Obituary: ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ, ಕೃಷಿ ತಜ್ಞ, ಕರ್ನಾಟಕ ಕೃಷಿ ಮಿಷನ್‌ ಮಾಜಿ ಅಧ್ಯಕ್ಷ ಎಸ್.ಎ.ಪಾಟೀಲ್‌ ನಿಧನ-bangalore news well known agricultural scientist former dharwad agri university vc sa patil passed away in bangalore kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Obituary: ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ, ಕೃಷಿ ತಜ್ಞ, ಕರ್ನಾಟಕ ಕೃಷಿ ಮಿಷನ್‌ ಮಾಜಿ ಅಧ್ಯಕ್ಷ ಎಸ್.ಎ.ಪಾಟೀಲ್‌ ನಿಧನ

Obituary: ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ, ಕೃಷಿ ತಜ್ಞ, ಕರ್ನಾಟಕ ಕೃಷಿ ಮಿಷನ್‌ ಮಾಜಿ ಅಧ್ಯಕ್ಷ ಎಸ್.ಎ.ಪಾಟೀಲ್‌ ನಿಧನ

SA Patil ಕೃಷಿ ತಜ್ಞ, ಕರ್ನಾಟಕ ಕೃಷಿ ಸಂಶೋಧನೆ, ಹೊಸ ಚಟುವಟಿಕೆಗಳ ಮೂಲಕ ಗಮನ ಸೆಳೆದ ಡಾ.ಎಸ್.ಎ.ಪಾಟೀಲ್‌ ನಿಧನರಾಗಿದ್ದಾರೆ.

ಪತ್ನಿಯೊಂದಿಗೆ ಸಂತಸದ ಕ್ಷಣದಲ್ಲಿ ಡಾ.ಎಸ್.ಎ.ಪಾಟೀಲ್‌. ಸೋಮವಾರ ಬೆಂಗಳೂರಿನಲ್ಲಿ ಪಾಟೀಲರು ನಿಧನರಾಗಿದ್ದಾರೆ.
ಪತ್ನಿಯೊಂದಿಗೆ ಸಂತಸದ ಕ್ಷಣದಲ್ಲಿ ಡಾ.ಎಸ್.ಎ.ಪಾಟೀಲ್‌. ಸೋಮವಾರ ಬೆಂಗಳೂರಿನಲ್ಲಿ ಪಾಟೀಲರು ನಿಧನರಾಗಿದ್ದಾರೆ.

