ಕನ್ನಡ ಸುದ್ದಿ  /  Karnataka  /  Bangalore News Water Crisis In Bangalore Not Only Affecting People Wildlife Birds Trees Also Did Not Getting Water Mrt

Bangalore News:ಬೆಂಗಳೂರಿನಲ್ಲಿ ನೀರಿನ ಅಭಾವ; ಮನುಷ್ಯರ ಜೊತೆಗೆ ಪ್ರಾಣಿ ಪಕ್ಷಿ ಗಿಡ ಮರಗಳಿಗೂ ಜಲ ಕಂಟಕ

ಬೇಸಿಗೆಯಲ್ಲಿ ನೀರಿನ ಬವಣೆ ಬೆಂಗಳೂರಿನಲ್ಲಿ ಈ ಬಾರಿ ಕೊಂಚ ಹೆಚ್ಚೇ ಇದೆ. ಮನುಷ್ಯ ಮಾತ್ರವಲ್ಲದೇ ಪ್ರಾಣಿ,ಪಕ್ಷಿಗಳು, ಗಿಡಮರಗಳೂ ನೀರಿನಲ್ಲೇ ಒಣಗಿವೆ.(ವರದಿ: ಎಚ್‌.ಮಾರುತಿ, ಬೆಂಗಳೂರು)

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಿಸಿ ಹಕ್ಕಿಗಳಿಗೂ ಈ ಬಾರಿ ತಟ್ಟಿದೆ.
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಿಸಿ ಹಕ್ಕಿಗಳಿಗೂ ಈ ಬಾರಿ ತಟ್ಟಿದೆ.

ಬೆಂಗಳೂರು: ಕಳೆದ ಮೂರು ತಿಂಗಳಿನಿಂದ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಹನಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಮನುಷ್ಯರಿಗೆ ಬಂದೊದಗಿರುವ ಪರಿಸ್ಥಿತಿ ಮಾತ್ರವಲ್ಲ. ಪ್ರಾಣಿ ಪಕ್ಷಿಗಳ ಪರಿಸ್ಥಿತಿ ಹೇಗಿರಬೇಡ? ಅತ್ತ ಆಹಾರವೂ ಇಲ್ಲದೆ ಇತ್ತ ನೀರೂ ಇಲ್ಲದೆ ಜೀವ ಸಂಕುಲವು ಅನುಭವಿಸುತ್ತಿರುವ ನೋವು ಊಹಿಸಲು ಅಸಾಧ್ಯ.ಗಿಡಮರಗಳ ಪರಿಸ್ಥಿತಿಯೂ ಪ್ರಾಣಿ ಪಕ್ಷಿಗಳಿಗಿಂತ ಭಿನ್ನವಾಗಿಲ್ಲ. ಒಂದು ಕಡೆ ಮಳೆಯ ಅಭಾವ ಮತ್ತೊಂದು ಕಡೆ ಕುಸಿದಿರುವ ಅಂತರ್ಜಲ. ಯಾವ ದಾರಿಯಲ್ಲಿ ಸಾಗಿದರೂ ನೀರಿನ ಸಂಪನ್ಮೂಲ ಬರಿದಾಗುತ್ತಿರುವ ಅನುಭವವಾಗುತ್ತಿದೆ.

