ಖಾಸಗಿ ರಸ್ತೆ ಸಾರ್ವಜನಿಕ ರಸ್ತೆಗಳಾಗಿ ಪರಿವರ್ತಿಸಲು ಬಿಬಿಎಂಪಿಗೆ ಅಧಿಕಾರ; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕಕ್ಕೆ ಅಸ್ತು
ಬೆಂಗಳೂರು ನಗರದಲ್ಲಿ ಖಾಸಗಿಯಾಗಿ ರಸ್ತೆಗಳನ್ನು ನಿರ್ಮಿಸಿಕೊಂಡಿದ್ದರೆ ಅದನ್ನು ಸಾರ್ವಜನಿಕ ರಸ್ತೆಗಳಾಗಿ ಘೋಷಿಸಲು ಬಿಬಿಎಂಪಿಗೆ ಅಧಿಕಾರ ನೀಡುವ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದೆ.ವರದಿ: ಎಚ್. ಮಾರುತಿ, ಬೆಂಗಳೂರು

ಬೆಂಗಳೂರು: ಬೆಂಗಳೂರು ಮಹಾನಗರದ ಖಾಸಗಿ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳು ಎಂದು ಘೋಷಣೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ(ಬಿಬಿಎಂಪಿ) ಅಧಿಕಾರ ನೀಡುವ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ’ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಗಿದೆ. ಈ ಮೊದಲು ಖಾಸಗಿ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳನ್ನಾಗಿ ಪರಿವರ್ತಿಸಲು ಖಾಸಗಿ ಆಸ್ತಿಗಳ ಮಾಲೀಕರ ಒಪ್ಪಿಗೆ ಪಡೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಹೊಸ ಕಾಯಿದೆ ಪ್ರಕಾರ ಬಿಬಿಎಂಪಿ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಅಧಿಕಾರ ನೀಡಲಾಗಿದೆ. ವಿಧೇಯಕದ ಪ್ರಕಾರ ವಲಯ ಆಯುಕ್ತರು ತಾವಾಗಿಯೇ ನಿರ್ಧಾರ ಕೈಗೊಳ್ಳಬಹುದು ಇಲ್ಲವೇ ಖಾಸಗಿ ಆಸ್ತಿಗಳ ಮಾಲೀಕರು ಮನವಿ ಸಲ್ಲಿಸಿದರೆ ಕ್ರಮ ಕೈಗೊಳ್ಳಬಹುದಾಗಿದೆ. ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸುವುದಕ್ಕೂ ಮುನ್ನ ಪಬ್ಲಿಕ್ ನೋಟಿಸ್ ಮತ್ತು ಖಾಸಗಿ ಆಸ್ತಿಗಳ ಮಾಲೀಕರಿಗೆ ನೋಟಿಸ್ ನೀಡಬೇಕಾಗಿರುತ್ತದೆ.
ಖಾಸಗಿ ರಸ್ತೆಯಲ್ಲಿ ರಸ್ತೆ ಬದಿಯ ಚರಂಡಿ ಸೇರಿ ಯಾವುದೇ ಸುಧಾರಣೆ, ಅಭಿವೃದ್ಧಿ ಅಥವಾ ನಿರ್ವಹಣೆಯಾಗಬೇಕಾದರೆ ಕಾಲಮಿತಿಯೊಳಗೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಖಾಸಗಿ ಆಸ್ತಿಗಳ ಮಾಲೀಕರಿಗೆ ವಲಯ ಆಯುಕ್ತರು ನಿರ್ದೇಶನ ನೀಡಬಹುದಾಗಿದೆ. ಒಂದು ವೇಳೆ ಖಾಸಗಿ ಆಸ್ತಿಗಳ ಮಾಲೀಕರು ವಿಫಲವಾದರೆ ಕಾಮಗಾರಿಗಳನ್ನು ಬಿಬಿಎಂಪಿಯೇ ಕೈಗೊಳ್ಳಬೇಕಾಗಿರುತ್ತದೆ. ನಂತರ ಕಾಮಗಾರಿಯ ಮೊತ್ತವನು ಆಸ್ತಿ ತೆರಿಗೆಯ ಜತೆ ಸಂಗ್ರಹಿಸಬಹುದಾಗಿದೆ.
ಅನಧಿಕೃತ ನಿರ್ಮಾಣಗಳನ್ನು ತಡೆಯುವುದೇ ಈ ಮಸೂದೆಯ ಉದ್ಧೇಶವಾಗಿದೆ. ಒಂದು ವೇಳೆ ಅನಧಿಕೃತ ನಿರ್ಮಾಣ ಕಂಡು ಬಂದರೆ ವಲಯ ಆಯುಕ್ತರು ತಡೆಯಲು ಅಧಿಕಾರ ನೀಡಲಾಗಿದೆ. ಮಾಲೀಕರು ಅನಧಿಕೃತ ಕಟ್ಟಡ ಅಥವಾ ಅದರ ಭಾಗವನ್ನು ಬಳಸದಂತೆ ನಿಯಂತ್ರಿಸುವ ಅಧಿಕಾರ ಬಿಬಿಎಂಒಗೆ ನೀಡಲಾಗಿದೆ.
