Tomato Fraud: ಟೊಮೆಟೋ ಖರೀದಿಸಿ ಹಣಕ್ಕೆ ಬದಲಾಗಿ ಬಿಳಿ ಹಾಳೆ ನೀಡಿದ ಖದೀಮರು; ಪಶ್ಚಿಮ ಬಂಗಾಳಕ್ಕೆ 3 ಲೋಡ್ ಕಳುಹಿಸಿ ಮೋಸ ಹೋದ ವ್ಯಾಪಾರಿಗಳು
Bangalore News ಕೋಲಾರದಲ್ಲಿ ಟೊಮೆಟೊ ವ್ಯಾಪಾರ( Tomato Business) ನಡೆಸುವ ವ್ಯಾಪಾರಿಗೆ ಲೋಡ್ ಪಡೆದು ಭಾರೀ ಮೋಸ ಮಾಡಲಾಗಿದೆ.ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಟೊಮೆಟೊ ವ್ಯಾಪಾರಿಯೊಬ್ಬರಿಗೆ ಅಸಲಿ ನೋಟುಗಳ ಜೊತೆ ನೋಟುಗಳ ಸೈಜಿನ ಬಿಳಿ ಹಾಳೆಗಳನ್ನಿಟ್ಟು 32 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೋಲಾರದ ಟೊಮೆಟೊ ವ್ಯಾಪಾರಿ ಆದಿತ್ಯ ಷಾ ಅವರು ವಂಚನೆಗೊಳಗಾಗಿದ್ದಾರೆ. ಪಶ್ಚಿಮ ಬಂಗಾಳದ ಸಿಲಿಗುರಿ ಎಪಿಎಂಸಿ ಮಾರುಕಟ್ಟೆ ವ್ಯಾಪಾರಿಗಳಾದ ಜಿ. ಸಂಜಯ್ ಮತ್ತು ಜಿ.ಮುಖೇಶ್ ವಾರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ದೂರುದಾರರಾದ ಅದಿತ್ಯ ಷಾ ಮತ್ತು ಅವರ ದೊಡ್ಡಪ್ಪ ವಿನೋದ್ ಶಾ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿದ್ದಾರೆ. ಇವರು ಪರವಾನಗಿ ಪಡೆದಿರುವ ವ್ಯಾಪಾರಿಗಳೂ ಹೌದು. ರೈತರಿಂದ ತರಕಾರಿ ಮತ್ತು ಟೊಮೆಟೋ ಖರೀದಿಸಿ ಪಶ್ಚಿಮ ಬಂಗಾಳಕ್ಕೆ ಸಾಗಿಸುತ್ತಾರೆ. ಅಲ್ಲಿನ ಸಿಲಿಗುರಿ ಮಾರುಕಟ್ಟೆಯ ವ್ಯಾಪಾರಿಗಳು ಬ್ಯಾಂಕ್ ಖಾತೆಗೆ ಹಣ ಹಾಕುತ್ತಿದ್ದರು. ಒಮ್ಮೊಮ್ಮೆ ನಗದು ರೂಪದಲ್ಲಿಯೂ ಹಣ ಪಾವತಿ ಮಾಡುತ್ತಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಕಳೆದ ವಾರ ಮುಖೇಶ್ ಕರೆ ಮಾಡಿ ಮೂರು ಲೋಡ್ ಟೊಮೆಟೊ ಕಳುಹಿಸಿಕೊಡುವಂತೆ ಕೋರಿದ್ದರು. ಅದರಂತೆ ಅವರಿಗೆ ಟೊಮೆಟೊಕಳುಹಿಸಿಕೊಡಲಾಗಿತ್ತು. ಟೊಮೆಟೊ ತಲುಪಿದ ನಂತರ ಬೆಂಗಳೂರಿನ ಸಂಜಯ್ ಎಂಬುವರು ಹಣ ನೀಡಲಿದ್ದು ಅವರಿಂದ ಸಂಗ್ರಹಿಸಿಕೊಳ್ಳುವಂತೆ ವಿನೋದ್ ಅವರಿಗೆ ಮೊಬೈಲ್ ಮೂಲಕತಿಳಿಸಿದ್ದರು.
