Bangalore News: ಬೆಂಗಳೂರಲ್ಲಿ ಹೆಚ್ಚಿದ ಬೌಬೌ ಕಡಿತ ಪ್ರಕರಣ, ಬೀದಿ ನಾಯಿ ನಿಯಂತ್ರಿಸುವುದನ್ನೇ ಮರೆತ ಬಿಬಿಎಂಪಿ; ಸಾರ್ವಜನಿಕರ ಆಕ್ರೋಶ-bangalore news stray dog biting cases increased in bangalore as bbmp neglecting to control street dogs mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಲ್ಲಿ ಹೆಚ್ಚಿದ ಬೌಬೌ ಕಡಿತ ಪ್ರಕರಣ, ಬೀದಿ ನಾಯಿ ನಿಯಂತ್ರಿಸುವುದನ್ನೇ ಮರೆತ ಬಿಬಿಎಂಪಿ; ಸಾರ್ವಜನಿಕರ ಆಕ್ರೋಶ

Bangalore News: ಬೆಂಗಳೂರಲ್ಲಿ ಹೆಚ್ಚಿದ ಬೌಬೌ ಕಡಿತ ಪ್ರಕರಣ, ಬೀದಿ ನಾಯಿ ನಿಯಂತ್ರಿಸುವುದನ್ನೇ ಮರೆತ ಬಿಬಿಎಂಪಿ; ಸಾರ್ವಜನಿಕರ ಆಕ್ರೋಶ

Bangalore Stray dogs ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಂತೆ ಬಿಬಿಎಂಪಿಗೆ( BBMP) ಸಾರ್ವಜನಿಕರು ಒತ್ತಾಯಿಸುತ್ತಲೇ ಇದ್ದಾರೆ.ವರದಿ: ಎಚ್. ಮಾರುತಿ, ಬೆಂಗಳೂರು

ಬೆಂಗಳೂರಲ್ಲಿ ಬೀದಿನಾಯಿಗಳ ಉಪಟಳ ಅಧಿಕವಾಗಿದ್ದು.ನಿಯಂತ್ರಣದ ಒತ್ತಾಯ ಕೇಳಿ ಬಂದಿದೆ.
ಬೆಂಗಳೂರಲ್ಲಿ ಬೀದಿನಾಯಿಗಳ ಉಪಟಳ ಅಧಿಕವಾಗಿದ್ದು.ನಿಯಂತ್ರಣದ ಒತ್ತಾಯ ಕೇಳಿ ಬಂದಿದೆ.

