ಕನ್ನಡ ಸುದ್ದಿ  /  Karnataka  /  Bangalore News These 2 Districts Which Grow Fruits And Vegetables For City Facing Water Problem Price Going Up Mrt

ಬೆಂಗಳೂರಿಗೆ ಹಣ್ಣು ತರಕಾರಿ ಪೂರೈಸುವ ಈ 2 ಜಿಲ್ಲೆಗಳಲ್ಲಿ ನೀರಿಗೆ ಅಭಾವ, ಕುಸಿದ ಅಂತರ್ಜಲ ಮಟ್ಟ; ಗಗನಮುಖಿಯಾದ ಬೆಲೆ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗಿದೆ. ಇದರಿಂದ ಬೆಳೆ ಬೆಲೆಯಲು ಪರದಾಡುವಂತಾಗಿದೆ. ಇದು ಬೆಂಗಳೂರಿನಲ್ಲಿ ತರಕಾರಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಬೆಂಗಳೂರು ಪಕ್ಕದ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ನೀರಿನ ಸಮಸ್ಯೆಯಾಗಿದ್ದು ರೈತರು ತರಕಾರಿ ಬೆಳೆಯಲು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ. ಇದರ ಪರಿಣಾಮ ಬೆಂಗಳೂರಿನಲ್ಲಿ ತರಕಾರಿ ಬೆಲೆ ಹೆಚ್ಚಾಗುತ್ತಿದೆ.
ಬೆಂಗಳೂರು ಪಕ್ಕದ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ನೀರಿನ ಸಮಸ್ಯೆಯಾಗಿದ್ದು ರೈತರು ತರಕಾರಿ ಬೆಳೆಯಲು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ. ಇದರ ಪರಿಣಾಮ ಬೆಂಗಳೂರಿನಲ್ಲಿ ತರಕಾರಿ ಬೆಲೆ ಹೆಚ್ಚಾಗುತ್ತಿದೆ.

ಬೆಂಗಳೂರಿನ ನಿವಾಸಿಗಳಿಗೆ ತರಕಾರಿ ಮತ್ತು ಹಣ್ಣು ಪೂರೈಕೆಯಾಗುವುದು ನೆರೆಯ ಚಿಕ್ಕಬಳ್ಳಾಪುರ (Chikkaballapur) ಮತ್ತು ಕೋಲಾರ (Kolar) ಜಿಲ್ಲೆಗಳಿಂದ. ನೀರಿನ ಬಿಕ್ಕಟ್ಟು ಉಲ್ಬಣಿಸುತ್ತಿರುವ ಹಿನ್ನಲೆಯಲ್ಲಿ ಈ ಎರಡೂ ಜಿಲ್ಲೆಗಳಲ್ಲಿ ತರಕಾರಿ ಮತ್ತು ಹಣ್ಣು ಬೆಳೆ ಕುಸಿದಿದ್ದು, ಬೆಲೆಗಳು (Bangalore Vegetable Price) ಗಗನಮುಖಿಯಾಗಿವೆ . ಈ ಅವಳಿ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದರೂ ಜೀವನೋಪಾಯಕ್ಕೆ ಕೊಳವೆ ಬಾವಿಗಳನ್ನು ಕೊರೆಸಿ ತರಕಾರಿ ಮತ್ತು ಹಣ್ಣು ಬೆಳೆಯುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆ ಕಡಿಮೆಯಾಗುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಅದರಲ್ಲೂ ಈ ವರ್ಷ ಇಡೀ ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದು, ನೀರಿನ ಅಭಾವ ತಲೆದೋರಿರುವುದನ್ನು ಕಾಣುತ್ತಿದ್ದೇವೆ. ಅನೇಕ ಕೃಷಿಕರು ಹಣ್ಣು ಮತ್ತು ತರಕಾರಿಯನ್ನು ಬೆಳೆಯುವುದನ್ನು ಕೈ ಬಿಟ್ಟಿದ್ದರೆ ಕೆಲವರು ಹನಿ ನೀರಾವರಿಯನ್ನು ಅಳವಡಿಸಿಕೊಂಡು ವಾರಕ್ಕೆ ಎರಡು ಬಾರಿ ನೀರುಣಿಸುತ್ತಿದ್ದರೂ ಬೆಳೆಗೆ ನೀರು ಸಾಕಾಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ. ಈ ಎರಡೂ ಜಿಲ್ಲೆಗಳಲ್ಲಿ ಅಂತರ್ಜಲವನ್ನು ವಿಪರೀತ ಶೋಷಣೆ ಮಾಡಿರುವುದು ಕಂಡು ಬಂದಿದೆ.

