ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮುಂದಿನ ವಾರಾಂತ್ಯಕ್ಕೆ ಮೂರು ದಿನ ಸಾವಯವ ಮಾವು ಹಾಗೂ ಹಲಸಿನ ಮೇಳ: ಸ್ಪರ್ಧೆಗಳೂ ಉಂಟು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮುಂದಿನ ವಾರಾಂತ್ಯಕ್ಕೆ ಮೂರು ದಿನ ಸಾವಯವ ಮಾವು ಹಾಗೂ ಹಲಸಿನ ಮೇಳ: ಸ್ಪರ್ಧೆಗಳೂ ಉಂಟು

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮುಂದಿನ ವಾರಾಂತ್ಯಕ್ಕೆ ಮೂರು ದಿನ ಸಾವಯವ ಮಾವು ಹಾಗೂ ಹಲಸಿನ ಮೇಳ: ಸ್ಪರ್ಧೆಗಳೂ ಉಂಟು

ಬೆಂಗಳೂರು ನಗರದ ಲಾಲ್‌ಬಾಗ್‌ನಲ್ಲಿ ಮುಂದಿನ ವಾರ ಅಂದರೆ ಮೇ 23ರಿಂದ ಮೂರು ದಿನಗಳ ಕಾಲ ಸಾವಯವ ಮಾವಿನ ಹಣ್ಣು ಹಾಗೂ ಹಲಸಿನ ಹಣ್ಣಿನಮೇಳವನ್ನು ಆಯೋಜಿಸಲಾಗಿದೆ. ಅಲ್ಲದೇ ವಿವಿಧ ಸ್ಪರ್ಧೆಗಳೂ ಇರಲಿವೆ.

ಬೆಂಗಳೂರಿನಲ್ಲಿ ಮಾವು, ಹಲಸಿನ ಮೇಳ ಸವಿಯಲು ಬನ್ನಿ
ಬೆಂಗಳೂರಿನಲ್ಲಿ ಮಾವು, ಹಲಸಿನ ಮೇಳ ಸವಿಯಲು ಬನ್ನಿ

ಬೆಂಗಳೂರು: ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜನರಿಗೆ ಮುಂದಿನ ವಾರಾಂತ್ಯದ ಮೂರು ದಿನ ವಿಶೇಷ ಮೇಳವೊಂದು ಆಯೋಜನೆಗೊಂಡಿದೆ. ಈಗಾಗಲೇ ಮಾವು ಹಾಗು ಹಲಸಿನ ಅವಧಿ ಶುರುವಾಗಿದ್ದು, ಎರಡೂ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ ಮಾರುಕಟ್ಟೆಯಲ್ಲಿ ಯಾವ ರೀತಿಯ ಹಣ್ಣಗಳು ಸಿಗಬಹುದೋ ಎನ್ನುವ ಆತಂಕ ಇರುವವರು, ಮಾವು-ಹಲಸಿನ ಪ್ರಿಯರು ಬೆಂಗಳೂರಿನಲ್ಲಿ ಮೇ ಮೇ 23 ರಿಂದ 25 ನಡೆಯಲಿರುವ ಮಾವು- ಹಲಸಿನ ಮೇಳದಲ್ಲಿ ಭಾಗಿಯಾಗಬಹುದು. ಅದು ಸಾವಯವ ಮಾವಿನ ಹಣ್ಣು ಈ ಬಾರಿ ಮೇಳದಲ್ಲಿ ಜನರ ಬಾಯಿ ರುಚಿ ತಣಿಸಲು ಅಣಿಯಾಗಿದೆ. ಅಲ್ಲದೇ ಬಗೆಬಗೆಯ ಹಲಸು ಕೂಡ ರುಚಿ ನೀಡಲಿವೆ. ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳಿಂದಲೂ ಮಾವು, ಹಲಸಿನ ಮಾರಾಟಗಾರರು ಆಗಮಿಸಲಿದ್ದಾರೆ.

ಕರ್ನಾಟಕ ತೋಟಗಾರಿಕಾ ಇಲಾಖೆಯ ಆಶ್ರಯದಲ್ಲಿ ಜೈವಿಕ್ ಕೃಷಿಕ್ ಸೊಸೈಟಿ ಲಾಲ್ ಬಾಗ್ ನಲ್ಲಿ ಮೇ 23-25 ರವರೆಗೆ ಆಯೋಜಿಸಿರುವ 'ಸಾವಯವ ಮಾವು ಮತ್ತು ಹಲಸಿನ ಮೇಳ'ದಲ್ಲಿ ಬಗೆ ಬಗೆಯ ಹಲಸನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಬೆಂಗಳೂರು,ಮೈಸೂರು, ತುಮಕೂರು,ಕೋಲಾರ, ಚಿಕ್ಕಬಳ್ಳಾಪುರ,ಮಂಡ್ಯ ಸೇರಿದಂತೆ ನಾನಾ ಭಾಗದಿಂದ ತರಲಾಗುತ್ತಿದೆ. ಚೆನ್ನಾಗಿ ಬೆಳೆದು ಹಣ್ಣು ಮಾಡಿದ ಸಾವಯವ ಮಾವು ಕೂಡ ಮಾರಾಟಕ್ಕೆ ಬರಲಿದೆ.

ಈಗಾಗಲೇ ಮೈಸೂರು ಸೇರಿದಂತೆ ಹಲವು ಕಡೆ ಮೇಳಗಳನ್ನು ಆಯೋಜಿಸಿರುವ ಸಹಜ ಸಮೃದ್ದ ಸಂಸ್ಥೆಯೂ ಕೂಡ ಈ ಮೇಳದಲ್ಲಿ ಭಾಗಿಯಾಗಲಿದೆ ಎಂದು ಕೃಷ್ಣಪ್ರಸಾದ್‌ ಗೋವಿಂದಯ್ಯ ಮಾಹಿತಿ ನೀಡಿದ್ದಾರೆ.