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಬೀದಿನಾಯಿಗಳ ಕಾಟ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ದ್ವಿಚಕ್ರ ವಾಹನ ಸವಾರರು, ಶಾಲಾ ಮಕ್ಕಳು, ವಾಕಿಂಗ್‌ ಹೋಗುವವರು ಮತ್ತು ವೃದ್ಧರು ಬೀದಿ ನಾಯಿಗಳ ಹಾವಳಿಗೆ ಬೇಸತ್ತಿದ್ದಾರೆ. ರಾಜಧಾನಿಯ ಉದ್ದಗಲಕ್ಕೂ ಪ್ರತಿಯೊಂದು ಬಡಾವಣೆ, ರಸ್ತೆಯಲ್ಲೂ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಪಕ್ಕದ ರಸ್ತೆಗೂ ಹೋಗಿ ಬರಲು ಹೆದರುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗಳಲ್ಲಿ ನಾಯಿ ಕಡಿತಕ್ಕೆ ಚಿಕಿತ್ಸೆಗ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ನಾಯಿಗಳ ಕಾಟ ಹೆಚ್ಚಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಬೀದಿ ನಾಯಿಗಳಿಗೆ ಆಹಾರ ನೀಡಲು ಇತ್ತೀಚೆಗೆ ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆ(ಬಿಬಿಎಂಪಿ) ಇತ್ತೀಚೆಗೆ ನಿಯಮಗಳನ್ನೇನೋ ರೂಪಿಸಿದೆ. ಆದರೆ ಪಾಲನೆ ಮಾಡುವವರ ಸಂಖ್ಯೆ ಶೇ. 1ನ್ನೂ ದಾಟುವುದಿಲ್ಲ. ಸಾರ್ವಜನಿಕರು ಮನಸೋ ಇಚ್ಛೆ ಬೀದಿ ನಾಯಿಗಳಿಗೆ ಆಹಾರ ಹಾಕುತ್ತಾರೆ. ಇದೇ ಕಾರಣಕ್ಕೆ ಬೀದಿ ನಾಯಿಗಳು ಮುಂಜಾನೆ ಮತ್ತು ರಾತ್ರಿ ವೇಳೆ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಹಲವು ವರ್ಷಗಳ ಹಿಂದೆ ಬೀದಿ ನಾಯಿಗಳನ್ನು ಬಿಬಿಎಂಪಿ ನಿಯಮಿತವಾಗಿ ಹಿಡಿದು ಬೇರೆ ಸ್ಥಳಕ್ಕೆ ಬಿಡುತ್ತಿತ್ತು. ಅವುಗಳಿಗೆ ಸ್ಟೆರಿಲೈಸೇಷನ್‌ ಮಾಡಿಸಿ ಚಿಕಿತ್ಸೆ ಕೊಡಿಸುತ್ತಿತ್ತು. ಆದರೆ ಇತ್ತೀಚೆಗೆ ಅಂತಹ ಯಾವುದೇ ಕಾರ್ಯಾಚರಣೆ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿಲ್ಲ. ಲೆಕ್ಕದ ಪುಸ್ತಕದಲ್ಲಿ ಕಾರ್ಯಾಚರಣೆ ಮಾಡುತ್ತಿದೆಯೋ ಅಥವಾ ಅಂತಹ ಯೋಜನೆಯನ್ನೇ ಸ್ಥಗಿತಗೊಳಿಸಿದೆಯೋ ಗೊತ್ತಾಗುತ್ತಿಲ್ಲ.

ಬೀದಿನಾಯಿಗಳ ಕಡಿತದಿಂದ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಕೆ.ಸಿ. ಜನರಲ್ ಆಸ್ಪತ್ರೆಗೆ ಕಳೆದ 3 ತಿಂಗಳಲ್ಲಿ 600 ರಿಂದ 700 ರಷ್ಟು ಮಂದಿ ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಚಿಕಿತ್ಸೆ ಪಡೆದವರ ಅಂಕಿ-ಅಂಶಗಳು ಎಚ್ಚಿ ಬೀಳಿಸುವಂತಿವೆ. ಮೇ ತಿಂಗಳಿನಲ್ಲಿ 933 ಜನ, ಜೂನ್ ತಿಂಗಳಲ್ಲಿ 642 ಜನ ಮತ್ತು ಜುಲೈ ತಿಂಗಳಲ್ಲಿ 781 ಜನ ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇದು ಒಂದು ಆಸ್ಪತ್ರೆಯ ಚಿತ್ರಣ. ಬೌರಿಂಗ್‌, ವಿಕ್ಟೋರಿಯಾ, ಇಎಸ್‌ ಐ ಸೇರಿದಂತೆ ಇತರೆ ಸಾರ್ವಜನಿಕ ಆಸ್ಪತ್ರೆಗಳ ಲೆಕ್ಕ ಸಿಕ್ಕಿಲ್ಲ, ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆದಿರುವವರ ಸಂಖ್ಯೆ ಕಡಿಮೆ ಇರುವುದಿಲ್ಲ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ಬೀದಿ ನಾಯಿಗಳ ನಿಯಂತ್ರಣ ಕುರಿತು ಬಿಬಿಎಂಪಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಬೀದಿನಾಯಿಗಳನ್ನ ಹಿಡಿದು ಹೊರಬಿಡುವ ಕೆಲಸ ಮುಂದುವರದಿದೆ ಎಂಬ ಸಿದ್ದ ಉತ್ತರ ನೀಡುತ್ತಾರೆ.

