ರಾಜಕಾರಣ; ಲಕ್ಷ್ಮಿ ಜಾಗದಲ್ಲಿ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ಸಾಧ್ಯತೆ
Karnataka politics ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಿದ್ದಾರೆ. ಇವರೊಂದಿಗೆ ಬಿಜೆಪಿ ತೊರೆದಿದ್ದ ಮಾಜಿ ಸಚಿವ ಲಕ್ಷ್ಮಣ ಸವದಿ ಅವರನ್ನು ಸೆಳೆಯುವ ಪ್ರಯತ್ನಗಳೂ ನಡೆದಿವೆ. ಬೆಳಗಾವಿ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗುವ ಸೂಚನೆಯನ್ನು ಇದು ನೀಡಿದೆ.
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ತಮ್ಮ ನೆಚ್ಚಿನ ಹುಬ್ಬಳ್ಳಿ ಕ್ಷೇತ್ರದಿಂದ ಟಿಕೆಟ್ ಸಿಗಲಿಲ್ಲ ಎಂದು ಬೇಸರಗೊಂಡು ನಾಲ್ಕು ದಶಕ ಪಕ್ಷದೊಂದಿಗೆ ಇದ್ದ ಸಂಬಂಧ ಕಡಿದುಕೊಂಡು ಬಿಜೆಪಿ ತೊರೆದು ಕೈ ಹಿಡಿದಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಘರ್ ವಾಪ್ಸಿಯಾಗಿದೆ. ಪಕ್ಷದ ಒಳಗೆ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಚಟುವಟಿಕೆಗಳು ಈಗ ಶೆಟ್ಟರ್ ಅವರನ್ನು ಪಕ್ಷಕ್ಕೆ ಮರಳಿ ತರುವ ಮೂಲಕ ಒಂದು ಹಂತಕ್ಕೆ ತಲುಪಿವೆ. ಅವರೊಂದಿಗೆ ಪಕ್ಷ ತೊರೆದಿದ್ದ ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ಲಕ್ಷ್ಮಣ ಸವದಿ ಅವರನ್ನು ಕರೆ ತರುವ ಪ್ರಯತ್ನಗಳು ಮುಂದುವರಿದಿವೆ ಎನ್ನುವ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರತೊಡಗಿವೆ.
ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ನಡುವೆ ರಾಜಕೀಯ ಚಟುವಟಿಕೆಗಳೂ ಕರ್ನಾಟಕದಲ್ಲಿ ಭಿನ್ನ ಸ್ವರೂಪ ಪಡೆಯುತ್ತಿವೆ. ಈವರೆಗೂ ಕಾಂಗ್ರೆಸ್‌ಗೆ ಹಲವು ಮುಖಂಡರು ಬರುತ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿದ್ದವಾದರೂ ಬಿಜೆಪಿ ಶೆಟ್ಟರ್ ಅವರನ್ನು ಮರಳಿಗೆ ಮನೆಗೆ ಕರೆ ತರುವ ಮೂಲಕ ತಿರುಗೇಟನ್ನೇ ನೀಡಿದೆ. ಲಕ್ಷ್ಮಣ ಸವದಿ ವಿಚಾರದಲ್ಲೂ ಚರ್ಚೆಗಳು ನಡೆದಿದ್ದು, ಇಲ್ಲಿಯೂ ಸಾಕಷ್ಟು ರಾಜಕೀಯ ಬೆಳವಣಿಗೆ ಆಗುವ ಲಕ್ಷಣಗಳಿವೆ.
ಅದರಲ್ಲೂ ಬೆಳಗಾವಿ ಕೇಂದ್ರಿತ ರಾಜಕಾರಣ ಈಗ ಜೋರಾಗಿಯೇ ನಡೆದಿದೆ. ಇದರಿಂದ ಬೆಳಗಾವಿ ಮಾತ್ರವಲ್ಲದೇ ಉತ್ತರ ಕರ್ನಾಟಕ ಭಾಗದಲ್ಲೂ ಸಾಕಷ್ಟು ರಾಜಕೀಯ ಬದಲಾವಣೆಗಳು ಆಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಶೆಟ್ಟರ್ ಘರ್ ವಾಪ್ಸಿ ಪರಿಣಾಮ ಏನಾಗಬಹುದು
- ಜಗದೀಶ್ ಶೆಟ್ಟರ್ ಅವರ ಬೀಗರಾದ ಹಾಲಿ ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಅವರನ್ನು ಬದಲಿಸಬಹುದು. ಮಂಗಳಾ ಅವರ ಬದಲು ಪುತ್ರಿಗೆ ಟಿಕೆಟ್ ಕೇಳುತ್ತಿದ್ದಾರೆ. ಮಂಗಳಾ ಅಂಗಡಿ ಪುತ್ರಿ ಜಗದೀಶ್ ಶೆಟ್ಟರ್ ಪತ್ನಿ. ಅವರ ಜಾಗದಲ್ಲಿ ಜಗದೀಶ್ ಶೆಟ್ಟರ್ ಅವರನ್ನೇ ಅಭ್ಯರ್ಥಿಯಾಗಿಸಬಹುದು. ಬೆಳಗಾವಿ ಜಿಲ್ಲೆಯಲ್ಲಿ ಮಿತಿ ಮೀರಿರುವ ಭಿನ್ನಮತವನ್ನು ಈ ಮೂಲಕ ನಿಯಂತ್ರಿಸಬಹುದು
- ಧಾರವಾಡ ಸಹಿತ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶೆಟ್ಟರ್ ಪ್ರಭಾವವಿದೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ಬಿಜೆಪಿ ಮತ ಚದುರದಂತೆ ನೋಡಿಕೊಳ್ಳುವುದು.
