ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸೆಯನ್ನೂ ಕಾಡಿದೆ ವಿದ್ಯುತ್ ವ್ಯತ್ಯಯ ಸಮಸ್ಯೆ; ಬೆಂಗಳೂರಲ್ಲಿ ಇಂದೆಲ್ಲಿ ಪವರ್ ಕಟ್
Bangalore Power Outage: ಬೆಂಗಳೂರಲ್ಲಿ ಸದ್ಯ ಪವರ್ ಕಟ್ ಸಮಸ್ಯೆ ಜನರನ್ನು ನಾನಾ ರೀತಿಯಲ್ಲಿ ಕಾಡತೊಡಗಿದೆ. ಇದೀಗ, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸೆಯನ್ನೂ ಪವರ್ ಕಟ್ ಸಮಸ್ಯೆ ಕಾಡಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಲ್ಲಿ ಇಂದು ಎಲ್ಲೆಲ್ಲಿ ಪವರ್ ಕಟ್- ಇಲ್ಲಿದೆ ವಿವರ.
Bangalore Power Outage: ಬೆಂಗಳೂರು ವ್ಯಾಪ್ತಿಯಲ್ಲಿ ವಿವಿಧ ಪ್ರದೇಶದಲ್ಲಿ ಮುಂಚಿತವಾಗಿ ಘೋಷಿಸಿದ ಪ್ರಕಾರ ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವುದು, ಪರಿಣಾಮ ಅಡಚಣೆ ಉಂಟಾಗುವುದು ಹೊಸದಲ್ಲ. ಆದರೆ, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವಿದ್ಯುತ್ ವ್ಯತ್ಯಯದ ವೇಳೆ ಎಸಿ ಸಮಸ್ಯೆಯಾಗಿದ್ದು, ಕಳೆದ ನಾಲ್ಕು ದಿನಗಳಿಂದ ಶಸ್ತ್ರ ಚಿಕಿತ್ಸೆ ನಡೆದಿಲ್ಲ. ಈ ಪರಿಸ್ಥಿತಿ ಇನ್ನೂ ಎರಡು ಅಥವಾ ಮೂರು ದಿನ ಮುಂದುವರಿಯಬಹುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕಾರಣ ಲೀಲಾ ವೆಂಚ್ಯೂರ್ ಸ್ಟೇಷನ್ ವ್ಯಾಪ್ತಿಯ ಪ್ರದೇಶದಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯದ ಕಾರಣೆ ಬಿಎಂಸಿಆರ್‌ಐನಲ್ಲಿ ಶಸ್ತ್ರ ಚಿಕಿತ್ಸೆಗೆ ಅಡ್ಡಿ
ವಿದ್ಯುತ್ ವೋಲ್ವೇಜ್ ಏರಿಳಿತದಿಂದಾಗಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೇಂದ್ರೀಕೃತ ಹವಾ ನಿಯಂತ್ರಣ ವ್ಯವಸ್ಥೆ ಹಾನಿಗೊಳಗಾಗಿದೆ. ಇದರ ಪರಿಣಾಮ ಕಳೆದ 4 ದಿನಗಳಿಂದ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಆಯ್ದ ಶಸ್ತ್ರಚಿಕಿತ್ಸೆಗಳನ್ನು 5 ದಿನಗಳ ಕಾಲ ಮುಂದೂಡಿದ್ದು, ತುರ್ತು ಶಸ್ತ್ರಚಿಕಿತ್ಸೆ ಮಾತ್ರ ಮಾಡುತ್ತಿರುವುದಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬಿಎಂಸಿಆರ್‌ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 200ಕ್ಕೂ ಹೆಚ್ಚು ಹಾಸಿಗೆ ಇದ್ದು, ಒಂದೇ ಬಾರಿಗೆ ಆರು ಕಡೆ ಶಸ್ತ್ರಚಿಕಿತ್ಸೆ ಮಾಡಬಹುದು. ಪ್ರತಿದಿನ ಇಲ್ಲಿ 20 ರಿಂದ 30 ಶಸ್ತ್ರಚಿಕಿತ್ಸೆ ನಡೆಯುತ್ತವೆ. ಅನಿವಾರ್ಯ ಹಾಗೂ ತುರ್ತು ಶಸ್ತ್ರಚಿಕಿತ್ಸೆಗಳನ್ನು ಫ್ಯಾನ್ ಮತ್ತು ಕೂಲರ್‌ಗಳ ಸಹಾಯದಿಂದ ನಡೆಸಲಾಗುತ್ತಿದೆ. ಉಳಿದಂತೆ ತುರ್ತು ಇಲ್ಲದ ಶಸ್ತ್ರಚಿಕಿತ್ಸೆಗಳನ್ನು ಕೆಲ ದಿನಗಳ ಕಾಲ ಮುಂದೂಡಲಾಗಿದ್ದು, ಸೋಂಕು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ವಿದ್ಯುತ್ ವೋಲ್ವೇಜ್ ಏರಿಳಿತದಿಂದ ಸಮಸ್ಯೆಯಾಗಿದ್ದು, ಕಳೆದ ನಾಲ್ಕು ದಿನಗಳಿಂದ ತುರ್ತು ಆಪರೇಷನ್ ಬಿಟ್ಟರೆ ಬೇರೆ ಶಸ್ತ್ರಚಿಕಿತ್ಸೆ ಮಾಡಿಲ್ಲ. ಎರಡು ದಿನದಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತೇವೆ ಎಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಶೇಷ ಅಧಿಕಾರಿ ಡಾ. ದಿವ್ಯ ಪ್ರಕಾಶ್ ತಿಳಿಸಿದ್ದಾಗಿ ವರದಿ ಹೇಳಿದೆ.
