ಬೆಂಗಳೂರಿನಲ್ಲಿ ನೀರಿನ ಟ್ಯಾಂಕರ್ ನೋಂದಣಿಗೆ ಮಾರ್ಚ್ 15 ರವರೆಗೆ ಕಾಲಾವಕಾಶ; ನಿರ್ಲಕ್ಷಿಸಿದರೆ ಬಿಬಿಎಂಪಿ ಕಾನೂನು ಕ್ರಮದ ಎಚ್ಚರಿಕೆ
ಬೆಂಗಳೂರಿನಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹರಸಾಹಸ ಪಡೆಯುತ್ತಿರುವ ಬಿಬಿಎಂಪಿ ದುಪ್ಪಟ್ಟು ಹಣ ಪೀಕುತ್ತಿರುವ ನೀರಿನ ಟ್ಯಾಂಕರ್‌ಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.
ಬೆಂಗಳೂರು: ಖಾಸಗಿ ನೀರು ಸರಬರಾಜು ಮಾಡುವ ಖಾಸಗಿ ಟ್ಯಾಂಕರ್‌ಗಳ ನೋಂದಣಿಗೆ ಮಾರ್ಚ್ 15ರ ವರೆಗೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಪೋರ್ಟಲ್‍ನಲ್ಲಿ ಇದುವರೆಗೆ 1,530 ಟ್ಯಾಂಕರ್‌ಗಳು ನೋಂದಣಿ ಮಾಡಿಕೊಂಡಿವೆ. ಮಾರ್ಚ್ 15ರ ನಂತರ ನೋಂದಣಿ ಮಾಡಿಕೊಳ್ಳದ ಟ್ಯಾಂಕರ್ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಚ್ಚರಿಕೆ ನೀಡಿದೆ. ಪ್ರಸ್ತುತ ನೋಂದಣಿ ಮಾಡಿಕೊಂಡಿರುವ 1,530 ಟ್ಯಾಂಕರ್‌ಗಳಿಂದ ಪ್ರತಿದಿನ 10 ಎಂಎಲ್‍ಡಿ ನೀರನ್ನು ಒಂದೇ ಬಾರಿಗೆ ಸರಬರಾಜು ಮಾಡಲು ಸಾಧ್ಯವಿದೆ. ನೋಂದಣಿ ಮಾಡಿಕೊಂಡಿರುವ ಟ್ಯಾಂಕರ್‌ಗಳಿಗೆ ಸ್ಟಿಕ್ಕರ್ ಅಳವಡಿಸಲಾಗುತ್ತದೆ. ಆಗಲೂ ಆ ಟ್ಯಾಂಕರ್‌ಗಳು ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಎಚ್ಚರಿಕೆ ನೀಡಿದ್ದಾರೆ.
419 ಟ್ಯಾಂಕರ್ ಮಾಲೀಕರು ಸ್ವಯಂ ಪ್ರೇರಿತವಾಗಿ ಬಾಡಿಗೆಗೆ ನೀಡಲು ಮುಂದೆ ಬಂದಿದ್ದಾರೆ. ಇನ್ನು ಮುಂದೆ ಬೆಂಗಳೂರು ನಗರದಲ್ಲಿ ಬೇಕಾಬಿಟ್ಟಿಯಾಗಿ ಕೊಳವೆ ಬಾವಿಗಳನ್ನು (Bangalore Water Crisis) ಕೊರೆಯುವುದರ ಬದಲು ನೀರಿನ ಲಭ್ಯತೆ ಆಧರಿಸಿ ಭೂವಿಜ್ಞಾನಿಗಳ ವರದಿಯ ಆಧಾರದ ಮೇಲೆ ಕೊರೆಯಿಸಲು ಮಂಡಳಿ ಉದ್ದೇಶಿಸಿದ್ದು, ಇದಕ್ಕಾಗಿ ನಾಲ್ವರು ಭೂ ವಿಜ್ಞಾನಿಗಳ ಸಲಹೆ ಉದ್ದೇಶಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.
