ಕನ್ನಡ ಸುದ್ದಿ  /  ಕರ್ನಾಟಕ  /  Valmiki Corporation Scam: ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಸೂಚನೆ, ಸಚಿವ ನಾಗೇಂದ್ರ ಇಂದು ರಾಜೀನಾಮೆ ಸಾಧ್ಯತೆ

Valmiki Corporation Scam: ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಸೂಚನೆ, ಸಚಿವ ನಾಗೇಂದ್ರ ಇಂದು ರಾಜೀನಾಮೆ ಸಾಧ್ಯತೆ

minister may resign ಕರ್ನಾಟಕದಲ್ಲಿ ನಡೆದಿದೆ ಎನ್ನಲಾಗುತ್ತಿರುವ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ( CM Siddaramaiah ) ಸೂಚಿಸಿದ್ದಾರೆ.

ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ.
ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಣ ದುರುಪಯೋಗ ಹಗರಣದಲ್ಲಿ ಹಾಲಿ ಪರಿಶಿಷ್ಟ ಪಂಗಡಗಳ ಖಾತೆ ಸಚಿವ ಬಿ.ನಾಗೇಂದ್ರ ಗುರುವಾರ ರಾಜೀನಾಮೆ ನೀಡುವ ಸಾಧ್ಯತೆಗಳು ಹೆಚ್ಚಿವೆ. ಒಂದು ಕಡೆ ಬಿಜೆಪಿ ನೀಡಿದ ಗಡುವು ಹಾಗೂ ಮತ್ತೊಂದು ಕಡೆ ಈ ಪ್ರಕರಣದಲ್ಲಿ ಸಿಬಿಐ ಮೊಕದ್ದಮೆ ದಾಖಲಿಸಿರುವುರಿಂದ ಎಚ್ಚೆತ್ತುಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಸಚಿವ ಬಿ. ನಾಗೇಂದ್ರ ಅವರನ್ನು ಕರೆಯಿಸಿ ಮಾತನಾಡಿದ್ದಾರೆ. ಸಚಿವರು ಹಾಗೂ ಆಪ್ತರ ಉಪಸ್ಥಿತಿಯಲ್ಲಿ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರಿನ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿನ ಭಾರೀ ಪ್ರಮಾಣದ ಹಣವನ್ನು ಹೈದ್ರಾಬಾದ್‌ನ ಕಂಪೆನಿಗಳಲ್ಲಿ ಹೂಡಿರುವ ಆರೋಪಗಳು ಕೇಳಿ ಬಂದಿದ್ದವು. ಅದರಲ್ಲೂ ನಿಗಮದ ಹಿರಿಯ ಅಧಿಕಾರಿ ಚಂದ್ರಶೇಖರನ್‌ ಎಂಬುವವರು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು,. ಅವರು ಬರೆದಿದ್ದ ಡೆತ್‌ ನೋಟ್‌ ನಲ್ಲಿ ಹಣ ವರ್ಗಾವಣೆ ವಿಚಾರ ಪ್ರಸ್ತಾಪಿಸಲಾಗಿತ್ತು. ಅದರಲ್ಲೂ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶದ ಮೇಲೆ ಈ ಹಣವನ್ನು ವರ್ಗಾವಣೆ ಮಾಡಿದ್ದರು. ಇದಕ್ಕೆ ಭಾರೀ ಒತ್ತಡ ತಮ್ಮ ಮೇಲೆ ಇತ್ತು ಎಂದು ಚಂದ್ರಶೇಖರನ್‌ ಉಲ್ಲೇಖಿಸಿದ್ದರು. ಇದು ಬಯಲಾಗುತ್ತಿದ್ದಂತೆ ನಾಗೇಂದ್ರ ರಾಜೀನಾಮೆಗೆ ಒತ್ತಡ ಹೆಚ್ಚಿತ್ತು.

ಹಗರಣ ಆಗಿರುವುದು ನಿಜ. ಆದರೆ ಇದರಲ್ಲಿ ತಮ್ಮ ಪಾತ್ರವಿಲ್ಲ ಎಂದು ನಾಗೇಂದ್ರ ಹೇಳಿಕೊಂಡಿದ್ದರು. ಆದರೂ ಆಗಲೇ ನಾಗೇಂದ್ರ ಅವರನ್ನು ಕರೆಯಿಸಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಈಗ ರಾಜೀನಾಮೆ ಬೇಡ. ಅನಿವಾರ್ಯವಾದರೆ ಸಿದ್ದವಿರು ಎಂದು ಸೂಚಿಸಿದ್ದರು. ಬಿಜೆಪಿ ಕೂಡ ಜೂನ್‌ ರ ಒಳಗೆ ರಾಜೀನಾಮೆ ಗಡುವು ನೀಡಿತ್ತು.

