KSRTC News: ಮಹಾಶಿವರಾತ್ರಿಗೆ 1,500 ಹೆಚ್ಚುವರಿ ವಿಶೇಷ ಬಸ್‌ ನೀಡಲು ಮುಂದಾದ ಕೆಎಸ್‌ಆರ್‌ಟಿಸಿ, ಎಲ್ಲೆಲ್ಲಿ ಸೇವೆ
ಕನ್ನಡ ಸುದ್ದಿ  /  ಕರ್ನಾಟಕ  /  Ksrtc News: ಮಹಾಶಿವರಾತ್ರಿಗೆ 1,500 ಹೆಚ್ಚುವರಿ ವಿಶೇಷ ಬಸ್‌ ನೀಡಲು ಮುಂದಾದ ಕೆಎಸ್‌ಆರ್‌ಟಿಸಿ, ಎಲ್ಲೆಲ್ಲಿ ಸೇವೆ

KSRTC News: ಮಹಾಶಿವರಾತ್ರಿಗೆ 1,500 ಹೆಚ್ಚುವರಿ ವಿಶೇಷ ಬಸ್‌ ನೀಡಲು ಮುಂದಾದ ಕೆಎಸ್‌ಆರ್‌ಟಿಸಿ, ಎಲ್ಲೆಲ್ಲಿ ಸೇವೆ

Shivaratri2024 ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ( KSRTC) ಕರ್ನಾಟಕದ ಪ್ರಮುಖ ನಗರಗಳು, ಹೊರ ರಾಜ್ಯದ ನಗರಗಳಿಗೂ ವಿಶೇಷ ಬಸ್‌ ಸೇವೆ ಒದಗಿಸಲಿದೆ.

ಶಿವರಾತ್ರಿ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಒದಗಿಸಲಿದೆ.
ಶಿವರಾತ್ರಿ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಒದಗಿಸಲಿದೆ.

ಬೆಂಗಳೂರು: ಬಿರು ಬೇಸಿಗೆ ನಡುವೆಯೂ ಮಹಾಶಿವರಾತ್ರಿ ಆಚರಣೆಗೆ ಸಿದ್ದತೆಗಳು ಜೋರಾಗಿ ನಡೆದಿವೆ. ಈ ವಾರಾಂತ್ಯದಲ್ಲಿ ಶಿವರಾತ್ರಿ ಹಬ್ಬ. ಶನಿವಾರ ಹಾಗೂ ಭಾನುವಾರವೂ ರಜೆ ಇರುವ ಕಾರಣಕ್ಕೆ ಹೆಚ್ಚು ಜನ ಊರುಗಳಿಗೆ ಹೋಗುವ ಸಾಧ್ಯತೆ ಇದೆ. ಅಲ್ಲದೇ ಶಕ್ತಿ ಯೋಜನೆಯಿಂದಾಗಿ ಪ್ರವಾಸಕ್ಕೆ ಹೋಗುವವರ ಪ್ರಮಾಣವೂ ನಿರೀಕ್ಷೆ ಮೀರಿ ಹೆಚ್ಚಲಿದೆ. ಈ ಒತ್ತಡವನ್ನು ತಪ್ಪಿಸುವ ನಿಟ್ಟಿನಲ್ಲಿ ಕರ್ನಾಟಕರಸ್ತೆ ಸಾರಿಗೆ ಸಂಸ್ಥೆಯು ಪ್ರಮುಖ ನಗರಗಳಿಗೆ ಹೆಚ್ಚುವರಿ ಬಸ್‌ ಸೇವೆ ನೀಡಲು ಮುಂದಾಗಿದೆ. ಇದಕ್ಕಾಗಿ ಅಂದಾಜು 1,500 ವಿಶೇಷ ಬಸ್‌ಗಳನ್ನು ಸಂಚಾರಕ್ಕೆ ಒದಗಿಸಲಿದ್ದು. ಮಾರ್ಚ್‌ 7ರ ರಾತ್ರಿಯಿಂದಲೇ ಈ ಬಸ್‌ಗಳು ಸೇವೆ ಒದಗಿಸಲಿವೆ.

ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ, ಗೋಕರ್ಣ, ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ, ತುಮಕೂರು ಜಿಲ್ಲೆಯ ಯಡಿಯೂರು, ಮೈಸೂರು ಜಿಲ್ಲೆಯ ನಂಜನಗೂಡು ಶ್ರೀಕಂಠೇಶ್ವರ, ವಿಜಯಪುರ ನಗರದ ಶಿವದೇವಾಲಯಗಳಿವೆ. ಇದಲ್ಲದೇ ಇನ್ನೂ ಹಲವು ಕಡೆ ಶಿವನ ದೇಗುಗಳಿವೆ. ಶಿವರಾತ್ರಿ ಹಬ್ಬ ಆಚರಣೆಗೆ ಹೆಚ್ಚಿನ ಮಂದಿ ದೇಗುಲ ದರ್ಶನಕ್ಕೆ ಮುಂದಾಗಬಹುದು. ಇದಕ್ಕಾಗಿಯೇ ವಿಶೇಷ ಬಸ್‌ಗಳು ಜನರಿಗೆ ಸೇವೆ ನೀಡಲಿವೆ

