ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ತಮಿಳುನಾಡಿನಲ್ಲಿ ಗುಂಡು ತಗುಲಿ ಬೆಂಗಳೂರಿನ ಯೋಧ ಸಾವು

Bangalore News: ತಮಿಳುನಾಡಿನಲ್ಲಿ ಗುಂಡು ತಗುಲಿ ಬೆಂಗಳೂರಿನ ಯೋಧ ಸಾವು

ಬೆಂಗಳೂರು ಮೂಲದ ಯೋಧರೊಬ್ಬರು ಆಕಸ್ಮಿಕ ಗುಂಡು ತಗುಲಿ ಮೃತಪಟ್ಟಿದ್ದಾರೆ. ಇದಲ್ಲದೇ ಬೆಂಗಳೂರು ವಿವಿಧ ಠಾಣೆಗಳಲ್ಲಿ ಅಪರಾಧಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿವೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಬೆಂಗಳೂರು ಅಪರಾಧ ಪ್ರಕರಣ ವಿವರ.
ಬೆಂಗಳೂರು ಅಪರಾಧ ಪ್ರಕರಣ ವಿವರ.

ಬೆಂಗಳೂರು: ತಮಿಳುನಾಡಿನ ಚೆನ್ನೈ ನ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೆಂಗಳೂರಿನ ಯೋಧರೊಬ್ಬರು ಗುಂಡು ತಗುಲಿ ಮೃತ ಪಟ್ಟಿರುವ ಘಟನೆ ವರದಿಯಾಗಿದೆ.ಮೃತ ಯೋಧ 37 ವರ್ಷದ ರವಿಕಿರಣ್ ಅವರು ಶನಿವಾರ ಕಲ್ಪಾಕ್ಕಂನಿಂದ ತಮ್ಮ ಸ್ವಂತ ಬೆಂಗಳೂರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆದರೂ ಈ ಅವಘಡ ಕುರಿತು ಅನುಮಾನ ಉಂಟಾಗಿದೆ. ರವಿಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಆಕಸ್ಮಿಕವಾಗಿ ಗುಂಡು ತಗುಲಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಘಟನೆ ನಡೆದಾಗ ಅಲ್ಲಿ ಇದ್ದ ಶಸ್ತ್ರಾಸ್ತ್ರದ ಹಾಲಿ ಪರಿಸ್ಥಿತಿಯ ಬಗ್ಗೆ ವರದಿ ಬಂದ ನಂತರ ರವಿಕಿರಣ್ ಸಾವಿಗೆ ಕಾರಣ ಏನೆಂದು ತಿಳಿದು ಬರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಮಾಷೆಗಾಗಿ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಆತಂಕ ಸೃಷ್ಟಿಸಿದ ವಿಮಾನ ಪ್ರಯಾಣಿಕ

ತಮಾಷೆಗಾಗಿ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿ ಆತಂಕ ಸೃಷ್ಟಿ ಮಾಡಿದ ಪ್ರಯಾಣಿಕನೊಬ್ಬನನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿರುವ ಘಟನೆ ಬೆಂಗಳೂರಿನ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ವಿಮಾನ ನಿಲ್ದಾಣದ ಟರ್ಮಿನಲ್ - 2 ರಲ್ಲಿ ಚೆಕ್ ಇನ್ ಮಾಡುತ್ತಿದ್ದ ಸಂದರ್ಭದಲ್ಲಿ ರಾಜೇಶ್ ಕುಮಾರ್ ಎಂಬ ಪ್ರಯಾಣಿಕನೊಬ್ಬ ತನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಗಲಾಟೆ ಮಾಡಿ ಆತಂಕ ಸೃಷ್ಟಿಸಿದ್ದಾನೆ. ಇದರಿಂದ ಅಲ್ಲಿ ಸ್ವಲ್ಪ ಹೊತ್ತು ಗೊಂದಲ ಉಂಟಾಗಿತ್ತು.

