ಕನ್ನಡ ಸುದ್ದಿ  /  ಕರ್ನಾಟಕ  /  Heart Attack: ಕರ್ನಾಟಕದಲ್ಲಿ ಹಠಾತ್ ಹೃದಯಾಘಾತಕ್ಕೆ ಯುವಕರ ಬಲಿ, ಆರೋಗ್ಯ ಸಚಿವರಿಗೆ ರಾಜಾರಾಂ ತಲ್ಲೂರ್‌ ಪತ್ರ

Heart Attack: ಕರ್ನಾಟಕದಲ್ಲಿ ಹಠಾತ್ ಹೃದಯಾಘಾತಕ್ಕೆ ಯುವಕರ ಬಲಿ, ಆರೋಗ್ಯ ಸಚಿವರಿಗೆ ರಾಜಾರಾಂ ತಲ್ಲೂರ್‌ ಪತ್ರ

ಹೃದಯಾಘಾತದಿಂದ ಯುವಕರು ಪ್ರಾಣ ಕಳೆದುಕೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಚಿಂತಕ ರಾಜಾರಾಂ ತಲ್ಲೂರು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಹೃದಯಾಘಾತ ಕುರಿತು ರಾಜಾರಾಂ ತಲ್ಲೂರ್‌ ಪತ್ರ
ಹೃದಯಾಘಾತ ಕುರಿತು ರಾಜಾರಾಂ ತಲ್ಲೂರ್‌ ಪತ್ರ

ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಯುವಕರು ಹಠಾತ್‌ ಹೃದಯಾಘಾತಕ್ಕೆ ಸಿಲುಕಿ ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಅಧಿಕವಾಗುತ್ತಿವೆ. ಕಳೆದ ವಾರ ಒಂದೇ ಕರ್ನಾಟಕದ ನಾನಾ ಭಾಗಗಳಲ್ಲಿ ಆರು ಮಂದಿ ಹೃದಯಾಘಾತದಿಂದಲೇ ಮೃತಪಟ್ಟಿದ್ಧಾರೆ. ಎದೆಭಾಗದಲ್ಲಿ ನೋವು ಕಾಣಿಸಿಕೊಂಡ ಕೆಲವೇ ಕ್ಷಣದಲ್ಲಿ ಹಠಾತ್‌ ಕುಸಿತಕ್ಕೆ ಒಳಗಾಗಿ ಮನೆಯಲ್ಲೋ. ದಾರಿ ಮಧ್ಯದಲ್ಲೋ ಇಲ್ಲವೇ ಆಸ್ಪತ್ರೆಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಇದು ಗಂಭೀರ ಪ್ರಕರಣವಾಗಿರುವುದರಿಂದ ಸರ್ಕಾರ ಈ ಬಗ್ಗೆ ಕ್ರಮ ವಹಿಸಬೇಕು ಎನ್ನುವ ಬೇಡಿಕೆಯೊಂದಿಗೆ ಕರ್ನಾಟಕದ ಹಿರಿಯ ಚಿಂತಕ ರಾಜಾರಾಂ ತಲ್ಲೂರ್‌ ಅವರು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಅಲ್ಲದೇ ಪತ್ರಿಕೆಯಲ್ಲಿ ಬಂದಿರುವ ವರದಿಗಳ ತುಣಕನ್ನೂ ಲಗತ್ತಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈ ಹಿಂದೆಯೂ ಅವರು ಇದೇ ರೀತಿಯ ಪತ್ರವನ್ನು ನ್ಯಾಯಾಧೀಶರು, ಕೇಂದ್ರ ಸರ್ಕಾರ ಹಾಗೂ ಕರ್ನಾಟಕದ ಸಚಿವರಿಗೆ ಬರೆದಿದ್ದರು. ಇಂತಹ ವಿಷಯದಲ್ಲಿ ಆರೋಗ್ಯ ಇಲಾಖೆ ಹಾಗೂ ಸರ್ಕಾರಗಳು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು. ಯುವಕರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು. ಇದರಿಂದ ಮಾತ್ರ ಯುವಕರ ಜೀವಗಳನ್ನು ಉಳಿಸಿಕೊಳ್ಳಲು ಸಾಧ್ಯ. ಕರ್ನಾಟಕ ಸರ್ಕಾರವಾದರೂ ಈ ನಿಟ್ಟಿನಲ್ಲಿ ಗಟ್ಟಿಯಾದ ಕಾರ್ಯಕ್ರಮಗಳನ್ನು ರೂಪಿಸಲು ಕ್ರಮ ವಹಿಸಬೇಕು. ವಿಳಂಬವಾದಷ್ಟು ಇನ್ನಷ್ಟು ಜೀವಗಳು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಗಳೂ ಇರುವುದರಿಂದ ತುರ್ತಾಗಿ ಏನಾದರೂ ಕ್ರಮ ಆಗಲೇಬೇಕು ಎನ್ನುವುದು ಅವರ ಸಲಹೆ.

