Bangalore Crime: ಕಾರು ಅಡ್ಡಾದಿಡ್ಡಿ ಚಾಲನೆ ಮಾಡಿದವರನ್ನು ಪ್ರಶ್ನಿಸಿದ ಯುವಕನನ್ನೇ ಕೊಂದು ಪರಾರಿಯಾದ ಗುಂಪು
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಕಾರು ಅಡ್ಡಾದಿಡ್ಡಿ ಚಾಲನೆ ಮಾಡಿದವರನ್ನು ಪ್ರಶ್ನಿಸಿದ ಯುವಕನನ್ನೇ ಕೊಂದು ಪರಾರಿಯಾದ ಗುಂಪು

Bangalore Crime: ಕಾರು ಅಡ್ಡಾದಿಡ್ಡಿ ಚಾಲನೆ ಮಾಡಿದವರನ್ನು ಪ್ರಶ್ನಿಸಿದ ಯುವಕನನ್ನೇ ಕೊಂದು ಪರಾರಿಯಾದ ಗುಂಪು

Crime News ಬೆಂಗಳೂರು ಹೊರವಲಯದ ಹೊಸಕೋಟೆ ಬಳಿ ಚೆನ್ನೈ ಹೆದ್ದಾರಿಯಲ್ಲಿ ಕಾರು ಅಡ್ಡಾದಿಡ್ಡಿ ಚಾಲನೆ ಮಾಡಿದ ಗುಂಪು ಪ್ರಶ್ನಿಸಿದ ಯುವಕನನ್ನೇ ಕೊಲೆ ಮಾಡಿರುವ ಪ್ರಕರಣ ನಡೆದಿದೆ.ವರದಿ: ಎಚ್.ಮಾರುತಿ.ಬೆಂಗಳೂರು

ಹೊಸಕೋಟೆ ಬಳಿ ಯುವಕನನ್ನು ಕೊಲೆ ಮಾಡಲಾಗಿದೆ.
ಹೊಸಕೋಟೆ ಬಳಿ ಯುವಕನನ್ನು ಕೊಲೆ ಮಾಡಲಾಗಿದೆ.

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಕೆಂದ್ರದ ಸಮೀಪ ಇರುವ ಮೈಲಾಪುರ ಎಂಬಲ್ಲಿ 27 ವರ್ಷದ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮೃತ ಯುವಕನನ್ನು ತರಕಾಯಿ ವ್ಯಾಪಾರಿ ಗಂಗಾಪುರದ ನವೀನ್‌ ನಾಯಕ್‌ ಎಂದು ಗುರುತಿಸಲಾಗಿದೆ. ವೃತ್ತಿಯಿಂದ ತರಕಾರಿ ವ್ಯಾಪಾರಿಯಾಗಿದ್ದ ನವೀನ್‌ ತರಕಾರಿ ತರಲು ಬೆಂಗಳೂರಿನ ಕೆ.ಆರ್‌. ಮಾರುಕಟ್ಟೆಗೆ ಆಗಮಿಸಿದ್ದರು. ತರಕಾರಿ ಖರೀದಿಸಿ ಬೆಳಗಿನ ಜಾವ ಊರಿಗೆ ಹಿಂತಿರುಗುವಾಗ ಈ ಹತ್ಯೆ ನಡೆದಿದೆ.

ಪೊಲೀಸರ ಪ್ರಕಾರ ಮೈಲಾಪುರ ಗ್ರಾಮದ ಸಮೀಪ ಬೆಂಗಳೂರು- ಚೆನ್ನೈ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಕಾರೊಂದು ಅಡ್ಡಾದಿಡ್ಡಿಯಾಗಿ ಚಲಿಸುತ್ತಿತ್ತು. ಈ ರೀತಿ ಕಾರನ್ನು ಚಲಾಯಿಸಿದರೆ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲವೇ ಎಂದು ನವೀನ್‌ ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಕಾರಿನಲ್ಲಿದ್ದ ಗುಂಪು ನವೀನ್‌ ಜೊತೆ ಜಗಳ ಆರಂಭಿಸಿದ್ದಾರೆ. ಈ ಜಗಳ ವಿಕೋಪಕ್ಕೆ ತೆರಳಿ ನವೀನ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ನಡೆದಾಗ ಸ್ಥಳದಲ್ಲಿದ್ದ ಸ್ಥಳೀಯರೂ ಇದನ್ನೇ ಪುಷ್ಠೀಕರಿಸಿದ್ದಾರೆ.