ಪುಣೆಗೆ ಹೊರಟಿದ್ದ ಹರಿಯಾಣದ ರಾಜೇಶ್ ಕುಮಾರ್ ಟರ್ಮಿನಲ್-2ರಲ್ಲಿ ಚೆಕ್ ಇನ್ ಮಾಡುವಾಗ ತನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾನೆ.ಇದರಿಂದ ಗಾಬರಿಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಆತನ ಬ್ಯಾಗ್ ಅನ್ನು ಆತುರಾತುರವಾಗಿ ಪರಿಶೀಲಿಸಿದ್ದಾರೆ.

ಆದರೆ ಬ್ಯಾಗ್‌ನಲ್ಲಿ ಗಾಬರಿಗೊಳ್ಳುವಂತಹ ಯಾವುದೇ ವಸ್ತು ಕಂಡು ಬರಲಿಲ್ಲ. ಕೂಡಲೇ ಸಿಬ್ಬಂದಿ ರಾಜೇಶ್ ಕುಮಾರ್ ನನ್ನು ವಿಮಾನ ನಿಲ್ದಾಣ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ನಂತರ ತಮಾಷೆಗಾಗಿ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಸುಳ್ಳು ಹೇಳಿದೆ ಎಂದು ರಾಜೇಶ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಕೊನೆಗೆ ಆತನನ್ನು ಠಾಣಾ ಜಾಮೀನಿನ ಮೇಲೆ ಪೊಲೀಸರು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಬಂಧನ

ಅಂತಾರಾಷ್ಟ್ರೀಯ ಮಾದಕವಸ್ತು ಜಾಲದಲ್ಲಿ ಭಾಗಿಯಾಗಿದ್ದ ಕಾಂಗೊ ದೇಶದ ಪ್ರಜೆಯನ್ನು ಕೇರಳದ ಎರ್ನಾಕುಲಂ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಕೇರಳದ ಅಂಗಾಮಲೈ ಎಂಬ ಪಟ್ಟಣದಲ್ಲಿ ಮಾದಕವಸ್ತು ದಂಧೆಯಲ್ಲಿ ತೊಡಗಿದ್ದ ವಿಪಿನ್ ಎಂಬಾತನನ್ನು ಕಳೆದ ತಿಂಗಳು ಬಂಧಿಸಲಾಗಿತ್ತು.

ವಿಪಿನ್‌ ಚಟುವಟಿಕೆಗಳನ್ನು ಕುರಿತು ತನಿಖೆ ನಡೆಸಿದಾಗ ಈತ ಕಾಂಗೊ ದೇಶದ ಪ್ರಜೆ ರೆಂಗಾರ ಪೌಲ್ ಎಂಬಾತನ ಜೊತೆ ಸಂಪರ್ಕ ಹೊಂದಿರುವ ಸಂಗತಿ ತಿಳಿದು ಬಂದಿತ್ತು.

ಬೆಂಗಳೂರಿನಲ್ಲಿ 2014ರಿಂದ ವಿದ್ಯಾರ್ಥಿ ವೀಸಾದಲ್ಲಿ ನೆಲೆಸಿದ್ದ ಪೌಲ್ ಶಿಕ್ಷಣ ವನ್ನು ನಿಲ್ಲಿಸಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈತ ಡ್ರಗ್ ಪೆಡ್ಲರ್ ಗಳ ನಡುವೆ ಕ್ಯಾಪ್ಟನ್ ಎಂದು ಗುರುತಿಸಿಕೊಂಡಿದ್ದ. ಕೇರಳಕ್ಕೆ ಮಾದಕವಸ್ತು ಸಾಗಣೆ ಮಾಡುತ್ತಿರುವವರಲ್ಲಿ ಪೌಲ್ ಪ್ರಮುಖನಾಗಿದ್ದ. ಅಲ್ಲದೆ ಕುಕ್ ಎಂಬ ಹೆಸರಿನ ಮಾದಕವಸ್ತುವನ್ನು ತಯಾರಿಸುತ್ತಿದ್ದ. ಈ ಡ್ರಗ್ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತಿತ್ತು ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.

(ವರದಿ: ಎಚ್.‌ಮಾರುತಿ. ಬೆಂಗಳೂರು)

ಟಿ20 ವರ್ಲ್ಡ್‌ಕಪ್ 2024