ರಾಜಾರಾಂ ಅವರು ಬರೆದಿರುವ ಪತ್ರದ ವಿವರ ಹೀಗಿದೆ.

ಸನ್ಮಾನ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ (Dinesh Gundu Rao) ಅವರ ಸನ್ನಿಧಾನಕ್ಕೆ,

ತಾವು ಹಠಾತ್ ಸಾವುಗಳು ಸಂಭವಿಸುತ್ತಿರುವುದಕ್ಕೆ ಕೋವಿಡ್ ಲಸಿಕೆ ಕಾರಣ ಅಲ್ಲ ಎಂದು ನಿನ್ನೆ ಸಮಜಾಯಿಷಿ ನೀಡಿರುವುದನ್ನು ಗಮನಿಸಿದೆ. ಬಹಳ ಸಂತೋಷ.

ಆದರೆ, ಜನ ಹಠಾತ್ ಕುಸಿದು, ಹೃದಯಾಘಾತದಿಂದ ಈ ಪ್ರಮಾಣದಲ್ಲಿ ಸಾಯುತ್ತಿರುವುದಕ್ಕೆ ಏನಾದರೂ ಒಂದು ಬಲವಾದ ಕಾರಣ ಇರಲೇಬೇಕು. ಇಲ್ಲಿ ತಾವು ಉಸ್ತುವಾರಿ ಸಚಿವರಾಗಿರುವ ಜಿಲ್ಲೆಯಲ್ಲೇ ಎರಡು ದಿನದಲ್ಲಿ ಸಂಭವಿಸಿದ ಆರು ಪ್ರಕರಣಗಳ ವರದಿ ಇದೆ (ಇಂದಿನ ವಿಜಯಕರ್ನಾಟಕ ಪತ್ರಿಕೆಯ ವರದಿ ಇದು). ಪತ್ರಿಕೆಗಳ ಗಮನಕ್ಕೆ ಬರದ ಘಟನೆಗಳೂ ಇರಬಹುದು, ಬೇರೆ ಜಿಲ್ಲೆಗಳಲ್ಲೂ ಇಂತಹದು ಸಂಭವಿಸಿರಬಹುದು. ಹೀಗೆ ಹಠಾತ್ ತೀರಿಕೊಂಡಿರುವವರ ಪ್ರಾಯವರ್ಗಗಳನ್ನು ಗಮನಿಸಿ. 38, 26,27, 42… ಇವೆಲ್ಲ ಸಾಮಾನ್ಯವಾಗಿ ಈ ಪ್ರಮಾಣದಲ್ಲಿ ಹೃದಯಾಘಾತಕ್ಕೆ ತುತ್ತಾಗುವ ಪ್ರಾಯವರ್ಗಗಳಲ್ಲ. ಇಂತಹ ಉತ್ಪಾದಕ ಪ್ರಾಯವರ್ಗದಲ್ಲಿ (productive age group) ಕಳೆದ ಮೂರು ವರ್ಷಗಳಿಂದ ಸಂಭವಿಸುತ್ತಿರುವ ಗಮನಾರ್ಹ ಪ್ರಮಾಣದ ಅಕಾರಣ ಸಾವುಗಳು ಈಗಾಗಲೇ ಆರೋಗ್ಯ ಇಲಾಖೆಯ, ತಮ್ಮ ಸರ್ಕಾರದ ಗಮನ ಸೆಳೆಯಬೇಕಿತ್ತು.

ಈಗ ತಮ್ಮ ಗಮನಕ್ಕೆ ಇಂತಹ ಸಾವುಗಳು ಸಂಭವಿಸುತ್ತಿವೆ ಎಂದು ಕಂಡುಬಂದಿರುವ ಹಿನ್ನೆಲೆಯಲ್ಲಿ, ಇದಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಲು ಸಂಶೋಧನೆಗಳನ್ನು ಆರಂಭಿಸುವುದಕ್ಕಾಗಿ ತಕ್ಷಣ ಆದೇಶ ನೀಡಬೇಕು ಮತ್ತು ಇನ್ನಷ್ಟು ಅಕಾರಣ ಸಾವುಗಳು ಸಂಭವಿಸದಂತೆ ಜನರ ರಕ್ಷಣೆ ಮಾಡಬೇಕು.