ಬೆಂಗಳೂರು: ಕರ್ನಾಟಕ ಕೃಷಿ ಮಿಷನ್‌ ಅಧ್ಯಕ್ಷರಾಗಿ ಕೃಷಿ ವಲಯಕ್ಕೆ ಗಮನಾರ್ಹ ಕೆಲಸ ಮಾಡಿದ್ದ ಭಾರತದ ಪ್ರಮುಖ ಕೃಷಿ ವಿಜ್ಞಾನಿಗಳಲ್ಲೊಬ್ಬರಾಗಿದ್ದ ಡಾ. ಶರಣಗೌಡ ಎ.ಪಾಟೀಲ್‌( SA Patil) ಅವರು ಬೆಂಗಳೂರಿನಲ್ಲಿ ಸೋಮವಾರ ನಿಧನರಾದರು. ಧಾರವಾಡದಲ್ಲಿರುವ ಕೃಷಿ ವಿಶ್ವ ವಿದ್ಯಾನಿಲಯಕ್ಕೆ ಎರಡು ಬಾರಿ ಕುಲಪತಿಗಳಾಗಿಯೂ ಅಭೂತಪೂರ್ವ ಕೆಲಸ ಮಾಡಿದ್ದ ಶರಣಗೌಡ ಪಾಟೀಲ ಅವರು ಈಗಲೂ ಸಕ್ರಿಯರಾಗಿದ್ದರು. ಆದರೆ ಅನಾರೋಗ್ಯದಿಂದ ಕೊನೆಯುಸಿರೆಳೆದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಎಸ್‌ಎ ಪಾಟೀಲ್‌ ಅವರು ಕೃಷಿ ವಲಯದಲ್ಲಿ ಜನಪ್ರಿಯ ಹೆಸರು. ಕೃಷಿಕರ ಕುಟುಂಬದಲ್ಲಿ ಜನಿಸಿ ಕೃಷಿ ವಿಜ್ಞಾನದಲ್ಲಿ ಪದವಿ ಪಡೆದು ಸಂಶೋಧನೆಯಲ್ಲಿ ತೊಡಗಿಸಿಕೊಂಡವರು. ಆನಂತರ ಕೃಷಿ ವಿಶ್ವವಿದ್ಯಾನಿಲಯದ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದವರು. ಹಲವಾರು ಕೃಷಿ ಸಂಸ್ಥೆಗಳೊಂದಿಗೆ ಒಡನಾಟ ಇಟ್ಟುಕೊಂಡವರು. ಕೃಷಿಕರು ಆರ್ಥಿಕವಾಗಿ ಸದೃಢರಾಗಬೇಕು. ಕೃಷಿ ಸಂಶೋಧನೆಗಳು ರೈತರಿಗೆ ತಲುಪಬೇಕು. ರೈತರು ಇದರ ಉಪಯೋಗ ಪಡೆದು ಹೆಚ್ಚು ಇಳುವರಿ ಪಡೆಯಬೇಕು. ಅದು ಜನರಿಗೆ ತಲುಪಬೇಕು. ಕೃಷಿ ಸಂಶೋಧನೆ ಕೃಷಿಕರು , ಮಾರುಕಟ್ಟೆ ಹಾಗೂ ಬಳಕೆದಾರರು ಒಂದೇ ಸೂರಿನಡಿ ಬರಬೇಕು ಎಂದು ಬಯಸುತ್ತಿದ್ದವರು. ಇದಕ್ಕಾಗಿ ನಮ್ಮ ಜೀವಮಾನದುದ್ದಕ್ಕೂ ಶ್ರಮಿಸಿದವರು ಎಸ್‌.ಎ.ಪಾಟೀಲರು.

ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಅಧ್ಯಾಪಕ, ಸಂಶೋಧನಾ ವಿಭಾಗ ಮುಖ್ಯಸ್ಥ, ವಿಸ್ತರಣಾ ನಿರ್ದೇಶಕರಾಗಿ ಆನಂತರ ಎರಡು ಅವಧಿಗೆ ಕುಲಪತಿ ಆಗಿಯೂ ಸಮರ್ಥವಾಗಿ ಕಾರ್ಯನಿರ್ವಹಿಸಿದವರು. ಅದರಲ್ಲೂ ಧಾರವಾಡ ಕೃಷಿ ವಿಸ್ತರಣಾ ವಿಭಾಗದ ಚಟುವಟಿಕೆಗಳನ್ನು ದೇಶ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ವಿಸ್ತರಿಸಿದ್ದರು. ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಕೃಷಿ ಮೇಳಗಳನ್ನು ಆರಂಭಿಸಿ ಜನರು, ಕೃಷಿಕರು, ವಿಜ್ಞಾನಿಗಳನ್ನು ಒಂದೆಡೆಗೆ ಸೇರುವಂತೆ ಮಾಡಿದರು. ಕೃಷಿ ಮೇಳಗಳು ಕರ್ನಾಟಕ ಮಾತ್ರವಲ್ಲದೇ ಎಲ್ಲೆಡೆ ವಿಸ್ತರಣೆಗೊಳ್ಳಲು ಎಸ್‌ಎ ಪಾಟೀಲರ ಶ್ರಮ ಅಪಾರ. ಧಾರವಾಡ ಕೃಷಿ ವಿವಿಯಲ್ಲಿ ಬೀಜದ ಘಟಕ( Seed Unit), ಸಾವಯವ ಕೃಷಿ ಸಂಸ್ಥೆ( Institute of Organic Farming), ಜೈವಿಕ ವಿಜ್ಞಾನ ಸಂಸ್ಥೆ(Institute of Biotechnolgy) , ಕೃಷಿ ವಹಿವಾಟು ಜ್ಞಾನ ಕೇಂದ್ರ( Agri business Knowledge centre) ಆರಂಭಿಸಿದವರು ಎಸ್‌.ಎ.ಪಾಟೀಲರು. ಇವೆಲ್ಲವೂ ಈಗ ಅತ್ಯುತ್ತಮ ಕೇಂದ್ರಗಳಾಗಿ ಹೆಸರು ಪಡೆದಿವೆ.

