ಕನ್ನಡ ಸುದ್ದಿ  /  Karnataka  /  Bangalore News Water Crisis Tanker Driver Booked Bwssb Introduces Ai Iot Technology To Maintain Borewells Mrt

Bangalore News: ನೀರು ಮಾರಾಟ, ಖಾಸಗಿ ಟ್ಯಾಂಕರ್ ಚಾಲಕನ ವಿರುದ್ಧ ಪ್ರಕರಣ ದಾಖಲು; ಕೊಳವೆ ಬಾವಿಗಳ ಸಮರ್ಪಕ ನಿರ್ವಹಣೆಗೆ ಎಐ ಐಓಟಿ ತಂತ್ರಜ್ಞಾನ

ಬೆಂಗಳೂರಿನಲ್ಲಿ ನೀರು ಒದಗಿಸುವ ವಿಚಾರದಲ್ಲಿ ಜಲ ಮಂಡಳಿಯ ಕಟ್ಟುನಿಟ್ಟಿನ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.(ವರದಿ: ಎಚ್‌.ಮಾರುತಿ, ಬೆಂಗಳೂರು)

ಬೆಂಗಳೂರು ಜಲಮಂಡಳಿ ತಂತ್ರಜ್ಞಾನ ಬಳಸಿ ಕೊಳವೆ ಬಾವಿ ನಿರ್ವಹಣೆ ಮಾಡುತ್ತಿರುವುದನ್ನು ಅಧ್ಯಕ್ಷ ರಾಮಪ್ರಸಾತ್‌ ಮನೋಹರ್‌ ವೀಕ್ಷಿಸಿದರು.
ಬೆಂಗಳೂರು ಜಲಮಂಡಳಿ ತಂತ್ರಜ್ಞಾನ ಬಳಸಿ ಕೊಳವೆ ಬಾವಿ ನಿರ್ವಹಣೆ ಮಾಡುತ್ತಿರುವುದನ್ನು ಅಧ್ಯಕ್ಷ ರಾಮಪ್ರಸಾತ್‌ ಮನೋಹರ್‌ ವೀಕ್ಷಿಸಿದರು.

ಬೆಂಗಳೂರು: ಸತತ ಸೂಚನೆ ನಂತರವೂ ವಾಣಿಜ್ಯ ಬಳಕೆಗೆ ಟ್ಯಾಂಕರ್‌ ಬಳಕೆ ಮಾಡಿದ ಬೆಂಗಳೂರಿನ ವ್ಯಕ್ತಿ ವಿರುದ್ದ ಮೊಕದ್ದಮೆ ದಾಖಲಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರನ್ನು ಪೂರೈಸಲು ಸುನೀಲ್ ‌ಎಂಬುವರ ಖಾಸಗಿ ಟ್ಯಾಂಕರ್ ಅನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿತ್ತು. ವಾರ್ಡ್ ನಂ 130 ರಲ್ಲಿರುವ ಸಾರ್ವಜನಿಕರಿಗೆ ನೀರನ್ನು ಉಚಿತವಾಗಿ ವಿತರಿಸುವಂತೆ ಟ್ಯಾಂಕರ್ ಮಾಲೀಕರಿಗೆ ಸೂಚಿಸಲಾಗಿತ್ತು. ಆದರೆ ಈ ಖಾಸಗಿ ಟ್ಯಾಂಕರ್ ಮಾಲೀಕ‌ ಸುನೀಲ್ ಶೆಟ್ಟಿಹಳ್ಳಿ ಮುಖ್ಯ ರಸ್ತೆಯ ಮಲ್ಲಸಂದ್ರ ವಾರ್ಡ್ ಸಂ 14ರಲ್ಲಿ ವಾಣಿಜ್ಯ ಉದ್ದೇಶಕ್ಕೆ ನೀರನ್ನು ಮಾರಾಟ ಮಾಡಿರುವುದು ಪತ್ತೆಯಾಗಿದ್ದು, ಇವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಬಿಡಬ್ಲ್ಯೂಎಸ್ಎಸ್ ಬಿ ಸಹಾಯಕ ಎಂಜಿನಿಯರ್ ಕಾರ್ತಿಕ್ ಮಂಜು ಅವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು ಜಲಮಂಡಳಿ ಹಾಗೂ ಬಿಬಿಪಿಎಂಪಿ ವತಿಯಿಂದ ಸಾರ್ವಜನಿಕರಿಗೆ ಕುಡಿಯುವ ನೀರನ್ನು‌ ಪೂರೈಸಲು ಖಾಸಗಿ ಟ್ಯಾಂಕರ್ ಗಳನ್ನು ಪಡೆದುಕೊಳ್ಳಲಾಗಿದ್ದು, ಈ ಖಾಸಗಿ ಟ್ಯಾಂಕರ್ ಗಳ ಮೂಲಕ‌ ಅಗತ್ಯವಿರುವ ಕಡೆಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಕುಡಿಯುವ ನೀರನ್ನು ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಉಚಿತವಾಗಿ ಕುಡಿಯುವ ನೀರು ಒದಗಿಸಬೇಕಾದ ನೀರನ್ನು ಅನ್ಯ ಉದ್ದೇಶಗಳಿಗೆ ಮಾರಾಟ ಮಾಡಿದ್ದು ಕಂಡುಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರು ‌ಜಲಮಂಡಳಿ‌ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್ ಮನೋಹರ್ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ಎಲ್ಲೆಲ್ಲಿ ನೀರು ಪೂರೈಕೆ ಮಾಡಬೇಕೆಂದು ಈಗಾಗಲೇ ಖಾಸಗಿ ಟ್ಯಾಂಕರ್ ಗಳಿಗೆ ‌ಸೂಚಿಸಲಾಗಿದೆ. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಲು ಎಲ್ಲ ಕ್ರಮಗಳನ್ನು ಮಂಡಳಿ ಕೈಗೊಳ್ಳುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ. ಇಲ್ಲದೇ ಇದ್ದರೆ ಜನರಿಗೆ ಇನ್ನಷ್ಟು ತೊಂದರೆಯಾಗಲಿದ ಎಂದು ಅವರು ವಿವರಿಸಿದ್ದಾರೆ.