ಮಾರ್ಚ್ 8 ಮಹಾಶಿವರಾತ್ರಿ ಹಾಗು 9 ಮತ್ತು 10 ವಾರಾಂತ್ಯ ದಿನಗಳಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಚ್ 7ರಿಂದ 10ರವರೆಗೆ ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ನಂತರ ಹಬ್ಬ ಮತ್ತು ವಾರಾಂತ್ಯದ ರಜೆ ಮುಗಿಸಿ ರಾಜ್ಯದ ವಿವಿಧ ಭಾಗ ಮತ್ತು ಹೊರರಾಜ್ಯಗಳಿಂದ ಬೆಂಗಳೂರಿಗೆ ಮರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಚ್ 10 ಮತ್ತು 11ರಂದು ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಎಲ್ಲಾ ವಿಭಾಗ, ಡಿಪೋಗಳಿಗೂ ಅಲ್ಲಿನ ಅಗತ್ಯಕ್ಕೆ ತಕ್ಕುನಾಗಿ ಬಸ್‌ ಸೇವೆ ಒದಗಿಸುವಂತೆ ಸೂಚಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿಗೆ ಬಸ್‌ ಉಂಟು

ಕೆಂಪೇಗೌಡ ಬಸ್​ ನಿಲ್ದಾಣದಿಂದ ಶೃಂಗೇರಿ, ಹೊರನಾಡು, ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಭಟ್ಕಳ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ದಾವಣಗೆರೆ, ಬಾಗಲಕೋಟೆ, ವಿಜಯಪುರ, ಗೋಕರ್ಣ, ಕಲಬುರಗಿ, ಶಿರಸಿ, ಕಾರವಾರ, ರಾಯಚೂರು, ಬಳ್ಳಾರಿ, ಕೊಪ್ಪಳ, ಬೀದರ್ ನಗರಗಳಿವೆ ಹೆಚ್ಚುವರಿ ಬಸ್‌ಗಳು ಹೊರಡಲಿವೆ. ಇದಲ್ಲದೇ ಹೊರ ರಾಜ್ಯದ ತಿರುಪತಿ, ವಿಜಯವಾಡ, ಹೈದರಾಬಾದ್​, ಸಹಿತ ಹಲವು ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ ​ಗಳನ್ನು ಓಡಿಸಲಾಗುವುದು. ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಬಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಯಿಕೋಡ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಒದಗಿಸಲಾಗುತ್ತದೆ. ಗುರುವಾರ ಸಂಜೆಯಿಂದಲೇ ಬಸ್‌ಗಳು ಹೊರಡಲಿವೆ ಎಂದು ವಿವರಿಸಿದ್ದಾರೆ.

ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಕಲಬುರಗಿ, ಶಿವಮೊಗ್ಗ, ಮಂಗಳೂರಿನಿಂದಲೂ ಬೇಡಿಕೆ ನೋಡಿಕೊಂಡು ವಿಶೇಷ ಬಸ್‌ಗಳ ಸಂಚಾರ ಇರಲಿದೆ. ಇದನ್ನು ಆಯಾ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಣಯಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮುಂಗಡ ಬುಕ್ಕಿಂಗ್‌

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೆಟ್​ಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್ ಅಪ್ ಪಾಯಿಂಟ್‌ ನ ವಿವರವನ್ನು ಗಮನಿಸಿಕೊಳ್ಳಿಬೇಕು ಎಂದು ಕೆಎಸ್‌ಆರ್‌ಟಿಸಿ ಸೂಚನೆ ನೀಡಿದೆ.

ಇ-ಟಿಕೆಟ್​ ಬುಕಿಂಗ್‌ ಅನ್ನು www.ksrtc.karnataka.gov.in ವೆಬ್‌ ಸೈಟ್ ಮುಖಾಂತರ ಮಾಡಬಹುದು. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದಲ್ಲಿ ಶೇ. 5ರಷ್ಟು ರಿಯಾಯಿತಿ ಸಿಗಲಿದೆ. ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್​ ಅನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ.10ರಷ್ಟು ರಿಯಾಯಿತಿ ಇರಲಿದೆ.

ಕರ್ನಾಟಕ ಹಾಗೂ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್‌ಗಳಿದ್ದು, ಇವುಗಳ ಮೂಲಕ ಸಹ ಮುಂಗಡವಾಗಿ ಆಸನಗಳನ್ನು ನಿಗಮದ ಸಾರಿಗೆಗಳಿಗೆ ಕಾಯ್ದಿರಿಸಬಹುದಾಗಿದೆ ಎಂದು ಕೆಎಸ್​ ಆರ್ ​ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಾರ್ಯಾಚರಣೆಗಿಳಿಯುವ ಹೆಚ್ಚುವರಿ ಸಾರಿಗೆಗಳು, ಅವುಗಳು ಹೊರಡುವ ಸ್ಥಳ ಹಾಗೂ ವೇಳಾ ವಿವರಗಳನ್ನು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅಂತರ್‌ ಜಾಲ ವ್ಯವಸ್ಥೆಯಲ್ಲಿ ಹಾಗೂ ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ಮಾಹಿತಿಗಾಗಿ ಒದಗಿಸಲಾಗಿದೆ.

ಹೆಚ್ಚುವರಿ ಸಾರಿಗೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಾಯ್ದಿರಿಸುವ ಮುಂಗಡ ಚೀಟಿಗಳಲ್ಲೂ ಕೂಡ ವಾಹನ ಹೊರಡುವ ಸ್ಥಳದ ವಿವರ ತಿಳಿಸಲಾಗಿದೆ.

ಅಲ್ಲದೇ, ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿನ ಎಲ್ಲಾ ತಾಲ್ಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕನುಗುಣವಾಗಿ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ತಿಳಿಸಿದೆ.

Whats_app_banner