ಕನ್ನಡ ಸುದ್ದಿ  /  ಕರ್ನಾಟಕ  /  Bangalore News: 1896 ರಲ್ಲೇ ಬೆಂಗಳೂರಿಗೆ ಅರ್ಕಾವತಿ ನದಿ ನೀರನ್ನು ಹರಿಸಿದ್ದ ಸೋಲದೇವನಹಳ್ಳಿ ಪಂಪ್‌ ಸ್ಟೇಷನ್‌ ಪುನಃಶ್ಚೇತನ

Bangalore News: 1896 ರಲ್ಲೇ ಬೆಂಗಳೂರಿಗೆ ಅರ್ಕಾವತಿ ನದಿ ನೀರನ್ನು ಹರಿಸಿದ್ದ ಸೋಲದೇವನಹಳ್ಳಿ ಪಂಪ್‌ ಸ್ಟೇಷನ್‌ ಪುನಃಶ್ಚೇತನ

ಬೆಂಗಳೂರಿನ ನೀರು ಸಮಸ್ಯೆ ಬಗೆಹರಿಸಲು ಜಲಮಂಡಳಿ(BWSSB) ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ ಸೋಲದೇವನಹಳ್ಳಿ ಪಂಪ್‌ ಸ್ಟೇಷನ್‌ ಪುನಶ್ಚೇತನ ಚಟುವಟಿಕೆಯೂ ಒಂದು.ವರದಿ: ಎಚ್.ಮಾರುತಿ, ಬೆಂಗಳೂರು

ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌.
ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌.

ಬೆಂಗಳೂರು: ಒಂದೂ ಕಾಲು ಶತಮಾನಗಳ ಹಿಂದೆಯೇ ಬೆಂಗಳೂರಿಗೆ ಅಂದರೆ 1896 ರಲ್ಲೇ ಅರ್ಕಾವತಿ ನದಿ ನೀರನ್ನು ಹರಿಸಿದ್ದ ಐತಿಹಾಸಿಕ ಸೋಲದೇವನಹಳ್ಳಿ ಪಂಪ್‌ ಸ್ಟೇಷನ್‌ ಪುನಃಶ್ಚೇತನಗೊಳಿಸುವ ಐತಿಹಾಸಿಕ ನಿರ್ಧಾರವನ್ನುಬೆಂಗಳೂರು ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ( BWSSB) ಕೈಗೊಂಡಿದೆ. ಆ ಕಾಲದಲ್ಲಿಯೇ ದೇಶದಲ್ಲೇ ಮೊದಲ ಬಾರಿಗೆ ವ್ಯವಸ್ಥಿತವಾದ ನೀರು ಸರಬರಾಜು ವ್ಯವಸ್ಥೆಯನ್ನು ಹೊಂದಿದ ಎರಡನೇ ನಗರ ಬೆಂಗಳೂರು. 1873 ರಲ್ಲಿ ಮೊದಲ ಬಾರಿಗೆ ಮಿಲ್ಲರ್ಸ್‌ ಟ್ಯಾಂಕ್ಸ್‌ ಎಂದು ಹೆಸರು ಪಡೆದಂತಹ ಹಲವಾರು ಕೆರೆಗಳ ಜಾಲದ ಮೂಲಕ ಬೆಂಗಳೂರು ನಗರಕ್ಕೆ ನೀರು ಪೂರೈಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. 1875-77 ರ ತೀವ್ರ ಕ್ಷಾಮದಿಂದ ಎರಡೂವರೆ ವರ್ಷಗಳ ಕಾಲ ಮಳೆ ಇಲ್ಲದೆ ಎಲ್ಲಾ ಜಲಮೂಲಗಳು ಬತ್ತಿ ಹೋಗಿದ್ದವು. ಆನಂತರ ನೀರಿನ ಸಮಸ್ಯೆ ಬೆಂಗಳೂರಿಗೆ ಆಗಾಗ ಕಾಡಿದರೂ ಈಗಿನಷ್ಟು ಕಾಡಿರಲಿಲ್ಲ.

ಟ್ರೆಂಡಿಂಗ್​ ಸುದ್ದಿ

ಈ ಕಾರಣದಿಂದಲೇ ಜಲಮಂಡಳಿ ಎಲ್ಲಾ ಕ್ರಮಗಳನ್ನು ಕೈಗೊಂಡು ಬೆಂಗಳೂರಿಗರಿಗೆ ನೀರು ಕೊಡಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿಯೇ ಹಳೆಯ ಪಂಪ್‌ಸ್ಟೇಷನ್‌ಗಳ ಪುನಶ್ಚೇತನ, ಅದರಿಂದ ಹೆಚ್ಚುವರಿ ನೀರು ಬಳಕೆ ಹಾಗೂ ಎಲ್ಲಾ ಪಂಪಿಂಗ್‌ ಸ್ಟೇಷನ್‌ಗಳನ್ನು ಸುಸ್ಥಿತಿಯಲ್ಲಿಡುವುದು ಮಂಡಳಿ ಉದ್ದೇಶ. ಈ ಹಿನ್ನೆಲೆಯಲ್ಲಿ ಜಲಮಂಡಳಿ ಅಧ್ಯಕ್ಷ ಡಾ.ರಾಮಪ್ರಸಾತ್‌ ಮನೋಹರ್‌ ಹಾಗೂ ಅಧಿಕಾರಿಗಳ ತಂಡ ಸೋಲದೇವನಹಳ್ಳಿ ಪಂಪಿಂಗ್‌ ಕೇಂದ್ರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದೆ. ಅಲ್ಲದೇ ತುರ್ತಾಗಿ ಏನು ಕ್ರಮ ಕೈಗೊಂಡು ಈ ಕೇಂದ್ರವನ್ನು ಬಳಕೆ ಮಾಡಿಕೊಳ್ಳಬಹುದು ಎನ್ನುವ ಕುರಿತು ಪರಿಶೀಲಿಸುವಂತೆಯೇ ಸೂಚನೆಯನ್ನು ಅಧಿಕಾರಿಗಳಿಗೆ ನೀಡಲಾಗಿದೆ.