ನೀರು ಮತ್ತು ಆಹಾರ ಇಲ್ಲದೆ ಪ್ರಾಣಿಪಕ್ಷಿಗಳು ಮೃತಪಡುತ್ತಿವೆ. ಎತ್ತ ನೋಡಿದರೂ ಕಾಂಕ್ರೀಟ್ ಕಾಡು ಕಾಣಿಸುತ್ತಿದೆಯೇ ಹೊರತು ಹಸಿರು ಕಾಡು ಇಲ್ಲವೇ ಇಲ್ಲ. ನಾಯಿ, ದನಕರು, ಪಾರಿವಾಳ, ಹದ್ದು, ಜಿಂಕೆ, ಕೋತಿಗಳು ನೀರಿಲ್ಲದೆ ಪರದಾಡುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ. ಆದರೂ ಪ್ರಾಣಿ ಪಕ್ಷಿ ಪ್ರಿಯರು ಅಲ್ಲಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡುತ್ತಿದ್ದಾರೆ. ಮನೆ ಮತ್ತು ಅಪಾರ್ಟ್ ಮೆಂಟ್ ಗಳ ಮೇಲೆ ಬೋಗುಣಿಗಳನ್ನು ಇಟ್ಟು ನೀರು ತುಂಬಿಸುತ್ತಿದ್ದಾರೆ. ರಸ್ತೆ, ಅಂಗಡಿ, ಉದ್ಯಾನವನ, ಸರಕಾರಿ ಕಚೇರಿಗಳು, ಪೊಲೀಸ್ ಸ್ಟೇಷನ್ ಮೊದಲಾದ ಪ್ರದೇಶಗಳಲ್ಲಿ ನೀರಿಗೆ ವ್ಯವಸ್ಥೆಮಾಡಲಾಗಿದೆ.

ಲಾಲಬಾಗ್ ಮತ್ತು ಕಬ್ಬನ್ ಪಾರ್ಕ್ ಗಳಲ್ಲಿರುವ ಗಿಡ ಮರಗಳನ್ನು ಪೋಷಿಸಲು ಅಪಾರ ಪ್ರಮಾಣದಲ್ಲಿ ನೀರು ಬೇಕಿದೆ. ಅಗತ್ಯ ಇರುವಷ್ಟು ನೀರು ಅಲ್ಲಿಯೂ ಅಲಭ್ಯ.

ಬೆಂಗಳೂರಿನ ಹೊರವಲಯದಲ್ಲಿರುವ ರಾಜರಾಜೇಶ್ವರಿ ನಗರಕ್ಕೆ ಹೊಂದಿಕೊಂಡಂತೆ ಸುಮಾರು 590 ಎಕರೆ ಪ್ರದೇಶದಲ್ಲಿ ತುರಹಳ್ಳಿ ಮೀಸಲು ಅರಣ್ಯವಿದೆ. ಈ ಅರಣ್ಯ ಬನ್ನೇರುಘಟ್ಟದವರೆಗೆ ಹಬ್ಬಿದೆ. ಇಲ್ಲಿ ಜಿಂಕೆ, ಹಾವು, ನಾಯಿ, ಮೊಲ ನವಿಲು ಸೇರಿದಂತೆ ವೈವಿಧ್ಯಮಯ ಪ್ರಾಣಿ ಪಕ್ಷಿಗಳು ಆಶ್ರಯ ಪಡೆದಿವೆ.

ಪೀಪಲ್ ಫಾರ್ ಅನಿಮಲ್ಸ್ ಎಂಬ ಸ್ವಯಂಸೇವಾ ಸಂಸ್ಥೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಾಣಿ ಪಕ್ಷಿಗಳಿಗೆ ಶೇ.20 ರಷ್ಟು ಹೆಚ್ಚಿನ ನೀರಿನ ಕೊರತೆ ಉಂಟಾಗಿದೆ. ನೀರಿಲ್ಲದೆ ರೋಗಳಿಗೆ ಈಡಾದ ಅನೇಕ ಪ್ರಕರಣಗಳಿವೆ ಎಂದು ವನ್ಯಜೀವಿ ಪ್ರಿಯರು ಆತಂಕ ವ್ಯಕ್ತಪಡಿಸುತ್ತಾರೆ.

