ಬೆಂಗಳೂರಿನಲ್ಲಿ ಏರಿಯೇಟರ್‌ ಅಳವಡಿಕೆ ಗಡುವು ಮೇ 7 ರವರೆಗೆ ವಿಸ್ತರಣೆ; ಮರುದಿನದಿಂದಲೇ ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಏರಿಯೇಟರ್‌ ಅಳವಡಿಕೆ ಗಡುವು ಮೇ 7 ರವರೆಗೆ ವಿಸ್ತರಣೆ; ಮರುದಿನದಿಂದಲೇ ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ

ಬೆಂಗಳೂರಿನಲ್ಲಿ ಏರಿಯೇಟರ್‌ ಅಳವಡಿಕೆ ಗಡುವು ಮೇ 7 ರವರೆಗೆ ವಿಸ್ತರಣೆ; ಮರುದಿನದಿಂದಲೇ ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ

Bangalore Water Crisis: ಬೆಂಗಳೂರಿನಲ್ಲಿ ಏರಿಯೇಟರ್‌ಗಳ ಅವಳಡಿಕೆ ಸಂಬಂಧ ಈ ಹಿಂದೆ ಏಪ್ರಿಲ್‌ 30 ರವರೆಗೆ ಅವಕಾಶ ನೀಡಲಾಗಿತ್ತು. ಗಡುವನ್ನು ವಿಸ್ತರಿಸುವಂತೆ ಮನವಿಗಳು ಬಂದ ಹಿನ್ನಲೆಯಲ್ಲಿ ಮತ್ತೊಮ್ಮೆ ವಿಸ್ತರಿಸಲಾಗಿದೆ.

ಬೆಂಗಳೂರಿನಲ್ಲಿ ಏರಿಯೇಟರ್‌ ಅಳವಡಿಕೆಯ ಅವಧಿಯನ್ನು ಮೇ 7 ರವರೆಗೆ ವಿಸ್ತರಿಸಲಾಗಿದೆ.
ಬೆಂಗಳೂರಿನಲ್ಲಿ ಏರಿಯೇಟರ್‌ ಅಳವಡಿಕೆಯ ಅವಧಿಯನ್ನು ಮೇ 7 ರವರೆಗೆ ವಿಸ್ತರಿಸಲಾಗಿದೆ. (news minute)

ಬೆಂಗಳೂರು: ನೀರು ಉಳಿತಾಯ ಹಾಗೂ ನೀರಿನ ಸದ್ಬಳಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಾಲ್‌ಗಳಲ್ಲಿ, ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್‌, ಸರ್ಕಾರಿ ಕಟ್ಟಡ, ಐಷಾರಾಮಿ ಹೋಟೇಲ್‌, ರೆಸ್ಟೋರೆಂಟ್‌ ಹಾಗೂ ಧಾರ್ಮಿಕ ತಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆಗಾಗಿ ಬಳಸುವ ನಲ್ಲಿಗಳಲ್ಲಿ ಕಡ್ಡಾಯವಾಗಿ ಏರಿಯೇಟರ್‌ (Aerator Installation) ಅಥವಾ ಫ್ಲೋ ರಿಸ್ಟ್ರಿಕ್ಟರ್‌ ಅಳವಡಿಸಿಕೊಳ್ಳಲು (Flow Restrictor Installation) ನೀಡಲಾಗಿದ್ದ ಗಡುವನ್ನು 2024ರ ಮೇ 7 ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಏಪ್ರಿಲ್‌ 30 ರವರೆಗೆ ಅವಕಾಶ ನೀಡಲಾಗಿತ್ತು. ಗಡುವನ್ನು ವಿಸ್ತರಿಸುವಂತೆ ಮನವಿಗಳು ಕೇಳಿ ಬಂದ ಹಿನ್ನಲೆಯಲ್ಲಿ ಮತ್ತೊಮ್ಮೆ ಈ ಡೆಡ್‌ಲೈನ್ ಅನ್ನು ವಿಸ್ತರಿಸಲಾಗಿದೆ. ಈಗಾಗಲೇ ಬೆಂಗಳೂರು ನಗರದಾದ್ಯಂತ ಸುಮಾರು 6 ಲಕ್ಷಕ್ಕೂ ಹೆಚ್ಚು ಏರಿಯೇಟರ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ.

2024ರ ಮೇ 7 ರೊಳಗಾಗಿ ಏರಿಯೇಟರ್‌/ಫ್ಲೋ ರಿಸ್ಟ್ರಿಕ್ಟರ್‌ ಅಳವಡಿಸಿಕೊಳ್ಳದೇ ಇರುವ ಸಾರ್ವಜನಿಕ ಸ್ಥಳಗಳನ್ನು ಮೇ 8 ರ ನಂತರ ಅಧಿಕಾರಿಗಳು ಪರಿಶೀಲನೆ ನಡೆಸಿ ಏರಿಯೇಟರ್‌ ಅಳವಡಿಸಿಕೊಳ್ಳದೇ ಇರುವವರಿಗೆ ದಂಡ ವಿಧಿಸಲಿದ್ದಾರೆ ಎಂದು ಜಲಮಂಡಳಿ ತಿಳಿಸಿದೆ.

