ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಅಮ್ಮನ ಅಶ್ಲೀಲ ಫೋಟೋ ಕಳುಹಿಸಿ ಮಗಳ ಬ್ಲ್ಯಾಕ್‌ಮೇಲ್, ದೂರು ದಾಖಲು

Bangalore crime: ಅಮ್ಮನ ಅಶ್ಲೀಲ ಫೋಟೋ ಕಳುಹಿಸಿ ಮಗಳ ಬ್ಲ್ಯಾಕ್‌ಮೇಲ್, ದೂರು ದಾಖಲು

ಬೆಂಗಳೂರಿನಲ್ಲಿ ಯುವತಿಯೊಬ್ಬರ ತಾಯಿ ನಗ್ನ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹಾಕುವುದಾಗಿ ಬೆದರಿಸಿ ಯುವತಿ ಚಿತ್ರಗಳನ್ನು ಪಡೆದಿದ್ದ ವ್ಯಕ್ತಿ ವಿರುದ್ದ ಮೊಕದ್ದಮೆ ದಾಖಲಾಗಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಯುವತಿಗೆ ಬೆದರಿಸುತ್ತಿದ್ದ ವ್ಯಕ್ತಿ ವಿರುದ್ದ ಬೆಂಗಳೂರಲ್ಲಿ ಮೊಕದ್ದಮೆ ದಾಖಲಾಗಿದೆ.
ಯುವತಿಗೆ ಬೆದರಿಸುತ್ತಿದ್ದ ವ್ಯಕ್ತಿ ವಿರುದ್ದ ಬೆಂಗಳೂರಲ್ಲಿ ಮೊಕದ್ದಮೆ ದಾಖಲಾಗಿದೆ.

ಬೆಂಗಳೂರು: ಮಹಿಳೆಯೊಬ್ಬರ ಅಶ್ಲೀಲ ಫೋಟೊ ಸೃಷ್ಟಿಸಿ ಅವರ ಮಗಳಿಗೆ ಕಳುಹಿಸಿ, ಯುವಕನೊಬ್ಬ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನೊಬ್ಬನ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 18 ವರ್ಷದ ಯುವತಿ ಈ ಯುವಕನ ವಿರುದ್ಧ ದೂರು ನೀಡಿದ್ದಾರೆ. ಅಪರಿಚಿತ ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಯುವತಿಯ ಇನ್‌ಸ್ಟಾಗ್ರಾಂ ಖಾತೆಗೆ 2023ರ ಸೆಪ್ಟೆಂಬರ್‌ನಲ್ಲಿ ಅಪರಿಚಿತ ವ್ಯಕ್ತಿಯಿಂದ ಸಂದೇಶ ಬಂದಿರುತ್ತದೆ. ಈತ ಯುವತಿಯ ತಾಯಿಯ ಫೋಟೊವನ್ನು ಅಶ್ಲೀಲವಾಗಿ ಸೃಷ್ಟಿಸಿ ಕಳುಹಿಸಿದ್ದ. ಇದರಿಂದ ಬೆದರಿದ ಯುವತಿ ಫೋಟೊವನ್ನು ತೆಗೆದು ಹಾಕುವಂತೆ ಮನವಿ ಮಾಡಿ ಕೊಂಡಿದ್ದಾರೆ. ಆದರೆ ಅಪರಿಚಿತ ಈ ಮನವಿಗೆ ಒಪ್ಪಿರಲಿಲ್ಲ.

ಟ್ರೆಂಡಿಂಗ್​ ಸುದ್ದಿ

ಈ ಯುವಕ ಮತ್ತೆ ಯುವತಿಗೆ ಸಂದೇಶ ಕಳುಹಿಸಿ ನಿನ್ನ ನಗ್ನ ಫೋಟೊಗಳನ್ನು ಕಳುಹಿಸು ಎಂಬ ಬೇಡಿಕೆ ಇರಿಸುತ್ತಾನೆ. ಒಂದುವೇಳೆ ಕಳುಹಿಸದಿದ್ದರೆ ನಿನ್ನ ತಾಯಿಯ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಮತ್ತೆ ಬೆದರಿಸುತ್ತಿರುತ್ತಾನೆ.

ಅಮ್ಮನ ಗೌರವ ಉಳಿಸಲು ಈ ಯುವತಿ ತನ್ನ ನಗ್ನ ಫೋಟೊಗಳನ್ನು ಕಳುಹಿಸಿದ್ದು, ಆ ಯುವಕ ಈ ಫೋಟೊಗಳನ್ನು ತನ್ನ ಮಿತ್ರರಿಗೆ ಕಳುಹಿಸಿದ್ದ. ಇಷ್ಟಕ್ಕೇ ಸುಮ್ಮನಾಗದೇ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ. ಈತನ ಕಿರುಕುಳದಿಂದ ಬೇಸತ್ತ ಯುವತಿ, ಪೋಷಕರಿಗೆ ವಿಷಯ ತಿಳಿಸಿ ನಂತರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಅಪರಿಚಿತನನ್ನು ಪತ್ತೆ ಮಾಡಲು ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಿಲಿಟರಿ ಪರೀಕ್ಷೆ, ನಕಲಿ ಅಭ್ಯರ್ಥಿಗಳ ವಿರುದ್ಧ ದೂರು

ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನಲ್ಲಿ ಖಾಲಿ ಇರುವ ಸಹಾಯಕ ಹುದ್ದೆ ನೇಮಕಾತಿಗಾಗಿ ಇತ್ತೀಚೆಗೆ ನಡೆದ ಪರೀಕ್ಷೆಗೆ ಇಬ್ಬರು ನಕಲಿ ಅಭ್ಯರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿರುವ ಬಗ್ಗೆ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನ ಅಧಿಕಾರಿಗಳು ಬೆಂಗಳೂರಿನ ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ.

