ಕಾರು ತೊಳೆಯಲು ಕಾವೇರಿ ನೀರು ಬಳಕೆ; ಮೂವರಿಗೆ ತಲಾ 5 ಸಾವಿರ ರೂ, ಸದಾಶಿವನಗರದಲ್ಲಿ ಮಹಿಳೆಗೆ ಸ್ಥಳದಲ್ಲೇ ದಂಡ-bangalore news use of cauvery water for car washing spot fine for women in sadashivanagar mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕಾರು ತೊಳೆಯಲು ಕಾವೇರಿ ನೀರು ಬಳಕೆ; ಮೂವರಿಗೆ ತಲಾ 5 ಸಾವಿರ ರೂ, ಸದಾಶಿವನಗರದಲ್ಲಿ ಮಹಿಳೆಗೆ ಸ್ಥಳದಲ್ಲೇ ದಂಡ

ಕಾರು ತೊಳೆಯಲು ಕಾವೇರಿ ನೀರು ಬಳಕೆ; ಮೂವರಿಗೆ ತಲಾ 5 ಸಾವಿರ ರೂ, ಸದಾಶಿವನಗರದಲ್ಲಿ ಮಹಿಳೆಗೆ ಸ್ಥಳದಲ್ಲೇ ದಂಡ

ಬೆಂಗಳೂರಿನಲ್ಲಿ ಕಾರು ತೊಳೆಯಲು ಕಾವೇರಿ ನೀರನ್ನ ಬಳಸಿದ ಮೂವರಿಗೆ ತಲಾ 5000 ರೂಪಾಯಿ ದಂಡ ವಿಧಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಯ ನಡುವೆ ಕೆಲ ಕಾರು ಮಾಲೀಕರ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಕುರಿಯುವ ನೀರಿನ ಬಿಕ್ಕಟ್ಟು ನಡುವೆ ಕೆಲವರು ಕಾರು ತೊಳೆಯಲು ಕಾವೇರಿ ನೀರು ಬಳಸುತ್ತಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಕುರಿಯುವ ನೀರಿನ ಬಿಕ್ಕಟ್ಟು ನಡುವೆ ಕೆಲವರು ಕಾರು ತೊಳೆಯಲು ಕಾವೇರಿ ನೀರು ಬಳಸುತ್ತಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು: ಉದ್ಯಾನ ನಗರಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru Water Crisis) ನೀರಿಲ್ಲದೆ ಪರಿತಪಿಸುತ್ತಿರುವಾಗ ವಾಹನಗಳನ್ನು ತೊಳೆಯಲು ಕಾವೇರಿ ನೀರು ಬಳಸಿ ವ್ಯರ್ಥ ಮಾಡಬೇಡಿ ಎಂದು ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಪರಿಪರಿಯಾಗಿ ಬೇಡಿಕೊಂಡಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ರೀತಿ ನೀರನ್ನು ಪೋಲು ಮಾಡಿದರೆ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿತ್ತು. ಆದರೆ ನೀರಿನ ಮಹತ್ವವನ್ನು ಅರಿಯದ ಬುದ್ದಿಗೇಡಿಗಳು ವಾಹನಗಳನ್ನು ಸ್ವಚ್ಚಗೊಳಿಸಲು ಕಾವೇರಿ ನೀರನ್ನು ಬಳಸುತ್ತಿರುವ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಇಂತಹ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಕಾರನ್ನು ತೊಳೆಯಲು ಕಾವೇರಿ ನೀರನ್ನು ಬಳಸಿದ ಮೂವರಿಗೆ ತಲಾ 5,000 ರೂಪಾಯಿ ದಂಡವನ್ನು ವಿಧಿಸಲಾಗಿದೆ. ಸದಾಶಿವನಗರದಲ್ಲಿ ಕಾವೇರಿ ನೀರಿನಿಂದ ಕಾರನ್ನು ತೊಳೆಯುತ್ತಿದ್ದ ಮಹಿಳೆಯೊಬ್ಬರಿಗೆ 5 ಸಾವಿರ ರೂ. ದಂಡ ವಿಧಿಸಿರುವ ಜಲಮಂಡಳಿ ಸ್ಥಳದಲ್ಲೇ ದಂಡವನ್ನು ಕಟ್ಟಿಸಿಕೊಂಡಿದೆ. ಇದೇ ರೀತಿ ಮಹಾದೇವಪುರ ಮತ್ತು ಡಾಲರ್ಸ್ ಕಾಲೋನಿಯಲ್ಲೂ ಇಬ್ಬರಿಗೆ ದಂಡ ವಿಧಿಸಿರುವುದಾಗಿ ಜಲಮಂಡಳಿ ತಿಳಿಸಿದೆ.