ಸಾಕು ನಾಯಿಗಳ ಕಾಟವೂ ಕಡಿಮೆಯೇನಿಲ್ಲ. ಆ ನಾಯಿಗಳೂ ಕಚ್ಚುವ ಹವ್ಯಾಸ ಬೆಳೆಸಿಕೊಂಡಿವೆ. ಸಾಕು ನಾಯಿಗಳನ್ನು ವಾಕಿಂಗ್‌ ಕರೆದುಕೊಂಡು ಬರುವವರು ತಮ್ಮನಾಯಿಗಳನ್ನು ನಿಯಂತ್ರಿಸುವ ಗೋಜಿಗೆ ಹೋಗುವುದಿಲ್ಲ. ಸಾಕು ನಾಯಿಗಳು ಬೀದಿ ನಾಯಿಗಳ ಜೊತೆ ಕಾಳಗ ನಡೆಸಿ ಕಚ್ಚುವ ಹವ್ಯಾಸ ಹೆಚ್ಚಿಸಿಕೊಳ್ಳುತ್ತವೆ.

ವಿಶೇಷವಾಗಿ ಎರಡನೇ ಪಾಳಿ ಥವಾ ರಾತ್ರಿ ಪಾಳಿಗೆ ಕೆಲಸಕ್ಕೆ ಹೋಗಿ ಬರುವ ದ್ವಿಚಕ್ರ ವಾಹನ ಸವಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ.

ಪಾಲಿಕೆ ನಿಯಮಗಳ ಪ್ರಕಾರ ಬೆಳಗಿನ ಜಾವ 3 ರಿಂದ 4 ಗಂಟೆಯ ಆಸು ಪಾಸಿನಲ್ಲಿ ಅಥವಾ ರಾತ್ರಿ ಜನರ ಓಡಾಟ ಕಡಿಮೆ ಇದ್ದಾಗ ಮಾತ್ರ ಬೀದಿನಾಯಿಗಳಿಗೆ ಊಟ ಹಾಕಬಹುದಾಗಿದೆ.

ಶ್ವಾನ ಪ್ರಿಯರು ಈ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಸಮಯ ಸಿಕ್ಕಾಗ ನಾಯಿಗಳಿಗೆ ಊಟ ಹಾಕುತ್ತೇವೆ. ಪಾಲಿಕೆ ನಿಗದಿ ಪಡಿಸಿದ ಸಮಯಕ್ಕೆ ಊಟ ಹಾಕಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ. ಪಾಲಿಕೆ ನೀತಿಯಿಂದ ಬೀದಿ ನಾಯಿಗಳ ಹೊಟ್ಟೆ ತುಂಬುವುದಿಲ್ಲ. ಬದಲಾಗಿ ಹಸಿವಿನಿಂದ ಸಾಯುತ್ತವೆ ಎಂದು ಕಿಡಿ ಕಾರುತ್ತಾರೆ. ಈಗಲೂ ಬೀದಿ ನಾಯಿಗಳ ರಕ್ಷಣೆಗೆ ಬಿಬಿಎಂಪಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಅನುದಾನ ಮೀಸಲಿಡುತ್ತದೆ. ಆದರೆ ಎಲ್ಲಿಗೆ ಹೋಗುತ್ತದೆ ಹೇಗೆ ವೆಚ್ಚವಾಗುತ್ತದೆ ಎನ್ನುವುದು ರಹಸ್ಯವೇನಲ್ಲ. ಕೂಡಲೇ ಬೀದಿ ನಾಯಿಗಳ ನಿರ್ವಹಣೆಗೆ ಕ್ರಮ ವಹಿಸುವಂತೆ ಒತ್ತಾಯಿಸಲಾಗಿದೆ.

ವರದಿ: ಎಚ್. ಮಾರುತಿ, ಬೆಂಗಳೂರು