ಅರಣ್ಯ ಇಲಾಖೆಯೂ ಕೈಕಟ್ಟಿ ಕುಳಿತಿಲ್ಲ. ಅಲ್ಲಲ್ಲಿ ವನ್ಯ ಜೀವಿಗಳಿಗೆ ನೀರು ಒದಗಿಸಲು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಒಂದು ಕಡೆ ಬಿಸಿಲಿನ ಝಳ ಹೆಚ್ಚುತ್ತಿದೆ. ಮತ್ತೊಂದು ಕಡೆ ಕುಡಿಯಲು ನೀರು ಸಿಗುತ್ತಿಲ್ಲ. ನಗರ ಪ್ರದೇಶದೊಳಗೆ ವನ್ಯಜೀವಿಗಳು ಪ್ರವೇಶಿಸುವಂತಿಲ್ಲ. ಹೀಗಾಗಿ ಮರಣ ಹೊಂದುತ್ತಿವೆ ಎಂದು ವನ್ಯಜೀವಿ ಸಂರಕ್ಷಕರು ಹೇಳುತ್ತಾರೆ.

ಗಿಡಮರಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಮರಗಿಡಗಳೆಲ್ಲವೂ ಒಣಗಿಹೋಗುತ್ತಿವೆ. ಬೆಂಗಳೂರಿನ ಜೀವ ಸಂರಕ್ಷಕ ಉದ್ಯಾನವನಗಳಾದ ಲಾಲ್ ಭಾಗ್ ಮತ್ತು ಕಬ್ಬನ್ ಪಾರ್ಕ್ ಗಳಲ್ಲಿ

ನೀರಿನ ಅಭಾವ ತಲೆದೋರಿದೆ. ಲಾಲ್ ಭಾಗ್ ನ 240 ಎಕರೆ ಪ್ರದೇಶದಲ್ಲಿರುವ 3 ಸಾವಿರ ವಿಧದ 20 ಸಾವಿರ ಗಿಡ ಮರಗಳಿಗೆ ನೀರುಣಿಸಲು ಪರದಾಡುತ್ತಿದೆ. ಇಲ್ಲಿಗೆ ದಿನವೊಂದಕ್ಕೆ

ಸರಾಸರಿ 1.5 ಮಿಲಿಯನ್ ಲೀಟರ್ ನೀರನ್ನು ಸಂಸ್ಕರಿಸಲಾಗುತ್ತದೆ. ಆದರೆ ಈಗ ಸಾಧ್ಯವಾಗುತ್ತಿಲ್ಲ. ಇಲ್ಲಿರುವ 5 ಬೋರ್ ವೆಲ್ ಗಳಲ್ಲಿ ನೀರು ಕಡಿಮೆಯಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ.

ಸಾಮಾನ್ಯವಾಗಿ ಬೇಸಿಗೆ ದಿನಗಳಲ್ಲಿ ಗಿಡಗಳು ಮತ್ತು ಸಣ್ಣ ಸಣ್ಣ ಮರಗಳಿಗೆ ನೀರಿನ ಅವಶ್ಯಕತೆ ಇರುತ್ತದೆ. ಆದರೆ ಈ ಬಾರಿ ಸಮಸ್ಯೆ ಉಂಟಾಗಿದೆ.ಮಳೆಗಾಲಕ್ಕೆ ಇನ್ನೂ ಎರಡು ತಿಂಗಳು ಕಾಯಬೇಕು. ಅಲ್ಲಿಯವರೆಗೆ ನೀರಿನ ಉಳಿತಾಯ ಹೊರತುಪಡಿಸಿದರೆ ಅನ್ಯ ಮಾರ್ಗಗಳಿಲ್ಲ. ಪ್ರತಿಯೊಬ್ಬ ನಾಗರೀಕನೂ ನೀರು ಉಳಿಸುವ ಸಂಪ್ರದಾಯವನ್ನು ಪಾಲಿಸಬೇಕು. ಆಗ ಮಾತ್ರ ಭವಿಷ್ಯದ ವರ್ಷಗಳಲ್ಲಿ ನೀರಿನ ಅಭಾವ ಕಡಿಮೆಯಾಗಬಹುದು ಎನ್ನುವುದು ಅವರು ನೀಡುವ ಸಲಹೆ.

(ವರದಿ: ಎಚ್.ಮಾರುತಿ,ಬೆಂಗಳೂರು)

IPL_Entry_Point

ವಿಭಾಗ