UPSC Results: ಯುಪಿಎಸ್ ಸಿ ಪರೀಕ್ಷೆ, ಕೃಷಿ ಪದವೀಧರೆ ಸೌಭಾಗ್ಯ ಬೀಳಗಿಮಠ, ಪಿಎಸ್ಸೈ ಶಾಂತಪ್ಪ ಕುರುಬರ ಸಹಿತ ಕರ್ನಾಟಕದ 23 ಮಂದಿ ಆಯ್ಕೆ
ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಕರ್ನಾಟಕದ ಹಲವರು ಉತ್ತೀರ್ಣರಾಗಿದ್ದಾರೆ.ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) 2023 ರ ಸೆಪ್ಟಂಬರ್ ನಲ್ಲಿ ನಡೆಸಿದ್ದ ನಾಗರೀಕ ಸೇವೆಗಳ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಈ ಪರೀಕ್ಷೆಯಲ್ಲಿ 1026 ಮಂದಿ ತೇರ್ಗಡೆಯಾಗಿದ್ದು ಇವರನ್ನು ಐಎಎಸ್, ಐಪಿಎಸ್, ಐಆರ್ ಎಸ್ ಕೇಂದ್ರ ಸರಕಾರದ ಎ ಮತ್ತು ಬಿ ವೃಂದದ ಸೇವೆಗಳು ಸೇರಿದಂತೆ ಇತರೆ ಸೇವೆಗಳಿಗೆ ನಿಯೋಜನೆ ಮಾಡಲಾಗುತ್ತದೆ. ಈ ಪರೀಕ್ಷೆಗಳಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿರುವುದು ಮತ್ತೊಂದು ವಿಶೇಷ. ಕರ್ನಾಟಕದ 23 ಮಂದಿ ನಾಗರೀಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಅವರೆಂದರೆ ಸೌಭಾಗ್ಯ ಬೀಳಗಿಮಠ, ಸೌಮ್ಯ, ಭಾನುಪ್ರಕಾಶ್, ಶಾಂತಪ್ಪ ಕುರುಬರ, ಸುಮಾ ಎಚ್.ಕೆ. ಭರತ್, ಎನ್.ತೇಜಸ್, ಕೆ.ಟಿ. ಮೇಘನಾ, ವಿವೇಕ್ ರೆಡ್ಡಿ, ಸೃಷ್ಟಿ ದೀಪ್, ತೇಜಸ್ವಿನಿ, ರಕ್ಷಿತ್ ಗೌಡ, ಎನ್.ಎ. ಹಂಸಶ್ರೀ, ಸುಪ್ರೀತ್ ಸಂತೋಷ್, ಗಗನ್, ಪುನೀತ್, ವಿನಯ್ ಸುನೀಲ್, ಬಿ.ಎಸ್.ಚಂದನ್, ಜೆ.ರಾಹುಲ್, ನೇಹ ನಂದಕುಮಾರ್ ಮತ್ತು ಲೋಕೇಶ್ ಮನೋಹರ್.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪದವೀಧರೆ ಸೌಭಾಗ್ಯ ಬೀಳಗಿಮಠ 101 ನೇ ರ‍್ಯಾಂಕ್ ಪಡೆದಿದ್ದಾರೆ. ಎರಡನೇ ಪ್ರಯತ್ನದಲ್ಲಿ ಇವರು ಯಶಸ್ಸು ಕಂಡಿದ್ದಾರೆ. ಇವರು ಮೂಲತಃದಾವಣಗೆರೆ ನಗರದ ನಿವಾಸಿಗಳು. ಇವರ ತಂದೆ ಶರಣಯ್ಯ ಸ್ವಾಮಿ ನರ್ಸರಿ ನಡೆಸುತ್ತಿದ್ದರೆ ತಾಯಿ ಶರಣಮ್ಮ ಗೃಹಿಣಿ. ಇವರು ಯಾವುದೇ ಕೋಚಿಂಗ್ ಕೇಂದ್ರದಿಂದ ತರಬೇತಿ ಪಡೆದಿರಲಿಲ್ಲ. ಸ್ವಂತ ಪರಿಶ್ರಮದಿಂದ ಆಯ್ಕೆಯಾಗಿರುವುದು ಇವರ ಹೆಗ್ಗಳಿಕೆ.
ಬಳ್ಳಾರಿ ಜಿಲ್ಲೆ ಕುರಗೋಡು ತಾಲೂಕಿನ ಗೆಣಕಿಹಾಳು ಗ್ರಾಮದ ಶಾಂತಪ್ಪ ಕುರುಬರ 644ನೇ ರ‍್ಯಾಂಕ್ ಪಡೆದಿದ್ದಾರೆ. ಪ್ರಸ್ತುತ ಇವರು ಬೆಂಗಳೂರಿನ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಸಬ್ ಇನ್ ಸ್ಪೆಕ್ಟರ್ ಹುದ್ದೆಯಲ್ಲಿ ಕರ್ತವ್ಯದಲ್ಲಿದ್ದಾರೆ. ತಮ್ಮ 8ನೇ ಪ್ರಯತ್ನದಲ್ಲಿ ಇವರು ತೇರ್ಗಡೆಯಾಗಿದ್ದಾರೆ. ಇವರು ಕೋವಿಡ್ ಸಂದರ್ಭದಲ್ಲಿ ಕೊಳಗೇರಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಇವರು ಪ್ರಚಾರ ನಡೆಸಿದ್ದರು. ತಮ್ಮ ಸ್ವಂತ ಹಣದಲ್ಲಿ ಗೊರಗುಂಟೆ ಪಾಳ್ಯದಲ್ಲಿ ಶೌಚಾಲಯ ನಿರ್ಮಿಸಿ ತೃತೀಯ ಲಿಂಗಿಯೊಬ್ಬರಿಂದ ಉದ್ಘಾಟನೆ ನೆರವೇರಿಸಿದ್ದರು.
ಮಂಡ್ಯದ ಪುನೀತ್ 795 ನೇ ರ‍್ಯಾಂಕ್ ಪಡೆದಿದ್ದು, ಇವರು ಪತ್ರಕರ್ತ ಎಚ್.ಪಿ.ಶಿವಶಂಕರ್ ಅವರ ಪುತ್ರ. ಮೂಲತಃ ಮಂಡ್ಯ ಜಿಲ್ಲೆ ಹಲ್ಲೇಗೆರೆ ಗ್ರಾಮದವರು.