ಕಾವೇರಿ ನೀರು ಅನ್ಯ ಉದ್ದೇಶಕ್ಕೆ ಬಳಸಿದರೆ ಮಾರ್ಚ್ 15 ರಿಂದ ದಂಡ
ಕಾವೇರಿ ನೀರನ್ನು ಕುಡಿಯುವ ಉದ್ದೇಶ ಹೊರತುಪಡಿಸಿ ಇತರೆ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಿ ಈಗಾಗಲೇ ಆದೇಶ ಹೊರಡಿಸಲಾಗಿದ್ದು, ಮಾ.15ರಿಂದ ಅನುಷ್ಠಾನಗೊಳಿಸಲಾಗುತ್ತದೆ. ಒಂದು ವೇಳೆ ಅನ್ಯ ಉದ್ದೇಶಕ್ಕೆ ಬಳಸುವುದು ಕಂಡುಬಂದಲ್ಲಿ ಮಂಡಳಿ ಸಿಬ್ಬಂದಿ ಸ್ಥಳದಲ್ಲಿಯೇ ದಂಡ ವಿಧಿಸಲಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಕಾವೇರಿಯಿಂದ ಸಮರ್ಪಕ ನೀರು; ಆತಂಕ ಬೇಡ ಭರವಸೆ ನೀಡಿದ ಜಲಮಂಡಳಿ
ತನ್ನ ವ್ಯಾಪ್ತಿಯ ಪ್ರದೇಶಗಳಿಗೆ ಪ್ರತಿದಿನ 1,470 ಎಂಎಲ್‍ಡಿ ಕಾವೇರಿ ನೀರನ್ನು ಬೆಂಗಳೂರು ಜಲಮಂಡಳಿ ಸರಬರಾಜು ಮಾಡುತ್ತಿದೆ. ಈ ಸರಬರಾಜಿನಲ್ಲಿ ಯಾವುದೇ ರೀತಿಯಲ್ಲಿ ವ್ಯತ್ಯಯವಾಗಿಲ್ಲ. ಬೆಂಗಳೂರು ನಗರಕ್ಕೆ ಬರಬೇಕಾದ ಕಾವೇರಿ ನೀರು ಬರುತ್ತಿದೆ. ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಬೆಂಗಳೂರು ನಗರಕ್ಕೆ ಮಾಸಿಕ 1.54 ಟಿಎಂಸಿ ನೀರು ಅಗತ್ಯವಾಗಿದ್ದು,ಮಾರ್ಚ್ ತಿಂಗಳಿಂದ ಜುಲೈ ಅಂತ್ಯದವರೆಗೆ ಒಟ್ಟು 8 ಟಿಎಂಸಿ ನೀರು ಅಗತ್ಯವಿದೆ. ಬೆಂಗಳೂರು ಸೇರಿದಂತೆ ಕಾವೇರಿ ನೀರಿನ ಮೇಲೆ ಅವಲಂಬನೆಯಾಗಿರುವ ನಗರಗಳಿಗೆ ಜುಲೈ ಅಂತ್ಯದವರೆಗೆ 17 ಟಿಎಂಸಿ ನೀರಿನ ಅವಶ್ಯಕತೆಯಿದೆ. ಕಾವೇರಿ ಜಲಾಶಯಗಳಲ್ಲಿ 34 ಟಿಎಂಸಿ ನೀರು ಸಂಗ್ರಹವಿದೆ. ಬೇಡಿಕೆಗಿಂತ ಎರಡು ಪಟ್ಟು ನೀರು ಸಂಗ್ರಹವಿದ್ದು, ಹೆದರುವ ಅಗತ್ಯವಿಲ್ಲ. ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಲು ಮಂಡಳಿ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸದ್ಯ 1.40 ಕೋಟಿ ಜನಸಂಖ್ಯೆ ಇದೆ. ಪ್ರತಿ ಮನುಷ್ಯನಿಗೆ ದಿನನಿತ್ಯ ಸರಾಸರಿ 150 ಲೀಟರ್ ನೀರಿನಂತೆ ದಿನವೊಂದಕ್ಕೆ 2100 ಎಂಎಲ್‍ಡಿ ನೀರು ಅಗತ್ಯವಿದೆ. 1450 ಎಂಎಲ್‍ಡಿ ನೀರು ಕಾವೇರಿಯಿಂದ ಬರುತ್ತಿದ್ದು, ಮಂಡಳಿ ವ್ಯಾಪ್ತಿಯ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತಿದೆ. ಬೆಂಗಳೂರು ಹೊರವಲಯದ 110 ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ 650 ಎಂಎಲ್‍ಡಿ ನೀರಿನ ಸಮಸ್ಯೆ ಉಂಟಾಗಿದೆ. ಇದುವರೆಗೂ ಬೋರವೆಲ್‍ಗಳನ್ನು ಅವಲಂಬಿಸಲಾಗಿತ್ತು. ಈಗ ಅಂತರ್ಜಲ ಮಟ್ಟ ಕುಸಿತದಿಂದ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರು ನಗರದಲ್ಲಿ ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮಂಡಳಿಯು 1300 ಎಂಎಲ್‍ಡಿ ಸಂಸ್ಕರಿಸಿದ ಗುಣಮಟ್ಟದ ನೀರನ್ನು ನೀರಿಲ್ಲದೇ ಒಣಗಿರುವ ನಾಯಂಡಹಳ್ಳಿ ಕೆರೆ, ಚಿಕ್ಕಬಾಣವಾರ ಕೆರೆ, ವರ್ತೂರು ಕೆರೆ, ಅಗರಂ ಕೆರೆ ಸೇರಿದಂತೆ 6 ಕೆರೆಗಳಿಗೆ ಹರಿಸಲಾಗುವುದು.