- ಧಾರವಾಡದಲ್ಲೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಈ ಬಾರಿ ತೊಂದರೆಯಾಗುವ ಸಾಧ್ಯತೆಗಳು ಅಧಿಕವಾಗಿದ್ದವು. ಅದರಲ್ಲೇ ಶೆಟ್ಟರ್ ಬಣ ಅವರನ್ನು ಸೋಲಿಸಲು ಸಿದ್ದತೆ ಮಾಡಿಕೊಂಡಿತ್ತು. ಈಗ ಪರಿಸ್ಥಿತಿ ಕೊಂಚ ಬದಲಾಗಬಹುದು
- ಈಗಾಗಲೇ ಬೆಳಗಾವಿಯ ಮತ್ತೊಬ್ಬ ನಾಯಕ ಲಕ್ಷ್ಮಣ ಸವದಿ ಅವರೂ ಬಿಜೆಪಿ ಬಿಟ್ಟು ಕಾಂಗ್ರೆಸ್‌ನಿಂದ ಅಥಣಿ ಶಾಸಕ. ಅವರಿಗೂ ಸಚಿವ ಸ್ಥಾನ ಸಿಗದ ಬೇಸರವಿದೆ. ಶೆಟ್ಟರ್ ರೀತಿಯಲ್ಲಿ ಅವರನ್ನೂ ಪಕ್ಷಕ್ಕೆ ಸೆಳೆಯುವ ಪ್ರಯತ್ನಗಳು ಒಳಗೊಳಗೆ ನಡೆದಿವೆ. ಇದು ಇನ್ನಷ್ಟು ಬಿರುಸಾಗಬಹುದು
- ಈಗಾಗಲೇ ಬೆಳಗಾವಿಯಲ್ಲಿ ಮುಂದಿನ ಲೋಕಸಭೆ ಚುನಾವಣೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ಅನಧಿಕೃತವಾಗಿ ಹಂಚಿಕೆಯಾಗಿದೆ. ಬೆಳಗಾವಿ ಕ್ಷೇತ್ರ ಡಿಕೆಶಿ ಬಣದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಕಡೆಯವರಿಗಾದರೆ, ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಣದ ಸಚಿವ ಸತೀಶ್ ಜಾರಕಿಹೊಳಿ ಅವರ ಕಡೆಯವರಿಗೆ ಎನ್ನುವ ರೀತಿ ಆಂತರಿಕ ಒಪ್ಪಂದಗಳಾಗಿವೆ. ಶೆಟ್ಟರ್ ಇಲ್ಲಿಂದಲೇ ಸ್ಪರ್ಧೆ ಮಾಡಿದರೆ ಲೆಕ್ಕಾಚಾರ ಯಾವ ರೀತಿ ಇರಲಿದೆ ಎನ್ನುವ ಕುತೂಹಲವೂ ಇರಲಿದೆ
- ಲಕ್ಷ್ಮಣ ಸವದಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಸಚಿವ ಸ್ಥಾನ ನೀಡಬೇಕು ಎನ್ನುವ ಸನ್ನಿವೇಶ ಎದುರಾದರೆ ಲಕ್ಷ್ಮಿ ಬದಲು ಲಕ್ಷ್ಮಣ ಎನ್ನುವ ಸೂತ್ರವೂ ಸಿದ್ದವಾಗಬಹುದು. ಆಗ ಲೋಕಸಭೆಗೆ ಲಕ್ಷ್ಮಿ ಹೆಬ್ಬಾಳಕರ್ ಇಲ್ಲವೇ ಅವರ ಪುತ್ರಗೆ ಟಿಕೆಟ್ ಸಿಗಬಹುದು.
- ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರು ಬಿಜೆಪಿ ಬಿಡುವ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪಾತ್ರವೂ ಇತ್ತು ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಈಗ ಅವರ ಸಮ್ಮುಖದಲ್ಲೇ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದ್ದು, ಹೊಸ ಸಂದೇಶವನ್ನೂ ವರಿಷ್ಠರು ಈ ಮೂಲಕ ರವಾನಿಸುವ ಸಾಧ್ಯತೆಗಳಿವೆ.