ಒಂದು ವೇಳೆ ಈ ವಿಧೇಯಕ ಕಾನೂನಾಗಿ ಜಾರಿಗೆ ಬಂದರೆ ನಗರ ಮೂಲಭೂತ ಸೌಕರ್ಯವನ್ನು ಮುಖ್ಯವಾಹಿನಿಗೆ ತರಲು ಅವಕಾಶವಾಗುತ್ತದೆ. ಜತೆಗೆ ಬೆಂಗಳೂರಿನ ರೆಸಿಡೆನ್ಷಿಯಲ್ ಲೇಔಟ್ ಗಳು ತೀವ್ರಗತಿಯಲ್ಲಿ ನಿರ್ಮಾಣವಾಗುತ್ತಿದ್ದು, ಬಿಬಿಎಂಪಿಗೆ ನಿರ್ವಹಿಸಲು ಸಾಧ್ಯವಾಗುತ್ತದೆ.
ಸದನದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌ಕೆ ಪಾಟೀಲ್ ಅವರು, 2025ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕವನ್ನು ಮಂಡಿಸಿ ವಿವರಣೆ ನೀಡಿದರು.
ಯಾವುದೇ ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆ ಎಂದು ಘೋಷಣೆ ಮಾಡಲು ಸರ್ಕಾರ ಬಿಬಿಎಂಪಿಗೆ ಅಧಿಕಾರ ನೀಡಿದ್ದು, ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ಕಾನೂನಿನಿಂದ ಬೆಂಗಳೂರು ನಗರದ ಖಾಸಗಿ ರಸ್ತೆ, ಬೀದಿಗಳು ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಳ್ಳುತ್ತವೆ. ನಗರದ ಖಾಸಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿಗೆ ಅವಕಾಶ ಇದೆ. ಅನಧಿಕೃತ ಕಟ್ಟಡ ಅಥವಾ ಅದರ ಭಾಗವನ್ನು ಬಳಸದಂತೆ ಮಾಲೀಕ ಅಥವಾ ಇತರೆ ವ್ಯಕ್ತಿಗಳನ್ನು ತಡೆಯಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ
ಇದೇ ಸಂದರ್ಭದಲ್ಲಿ 2025ನೇ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕವನ್ನೂ ವಿಧಾನಸಭೆ ಅಂಗೀಕರಿಸಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿಧೇಯಕ ಕುರಿತು ವಿವರಣೆ ನೀಡಿದರು.
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅನೇಕ ಅಕ್ರಮ ಲೇಔಟ್ ಗಳಿವೆ. ಈ ಲೇ ಔಟ್ ಗಳಿಗೆ ನೀರು, ರಸ್ತೆ ಚರಂಡಿ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದೇವೆ. ಆದರೆ ಈ ಅಕ್ರಮ ಲೇಔಟ್‌ಗಳು ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ. ಹೀಗಾಗಿ ಇವುಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶದಿಂದ ವಿಧೇಯಕ ತರಲಾಗಿದೆ ಎಂದು ತಿಳಿಸಿದರು.
ಇಂತಹ ಲೇಔಟ್‌ಗಳಿಗೆ ಯೋಜನಾ ಒಪ್ಪಿಗೆ ನೀಡಲು ಅವಕಾಶ ನೀಡಿದ್ದೇವೆ. ಮೊದಲ ವರ್ಷದಲ್ಲಿ ಇಂತಹ ಲೇಔಟ್ ಗಳಿಂದ ದುಪ್ಪಟ್ಟು ತೆರಿಗೆ ವಸೂಲಿ ಮಾಡಿದ್ದೇವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1.40 ಕೋಟಿ ಆಸ್ತಿಗಳಿವೆ. ಆದರೆ 40 ಲಕ್ಷ ಆಸ್ತಿಗಳು ಮಾತ್ರ ಖಾತೆ ಹೊಂದಿವೆ. 96 ಲಕ್ಷ ಆಸ್ತಿಗಳನ್ನು ಇ-ಸ್ವತ್ತು ವ್ಯಾಪ್ತಿಗೆ ತರಲು ತೀರ್ಮಾನಿಸಿದ್ದೇವೆ. ಇದರಿಂದ ಸ್ಥಳೀಯ ಸಂಸ್ಥೆಗಳು ಸ್ವಾವಲಂಬಿ ಆಗಲು ಸಹಕಾರಿ ಆಗಲಿದೆ ಎಂದು ವಿವರಣೆ ನೀಡಿದರು.
ವಿಧೇಯಕ ಕುರಿತು ಶಾಸಕರಾದ ವಿ. ಸುನೀಲ್ ಕುಮಾರ್, ಎಸ್‌ಆರ್ ವಿಶ್ವನಾಥ್, ಬಸವರಾಜ ದದ್ದಲ್, ಅಶೋಕ್ ರೈ ಮತ್ತಿತರರು ಮಾತನಾಡಿದರು.
ವರದಿ: ಎಚ್. ಮಾರುತಿ, ಬೆಂಗಳೂರು
