Valmiki Corporation Scam:ವಾಲ್ಮೀಕಿ ನಿಗಮ ಹಗರಣ, ಸಿದ್ದರಾಮಯ್ಯ ಹೆಸರು ಉಲ್ಲೇಖಿಸಿಲು ಒತ್ತಡ ಹೇರಿದ ಇಡಿ ಅಧಿಕಾರಿಗಳ ವಿರುದ್ದ ಪ್ರಕರಣ
ಕನ್ನಡ ಸುದ್ದಿ  /  ಕರ್ನಾಟಕ  /  Valmiki Corporation Scam:ವಾಲ್ಮೀಕಿ ನಿಗಮ ಹಗರಣ, ಸಿದ್ದರಾಮಯ್ಯ ಹೆಸರು ಉಲ್ಲೇಖಿಸಿಲು ಒತ್ತಡ ಹೇರಿದ ಇಡಿ ಅಧಿಕಾರಿಗಳ ವಿರುದ್ದ ಪ್ರಕರಣ

Valmiki Corporation Scam:ವಾಲ್ಮೀಕಿ ನಿಗಮ ಹಗರಣ, ಸಿದ್ದರಾಮಯ್ಯ ಹೆಸರು ಉಲ್ಲೇಖಿಸಿಲು ಒತ್ತಡ ಹೇರಿದ ಇಡಿ ಅಧಿಕಾರಿಗಳ ವಿರುದ್ದ ಪ್ರಕರಣ

ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ರಾಜ್ಯ ಅಧಿಕಾರಿಯ ಮೇಲೆ ಒತ್ತಡ ಹೇರಿದ ಆರೋಪದ ಮೇಲೆ ಇಬ್ಬರು ಇಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇಡಿ ತನಿಖೆ ವೇಳೆ ಸಿಎಂ ಸಿದ್ದರಾಮಯ್ಯ ಹೆಸರು ಹೇಳಲು ಒತ್ತಡ ಹೇರಿದ ಆರೋಪದ ಮೇಲೆ ಇಬ್ಬರು ಇಡಿ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಇಡಿ ತನಿಖೆ ವೇಳೆ ಸಿಎಂ ಸಿದ್ದರಾಮಯ್ಯ ಹೆಸರು ಹೇಳಲು ಒತ್ತಡ ಹೇರಿದ ಆರೋಪದ ಮೇಲೆ ಇಬ್ಬರು ಇಡಿ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ 187 ಕೋಟಿ ರೂ.ಗಳ ಹಗರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಇಬ್ಬರು ಅಧಿಕಾರಿಗಳು ದುರ್ನಡತೆ ಆರೋಪ ಎದುರಿಸುತ್ತಿದ್ದಾರೆ. ಐಆರ್‌ಎಸ್‌ ಅಧಿಕಾರಿಯೂ ಸೇರಿ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕಲ್ಲೇಶ್ ಬಿ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಣಕಾಸು ಇಲಾಖೆಯನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಲು ಕಲ್ಲೇಶ್ ಅವರ ಮೇಲೆ ಇಡಿ ಅಧಿಕಾರಿಗಳು ಅನಗತ್ಯ ಒತ್ತಡ ಹೇರಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳಾದ ಮುರಳಿ ಕಣ್ಣನ್ ಮತ್ತು ಮಿತ್ತಲ್ ಅವರನ್ನು ಗುರಿಯಾಗಿಸಿಕೊಂಡು ದೂರು ದಾಖಲಿಸಲಾಗಿದ್ದು, ಅವರು "ಸಾಮಾನ್ಯ ಉದ್ದೇಶದೊಂದಿಗೆ ಜಂಟಿ ಕ್ರಿಮಿನಲ್ ಹೊಣೆಗಾರಿಕೆ", "ಕ್ರಿಮಿನಲ್ ಬೆದರಿಕೆ" ಮತ್ತು "ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ" ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಜುಲೈ 16ರಂದು ನಡೆದ ವಿಚಾರಣೆ ವೇಳೆ ಕಣ್ಣನ್ 17 ಪ್ರಶ್ನೆಗಳನ್ನು ಕೇಳಿದ್ದು, ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ಹಣಕಾಸು ಇಲಾಖೆಯನ್ನು ಸಿಲುಕಿಸಲು ಒತ್ತಡ ಹೇರಲು ಪ್ರಯತ್ನಿಸಿದ್ದಾರೆ ಎಂದು ಕಲ್ಲೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮುಖ್ಯಮಂತ್ರಿ, ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ಹಣಕಾಸು ಇಲಾಖೆ ಸೇರಿದಂತೆ ಉನ್ನತ ಅಧಿಕಾರಿಗಳ ವಿರುದ್ಧ ಆರೋಪ ಹೊರಿಸಲು ಒಪ್ಪದಿದ್ದರೆ ಈ ಪ್ರಕರಣದಲ್ಲಿ ತನ್ನ ವಿರುದ್ಧ ಆರೋಪ ಹೊರಿಸುವುದಾಗಿ ಮಿತ್ತಲ್ ಬೆದರಿಕೆ ಹಾಕಿದ್ದಾರೆ . ಒಪ್ಪಿಕೊಳ್ಳದೇ ಇದ್ದರೆ ಜೈಲು ಶಿಕ್ಷೆಯಾಗುವ ಪ್ರಕರಣ ದಾಖಲಿಸಲಾಗುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಕಲ್ಲೇಶ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಹೈದರಾಬಾದ್ ಮೂಲದ ಸಂಸ್ಥೆಗಳಿಗೆ 88 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಿರುವುದು ಸೇರಿದಂತೆ 187 ಕೋಟಿ ರೂ.ಗಳ ದುರುಪಯೋಗದ ಬಗ್ಗೆ ನಡೆಯುತ್ತಿದೆ. ಈ ತನಿಖೆಯ ಮಧ್ಯೆ ಈ ಹೊಸ ತಿರುವು ಬಂದಿದೆ. ಕರ್ನಾಟಕ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ಎರಡೂ ಈ ಪ್ರಕರಣದ ಬಗ್ಗೆ ಕೆಲಸ ಮಾಡುತ್ತಿವೆ.

ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ವಾಲ್ಮೀಕಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದದ್ದಲ್ ಅವರ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ನಾಗೇಂದ್ರ ಅವರನ್ನು ಇಡಿ ಬಂಧಿಸಿದೆ. ಅಲ್ಲದೇ ವಿಚಾರಣೆ ಮುಂದುವರಿದಿದೆ. ಇದೇ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೂ ನೊಟೀಸ್‌ ನೀಡಬಹುದು ಎನ್ನುವ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆದಿವೆ. ಇದರ ಭಾಗವಾಗಿಯೇ ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳುವ ಒತ್ತಡ, ಪ್ರಕರಣ ದಾಖಲಿಸಿರುವುದು ನಡೆದಿದೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಇಡಿ ವಿರುದ್ದ ಆಕ್ರೋಶವನ್ನೂ ಹೊರ ಹಾಕಲಾಗಿದೆ.

Whats_app_banner