ಭಾರತ ಮತ್ತು ಪಾಕ್ ಉದ್ವಿಗ್ನ ಪರಿಸ್ಥಿತಿ; ಸೈಬರ್ ದಾಳಿ, ಹ್ಯಾಕ್ ನಡೆಯುವ ಎಚ್ಚರಿಕೆ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತರು
ಸೈಬರ್ ದಾಳಿ ನಡೆದಲ್ಲಿ ವೈಯಕ್ತಿಕ, ಅಥವಾ ಕಚೇರಿಯ ಮಾಹಿತಿ ರಕ್ಷಣೆ ಹೇಗೆ? ಬೆಂಗಳೂರು ಪೊಲೀಸ್ ಆಯುಕ್ತರು ನೀಡಿರುವ ಟಿಪ್ಸ್ ಇಲ್ಲಿವೆ. (ವರದಿ: ಎಚ್.ಮಾರುತಿ)

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಸೈಬರ್ ದಾಳಿ ನಡೆಯುವ ಸಾಧ್ಯತೆಗಳ ಬಗ್ಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ಎಚ್ಚರಿಕೆ ನೀಡಿದ್ದಾರೆ. ಈ ಹಂತದಲ್ಲಿ ಸೈಬರ್ ಅಪರಾಧಿಗಳು ನಕಲಿ ಲಿಂಕ್ , ಇ-ಮೇಲ್ ಮತ್ತು ದುರುದ್ದೇಶಪೂರಿತ ಫೈಲ್ ಗಳ ಮೂಲಕ ಡೇಟಾ ಕದಿಯಲು ಅಥವಾ ಹ್ಯಾಕ್ ಮಾಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ಆದ್ದರಿಂದ ನಾಗರಿಕರು ಜಾಗರೂಕರಾಗಿರುವಂತೆ ಮತ್ತು ಅನುಮಾನಾಸ್ಪದ ಲಿಂಕ್‌ಗಳನ್ನು ಓಪನ್ ಮಾಡದಂತೆ ಸೂಚಿಸಿದ್ದಾರೆ.
ಅದರಲ್ಲೂ ವಿಶೇಷವಾಗಿ “ಎಕ್ಸ್‌ಕ್ಲೂಸಿವ್ ಇಂಡೋ-ಪಾಕ್ ಅಪ್‌ಡೇಟ್” ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳುವ ಲಿಂಕ್ ಗಳ ಬಗ್ಗೆ ಎಚ್ಚರಿಕೆಯಿಂದಿ ಇರಬೇಕು. ಇಂತಹ ಲಿಂಕ್‌ಗಳು ಸೈಬರ್ ಅಪರಾಧಿಗಳಿಂದ ಚಿತ್ರಿಸಲ್ಪಟ್ಟಿರುವ ನಕಲಿ ದೃಶ್ಯಗಳಾಗಿರಬಹುದು, ಇದರಿಂದ ಮೊಬೈಲ್ ಹಾಗೂ ಕಂಪ್ಯೂಟರ್ ಹ್ಯಾಕ್ ಆಗುವ ಸಾಧ್ಯತೆಯಿದೆ. ಪ್ರತಿಯೊಂದು ವಿಶೇಷ ಸುದ್ದಿಯ ಲಿಂಕ್ ಸುರಕ್ಷಿತವಲ್ಲ. ಇವುಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್, ಫಾರ್ವರ್ಡ್ ಅಥವಾ ಡೌನ್ ಲೋಡ್ ಮಾಡಬೇಡಿ ಎಂದು ಅವರು ಸಲಹೆ ನೀಡಿದ್ದಾರೆ. ಯಾವುದೇ ಸೈಬರ್ ಅಪರಾಧ ಪ್ರಕರಣ ಕುರಿತು ಸಂಶಯ ಉಂಟಾದರೆ, ತಕ್ಷಣ 1930 ಗೆ ಕರೆ ಮಾಡಿ ಸಹಾಯ ಪಡೆಯುವಂತೆಯೂ ಸೂಚಿಸಲಾಗಿದೆ.