ಇದರಿಂದ ಸುತ್ತಮುತ್ತಲಿನ ಪ್ರದೇಶಗಳ ಅಂತರ್ಜಲ ಮಟ್ಟ ಹೆಚ್ಚಲಿದ್ದು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇದರ ಜೊತೆಗೆ ಆ ಕೆರೆಗಳ ಪಕ್ಕದಲ್ಲಿಯೇ ಫಿಲ್ಟರ್ ಬೋರ್‌ಗಳನ್ನು ಅಳವಡಿಸಲಾಗುವುದು. ವಾಟರ್ ಪ್ಲಾಂಟ್ ಅಳವಡಿಸಿ ಯೋಗ್ಯವಾದ ನೀರನ್ನು ಜನರಿಗೆ ಒದಗಿಸಲು ಕ್ರಮವಹಿಸಲಾಗುವುದು. ದೇವನಹಳ್ಳಿಯ ಕೋಟೆ ಬಳಿಯ ಕೆರೆ ಬಳಿ ಇದೇ ರೀತಿ ನೀರು ಸಂಸ್ಕರಿಸಿ ಯೋಗ್ಯವಾದ ನೀರನ್ನು ದೇವನಹಳ್ಳಿ ನಗರಕ್ಕೆ ಸರಬರಾಜು ಮಾಡಲಾಗುತ್ತಿರುವುದನ್ನು ಉದಾಹರಣೆಯಾಗಿ ನೀಡಲಾಗಿದೆ.
582 ಪ್ರದೇಶಗಳಲ್ಲಿ ಸಿಂಟೆಕ್ಸ್ ಟ್ಯಾಂಕ್‍ಗಳ ಅಳವಡಿಕೆ
ನಗರದ ಕೊಳಗೇರಿ ಪ್ರದೇಶ, ಜನನಿಬೀಡ ಪ್ರದೇಶ, ತಗ್ಗು ಮತ್ತು ಎತ್ತರದ ಪ್ರದೇಶಗಳಲ್ಲಿ 1 ಸಾವಿರದಿಂದ 3 ಸಾವಿರ ಲೀಟರ್ ಸಾಮರ್ಥ್ಯದ 582 ಸಿಂಟೆಕ್ಸ್ ಟ್ಯಾಂಕ್‍ಗಳನ್ನು ಅಳವಡಿಸಲಾಗಿದ್ದು, ನಿತ್ಯ ಎರಡು ಬಾರಿ ಭರ್ತಿ ಮಾಡಲಾಗುತ್ತದೆ. ಈ ಪ್ರದೇಶಗಳ ನಿವಾಸಿಗಳು ಸಿಂಟೆಕ್ಸ್ ಟ್ಯಾಂಕ್‍ಗಳ ಮೂಲಕ ಕುಡಿಯುವ ನೀರನ್ನು ಉಚಿತವಾಗಿ ಪಡೆಯುತ್ತಿದ್ದಾರೆ ಎಂದು ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಕಾವೇರಿ 5ನೇ ಹಂತದ ಕಾಮಗಾರಿ ಕ್ಷೀಪ್ರಗತಿಯಲ್ಲಿ ಜರುಗುತ್ತಿದ್ದು, ಮೇ 15ರೊಳಗೆ ಪೂರ್ಣಗೊಳ್ಳಲಿದೆ. 775 ಎಂಎಲ್‌ಡಿ ಸಾಮರ್ಥ್ಯದ ಈ ಯೋಜನೆಯಿಂದ ಬಿಬಿಎಂಪಿ ಗೆ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ ಎಂದೂ ತಿಳಿಸಿದೆ.
(This copy first appeared in Hindustan Times Kannada website. To read more like this please logon to kannada.hindustantimes.com )