ಮೂವರಿಗೆ ದಂಡ ವಿಧಿಸಿರುವುದು ಬೆಂಗಳೂರಿನ ನಾಗರೀಕರಿಗೆ ಪಾಠವಾಗಬೇಕು. ಪ್ರತಿ ಹನಿ ನೀರನ್ನೂ ಎಚ್ಚರಿಕೆಯಿಂದ ಬಳಸಬೇಕು. ಬೇಸಿಗೆಯ ಬಿರುಬಿಸಿಲು ಹೆಚ್ಚುತ್ತಿದ್ದು, ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ಬೆಂಗಳೂರಿಗೆ ನೀರು ಸರಬರಾಜು ಮಾಡುವ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಇತ್ತ ಬೆಂಗಳೂರಿನಲ್ಲಿ ಅಂತರ್ಜಲವಿಲ್ಲದೆ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ನೀರಿನ ಮಹತ್ವವನ್ನು ಅರಿತುಕೊಂಡ ಅದೆಷ್ಟೋ ನಾಗರೀಕರು ವಾಹನಗಳನ್ನು ತೊಳೆಯುವುದನ್ನು ಬಿಟ್ಟಿದ್ದಾರೆ.

ನೀರನ್ನು ಉಳಿತಾಯ ಮಾಡಿ ಸರ್ಕಾರದ ಜೊತೆ ಕೈಜೋಡಿಸಿ

ಪ್ರತಿಯೊಂದು ಹನಿ ನೀರನ್ನೂ ನ್ಯಾಯಸಮ್ಮತವಾಗಿ ಬಳಸುತ್ತಿದ್ದಾರೆ. ಮಳೆಗಾಲ ಆರಂಭವಾಗುವ ಇನ್ನೂ ಮೂರು ತಿಂಗಳು ನೀರಿಗೆ ಕಷ್ಟಪಡಬೇಕಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಲಮಂಡಳಿ ನೀರನ್ನು ಪೂರೈಕೆ ಮಾಡಲು ಹೆಣಗುತ್ತಿವೆ. ಸಾರ್ವಜನಿಕರೂ ನೀರನ್ನು ಉಳಿತಾಯ ಮಾಡುವ ಮೂಲಕ ಸರ್ಕಾರದ ಜೊತೆ ಕೈಜೋಡಿಸಬೇಕು.

ನೀರಿನ ಸದ್ಬಳಕೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಜಲಮಂಡಳಿ ನೀರನ್ನು ಕಾರು ತೊಳೆಯುವುದು, ಕೈತೋಟ, ಮನರಂಜನೆಗಾಗಿ, ಕಾರಂಜಿ ನಿರ್ಮಾಣ, ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ, ಸಿನಿಮಾ ಹಾಗೂ ಮಾಲ್‌ಗಳಲ್ಲಿ ಕುಡಿಯುವ ನೀರಿನ ಹೊರತುಪಡಿಸಿ ಇನ್ನಿತರ ಬಳಕೆಗೆ ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಒಂದು ವೇಳೆ ಯಾರಾದರೂ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸುವುದನ್ನು ಕಂಡರೆ 1916 ನಂಬರಿಗೆ ಕರೆ ಮಾಡುವಂತೆಯೂ ಜಲ ಮಂಡಳಿ ಕೇಳಿಕೊಂಡಿದೆ.