ಕರ್ನಾಟಕ ಕೃಷಿ ಮಿಷನ್‌ ಅಧ್ಯಕ್ಷರಾಗಿಯೂ ಅವರು ಹಲವಾರು ಶಿಫಾರಸ್ಸುಗಳನ್ನು ಮಾಡಿದ್ದರು. ಕೃಷಿ ವಲಯದ ಪ್ರಗತಿಗೆ ಅವರ ಶಿಫಾರಸ್ಸುಗಳು ಪೂರಕವಾಗಿದ್ದು. ಸರ್ಕಾರವೂ ಇದನ್ನು ಜಾರಿಗೊಳಿಸಿತ್ತು. ಕೃಷಿ ಇಲಾಖೆಯ ಹಲವಾರು ಸುಧಾರಣೆಗಳ ಹಿಂದೆ ಇದ್ದವರು ಎಸ್‌ಎ ಪಾಟೀಲರು.

ಇದಲ್ಲದೇ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ(Indian Agricultural Research Institute) ನಿರ್ದೇಶಕರೂ ಆಗಿದ್ದರು. ಈ ಮಹತ್ವ ಹುದ್ದೆ ಅಲಂಕರಿಸಿದ ಕರ್ನಾಟಕದಮೊದಲನೇ ಕೃಷಿ ತಜ್ಞರು ಇವರೇ. ರೈತರು ಕಡಿಮೆ ದರದಲ್ಲಿ ಗುಣಮಟ್ಟದ ಹಾಗೂ ದೇಶದ ಬೇರೆ ಬೇರೆ ಭಾಗಗಳ ಬಿತ್ತನೆ ಬೀಜಗಳು ಸಿಗಬೇಕು ಎಂದು ಯೋಜಿಸಿ ಅದನ್ನು ಜಾರಿಗೊಳಿಸಿದವರು ಪಾಟೀಲರು. ಅಲ್ಲದೇ ಬೀಜಗಳ ರಫ್ತು ಕೇಂದ್ರವಾಗಿ ಭಾರತವನ್ನು ರೂಪಿಸುವಲ್ಲಿ ಅವರ ಪಾತ್ರವೂ ಹಿರಿದು.

ಕರ್ನಾಟಕದಲ್ಲಿ ಮಾತ್ರವಲ್ಲ. ಇಡೀ ದೇಶದಲ್ಲಿ ನಮ್ಮ ರೈತರು ಕೃಷಿ ಚಟುವಟಿಕೆ. ಉತ್ಪಾದನೆ ಹಾಗೂ ಹೊಸ ಪ್ರಯೋಗಗಳಲ್ಲಿ ಯಶಸ್ವಿಯಾಗಿದ್ದರ ಹಿಂದೆ, ಕೃಷಿ ಇಲಾಖೆ ಜನಮುಖಿಯಾಗಿ ಕೆಲಸ ಮಾಡಿದ್ದರ ಹಿಂದೆ ಹಾಗೂ ಕೃಷಿ ಸಂಶೋಧನೆಗಳು ರೈತರನ್ನು ತಲುಪಿದ್ದರ ಹಿಂದೆ ಎಸ್‌ಎ ಪಾಟೀಲರ ಶ್ರಮ ಅಪಾರ. ಅವರೊಬ್ಬ ಕೃಷಿ ಪರ ಕಾಳಜಿಯ ದೊಡ್ಡ ವಿಜ್ಞಾನಿ ಎಂದು ಒಡನಾಡಿಗಳು ನೆನಪಿಸಿಕೊಂಡಿದ್ದಾರೆ.