ಒಂದೆಡೆ ನೀರಿನ ಕೊರತೆಯಾಗಿದ್ದರೆ ಮತ್ತೊಂದೆಡೆ ಬಿಸಿಯಿಂದಾಗಿ ಸರಿಯಾಗಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಕೋಲಾರ ಜಿಲ್ಲೆಯಲ್ಲಿ ಶೇ.195 ರಷ್ಟು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ.145 ರಷ್ಟು ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಯಲ್ಲಿ ಶೇ.137ರಷ್ಟು ಅಂತರ್ಜಲವನ್ನು ಶೋಷಣೆ ಮಾಡಲಾಗಿದೆ. ಅಂತರ್ಜಲ ಮಟ್ಟ 1500 ಅಡಿಗಳಷ್ಟು ದಾಟಿದ್ದು, ವರ್ಷದಿಂದ ವರ್ಷಕ್ಕೆ ಒಣಗುತ್ತಿರುವ ಬೋರ್ ವೆಲ್‌ಗಳ ಸಂಖ್ಯೆ ಹೆಚ್ಚುತ್ತಿದೆ. 2020-22ರ ಅವಧಿಯಲ್ಲಿ ದಾಖಲೆಯ ಮಳೆಯಾಗಿತ್ತು. ಈ ವರ್ಷಗಳಲ್ಲಿ ಉತ್ತಮ ಮಳೆಯಾಗಿದ್ದು, ಉತ್ತರ ಪಿನಾಕಿನಿ, ಕುಶಾವತಿ ಮೊದಲಾದ ನದಿಗಳು ತುಂಬಿ ಹರಿದಿದ್ದವು. ಆದರೆ 2023ನೇ ಸಾಲಿನಲ್ಲಿ ತೀವ್ರ ಮಳೆಯ ಕೊರತೆಯಾಗಿ ಎರಡೂ ಜಿಲ್ಲೆಯ ಬಹುತೇಕ ತಾಲ್ಲೂಕುಗಳು ಬರದ ಪಟ್ಟಿಗೆ ಸೇರಿವೆ.

ಈ ವರ್ಷದಲ್ಲಿ ಕೋಲಾರ ಜಿಲ್ಲೆಯಲ್ಲಿ ಸರಾಸರಿ 18.14 ಮೀಟರ್ ನಷ್ಟು ಅಂತರ್ಜಲ ಕುಸಿದಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ 41.05 ಮೀ,. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 22.45 ಮೀ. ಗೌರಿಬಿದನೂರು ತಾಲ್ಲೂಕಿನಲ್ಲಿ 13.33 ಮೀ. ಅಂತರ್ಜಲ ಕುಸಿದಿದೆ. ಫೆಬ್ರವರಿ 2023ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ಥಿರ ಅಂತರ್ಜಲ ಮಟ್ಟ 17.52 ಮೀ.ನಷ್ಟಿದ್ದರೆ ಫೆ.2024ರಲ್ಲಿ 32.66ಕ್ಕೆ ಕುಸಿದಿದೆ. ಕೆಲವು ರೈತರು 10 ಬೋರ್ ವೆಲ್‌ಗಳ ಮೂಲಕ ತರಕಾರಿ ಬೆಳೆಯುತ್ತಿದ್ದರು. ಆದರೆ ಇಂದು ಅರ್ಧದಷ್ಟು ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಆದ್ದರಿಂದ ತರಕಾರಿ ಬೆಳೆಯುವ ಪ್ರಮಾಣ ಕಡಿಮೆಯಾಗಿದೆ ಎನ್ನುತ್ತಾರೆ.

ಮತ್ತೊಬ್ಬ ರೈತರು ಕಳೆದ ವರ್ಷ ತರಕಾರಿ ಬೆಳೆದು 6 ಲಕ್ಷ ಸಂಪಾದನೆ ಮಾಡಿದ್ದೆ. ಆದರೆ ಈ ವರ್ಷ ಬೋರ್ ವೆಲ್‌ಗಳಲ್ಲಿ ನೀರಿಲ್ಲ. ಎರಡು ಬೋರ್‌ವೆಲ್ ಕೊರೆಸಲು 6 ಲಕ್ಷ ರೂ. ವೆಚ್ಚವಾಗುತ್ತದೆ. ಆದರೆ ನೀರು ಸಿಗುವ ಗ್ಯಾರಂಟಿ ಇಲ್ಲ. ಆದ್ದರಿಂದ ಈ ಬಾರಿ ಕೃಷಿ ಮಾಡುವುದಿಲ್ಲ ಎನ್ನುತ್ತಾರೆ. ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸುವ ಯೋಜನೆ ಫಲಪ್ರದವಾಗಿದೆ. ಈ ನೀರು ಹರಿಯುವ ಕೆರೆಗಳ ಅಕ್ಕಪಕ್ಕ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಆದರೆ ಮಳೆಯ ಅಭಾವದಿಂದಾಗಿ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿಯುತ್ತಿಲ್ಲ.

ಬೋರ್‌ವೆಲ್ ಗಳನ್ನು ಅತಿಯಾಗಿ ಅವಲಂಬಿಸಿದ್ದರಿಂದ ಅಂತರ್ಜಲ ಮಟ್ಟ ಕುಸಿದಿದೆ ಎಂದು ಭೂ ವಿಜ್ಞಾನಿಗಳು ಹೇಳುತ್ತಾರೆ. ಒಂದು ವೇಳೆ ಈ ವರ್ಷದ ಮೇ ಜೂನ್ ತಿಂಗಳಲ್ಲಿ ಸರಿಯಾದ ಮಳೆಯಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಲಕ್ಷಣಗಳಿವೆ. ಕೃಷಿ ಮತ್ತು ಕುಡಿಯುವ ನೀರಿಗೂ ಅಭಾವ ತಲೆದೋರಲಿದೆ ಎಂದು ಹೇಳಲಾಗುತ್ತಿದೆ.