Bangalore News: ಬೆಂಗಳೂರಲ್ಲಿ ಹೊಸ ವರ್ಷಾಚರಣೆ ನಶೆಗೆ ಬಂದಿತ್ತು 3.25 ಕೋಟಿ ರೂ ಮೌಲ್ಯದ 318 ಕೆಜಿ ಗಾಂಜಾ; ದಂಪತಿ ಸೇರಿ ಮೂವರ ಬಂಧನ
Bangalore Crime Updates: ಬೆಂಗಳೂರು ನಗರದಲ್ಲಿ ಬರುವ ಹೊಸ ವರ್ಷಕ್ಕೆಂದು ಭಾರೀ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ದಂಪತಿ ಸಹಿತ ಮೂವರನ್ನು ಬಂಧಿಸಿದ್ದಾರೆ.ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು: ಹೊಸ ವರ್ಷದ ಆಚರಣೆಗೆ ಎಂದು ತರಿಸಲಾಗಿದ್ದ 318 ಕೆಜಿ ಗಾಂಜಾ ವನ್ನು ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. 318 ಕೆಜಿ ಗಾಂಜಾ ಬೆಲೆ 3 ಕೋಟಿ 25 ಲಕ್ಷ ರೂಪಾಯಿ ಎಂದು ಪೊಲೀಸರು ಅಂದಾಜು ಮಾಡಿದ್ದಾರೆ. ಈ ಗಾಂಜಾವನ್ನು ಒಡಿಶಾದಿಂದ ಇನೋವಾ ಕಾರಿನಲ್ಲಿ ಸಾಗಿಸಲಾಗುತ್ತಿತ್ತು. ಕೇರಳದ ಅಚ್ಯುತ್ ಸಂತೋಷ್, ಬೆಂಗಳೂರಿನ ಜಮೀರ್ ಖಾನ್ ಆತನ ಪತ್ನಿ ರೇಷ್ಮಾ ಅವರನ್ನು ಬಂಧಿಸಲಾಗಿದೆ. ಇವರಿಂದ ಇನೋವಾ ಕಾರು ಮತ್ತು ಮೂರು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅಚ್ಯುತ್ ಒಡಿಶಾ ಹಾಗೂ ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಖರೀದಿಸಿ ಕಾರಿನಲ್ಲಿ ಬೆಂಗಳೂರಿಗೆ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಚ್ಯುತ್ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ. ಇಲ್ಲಿನ ಚಾಲಕ ಜಮೀರ್ ನನ್ನು ಪರಿಚಯಿಸಿಕೊಂಡಿದ್ದ. ನಂತರ ಜಮೀರ್ ಮತ್ತು ಆತನ ಪತ್ನಿಯ ಜತೆ ಆತ್ಮೀಯತೆ ಬೆಳೆಸಿಕೊಂಡಿದ್ದ.
ಗಾಂಜಾ ಮಾರಾಟ ಮಾಡಿದರೆ ಹೆಚ್ಚಿನ ಹಣ ಸಂಪಾದನೆ ಮಾಡಬಹುದು ಎಂದು ಆಮಿಷವೊಡ್ಡಿದ್ದ. ಮೂವರೂ ಒಟ್ಟಿಗೆ ಗಡಿ ಭಾಗಗಳಿಗೆ ತೆರಳಿ ಗಾಂಜಾ ಖರೀದಿ ಮಾಡಿ ಬೆಂಗಳೂರಿಗೆ ಹಿಂತಿರುಗುತ್ತಿದ್ದರು. ಈ ಗಾಂಜಾವನ್ನು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನೈಜೀರಿಯಾ ಪ್ರಜೆಗಳ ಬಂಧನ; 3 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ
ಮಾದಕ ವಸ್ತುಗಳನ್ನು ಮಾರಾಟ ಆಡುತ್ತಿದ್ದ ಇಬ್ಬರು ನೈಜೀರಿಯಾದ ಡ್ರಗ್ ಪೆಡ್ಲರ್‌ಗಳನ್ನು ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಮಿಖಾಯಿಲ್ ಐಗ್ಬೆರೆ ಮತ್ತು ಅಗ್ವು ಇಜೆಕೈಲ್ ಒಸಿತಾ ಬಂಧಿತ ಆರೋಪಿಗಳು. ಇವರಿಂದ 3 ಕೋಟಿ ಮೌಲ್ಯದ ವಿವಿಧ ಮಾದರಿಯ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಐದು ವರ್ಷಗಳ ಹಿಂದೆ ವೈದ್ಯಕೀಯ ವೀಸಾ ಪಡೆದು ಭಾರತಕ್ಕೆ ಆಗಮಿಸಿದ್ದ ಆರೋಪಿಗಳು ಸೋಲದೇವನಹಳ್ಳಿಯಲ್ಲಿ ವಾಸವಾಗಿದ್ದರು. ಮುಂಬೈನಿಂದ ಮಾದಕ ವಸ್ತು ತರಿಸಿಕೊಂಡು ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು ಇವರ ಮನೆ ಮೇಲೆ ದಾಳಿನಡೆಸಿದ್ದರು.
ಈ ಸಂದರ್ಭದಲ್ಲಿ 1 ಕೆ.ಜಿ 520 ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್, 202 ಗ್ರಾಂ ಕೊಕೇನ್, 12 ಗ್ರಾಂ ಎಂಡಿಎಂಎ ಎಕ್ಸೆಟಿಸಿ ಮಾತ್ರೆಗಳನ್ನು ವಶಕ್ಕೆಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ತಿಳಿಸಿದ್ದಾರೆ.
ಮುಂಬೈ ಮತ್ತು ದೆಹಲಿಯಲ್ಲಿ ನೆಲೆಸಿರುವ ಆಫ್ರಿಕಾ ಮೂಲದ ಪರಿಚಿತರಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿ ಮಾಡಿ ಬೆಂಗಳೂರಿನಲ್ಲಿ ಒಂದು ಗ್ರಾಂ.ಗೆ ರೂ.12 ಸಾವಿರದಿಂದ 15 ಸಾವಿರದವರೆಗೆ ಮಾರಾಟ ಮಾಡುತ್ತಿದ್ದರು.
ಕಾಲೇಜು ವಿದ್ಯಾರ್ಥಿಗಳು ಮತ್ತು ಐ.ಟಿ.ಉದ್ಯೋಗಿಗಳೇ ಇವರ ಗ್ರಾಹಕರು. ಆರೋಪಿಗಳ ವಿರುದ್ಧ ಮುಂಬೈ ಮತ್ತು ಹೈದರಾಬಾದ್ ನಲ್ಲೂ ಎನ್ ಡಿಪಿಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದವು. ಅಲ್ಲಿ ಜಾಮೀನು ಪಡೆದು ಬೆಂಗಳೂರಿಗೆ ಆಗಮಿಸಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರು.
(ವರದಿ: ಎಚ್.ಮಾರುತಿ, ಬೆಂಗಳೂರು)