ಈ ನಿಟ್ಟಿನಲ್ಲಿ, ಈಗಾಗಲೇ ನಾನು ICMRಗೆ, ಬಾರತ ಸರ್ಕಾರಕ್ಕೆ, ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದೆ. ಆದರೆ ಅಲ್ಲಿಂದ ಯಾವುದೇ ಕ್ರಮ ಆಗಿಲ್ಲ. ಕಡೆಯ ಪಕ್ಷ ಕರ್ನಾಟಕ ಸರ್ಕಾರದ ಕಡೆಯಿಂದಲಾದರೂ ಈ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಲು ತಾವು ದೊಡ್ಡ ಮನಸ್ಸು ಮಾಡಬೇಕು ಮತ್ತು ಜನರ ಜೀವ ಉಳಿಸಬೇಕು.

ಇನ್ನೊಂದು ಬರಹ

·ಹೃದಯಾಘಾತದ ಸಾವುಗಳ ಕುರಿತು "ಪಾಠ" ಮಾಡಲು ಬರುವವರ ಗಮನಕ್ಕೆ:

ಮಾನ್ಯರೇ, ಪ್ರತಿಯೊಂದು ಕುಟುಂಬದಲ್ಲಿ, ಊಹಿಸಲಿಕ್ಕೂ ಸಾಧ್ಯವಿಲ್ಲದ ಪ್ರಮಾಣದಲ್ಲಿ ಸಂಭವಿಸುತ್ತಿರುವ ಕುಸಿದು ಬಿದ್ದು ಸಾವುಗಳು, ಹೃದಯಾಘಾತದ ಸಾವುಗಳ ಕುರಿತು ಸಂಶಯದ ಪ್ರಶ್ನೆಗಳನ್ನು ಎತ್ತಿ; "ಅದಕ್ಕೆ ಕಾರಣ ಪತ್ತೆ ಮಾಡಿ, ಅದು ಜವಾಬ್ದಾರಿಯುತ ಹುದ್ದೆಗಳಲ್ಲಿರುವವರ ಕರ್ತವ್ಯ" ಎಂದು ಹೇಳಿದರೆ, ಅದಕ್ಕೆ ಬಗೆಬಗೆಯ ಪ್ರತಿಕ್ರಿಯೆಗಳು ಬರುತ್ತಿವೆ.

"ಪ್ರತಿಯೊಂದು ಲಸಿಕೆಗೆ ಅಡ್ಡ ಪರಿಣಾಮಗಳು ಇದ್ದೇ ಇರುತ್ತವೆ. ಅದು ತೀರಾ ಕಡಿಮೆ ಪ್ರಮಾಣದಲ್ಲಿರುತ್ತದೆ. ಲಸಿಕೆಯ ಲಾಭ-ನಷ್ಟಗಳನ್ನು ಹೋಲಿಸಿ ನೋಡಿದರೆ ಲಾಭವೇ ಅಧಿಕ" ಎಂಬುದು ಇಂತಹ ಪ್ರತಿಕ್ರಿಯೆಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿವೆ.

ಅಂತಹ ಎಲ್ಲರಿಗೆ ಒಂದೇ ಪ್ರಶ್ನೆ

ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಇಂತಹ ಅಡ್ಡ ಪರಿಣಾಮಗಳನ್ನು ಗುರುತಿಸುವ ವ್ಯವಸ್ಥೆ ಎಷ್ಟು "ರೋಬಸ್ಟ್" ಇದೆ? ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಅಸಹಜ ಸಾವಿನ ಪ್ರಕರಣಗಳಲ್ಲಿ ಎಷ್ಟನ್ನು ನಮ್ಮ ಆರೋಗ್ಯ ವ್ಯವಸ್ಥೆ ಗುರುತಿಸಿ ದಾಖಲಿಸಿಕೊಂಡಿದೆ?