ಸೈಬರ್ ಅಪರಾಧಿಗಳು ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಟೆಲಿಗ್ರಾಂ, ಮತ್ತು ಇ-ಮೇಲ್‌ಗಳ ಮೂಲಕ ತಮ್ಮ ದಾಳಿಗಳನ್ನು ತೀವ್ರಗೊಳಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಈ ಎಚ್ಚರಿಕೆ ಕೇವಲ ವೈಯಕ್ತಿಕ ಡಿಜಿಟಲ್ ಸಾಧನಗಳಿಗೆ ಸೀಮಿತವಾಗಿಲ್ಲ. ವ್ಯಾಪಾರ, ವಹಿವಾಟು ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಮತ್ತು ಶೈಕ್ಷಣಿಕ ಸಂಸ್ಥೆಗಳೂ ಸೈಬರ್ ಅಪರಾಧಿಗಳ ಗುರಿಯಾಗಬಹುದು. ಆದ್ದರಿಂದ, ಎಲ್ಲರೂ ತಮ್ಮ ತಮ್ಮ ಡಿಜಿಟಲ್ ಸುರಕ್ಷತೆಗೆ ಆದ್ಯತೆ ನೀಡಬೇಕು. ಸೈಬರ್ ಅಪರಾಧಿಗಳು ಸಾಮಾನ್ಯವಾಗಿ ಭಾವನಾತ್ಮಕವಾಗಿ ಆಕರ್ಷಕವಾದ ಸಂದೇಶಗಳನ್ನು ಬಳಸಿ, ಬಳಕೆದಾರರನ್ನು ತಮ್ಮ ಜಾಲಕ್ಕೆ ಬೀಳಿಸುತ್ತಾರೆ ಎಂದೂ ಪೊಲೀಸರು ಎಚ್ಚರಿಕೆ ನೀಡುತ್ತಾರೆ.
ನಿಮ್ಮ ಪರಿಚಿತರೇ ಅನುಮಾನಾಸ್ಪದ ಫೈಲ್ ಗಳನ್ನು ಸ್ವೀಕಳುಹಿಸಿದ್ದರೂ ತೆರೆಯಬೇಡಿ ಹಾಗೂ ಇತರರೊಂದಿಗೆ ಹಂಚಿಕೊಳ್ಳಬೇಡಿ. ಬದಲಾಗಿ ಅವುಗಳನ್ನು ಡಿಲೀಟ್ ಮಾಡಿ ಎಂದಿದ್ದಾರೆ. ನಿಮ್ಮ ಎಚ್ಚರಿಕೆಯಿಂದ ನೀವು ಮಾತ್ರವಲ್ಲ, ಇಡೀ ದೇಶವನ್ನು ಸುರಕ್ಷಿತವಾಗಿರಿಸಲು ಸಹಾಯವಾಗಲಿದೆ. ಸಾರ್ವಜನಿಕರು ಸುರಕ್ಷಿತವಾಗಿ ಎಚ್ಚರವಾಗಿರುವ ಮೂಲಕ ಈ ಕಠಿಣ ಸಂದರ್ಭದಲ್ಲಿ ಸೈಬರ್ ವಂಚಕರನ್ನು ನಾವು ಒಟ್ಟಾಗಿ ಎದುರಿಸಬಹುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.
ಹೀಗೆ ಜಾಗರೂಕರಾಗಿ, ಜಾಣರಾಗಿರಿ:
ಅಪರಿಚಿತ, ಅನುಮಾನಾಸ್ಪದ ಸಂದೇಶಗಳ ಬಗ್ಗೆ ಸದಾ ಎಚ್ಚರಿಕೆ ವಹಿಸಿ. ಅಂಥಹ ವಾಟ್ಸ್ಆ್ಯಪ್ ಗ್ರೂಪ್‌ಗಳ ಕುರಿತು ಎಕ್ಸಿಟ್, ರಿಪೋರ್ಟ್ ಮತ್ತು ಡಿಲಿಟ್ ಸೂತ್ರ ಅನುಸರಿಸಿ.
ವೆರಿಫೈಡ್ ಅಲ್ಲದ ವಿಚಾರಗಳನ್ನು ರಿಪೋರ್ಟ್ ಮಾಡಿ.
