ರೈಲ್ವೇ ಪ್ರಯಾಣಿಕರಿಗೆ ಶುಭ ಸುದ್ದಿ; ಬೆಂಗಳೂರು ಓಕಳಿಪುರಂ ಜಂಕ್ಷನ್ ನ ಎರಡು ಪಥಗಳು ಮುಂದಿನ ತಿಂಗಳು ಸಂಚಾರಕ್ಕೆ ಮುಕ್ತ ಸಾಧ್ಯತೆ
ಬೆಂಗಳೂರಿನ ಓಕಳಿಪುರಂನ ರೈಲ್ವೆ ಮಾರ್ಗದಲ್ಲಿನ ಅಷ್ಟ ಪಥಗಳಲ್ಲಿ ಆರು ಪಥಗಳು ಈಗಾಗಲೇ ಬಳಕೆಯಲ್ಲಿವೆ. ಉಳಿದೆರಡು ಪಥಗಳ ಕಾಮಗಾರಿಯೂ ಮುಗಿದಿದ್ದು ಮುಂದಿನ ತಿಂಗಳು ಬಳಕೆಗೆ ಲಭ್ಯವಾಗಲಿದೆ.ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು:ಒಂದು ದಶಕದಿಂದ ಬೆಂಗಳೂರಿನ ಓಕಳಿಪುರಂ ಜಂಕ್ಷನ್‌ನ ಅಷ್ಟಪಥ ಸಿಗ್ನಲ್ ಮುಕ್ತ ಕಾರಿಡಾರ್ ಕಾಮಗಾರಿ ನಡೆಯುತ್ತಲೇ ಇದೆ. ಇದರಲ್ಲಿ ಈಗಾಗಲೇ ಆರು ಪಥವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಬಾಕಿ ಉಳಿದಿರುವ ಎರಡು ಪಥ ಫೆಬ್ರವರಿ ಅಂತ್ಯದ ವೇಳೆಗೆ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ತಿಳಿಸಿದೆ. ಬಿಬಿಎಂಪಿ, ಮೆಜೆಸ್ಟಿಕ್ ಗೆ ಪ್ರವೇಶ ಕಲ್ಪಿಸುವ ಓಕಳಿಪುರ ಜಂಕ್ಷನ್ ನಲ್ಲಿ 2013-14ರಲ್ಲಿ ಎಂಟು ಪಥದ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿತ್ತು. ಹಂತಹಂತವಾಗಿ ಆರು ಪಥವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ, ಚೆನ್ನೈ ರೈಲ್ವೆ ಮಾರ್ಗದಲ್ಲಿ ಎರಡು ಕೆಳ ಸೇತುವೆ ನಿರ್ಮಾಣ ಕಾರ್ಯ ಬಾಕಿ ಉಳಿದುಕೊಂಡಿತ್ತು. ಇದೀಗ ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಫೆಬ್ರವರಿ ಅಂತ್ಯದ ವೇಳೆಗೆ ವಾಹನ ಸಂಚಾರಕ್ಕೆ ಮುಕ್ತಗೊಳ್ಳಿಸಲಾಗುವುದು ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏನಿದು ಯೋಜನೆ
ಇದರಿಂದ ಮಲ್ಲೇಶ್ವರಂ ಮತ್ತು ರಾಜಾಜಿನಗರ ಕಡೆಯಿಂದ ರೈಲ್ವೆ ನಿಲ್ದಾಣ ಹಾಗೂ ಮೆಜೆಸ್ಟಿಕ್ ನಿಂದ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ 6,7 ಹಾಗೂ 8ಕ್ಕೆ ನೇರವಾಗಿ ಪ್ರವೇಶ ಪಡೆಯುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ತಿಳಿಸಿದ್ದಾರೆ.
ರೈಲ್ವೆ ಹಳಿ ಕೆಳಭಾಗದಲ್ಲಿ ಪ್ರೀಕಾಸ್ಟ್ ಬಾಕ್ಸ್ ಅಳವಡಿಕೆ ಕಾಮಗಾರಿಯನ್ನು ರೈಲ್ವೆ ಇಲಾಖೆ ವಹಿಸಿಕೊಂಡಿತ್ತು. ಇದೀಗ ಬಾಕ್ಸ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ಸ್ಥಳದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ಮಾತ್ರ ಬಾಕಿ ಉಳಿದುಕೊಂಡಿದೆ.