ನಾನು ಗಮನಿಸಿರುವಂತೆ 90% ಪ್ರಕರಣಗಳು ದಾಖಲಾಗೇ ಇಲ್ಲ. ಆಸ್ಪತ್ರೆಗಳಿಗೆ ಹೋಗುವಾಗಲೇ ಮೃತಪಟ್ಟ ಪ್ರಕರಣಗಳು, ಆಸ್ಪತ್ರೆಗೆ ಹೋದರೆ ಪ್ರೊಸೀಜರ್‌ಗಳು ಉದ್ದ ಎಂಬ ಕಾರಣಕ್ಕೆ ಹೋಗದ ಪ್ರಕರಣಗಳು ಊರೂರಿನಲ್ಲೂ ಇವೆ. ಹೋಗಲಿ, ಹೃದಯಾಘಾತಕ್ಕೆಂದು ಹೋದ ಪ್ರಕರಣಗಳಲ್ಲಿ ಎಷ್ಟನ್ನು "ಅಧಿಕೃತ ಅಡ್ಡಪರಿಣಾಮದ ವಿಂಡೋ" ಹೊರಬದಿಯಲ್ಲಿ ದಾಖಲಿಸಿಕೊಂಡು, ಅವುಗಳ ಪ್ರಮಾಣದಲ್ಲಾಗಿರುವ ಹೆಚ್ಚಳವನ್ನು ವರದಿ ಮಾಡಲಾಗಿದೆ? ಟರ್ಷರಿ ಕೇರ್ ಆಸ್ಪತ್ರೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ, ಹೃದಯಾಘಾತ-ಹೃದಯದ ಬ್ಲಾಕೇಜ್ ತೆರೆಯಲು ಆಂಜಿಯೊಬ್ಲಾಸ್ಟಿ ಪ್ರಕ್ರಿಯೆಗಳಲ್ಲಿ ಯಾವ ಪ್ರಮಾಣದ ಹೆಚ್ಚಳ ಆಗಿದೆ? ಏಕಾಏಕಿ ಈ ಹೆಚ್ಚಳಕ್ಕೆ ಕಾರಣಗಳನ್ನು ಗುರುತಿಸಲಾಗಿದೆಯೆ ಮತ್ತು ಇದನ್ನು ಸರ್ಕಾರಿ ವ್ಯವಸ್ಥೆಯ ಗಮನಕ್ಕೆ ತರಲಾಗಿದೆಯೆ?

ಜನರ ಅಮೂಲ್ಯ ಜೀವಗಳ ಬಗ್ಗೆ ಕಿಂಚಿತ್ತೂ ಪ್ರೀತಿ ಇಲ್ಲದೆ, ಯಾವುದೋ ಮುಲಾಜಿಗೆ ಎಲ್ಲವನ್ನೂ ಸಮರ್ಥಿಸಿಕೊಳ್ಳುವವರು ಮನುಷ್ಯರೆನ್ನಿಸಿಕೊಳ್ಳುವುದಿಲ್ಲ. ವೈದ್ಯರೆನ್ನಿಸಿಕೊಂಡವರು ವಿಜ್ಞಾನದಲ್ಲಿ ನಂಬಿಕೆ ಇರಿಸಿಕೊಂಡು ಮಾತನಾಡಬೇಕು!

ನಾನು ಈವತ್ತಿಗೂ ಈ ಸಾವುಗಳಿಗೆ ಲಸಿಕೆ/ಕೋವಿಡ್ ಕಾರಣ ಎಂಬ ವಾದ ಮಾಡುತ್ತಿಲ್ಲ. ಅದು ನನ್ನ ಕೆಲಸ ಅಲ್ಲ. ಆದರೆ, ಇಷ್ಟೊಂದು ಅಸಹಜ ಪ್ರಮಾಣದಲ್ಲಿ ಸಂಭವಿಸುತ್ತಿರುವ ಸಾವುಗಳಿಗೆ ಕಾರಣ ಪತ್ತೆಹಚ್ಚುವುದು ಸರ್ಕಾರದ ಕರ್ತವ್ಯ. ಅದನ್ನು ಮಾಡಿ ಎಂದಷ್ಟೇ ಮನವಿ ಮಾಡಿಕೊಳ್ಳುತ್ತಿರುವುದು.

ತಮ್ಮ ವಿಶ್ವಾಸಿ,

ರಾಜಾರಾಂ ತಲ್ಲೂರು (ಮಾಜೀ ಪತ್ರಕರ್ತ), ಉಡುಪಿ

IPL_Entry_Point

ವಿಭಾಗ