ಕೊಲೆಗೆ ಬೇರೆ ಕಾರಣಗಳಿವೆಯೇ ಎಂದು ತಿಳಿದು ಬಂದಿಲ್ಲ. ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ. ಕಾರಿನ ನಂಬರ್‌ ಆಧಾರದ ಮೇಲೆ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವುದಾಗಿ ಹೊಸಕೋಟೆ ಪೊಲೀಸರು ತಿಳಿಸಿದ್ದಾರೆ. ಮೃತ ಯುವಕ ನವೀನ್‌ ಕುಟುಂಬದ ಸದಸ್ಯರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೇಶ್ಯಾವಾಟಿಕೆ; ಇಬ್ಬರು ವಿದೇಶಿ ಮಹಿಳೆಯರ ರಕ್ಷಣೆ

ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನ ಬಾಣಸವಾಡಿಯ ಹೋಟೆಲ್‌ವೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ಇಬ್ಬರು ವಿದೇಶಿ ಮಹಿಳೆಯರನ್ನು ರಕ್ಷಿಸಿದ್ದಾರೆ.

ಎಚ್‌ಆರ್‌ ಬಿಆರ್‌ ಲೇಔಟ್‌ ನಲ್ಲಿರುವ ಹೋಟೆಲ್‌ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು. ಹೋಟೆಲ್‌ ವ್ಯವಸ್ಥಾಪಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ವಿದೇಶಿ ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ. ಹಣದ ಆಮಿಷವೊಡ್ಡಿ ಮಹಿಳೆಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸುಲಿಗೆ ಪ್ರಕರಣ; 7 ಆರೋಪಿಗಳ ಬಂಧನ, 3 ದ್ವಿಚಕ್ರ ವಾಹನಗಳ ವಶ

ಎರಡು ಪ್ರತ್ಯೇಕ ಸುಲಿಗೆ ಪ್ರಕರಣಗಳಲ್ಲಿ 7 ಆರೋಪಿಗಳನ್ನು ಬಂಧಿಸಿರುವ ಪೊಲೀಸರು 3 ದ್ವಿಚಕ್ರ ವಾಹನ, ಆರು ಮೊಬೈಲ್‌ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಣ್ಣೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಚೇಳೀಕೆರೆ ಪಿಳ್ಳಣ್ಣ ಲೇಔಟ್‌ ನಲ್ಲಿರುವ ಮನೆಯೊಂದಕ್ಕೆ ನುಗ್ಗಿ ಮನೆಯಲ್ಲಿದ್ದ ಮಾಲೀಕ ಮತ್ತು ಅವರ ಇಬ್ಬರು ಸ್ನೇಹಿತರ ಮೊಬೈಲ್‌ ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.

ಬಾತ್ಮೀದಾರರು ನೀಡಿದ ಖಚಿತ ಮಾಹಿತಿಯನ್ನಾಧರಿಸಿ ಎಚ್.ಬಿ.ಅರ್.ಲೇಔಟ್‌ ಐದನೇ ಹಂತದಲ್ಲಿ ಓಡಾಡುತ್ತಿದ್ದ ಕಳ್ಳರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇವರೇ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಇವರು ಬಳಸುತ್ತಿದ್ದ ಎರಡು ದ್ವಿಚಕ್ರ ವಾಹನ ಮತ್ತು ಐದು ಮೊಬೈಲ್‌ಗಳನ್ನು ವಶಪಡಿಸಿಕೊಂಡು ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮತ್ತೊಂದು ಸುಲಿಗೆ ಪ್ರಕರಣದಲ್ಲಿ ಇದೇ ಪೊಲೀಸ್‌ ಠಾಣೆಯ ಪೊಲೀಸರು ಮೂವರು ಆರೋಪಿಗಳು, ಒಂದು ದ್ವಿಚಕ್ರ ವಾಹನ, ಮತ್ತು ಮೊಬೈಲ್‌ ಗಳನ್ನು ವಶಪಡಿಸಿಕೊಂಡಿದ್ದಾರೆ.ಎಚ್.ಬಿ.ಆರ್.‌ ಲೇಔಟ್‌ ನ 18ನೇ ಕ್ರಾಸ್‌ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಬೈಕ್‌ ನಲ್ಲಿ ಹಿಂಬಾಲಿಸಿಕೊಂಡು ಬಂದು ಚಾಕು ತೋರಿಸಿ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

(ವರದಿ: ಎಚ್.ಮಾರುತಿ, ಬೆಂಗಳೂರು)

Whats_app_banner