ಮೇ ತಿಂಗಳಲ್ಲಿ ಮಂಡಳಿ ಕಾರ್ಮಿಕರ ಆರೋಗ್ಯ ತಪಾಸಣೆ

ಬೆಂಗಳೂರು ನಗರಕ್ಕೆ ನಿರಂತರವಾಗಿ ನೀರು ಸರಬರಾಜು ಮಾಡುವ ಹಾಗೂ ನಗರದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಜಲಮಂಡಳಿಯ ವಾಟರ್‌ಮ್ಯಾನ್‌, ಸ್ಯಾನಿಟರಿ ವರ್ಕರ್‌, ಜೆಟ್ಟಿ ಡ್ರೈವರ್‌ ಸೇರಿದಂತೆ ಎಲ್ಲಾ ಸಿಬ್ಬಂದಿಗೂ ಜಲಮಂಡಳಿ ಆಶ್ರಯದಲ್ಲಿ ಮೇ ತಿಂಗಳಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ವಿ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಕಾರ್ಮಿಕ ದಿನಾಚರಣೆ ಅಂಗವಾಗಿ ಹೆಚ್‌ ಬಿ ಆರ್‌ ಜಲಮಂಡಳಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಆಲ್ಟಿಯಸ್‌ ಮತ್ತು ಲಕ್ಷ್ಮಿ ಗ್ರೂಪ್‌ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದ ನಂತರ ಅವರು ಈ ವಿಷಯ ತಿಳಿಸಿದ್ದಾರೆ.

ಬೆಂಗಳೂರು ನಗರದ ಸ್ವಚ್ಚತೆಯನ್ನು ಕಾಪಾಡುವಲ್ಲಿ ಜಲಮಂಡಳಿಯ ವಾಟರ್‌ಮ್ಯಾನ್‌, ಸ್ಯಾನಿಟರಿ ವರ್ಕರ್‌, ಜೆಟ್ಟಿ ಡ್ರೈವರ್‌ಗಳ ಪಾತ್ರ ಬಹು ಮುಖ್ಯವಾಗಿದೆ. ಅವರು ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಕಾರ್ಮಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಪ್ರತಿವರ್ಷ ಮೇ ತಿಂಗಳಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.

ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಬೇಕು. ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಕಾರ್ಮಿಕರು ಹಾಗೂ ಸಿಬ್ಬಂದಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ 300 ಕ್ಕೂ ಹೆಚ್ಚು ಕಾರ್ಮಿಕರು ಮತ್ತು ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರು ಆರೋಗ್ಯ ಶಿಬಿರದ ಲಾಭ ಪಡೆದುಕೊಂಡರು.

15 ದಿನಗಳಲ್ಲಿ 15 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸುವ ಗುರಿ ಹೊಂದಲಾಗಿದ್ದು, ಒಂದು ವರ್ಷದ ಅವಧಿಯಲ್ಲಿ 200 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸುವ ಗುರಿ ಹೊಂದಲಾಗಿದೆ. ಇದು ಈ ಸರೋವರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ" ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ವಿ ರಾಮ್‌ ಪ್ರಸಾತ್‌ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಅದೇ ಸಮಯದಲ್ಲಿ, ಜಲ ಸಂರಕ್ಷಣೆಯನ್ನು ಉತ್ತೇಜಿಸಲು ಮಂಡಳಿಯ ಸಹಯೋಗದೊಂದಿಗೆ ಸ್ವಯಂಸೇವಕ ಉಪಕ್ರಮವಾದ ಜಲಮಿತ್ರಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ವ್ಯಕ್ತಿಗಳನ್ನು ಗುರುತಿಸಲು ಬಿಡಬ್ಲ್ಯೂಎಸ್ಎಸ್ಬಿ ಯೋಜಿಸಿದೆ. ಭಾಗವಹಿಸುವವರು "ಬೆಂಗಳೂರಿನ ಹೆಮ್ಮೆಯ ನಾಗರಿಕ" ಪ್ರಮಾಣಪತ್ರಗಳನ್ನು ಪಡೆಯುತ್ತಾರೆ ಎಂದು ವರದಿ ತಿಳಿಸಿದೆ. ಗಮನಾರ್ಹವಾಗಿ, ಕಳೆದ ತಿಂಗಳೊಳಗೆ, 9,000 ಸ್ವಯಂಸೇವಕರು ಜಲಮಿತ್ರರಾಗಿ ನೋಂದಾಯಿಸಿಕೊಂಡಿದ್ದಾರೆ, ಇದು ಜಲ ಸಂರಕ್ಷಣೆ ಪ್ರಯತ್ನಗಳಲ್ಲಿ ಹೆಚ್ಚುತ್ತಿರುವ ಸಮುದಾಯ ತೊಡಗಿಸಿಕೊಳ್ಳುವಿಕೆಯನ್ನು ಪ್ರದರ್ಶಿಸುತ್ತದೆ.

Whats_app_banner