ಬೆಂಗಳೂರು ಪವರ್ ಕಟ್ : ಇಂದು ಎಲ್ಲೆಲ್ಲಿ ಕರೆಂಟ್ ಇರಲ್ಲ
ಬೆಸ್ಕಾಂ ನೀಡಿರುವ ಮಾಹಿತಿ ಪ್ರಕಾರ,
1) ರಾಜಾಜಿನಗರ ವಿಭಾಗದ ಬಿಎಂಎಝೆಡ್ ವೆಸ್ಟ್ ವಲಯದಲ್ಲಿ ಆರ್‌ಎಂಯು ಪ್ರಿವೆಂಟಿವ್ ನಿರ್ವಹಣೆ ಮತ್ತು ಜಂಪ್ ಬದಲಾವಣೆ ಕಾಮಗಾರಿ ಇದ್ದು, ಮನುವನ, ವಿಜಯನಗರ 7ನೇ ಮುಖ್ಯರಸ್ತೆ ತನಕ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ತನಕ ಕರೆಂಟ್ ಇರಲ್ಲ.
2) ಕೋರಮಂಗಲ ವಿಭಾಗದಲ್ಲಿ ಬಿಎಂಎಝೆಡ್ ದಕ್ಷಿಣ ವಲಯದಲ್ಲಿ ಆರ್‌ಎಂಯು ನಿರ್ವಹಣೆ, ಮರ ಕಡಿಯುವುದು, ಜಂಪ್ ಬದಲಾವಣೆ ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ, ಭುವನೇಶ್ವರಿ ಲೇಔಟ್, ವೆಂಕಟೇಶ್ವರ ಲೇಔಟ್, ಇಸ್ರೋ ಲೇಔಟ್, ಗ್ರೀನ್ ಗಾರ್ಡನ್ ಲೇಔಟ್, ಮಂಜುನಾಥ್ ಲೇಔಟ್ ಭಾಗದಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 3 ಗಂಟೆ ತನಕ ಕರೆಂಟ್ ಇರಲ್ಲ.
3) ಕೋಲಾರ ವಿಭಾಗದ ಬಿಆರ್‌ಎಝೆಡ್ ವಲಯದಲ್ಲಿ ಕಮರ್ಷಿಯಲ್ ಲೈಟ್ನಿಂಗ್ ಸರ್ವೀಸ್ ಕನೆಕ್ಷನ್ ಕಾಮಗಾರಿ ಇರುವ ಕಾರಣ ಮೊಗಚಿನ್ನೆಪಲ್ಲಿ, ಸೋಲಮಕಲಪಲ್ಲಿ, ಹೊಸಕೊರ್ಟೆ, ವಡ್ರಪಾಳ್ಯ, ಪೂಲವರಾಯಿಪಲ್ಲಿ, ತೀಮಕಲಪಲ್ಲಿ, ಜಿಲಕರಪಲ್ಲಿ, ಕರ್ಕೂರು, ಶ್ರೀನಿವಾಸಪುರ ಭಾಗದಲ್ಲಿ ಇಂದು ಅಪರಾಹ್ನ 2 ಗಂಟೆಯಿಂದ ಸಂಜೆ 6 ಗಂಟೆ ತನಕ ಕರೆಂಟ್ ಇರಲ್ಲ.