ರೈಲ್ವೆ ಇಲಾಖೆಯು ಕಾಮಗಾರಿ ಸ್ಥಳವನ್ನು ಬಿಬಿಎಂಪಿಗೆ ಹಸ್ತಾಂತರ ಮಾಡುತ್ತಿದಂತೆ ಚರಂಡಿ ಪೈಪ್ ಅಳವಡಿಕೆ ಹಾಗೂ ರಸ್ತೆ ಸಂಪರ್ಕ ಕಾಮಗಾರಿ ಪೂರ್ಣಗೊಳಿಸಿ ಸಂಚಾರ ಮುಕ್ತಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ವಿಳಂಬಕ್ಕೆ ಕಾರಣವೇನು
ಚೆನ್ನೈ ರೈಲ್ವೆ ಮಾರ್ಗದಲ್ಲಿ ಅತಿ ಹೆಚ್ಚು ರೈಲುಗಳ ಸಂಚಾರ ಇದ್ದ ಕಾರಣ ಹಗಲು ಹೊತ್ತು ಕಾಮಗಾರಿ ನಡೆಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಪ್ರೀ ಕಾಸ್ಟ್ ಬಾಕ್ಸ್ ಗಳನ್ನು ರೈಲ್ವೆ ಹಳಿಯ ಕೆಳ ಭಾಗದಲ್ಲಿ ಅಳವಡಿಕೆ ಮಾಡುವ ಕಾಮಗಾರಿ ನಡೆಯುತ್ತಿದೆ. ತಡರಾತ್ರಿ 12.30 ರಿಂದ ಬೆಳಗಿನ ಜಾವ 4.30ರ ಅವಧಿಯಲ್ಲಿ ಮಾತ್ರ ಕೆಲಸ ಮಾಡಬೇಕಿದೆ.
ದಿನವೊಂದಕ್ಕೆ 2 ರಿಂದ 3 ಅಡಿ ಮಾತ್ರ ಪ್ರೀ ಕಾಸ್ಟ್ ಬಾಕ್ಸ್ ಅನ್ನು ಹಳಿಯ ಕೆಳಭಾಗದಲ್ಲಿ ಕೂಡಿಸಲು ಸಾಧ್ಯವಾಗುತ್ತಿದೆ. ಈ ಕಾರಣಗಳಿಗಾಗಿ ಕಾಮಗಾರಿ ವಿಳಂಬವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತುಮಕೂರು ಹಾಗೂ ಚೆನ್ನೈ ರೈಲ್ವೆ ಹಳಿ ಕೆಳ ಭಾಗದಲ್ಲಿ ಒಟ್ಟು 8 ಪ್ರೀ ಕಾಸ್ಟ್ ಬಾಕ್ಸ್ ಅಳವಡಿಕೆ ಕಾಮಗಾರಿಗೆ ಬಿಬಿಎಂಪಿ ರೂ 80 ಕೋಟಿ ಹಣವನ್ನು ರೈಲ್ವೆ ಇಲಾಖೆಗೆ ನೀಡಿದೆ. ಕಾಮಗಾರಿ ತಡವಾಗಿರುವುದರಿಂದ ವೆಚ್ಚದಲ್ಲೂ ಹೆಚ್ಚಳವಾಗಿದೆ. ಹೆಚ್ಚುವರಿಯಾಗಿ 7 ಕೋಟಿ ರು. ನೀಡುವಂತೆ ರೈಲ್ವೆ ಇಲಾಖೆಯು ಬಿಬಿಎಂಪಿಗೆ ಪತ್ರ ಬರೆದಿದೆ. ಈ ಬಗ್ಗೆ ಮುಖ್ಯ ಆಯುಕ್ತರು ಮತ್ತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಚಾರ ದಟ್ಟಣೆಗೆ ಮುಕ್ತಿ
ಮಲ್ಲೇಶ್ವರಂ ಮತ್ತು ರಾಜಾಜಿನಗರ ಕಡೆಯಿಂದ ಮೆಜೆಸ್ಟಿಕ್ ರೈಲು ನಿಲ್ದಾಣದ ಕಡೆಗೆ ಸಂಚಾರ ದಟ್ಟಣೆ ಕುರಿತು ಬಿಬಿಎಂಪಿಗೆ ಹಲವಾರು ದೂರುಗಳು ಸಲ್ಲಿಕೆಯಾಗಿದ್ದವು. ವಾಹನಗಳ ಮುಕ್ತ ಸಂಚಾರಕ್ಕೆ 2013 ರಲ್ಲಿ ಈ ಕಾಮಗಾರಿಗಳಿಗೆ ಆದೇಶ ನೀಡಲಾಯಿತಾದರೂ ಆರಂಭವಾಗಿದ್ದು, ಜುಲೈ 2015 ರಲ್ಲಿ. ಆದರೂ ಮಧ್ಯದಲ್ಲಿ ಕೆಲವು ವರ್ಷ ಕಾಮಗಾರಿ ಸ್ಥಗಿತಗೊಂಡಿತ್ತು. ೨೦೧೮ರಲ್ಲಿ ಮತ್ತೆ ಈ ಯೋಜನೆಗೆ ವೇಗ ನೀಡಲಾಗಿತ್ತು. ಎಂಟು ಪಥಗಳ ಓಕಳೀಪುರಂ ಕಾರಿಡಾರ್ ಯೋಜನೆಗೆ ಭೂಸ್ವಾಧೀನ ಸೇರಿದಂತೆ ಒಟ್ಟು 337 ಕೋಟಿ ರೂ. ವೆಚ್ಚವಾಗಿದೆ. ಕಾಮಗಾರಿ ಪೂರ್ಣಗೊಳಿಸಲು 112 ಕೋಟಿ ರೂ ಮತ್ತು ಭೂಸ್ವಾಧೀನಕ್ಕೆ 156 ಕೋಟಿ ರೂ .ವೆಚ್ಚವಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ವರದಿ: ಎಚ್.ಮಾರುತಿ, ಬೆಂಗಳೂರು