ಆಸ್ಟಿನ್‌ ಟೌನ್‌ನಲ್ಲಿರುವ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನ ಸುಮಿತ್ ಅವರು ಶಾಲೆಯ ಪರವಾಗಿ ಈ ದೂರು ನೀಡಿದ್ದಾರೆ. ಪರೀಕ್ಷೆ ಬರೆಯಬೇಕಿದ್ದ ಅಭ್ಯರ್ಥಿಗಳಾದ ಆತೀಷ್, ಅಜಯ್‌ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ನಕಲಿ ಅಭ್ಯರ್ಥಿಗಳು ಮತ್ತು ಈ ಕೃತ್ಯಕ್ಕೆ ಸಹಕರಿಸಿದ್ದ ಇತರರ ವಿರುದ್ಧವೂ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನಲ್ಲಿ ಸಹಾಯಕ ಹುದ್ದೆ ನೇಮಕಾತಿಗಾಗಿ 2023ರ ಮಾರ್ಚ್ 9 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಆತೀಷ್ ಹಾಗೂ ಅಜಯ್‌ ಕುಮಾರ್ ಇಬ್ಬರೂ ಅರ್ಜಿ ಸಲ್ಲಿಸಿದ್ದರು. 2024ರ ಮಾರ್ಚ್ 24ರಂದು ಲಿಖಿತ ಪರೀಕ್ಷೆ ನಡೆದಿತ್ತು. ಇಬ್ಬರೂ ಪ್ರವೇಶಪತ್ರ ಪಡೆದುಕೊಂಡಿದ್ದರು. ಇವರಿಬ್ಬರೂ ಕೌಶಲ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಮಾರ್ಚ್ 30ರಂದು ನಡೆದ ಕೌಶಲ ಪರೀಕ್ಷೆಗೆ ಹಾಜರಾಗಿದ್ದರು. ಲಿಖಿತ ಪರೀಕ್ಷೆ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಬೆರಳಚ್ಚು ಹಾಗೂ ಕೌಶಲ ಪರೀಕ್ಷೆಗೆ ಹಾಜರಾಗಿದ್ದ ಅಸಲಿ ಅಭ್ಯರ್ಥಿಗಳ ಬೆರಳಚ್ಚು ಹೋಲಿಕೆ ಮಾಡಿದಾಗ ವ್ಯತ್ಯಾಸ ಕಂಡುಬಂದಿತ್ತು. ಹೆಚ್ಚಿನ ತಪಾಸಣೆ ನಡೆಸಿದಾಗ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವುದು ಬಯಲಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಅಭ್ಯರ್ಥಿಗಳು ಯಾರು ಎನ್ನುವುದು ಸದ್ಯಕ್ಕೆ ತಿಳಿದು ಬಂದಿಲ್ಲ. ಆತೀಷ್ ಹಾಗೂ ಅಜಯ್‌ ಕುಮಾರ್ ಇವರನ್ನು ಬಂಧಿಸಿ ವಿಚಾರಣೆ ನಡೆಸಿದರೆ ಸತ್ಯಾಂಶ ಹೊರ ಬೀಳಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಕುದುರೆ ರೇಸ್‌ ಬೆಟ್ಟಿಂಗ್, ಇಬ್ಬರ ಬಂಧನ

ಕುದುರೆ ರೇಸ್‌ಗಳ ಮೇಲೆ ಅಕ್ರಮವಾಗಿ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜೀವ್ ಗಾಂಧಿ ವೃತ್ತ ಬಳಿ ಹೋಟೆಲ್‌ವೊಂದರಲ್ಲಿ ಕುಳಿತು ಆರೋಪಿಗಳು ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಹೋಟೆಲ್ ಕೊಠಡಿಯ ಮೇಲೆ ದಾಳಿ ಮಾಡಿ ಆರೋಪಿಗಳಾದ ಕೆ. ಸುರೇಶ್ ಹಾಗೂ ಎನ್. ಆನಂದ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಇವರಿಂದ ರೂ. 8,100 ನಗದು, ಎರಡು ಮೊಬೈಲ್ ಹಾಗೂ ಬೆಟ್ಟಿಂಗ್‌ಗೆ ಸಂಬಂಧಪಟ್ಟ ಪುಸ್ತಕ ಮತ್ತಿತರ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಹಲವು ತಿಂಗಳಿನಿಂದ ರೇಸ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು.

ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಕುದುರೆ ರೇಸ್‌ಗಳ ಬಗ್ಗೆ ಜಾಲತಾಣದ ಮೂಲಕ ಆರೋಪಿಗಳು ಮಾಹಿತಿ ಪಡೆದುಕೊಳ್ಳುತ್ತಿದ್ದರು. ನಂತರ, ಸಾರ್ವಜನಿಕರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ವರದಿ: ಎಚ್. ಮಾರುತಿ, ಬೆಂಗಳೂರು

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point