ವಾಟ್ಸ್ ಆ್ಯಪ್ ಸೆಕ್ಯೂರಿಟಿ ಸೆಟ್ಟಿಂಗ್ಸ್ ಬಳಸಿ, ಮೀಡಿಯಾ (ಫೋಟೋ, ವಿಡಿಯೋ, ಆಡಿಯೋ ಹಾಗೂ ಡಾಕ್ಯುಮೆಂಟ್) ಸ್ವಯಂ ಡೌನ್‌ಲೋಡ್ ಆಪ್ಷನ್ ಅನ್ನು ಬಂದ್ ಮಾಡಿ.
ವಾಟ್ಸ್ಆ್ಯಪ್ ಸೇರಿದಂತೆ ನಿಮ್ಮ ಎಲ್ಲಾ ಖಾತೆಗಳಿಗೆ 2 ಫ್ಯಾಕ್ಟರ್ ಅಥೆಂಟಿಕೇಶನ್ ಸೆಟ್ಟಿಂಗ್ಸ್ ಚಾಲ್ತಿಯಲ್ಲಿರಿಸುವ ಮೂಲಕ ಹೆಚ್ಚುವರಿ ಸೆಕ್ಯೂರಿಟಿ ಖಚಿತಪಡಿಸಿಕೊಳ್ಳಿ.
ಅಪರಿಚಿತರು ಕಳುಹಿಸುವ ಇ ಮೇಲ್‌ಗಳನ್ನು ಓಪನ್ ಮಾಡಬೇಡಿ. ಅದರಲ್ಲೂ ಮುಖ್ಯವಾಗಿ ಇಂಡೋ-ಪಾಕ್ ಉದ್ವಿಗ್ನ ಪರಿಸ್ಥಿತಿ ಕುರಿತ ಮೇಲ್‌ಗಳನ್ನು ತೆರೆಯಲೇಬಾರದು.
ಅನುಮಾನಾಸ್ಪದ ಲಿಂಕ್‌ಗಳ ಕುರಿತು ಎಚ್ಚರವಿರಲಿ, ವಂಚಕರು ಅಧಿಕೃತ ಸಂಸ್ಥೆಗಳ ಹೆಸರಿನಲ್ಲಿ ಮೇಲ್ ಸಂದೇಶಗಳನ್ನು ರವಾನಿಸಬಹುದು.
ಅಪ್ ಡೇಟೆಡ್ ಆ್ಯಂಟಿ-ವೈರಸ್ ಸಾಫ್ಟ್‌ವೇರ್, ಸ್ಪ್ಯಾಮ್ ಫಿಲ್ಟರ್‌ಗಳನ್ನು ಬಳಸುವುದು ಸೂಕ್ತ
ನಿಮ್ಮ ಅತಿಮುಖ್ಯ ಡೇಟಾಗಳನ್ನು ಕ್ಲೌಡ್ ಅಥವಾ ಹೆಚ್ಚುವರಿ ಸ್ಟೋರೇಜ್ ನಲ್ಲಿ ಬ್ಯಾಕ್ ಅಪ್ ಇರಿಸಿಕೊಳ್ಳಿ.
ಸಾಫ್ಟ್ ವೇರ್ ಅಪ್ ಡೇಟ್ ಮೂಲಕ ನಿಮ್ಮ ಮಾಹಿತಿಗಳನ್ನು ಸುರಕ್ಷಿತವಾಗಿರಿಸಿ.
ವೆರಿಫೈಡ್ ಅಲ್ಲದ ಸುದ್ದಿ, ವಿಚಾರಗಳನ್ನು ಹಂಚಿಕೊಳ್ಳದಿರಿ, ಅಧಿಕೃತ ಸಾಮಾಜಿಕ ಜಾಲತಾಣ ಖಾತೆ, ವೆಬ್‌ಸೈಟ್‌ಗಳ ಮೂಲಕ ಖಚಿತಪಡಿಸಿಕೊಳ್ಳಿ.
ಒಂದು ವೇಳೆ ಸೈಬರ್ ದಾಳಿಗೊಳಗಾದರೆ ಆತಂಕಪಡಬೇಡಿ, ಸೈಬರ್ ಕ್ರೈಂ ಸಹಾಯವಾಣಿ (1930) ಯನ್ನು ಸಂಪರ್ಕಿಸಿ, ಅಥವಾ cybercrime.gov.in ನಲ್ಲಿ ರಿಪೋರ್ಟ್ ಮಾಡಿ.