ಹಗರಣದ ಕುರಿತು ಎಚ್ಚೆತ್ತುಕೊಂಡ ಯೂನಿಯನ್‌ ಬ್ಯಾಂಕ್‌ ಇಂಡಿಯಾ ಆರು ಅಧಿಕಾರಿಗಳ ವಿರುದ್ದ ಮೊಕದ್ದಮೆ ದಾಖಲಿಸಿತ್ತು. ಅಲ್ಲದೇ ಸಿಬಿಐಗೂ ಮಾಹಿತಿ ನೀಡಿತ್ತು. ಕರ್ನಾಟಕ ಸರ್ಕಾರವೂ ಇದನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಎಡಿಜಿಪಿ ಮನೀಷ್‌ ಖರ್ಬೀಕರ್‌ ನೇತೃತ್ವದಲ್ಲಿ ಎಸ್‌ಐಟಿ ತಂಡ ರಚಿಸಿತ್ತು. ಈಗಾಗಲೇ ಎಸ್‌ಐಟಿ ತಂಡವೂ ತನಿಖೆ ಆರಂಭಿಸಿ ನಿಗಮದ ಹಿಂದಿನ ಎಂಡಿ ಸಹಿತ ಇಬ್ಬರನ್ನು ಬಂಧಿಸಿದೆ. ಬ್ಯಾಂಕ್‌ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಹಣ ವರ್ಗಾವಣೆಯಾಗಿರುವ ಹೈದ್ರಾಬಾದ್‌ ನ ಕಂಪೆನಿಗಳ ಮುಖ್ಯಸ್ಥರನ್ನು ವಿಚಾರಣೆಗೆ ಒಳಪಡಿಸಿದೆ.

ಯೂನಿಯನ್‌ ಬ್ಯಾಂಕ್‌ ನೀಡಿದ ದೂರು ಆಧರಿಸಿ ಸಿಬಿಐ ಈಗಾಗಲೇ ಅಧಿಕಾರಿಗಳ ವಿರುದ್ದ ಎಫ್‌ಐಆರ್‌ ದಾಖಲಿಸಿದೆ. ಇದು ಆರ್ಥಿಕ ಅಪರಾಧಗಳ ಪ್ರಕರಣವಾಗಿರುವುದರಿಂದ ಗಂಭೀರವಾಗಿ ಪರಿಗಣಿಸಲಿದ್ದು, ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಿದೆ.

ಈ ಕಾರಣದಿಂದಲೇ ಸಿಎಂ ಸಿದ್ದರಾಮಯ್ಯ ಅವರು ಸಚಿವ ನಾಗೇಂದ್ರ ಅವರನ್ನು ಕರೆಯಿಸಿಕೊಂಡು ರಾಜೀನಾಮೆಗೆ ಸೂಚಿಸಿದ್ದಾರೆ. ಗುರುವಾರ ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿ ಮಾಡಲು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ನೇತ್ವತ್ವದ ತಂಡ ತೆರಳಲಿದೆ. ಇದಕ್ಕೂ ಮುನ್ನವೇ ಸಚಿವ ನಾಗೇಂದ್ರ ರಾಜೀನಾಮೆ ನೀಡಬಹುದು ಎನ್ನುವ ಮೂಲಗಳು ತಿಳಿಸಿವೆ.

ಸದ್ಯಕ್ಕೆ ರಾಜೀನಾಮೆ ಕೊಡು. ಎಸ್‌ಐಟಿ ವರದಿ, ಸಿಬಿಐ ತನಿಖೆ ಮುಗಿದ ನಂತರ ಮತ್ತೆ ಸಚಿವ ಸ್ಥಾನಕ್ಕೆ ನೇಮಿಸೋಣ. ಈಗ ಆಗುತ್ತಿರುವ ಮುಜುಗರದಿಂದ ತಪ್ಪಿಸಿಕೊಳ್ಳಲು ರಾಜೀನಾಮೆಯೊಂದೇ ಮಾರ್ಗವಾಗಿದೆ ಎಂದು ಸಿದ್ದರಾಮಯ್ಯ ಅವರು ಸಚಿವ ನಾಗೇಂದ್ರಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಟಿ20 ವರ್ಲ್ಡ್‌ಕಪ್ 2024

ವಿಭಾಗ