ಎ ಐ ಮತ್ತು ಐಓಟಿ ತಂತ್ರಜ್ಞಾನ ಬಳಕೆ

ಕೊಳವೆ ಬಾವಿಗಳು ಬತ್ತಿ ಹೋಗುವುದನ್ನು ತಡೆಯಲು ಜಲಮಂಡಳಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎ ಐ) ಮತ್ತು ಐಓಟಿ ತಂತ್ರಜ್ಞಾನ ಬಳಸಿಕೊಳ್ಳಲು ಜಲ ಮಂಡಳಿ ಮುಂದಾಗಿದೆ. ಚಿನ್ನಪ್ಪ ಗಾರ್ಡನ್ ನ ಗಂಗಾ ಭವಾನಿ ಬಡಾವಣೆಯಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ.

ಬೆಂಗಳೂರು ನಗರದಲ್ಲಿ 14 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿದ್ದು ಅರ್ಧದಷ್ಟು ಕೊಳವೆ ಬಾವಿಗಳು ಸಮರ್ಪಕ ನಿರ್ವಹಣೆ ಇಲ್ಲದೆ ಬತ್ತಿ ಹೋಗಿವೆ. ಕೊಳವೆ ಬಾವಿಗಳ ಪಂಪ್‌ ಸೆಟ್‌ಗಳನ್ನು ಹೆಚ್ಚು ಸಮಯ ಬಳಸುವುದು ಮತ್ತು ನೀರು ಇಲ್ಲದಿದ್ದರೂ ಮೋಟಾರ್‌ ಓಡಿಸುವುದರಿಂದ ಬಹಳಷ್ಟು ಕೊಳವೆ ಬಾವಿಗಳು ರಿಪೇರಿಗೆ ಬರುತ್ತಿವೆ. ಕೊಳವೆಬಾವಿಗಳು ಪದೇಪದೇ ತಾಂತ್ರಿಕ ಸಮಸ್ಯೆಗೆ ಸಿಲುಕುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಧುನಿಕ ಎ ಐ ಮತ್ತು ಐಓಟಿ ತಂತ್ರಜ್ಞಾನ ಅಳವಡಿಸಿಕೊಂಡರೆ ಪರಿಸ್ಥಿತಿ ಸುಧಾರಿಸಲಿದೆ.

ಈ ನೂತನ ತಂತ್ರಜ್ಞಾನದ ಅಳವಡಿಕೆಯಿಂದ ಕೊಳವೆ ಬಾವಿಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಹಾಗೂ ಅವುಗಳ ಅನಗತ್ಯ ಬಳಕೆಯನ್ನು ತಪ್ಪಿಸುವುದು ಸಾಧ್ಯವಾಗುತ್ತದೆ. ನೀರಿಲ್ಲದಿರುವ ಸಮಯದಲ್ಲಿ ಕೊಳವೆ ಬಾವಿಗಳನ್ನು ಬಳಸುವುದನ್ನು ನಿಲ್ಲಿಸಿದರೆ ಕೊಳವೆ ಬಾವಿಗಳು ನಿಷ್ಕ್ರಿಯವಾಗುವುದನ್ನು ತಪ್ಪಿಸಬಹುದಾಗಿದೆ.

ನೀರು ಇಲ್ಲದಿದ್ದರೆ ತಂತಾನೇ ಮೋಟಾರ್ ಆಫ್ ಆಗುವ ತಂತ್ರಜ್ಞಾನ ಇದಾಗಿದೆ. ಇದರಿಂದ ಕೊಳವೆ ಬಾವಿಗಳನ್ನು ಸುಸ್ಥಿರವಾಗಿ ಇಡಬಹುದು. ಪದೇಪದೇ ಮೋಟಾರ್ ಸುಟ್ಟು ಹೋಗುವಂತಹ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗಳನ್ನು ನಿಭಾಯಿಸಬಹುದಾಗಿದೆ ಎನ್ನುವುದು ಅಧಿಕಾರಿಗಳು ನೀಡುವ ವಿವರಣೆ.

( ವರದಿ: ಎಚ್. ಮಾರುತಿ.ಬೆಂಗಳೂರು)

ವಿಭಾಗ