ಹಳೆಯ ಯೋಜನೆ

ಬೆಳೆಯುತ್ತಿರುವ ನಗರದ ನೀರಿನ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಅಂದಿನ ಮೈಸೂರು ರಾಜರ ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್‌ ಅವರು, ಹೆಸರುಘಟ್ಟ ಕೆರೆಯ ಮೂಲಕ ಅರ್ಕಾವತಿ ನದಿಯ ನೀರನ್ನ ಬೆಂಗಳೂರಿಗೆ ಹರಿಸುವ ಚಿಂತನೆ ನಡೆಸಿದರು. ಚಾಮರಾಜೇಂದ್ರ ವಾಟರ್‌ ವರ್ಕ್ಸ್‌ ಎಂದು ಇದಕ್ಕೆ ಹೆಸರಿಡಲಾಗಿತ್ತು. ಐತಿಹಾಸಿಕ ಕ್ಷಾಮದಿಂದ ಬಳಲಿದ್ದ ನಗರಕ್ಕೆ ನೀರು ಹರಿಸಲು ಸೋಲದೇವನಹಳ್ಳಿಯಲ್ಲಿ 1896 ರಲ್ಲಿ ಸ್ಥಾಪಿತವಾದ ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌ ಇಂದಿಗೂ ಇದಕ್ಕೆ ಸಾಕ್ಷಿಯಾಗಿ ನಿಂತಿದೆ.

ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌ ಪುನಃಶ್ಚೇತನಕ್ಕೆ ಜಲಮಂಡಳಿ ಚಿಂತನೆ

ಭೀಕರ ಕ್ಷಾಮದಿಂದ ಬಳಲಿದ್ದ ಬೆಂಗಳೂರು ನಗರಕ್ಕೆ ನೀರು ಹರಿಸಿದ್ದ ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌ ನಿಂದ 1896 ರಲ್ಲಿ ನೀರು ಹರಿಸಿದಂತೆ ಹೆಸರಘಟ್ಟ ಕೆರೆಯಿಂದ ಮತ್ತೆ ನಗರಕ್ಕೆ ನೀರು ಹರಿಸಲು ಜಲಮಂಡಳಿ ಚಿಂತನೆ ನಡೆಸುತ್ತಿದೆ. ಸದ್ಯ ಹೆಸರಘಟ್ಟ ಕೆರೆಯಲ್ಲಿ ಸುಮಾರು 0.3 ಟಿಎಂಸಿ ಯಷ್ಟು ನೀರು ಲಭ್ಯವಿದೆ.

ಇದಕ್ಕೆ ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌ ನಲ್ಲಿ ಅಗತ್ಯ ಟ್ರೀಟ್‌ಮೆಂಟ್‌ ನೀಡಿ, ಎಂ.ಇ.ಐ ಲೇಔಟ್‌ನಲ್ಲಿರುವ ಜಲಸಂಗ್ರಾಹಾರಕ್ಕೆ ಪಂಪ್‌ ಮಾಡಲಾಗುವುದು. ಇಲ್ಲಿನಿಂದ ಅಗತ್ಯವಿರುವಂತಹ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವುದು ಇದರ ಉದ್ದೇಶವಾಗಿದೆ.

ಏಪ್ರಿಲ್‌ 20 ರೊಳಗೆ ಸಿದ್ದತೆ ಪೂರ್ಣಗೊಳಿಸಲು ಸೂಚನೆ

ಹೆಸರಘಟ್ಟ ಕೆರೆಗೆ ಹಾಗೂ ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌ನ 125 ವರ್ಷಗಳ ಹಿಂದಿನ ತಾಂತ್ರಿಕತೆ ಅಚ್ಚರಿ ಮೂಡಿಸುತ್ತದೆ.

ಈ ಪಂಪಿಂಗ್‌ ಸ್ಟೇಷನ್‌ ನಲ್ಲಿರುವಂತಹ ಅನುಕೂಲತೆಗಳ ಬಗ್ಗೆ ಹಾಗೂ ನೀರು ಸರಬರಾಜಿಗೆ ಇಲ್ಲಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದ ಜಲ ಮಂಡಳಿ ಅಧ್ಯಕ್ಷ ಡಾ. ವಿ ರಾಮ್‌ ಪ್ರಸಾತ್‌ ಮನೋಹರ್‌ ಏಪ್ರಿಲ್‌ 20 ರ ಒಳಗಾಗಿ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

(ವರದಿ: ಎಚ್. ಮಾರುತಿ, ಬೆಂಗಳೂರು)

IPL_Entry_Point