ಮಕ್ಕಳಿಗೆ ಸಾವಯವ ಮಾವು ಹಾಗೂ ಹಲಸಿನ ಕುರಿತು ಚಿತ್ರಕಲಾ ಸ್ಪರ್ಧೆ, ರೈತರಿಗೆ ಹಲಸು ಕೃಷಿ ತರಬೇತಿ , ಹಲಸು ಎತ್ತುವ ಸ್ಪರ್ಧೆ ಮೊದಲಾದ ಕಾರ್ಯಕ್ರಮಗಳು ಏರ್ಪಾಡಾಗಿವೆ. ಮಹಿಳೆಯರು, ಮಕ್ಕಳು, ಪುರುಷರ ಸಹಿತ ಎಲ್ಲ ವಯೋಮಾನದವರಿಗೂ ಸ್ಪರ್ಧೆಗಳು ಇರಲಿವೆ.

ಮೇ 23ರ ಶುಕ್ರವಾರ ಮಧ್ಯಾಹ್ನ 3ಕ್ಕೆ ಮಾವು ಹಾಗೂ ಹಲಸಿನ ಮೇಳ ಶುರುವಾಗಲಿದೆ. ಮುಂದಿನ ಎರಡು ದಿನವೂ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮೇಳ ಲಾಲ್‌ಬಾಗ್‌ ನ ಒಳಭಾಗದಲ್ಲಿರುವ ಎಂ.ಎಚ್‌.ಮರೀಗೌಡ ಸಭಾಂಗಣದಲ್ಲಿ ನಡೆಯಲಿದೆ.

ಈ ಮೇಳಕ್ಕೆ ಕೆಂಪು ಹಾಗೂ ಬಿಳಿ ಅಂಟಿಲ್ಲದ ವಿವಿಧ ತಳಿಯ ಹಲಸಿನ ಹಣ್ಣುಗಳನ್ನು ರೈತರು ತರಲಿದ್ದಾರೆ.ರುದ್ರಾಕ್ಷಿ, ಚಂದ್ರ ಹಲಸು ವಿಶೇಷ ಆಕರ್ಷಣೆಯಾಗಲಿವೆ. ಇದಲ್ಲದೇ ನೈಸರ್ಗಿಕ ಕೃಷಿ ಪದ್ದತಿಯಡಿ ಬೆಳೆದು,ಸ್ವಾಭಾವಿಕವಾಗಿಯೇ ಮಾಗಿರುವ ವಿವಿಧ ತಳಿಯ ಮಾವಿನ ಹಣ್ಣುಗಳು ಕೂಡ ಮೇಳದಲ್ಲಿ ಇರಲಿವೆ. ಬಿಲ್ವದ ಹಣ್ಣುಗಳು, ಅದರಿಂದ ತಯಾರಿಸಿದ ಜ್ಯೂಸ್‌ ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳು ಕೂಡ ಇರಲಿವೆ ಎನ್ನುವುದು ಜೈವಿಕ್‌ ಕೃಷಿಕ್‌ ಸೊಸೈಟಿಯ ಕೆ.ರಾಮಕೃಷ್ಣಪ್ಪ ಅವರು ನೀಡುವ ವಿವರಣೆ.

ಇದೇ ಮೇಳದಲ್ಲಿ ಹಲಸಿನ ಸಸಿಗಳು, ಮಾವಿನ ಗಿಡದ ಸಸಿಗಳು, ದೇಸಿ ತರಕಾರಿ ಬೀಜಗಳು ಕೂಡ ಪ್ರದರ್ಶನ ಹಾಗೂ ಮಾರಾಟಕ್ಕೆ ಸಿಗಲಿವೆ. ಅಲ್ಲದೇ ಹಲಸು ಹಾಗೂ ಮಾವಿನ ತಳಿಗಳ ಕುರಿತು ಮಾಹಿತಿಯನ್ನು ನೀಡಲಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಹಣ್ಣುಗಳ ಬಗ್ಗೆ ತಿಳಿದುಕೊಳ್ಳುವವರು, ಖರೀದಿಸುವವರು ಆಗಮಿಸಬಹುದು ಎಂದು ತಿಳಿಸಲಾಗಿದೆ.

ಹಣ್ಣುಗಳ ಜತೆಗೆ ಹಲಸಿನ ಹಣ್ಣಿನಿಂದ ತಯಾರಿಸಿ ದೋಸೆ ಹಾಗೂ ಕಾಯಿಚಟ್ನಿಯೂ ಹಲವರ ಬಾಯಿರುಚಿ ತಣಿಸಲಿವೆ.ಮಾವು ಹಾಗೂ ಇತರೆ ಉತ್ಪನ್ನಗಳ ತಿಂಡಿಗಳೂ ಕೂಡ ಮೇಳದಲ್ಲಿ ಸಿಗಲಿವೆ.

ವಿವಿಧ ಸಾವಯವ ಕೃಷಿಕರ ಸಂಘಗಳು, ಪಾರಂಪರಿಕ ಕೃಷಿ ಫಲಾನುಭವಿಗಳ ಗುಂಪುಗಳ ಸದಸ್ಯರು, ರೈತ ಉತ್ಪಾದಕ ಸಂಸ್ಥೆಗಳು, ವಿದ್ಯಾರ್ಥಿಗಳು, ಪರಿಸರ ಪ್ರಿಯರು ಮೇಳಕ್ಕೆ ಬರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.