ಹಣ ಕೊಡುವುದಾಗಿ ತಿಳಿಸಿದ್ದ ಸಂಜಯ್ ವೈಟ್ ಫೀಲ್ಡ್ ಸಮೀಪದ ಹಗಡೂರಿನ ಬೇಕರಿಯೊಂದರ ಬಳಿ ಬರಲು ತಿಳಿಸಿದ್ದರು. ಆದಿತ್ಯ ಶಾ ಅವರು ಆ ಸ್ಥಳಕ್ಕೆ ಹೋದಾಗ ಸಂಜಯ್ 20 ಲಕ್ಷ ರೂ. ಹಣ ನೀಡಿದ್ದರು. ಆದರೆ ಅದು ಜನನಿಬಿಡ ಪ್ರದೇಶವಾಗಿದ್ದರಿಂದ ಅಲ್ಲಿ ಹಣ ಎಣಿಸಿಕೊಳ್ಳಲು ಅಥವಾ ಪರಿಶೀಲಿಸಿಕೊಳ್ಳಲು ಆಗಲಿಲ್ಲ.ಹಣ ತೆಗೆದುಕೊಂಡು ಕೋಲಾರಕ್ಕೆ ಮರಳಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕೋಲಾರದಲ್ಲಿ ಹಣ ಎಣಿಸಿಕೊಳ್ಳಲು ಬ್ಯಾಗ್ ತೆರೆದಾಗ 500 ರೂ.ಮುಖಬೆಲೆಯ 10 ಕಟ್ಟುಗಳಿದ್ದವು. ಆದರೆ ಬಂಡಲ್ ಗಳ ಮೇಲೆ ಕೆಳಗೆ ಅಸಲಿ ನೋಟುಗಳನ್ನಿಟ್ಟು ಮಧ್ಯದಲ್ಲಿ ನೋಟಿನ ಅಳತೆಯ ಬಿಳಿ ಹಾಳೆಗಳನ್ನಿಟ್ಟಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಮರಳಿ ಕರೆ ಮಾಡಿದಾಗ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಆರೋಪಿಗಳು ಟೊಮೆಟೊ ಖರೀದಿಸಿದ್ದ 20 ಲಕ್ಷ ರೂ. ಮತ್ತು ಬಾಕಿ ಉಳಿಸಿಕೊಂಡಿದ್ದರು.
ಟೊಮೆಟೊ ಖರೀದಿ ಮಾಡಿದ್ದ 20 ಲಕ್ಷ ರೂ. ಮತ್ತು ಬಾಕಿ ಉಳಿಸಿಕೊಂಡಿದ್ದ 12 ಲಕ್ಷ ರೂ ಸೇರಿ 32 ಲಕ್ಷ ರೂ. ಹಣವನ್ನು ವಂಚಿಸಿದ್ದಾರೆ ಎಂದು ವಿನೋದ್ ಷಾ ತಿಳಿಸಿದ್ದಾರೆ.
ಗೃಹಿಣಿ ಆತ್ಮಹತ್ಯೆ
ಮಾಗಡಿ ರಸ್ತೆಯ ಅಂಧ್ರಹಳ್ಳಿಯಲ್ಲಿ ಗೃಹಿಣಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 25 ವರ್ಷದ ಮಾನಸಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಆತ್ಮಹತ್ಯೆಗೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿದ್ದು, ಅದರ ಆಧಾರದಲ್ಲಿ ತನಿಖೆ ನಡೆಯುತ್ತಿದೆ ಎಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಮಾನಸಾ ಅವರಿಗೆ 6 ವರ್ಷಗಳ ಹಿಂದೆ ದಿಲೀಪ್ ಅವರ ಜತೆ ವಿವಾಹವಾಗಿತ್ತು. ಈ ದಂಪತಿಗೆ 5 ವರ್ಷದ ಮಗುವಿದೆ. ಎರಡು ವರ್ಷಗಳಿಂದ ದಿಲೀಪ್ ಅಕ್ರಮ ಸಂಬಂಧ ಹೊಂದಿದ್ದು, ಇದು ಮಾನಸಾ ಅವರಿಗೆ ಕೋಪ ತರಿಸಿತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಬಹುಶಃ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವಪರೀಖ್ಷೆ ನಡೆಸಿ ಮೃತ ದೇಹವನ್ನು ಅವರ ಕುಟುಂಬದವರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ವರದಿ:ಎಚ್.ಮಾರುತಿ, ಬೆಂಗಳೂರು)